ಜೂನ್ 30ರಂದು ಬ್ರಾಹ್ಮೀ ಮುಹೂರ್ತದಲ್ಲಿ ಪೂಜಾದಿಗಳನ್ನು ಪೂರೈಸಿ ಎರಡನೇ ದಿನದ ಪರಿಕ್ರಮವನ್ನು ಪ್ರಾರಂಭಿಸಲು ಹೊರಬರುತ್ತಿದ್ದಂತೆಯೇ ಕೈಲಾಸ ಪರ್ವತದ ಚಿತ್ರಣವೇ ಬದಲಾಗಿತ್ತು. ಹಿಂದಿನ ದಿನ ರಜತಾದ್ರಿಯಂತೆ ರಾರಾಜಿಸುತ್ತಿದ್ದ ಕೈಲಾಸವು ಮುಂಜಾನೆಯ ಸೂರ್ಯನ ಹೊಂಗಿರಣಗಳಿಂದ ಸುವರ್ಣಾದ್ರಿಯಾಗಿ ಕಂಗೊಳಿಸುತ್ತಿತ್ತು. ಅದನ್ನು ಕಂಡು ಮೈಮನಗಳು ಪ್ರಫುಲ್ಲಿತಗೊಂಡವು. ಆ ದಿವ್ಯತೆಯನ್ನು ನಮ್ಮೊಳಗೆ ತುಂಬಿಕೊಳ್ಳಲು ಎರಡು ಕಣ್ಣುಗಳು ಸಾಲಲಿಲ್ಲ.
ಪರ್ವತದ ಎರಡನೇ ದಿನದ ಪರಿಕ್ರಮವು ಪಾದಯಾತ್ರೆಯ ಮೂಲಕ ಮುಂದುವರೆಯಿತು. ಇದು ಜಡಿಪುಕದಿಂದ ಜಟಿಲಾಪುಕದವರೆಗೆ ಉತ್ತರ ದಿಕ್ಕಿನಿಂದ ಆಗ್ನೇಯ ದಿಕ್ಕಿನವರೆಗೆ 22 ಕಿ.ಮೀ. ದೂರವಿದೆ. ಮೊದಲನೆಯ ದಿನಕ್ಕಿಂತ ಕಠಿಣವೂ, ದುರ್ಗಮವೂ ಆದ ಈ ಮಾರ್ಗದಲ್ಲಿ ಮೈನಸ್ ಡಿಗ್ರಿ ತಾಪಮಾನವನ್ನು ಹಾಗೂ ಸಮುದ್ರ ಮಟ್ಟದಿಂದ 18741 ಅಡಿ ಎತ್ತರವನ್ನು ಮತ್ತು ಆ ಕಾರಣಕ್ಕಾಗಿ ಆಮ್ಲಜನಕದ ಕೊರತೆ, ಉಸಿರಾಟದ ತೊಂದರೆ ಮೊದಲಾದವುಗಳನ್ನು ಸಹಿಸಿಕೊಂಡು ದಾಟಬೇಕು. ಇದಲ್ಲದೇ 6 ಕಿ.ಮೀ.ವರೆಗೆ ಅತ್ಯಂತ ಕಡಿದಾದ ಗುಡ್ಡಗಳನ್ನು ಒಂದು ಕಡೆಯಿಂದ ಏರಿ ಮತ್ತೊಂದು ಕಡೆಯಿಂದ ಇಳಿಯಬೇಕಾಗುತ್ತದೆ.
ಇಂತಹ ದುರ್ಗಮವಾದ ಈ ಎರಡನೇ ದಿನದ ಪರಿಕ್ರಮದಲ್ಲಿ ಪಾದಚಾರಿಗಳಾಗಿ ಗುಡ್ಡವನ್ನು ಏರಿಕೊಂಡು ಸಾಗುವಾಗ ಕುದುರೆ ಮತ್ತು ಕುದುರೆಯ ಮಾಲಿಕ ಜತೆಗೇ ಇದ್ದರು. ಆದರೆ ಕುದುರೆಯನ್ನು ಏರದೇ ಪೂರ್ಣ ಎತ್ತರವನ್ನು ಹತ್ತಿದೆವು. ಈ ಮಾರ್ಗದಲ್ಲಿ ಅತ್ಯಂತ ಎತ್ತರದಲ್ಲಿ ದೋಲಮಾಲಾಪಾಸ ಎಂಬ ಹೆಸರಿನ ಸ್ಥಳವಿದೆ. ಇದು ಚೀನಾ ಮತ್ತು ಟಿಬೆಟಿಯನ್ನರ ಪುಣ್ಯಕ್ಷೇತ್ರ. ಈ ದೋಲಮಾಲಾಪಾಸದಿಂದ ಕೆಳಗೆ ಇಳಿಯುತ್ತಿದ್ದಂತೆಯೇ ಗೋಲಾಕೃತಿಯಲ್ಲಿ ಗರಿಗೆದರಿಕೊಂಡಿರುವ ಗೌರೀಕುಂಡ ಗೋಚರಿಸುತ್ತದೆ.
ಇದು ಗೌರಿದೇವಿಯು ತನ್ನ ದೇಹದ ಮಣ್ಣಿನಿಂದ ಗಣೇಶನನ್ನು ನಿರ್ವಿುಸಿದ ಪೌರಾಣಿಕ ಕತೆಯ ಸ್ಥಳ ಎಂಬ ಪ್ರತೀತಿ ಇದೆ. ಇದನ್ನು ನೋಡಿಕೊಂಡು ಇನ್ನಷ್ಟು ಕೆಳಗೆ ಇಳಿಯುತ್ತಿದ್ದಂತೆ ಮಂಜುಗಡ್ಡೆಯಿಂದ ತುಂಬಿದ ನದಿಯನ್ನು ಕಣ್ತುಂಬಿಕೊಂಡು ಅದರ ಮೇಲೆ ನಡೆದುಕೊಂಡು ಬರುವ ವಿನೂತನ ಸಂತೋಷ ನಮ್ಮದಾಯಿತು. ಬೆಟ್ಟ ಗುಡ್ಡಗಳನ್ನೆಲ್ಲ ಪೂರ್ಣ ಇಳಿದ ಮೇಲೆ ಆಹಾರ ಸ್ವೀಕರಿಸಲು ಹಲವಾರು ಹೋಟೆಲ್ಗಳು ಕಾಣಿಸಿಕೊಳ್ಳುತ್ತವೆ. ಇಲ್ಲಿಂದ ಮುಂದೆ 10 ಕಿ.ಮೀ. ಸರಳ ಮಾರ್ಗದ ಮೂಲಕ ನಡೆದು ಜಟಿಲಪುಕವನ್ನು ತಲುಪಿ, ಅಲ್ಲಿ ವಾಸ್ತವ್ಯ ಮಾಡಿದೆವು.
ಕುದುರೆ ಮಾಲೀಕನ ಮಾನವೀಯತೆ: ಜು. 7ರಂದು ಕೈಲಾಸ ಪರ್ವತದ ಮೂರನೇ ದಿನದ ಪರಿಕ್ರಮವನ್ನು ಪಾದಯಾತ್ರೆಯ ಮೂಲಕ ಪೂರ್ಣಗೊಳಿಸಲಾಯಿತು. ಇದು ಜಟಿಲಪುಕ ಪರಿಕ್ರಮ ಪ್ರಾರಂಭದ ಯಮದ್ವಾರದ ಸಮೀಪದಲ್ಲಿರುವ ಪರಿಕ್ರಮದ ಮುಕ್ತಾಯ ಸ್ಥಾನದವರೆಗೆ 8 ಕಿ.ಮೀ. ಇತ್ತು. ಆಗ್ನೇಯ ದಿಕ್ಕಿನಿಂದ ಪರಿಕ್ರಮವು ಪ್ರಾರಂಭವಾಗಿ ದಕ್ಷಿಣ ದಿಕ್ಕಿನವರೆಗೆ ಬರಲಾಗುತ್ತದೆ. ಸ್ವಲ್ಪ ಏರಿಳಿತ, ಬೆಟ್ಟಗಳ ಸಾಲು, ನದಿಯ ದಡದೊಂದಿಗೆ ಸಾಗುವ ಈ ಮಾರ್ಗದಲ್ಲಿ ನಸುಕಿನ ಬ್ರಾಹ್ಮೀ ಮುಹೂರ್ತದಲ್ಲಿಯೇ ಪರಿಕ್ರಮವನ್ನು ಪ್ರಾರಂಭಿಸಿ ಸೂರ್ಯೋದಯದ ಸಮಯಕ್ಕೆ ಪೂರ್ಣಗೊಳಿಸಲಾಯಿತು. ಇಲ್ಲಿಯವರೆಗೆ ನಮ್ಮ ಜತೆಗೆ ಬಂದ ಕುದುರೆ ಮತ್ತು ಅದರ ಮಾಲಿಕ ನಮಗೆ ವಿದಾಯ ಹೇಳಿ ಹೊರಟರು. ನಮ್ಮ ಜತೆಗೆ ಬಂದ ಕುದುರೆ ಮಾಲೀಕ ಬಹಳ ಒಳ್ಳೆಯವನಾಗಿದ್ದ.
ದುರ್ಗಮವಾದ ಮಾರ್ಗದಲ್ಲಿ ನಮ್ಮನ್ನು ಬಿಟ್ಟು ಸ್ವಲ್ಪ ಕೂಡ ಹಿಂದೆ ಮುಂದೆ ಹೋಗದೆ, ನಾವು ಬೆಟ್ಟವನ್ನು ಪೂರ್ಣ ಹತ್ತಿ, ಕೆಳಗೆ ಇಳಿಯುವವರೆಗೆ ನೆರಳಿನಂತೆ ಬೆಂಗಾವಲಾಗಿ ಬರುತ್ತಿದ್ದ. ಸಾಮಾನ್ಯವಾಗಿ ಕೈಲಾಸದ ಪರಿಕ್ರಮದಲ್ಲಿ ಬರುವ ಕುದುರೆಯವರು ಯಾತ್ರಿಕರಿಗೆ ಸರಿಯಾಗಿ ಸ್ಪಂದಿಸುವುದಿಲ್ಲ, ಒರಟುತನವನ್ನು ಪ್ರದರ್ಶಿಸುತ್ತಾರೆ, ಅವಸರ ಮಾಡಿ ವಾಸ್ತವ್ಯದ ಸ್ಥಳವನ್ನು ತಲುಪಿಸಲು ಪ್ರಯತ್ನಿಸುತ್ತಾರೆ ಎಂಬಿತ್ಯಾದಿಯಾಗಿ ಕುದುರೆಯವರ ಬಗ್ಗೆ ಆರೋಪಗಳಿವೆ. ಆದರೆ ಚೀನಾದ ವೀಸಾ ಸರಿಯಾದ ಸಮಯಕ್ಕೆ ಸಿಗದಂತೆ ಮಾಡಿ, ಸಿಕ್ಕ ಮೇಲೂ ಸೇವಕನಿಗೆ ಸಿಗದಂತೆ ಮಾಡಿ, ಎಷ್ಟೆಲ್ಲಾ ಕಷ್ಟಗಳನ್ನು ಕೊಟ್ಟರೂ, ಅವುಗಳನ್ನು ಲೆಕ್ಕಿಸದೆ ಕೈಲಾಸದ ಪರಿಕ್ರಮಕ್ಕೆ ಬಂದಿರುವ ಇವರಿಗೆ ಇನ್ನು ಕಷ್ಟ ಕೊಡಬಾರದೆಂದು ಕೈಲಾಸಾಧಿಪತಿಯಾದ ಶಿವನು ನಮಗೆ ಉತ್ತಮ ಕುದುರೆಯವನನ್ನು ಜೋಡಿಸಿದನೋ ಅಥವಾ ನಮ್ಮ ಜತೆಗೆ ಬಂದ ಮೇಲೆ ನಮ್ಮೊಂದಿಗೆ ಸೌಹಾರ್ದಯುತವಾಗಿ ವರ್ತಿಸುವಂತೆ ಅವನ ಮನಸ್ಸನ್ನು ಪರಿವರ್ತನೆ ಮಾಡಿದನೋ ತಿಳಿಯದು. ಅಂತೂ ಅವನ ಸಹಕಾರ ಮತ್ತು ಮಾನವೀಯತೆಯ ವರ್ತನೆ ಎರಡರ ಹಿಂದೆ ನಮಗೆ ಶಿವನ ಕೃಪೆ ಮತ್ತು ಕೈವಾಡ ಎದ್ದು ಕಾಣಿಸಿತು.
ಕುದುರೆಯಾತ ನಮ್ಮಿಂದ ಬೀಳ್ಕೊಂಡು ಇನ್ನೊಬ್ಬರ ಸೇವೆಗಾಗಿ ತೆರಳುತ್ತಿದ್ದಂತೆಯೇ ನಮ್ಮನ್ನು ಪರಿಕ್ರಮದ ಪ್ರಾರಂಭದಲ್ಲಿ ಬಿಟ್ಟು ಹೋದ ವಾಹನಗಳು ಕರೆದೊಯ್ಯಲು ಬಂದು ಕಾಯುತ್ತಿದ್ದವು. ಅಷ್ಟೊತ್ತಿಗಾಗಲೇ ನಮ್ಮ ತಂಡದವರು ಕೆಲವರು ಹಿಂದೆ, ಕೆಲವರು ಮುಂದೆ ಹೀಗೆ ಬೆಳಗಿನ 8ರಿಂದ 9 ಗಂಟೆಯೊಳಗೆ ಎಲ್ಲರೂ ಪರಿಕ್ರಮದ ಮುಕ್ತಾಯ ಸ್ಥಳಕ್ಕೆ ಬಂದು ಸೇರಿದರು. ಎಲ್ಲರೂ ಸೇರಿ ಗ್ರೂಪ್ ಫೋಟೋ ತೆಗೆದುಕೊಂಡು, ಯಾತ್ರೆಯ ಅನುಭವವನ್ನು ಪರಸ್ಪರ ಹಂಚಿಕೊಳ್ಳುತ್ತ ವಾಹನದಲ್ಲಿ ಕುಳಿತು ಮರಳಿ ದಾರ್ಚಿನ್ಗೆ ಬಂದೆವು. ದಾರ್ಚಿನದಲ್ಲೇ ಸ್ನಾನ, ಪೂಜೆ, ಪ್ರಸಾದಗಳನ್ನು ಪೂರೈಸಿ ಪುನಃ ವಾಹನದ ಮೂಲಕ ಸಾಗಾ ಪಟ್ಟಣಕ್ಕೆ ಬಂದು ವಾಸ್ತವ್ಯ ಮಾಡಿದೆವು.
ಜು. 2ರಂದು ಸಾಗಾದಿಂದ ಬೆಳಗ್ಗೆ ಬೇಗ ಹೊರಟು ಚೀನಾ ಗಡಿ ದಾಟಿ ನೇಪಾಳಕ್ಕೆ ಬಂದು ಕಾಠ್ಮಂಡು ನಗರ ತಲುಪಿದೆವು. ಜು. 3ರಂದು ಕಾಠ್ಮಂಡುವಿನಿಂದ ವಿಮಾನದ ಮೂಲಕ ದೆಹಲಿಗೆ ಬಂದು, ಅಲ್ಲಿಂದ ಅದೇ ದಿನ ತಡರಾತ್ರಿ ಬೆಂಗಳೂರಿಗೆ ತಲುಪಿದೆವು. ಪೂರ್ವ ನಿಗದಿಗೆ 9 ದಿನ ತಡವಾಗಿ ಜು. 4ರಂದು ಎಲ್ಲರೂ ತಮ್ಮ ತಮ್ಮ ಊರುಗಳಿಗೆ ತೆರಳಿದರು.
ಪರಿ ಪರಿ ಸಂಕಷ್ಟದಲ್ಲೂ ಪರಿಕ್ರಮ ಸಮಾಪ್ತಿ: ಕೈಲಾಸ ಪರಿಕ್ರಮವು ಕೇವಲ ಮಾನವ ಸಂಕಲ್ಪದಂತೆ ನಡೆಯುವ ಯಾತ್ರೆಯಲ್ಲ. ಇದಕ್ಕೆ ಸಾಕ್ಷಾತ್ ಶಿವನ ಅನುಮತಿ, ಆಶೀರ್ವಾದ ಬೇಕು. ಪರಿ ಪರಿಯಾದ ಸಂಕಷ್ಟಗಳನ್ನು ಎದುರಿಸುವ ಕ್ರಮವೆಂಬಂತೆ ಅತ್ಯಂತ ಕಷ್ಟದಾಯಕ ಪರಿಕ್ರಮವಾಗಿತ್ತು. ಆದರೂ 3 ದಿನಗಳವರೆಗೆ ಪಾದಯಾತ್ರೆಯ ಸಮಯದಲ್ಲಿ ಮೂಗಿನಿಂದ ನೀರು ಸೋರುವುದನ್ನು ಹೊರತುಪಡಿಸಿದರೆ ಆರೋಗ್ಯದಲ್ಲಿ ಯಾವುದೇ ತೊಂದರೆ ಉಂಟಾಗಲಿಲ್ಲ. ಸಂಪೂರ್ಣ ಯಾತ್ರೆಯಲ್ಲಿ ಕೆಲವರಿಗೆ ಹೆಚ್ಚು ಕೆಲವರಿಗೆ ಕಡಿಮೆ ಹೀಗೆ ಪ್ರಾಯಃ ಎಲ್ಲರಿಗೂ ಅಲ್ಲಲ್ಲಿ ಒಂದಿಲ್ಲೊಂದು ಆರೋಗ್ಯದ ತೊಂದರೆ ಉಂಟಾದರೂ ನಮಗೆ ಮಾತ್ರ ಇಲ್ಲಿನವರೆಗೂ ಎಲ್ಲಿಯೂ ಆರೋಗ್ಯದ ಅಂತಹ ಯಾವುದೇ ಸಮಸ್ಯೆ ಉಂಟಾಗದಿರುವುದಕ್ಕೆ ಭಗವಂತನ ವಿಶೇಷ ಕರುಣೆಯೇ ಕಾರಣವೆಂದು ನಂಬಿದ್ದೇವೆ. ಅಂತೂ ಪಾದಯಾತ್ರೆಯ ಈ ಪರಿಕ್ರಮವನ್ನು ಪೂರೈಸಿದ ಪ್ರತಿಯೊಬ್ಬರಿಗೂ ದೇಹದಲ್ಲಿ ದಣಿವು, ಮುಖದಲ್ಲಿ ಆಯಾಸ ಕಾಣುತ್ತಿದ್ದರೂ ಮನದಲ್ಲಿ ಪುನರ್ಜನ್ಮ ಪಡೆದಂತಹ ಅನುಭವ ಮತ್ತು ಹೃದಯದಲ್ಲಿ ಮಹತ್ತರವಾದುದನ್ನು ಸಾಧಿಸಿದ ದಿವ್ಯ ಸಂತೃಪ್ತಿ ಹಾಗೂ ಶಿವಾನುಗ್ರಹವನ್ನು ಪಡೆದ ಅಲೌಕಿಕ ಪ್ರಸನ್ನತೆ ತುಂಬಿಕೊಂಡಿತ್ತು. ನಮಗಂತೂ ಅಕ್ಷರಶಃ ಹಾಗೆಯೇ ಅನ್ನಿಸಿತು. ಭಗವತ್ ಕೃಪೆ ಇಲ್ಲದೇ ಇಂತಹ ಯಾತ್ರೆಯನ್ನು ಮಾಡಲು ಸಾಧ್ಯವೇ ಇಲ್ಲ.
ನಾಯಮಾತ್ಮಾ ಪ್ರವಚನೇನ ಲಭ್ಯೋ
ನ ಮೇಧಯಾ ನ ಬಹುನಾ ಶ್ರುತೇನ |
ತಸ್ಯೈಷ ಆತ್ಮಾ ವಿವೃಣುತೇ ತನೂಂ ಸ್ವಾಮ್ ||
ಎಂಬ ಉಪನಿಷತ್ತಿನ ಉಕ್ತಿಯಂತೆ, ಪ್ರವಚನ ಮಾಡುವುದರಿಂದಾಗಲಿ, ಅತಿಯಾದ ಬುದ್ಧಿವಂತಿಕೆಯಿಂದಾಗಲಿ ಅಥವಾ ಹೆಚ್ಚು ಶ್ರವಣ ಮಾಡುವುದರಿಂದಾಗಲಿ ಪರಮಾತ್ಮನು ಲಭಿಸುವುದಿಲ್ಲ. ಬದಲಾಗಿ ತನ್ನ ಸ್ವರೂಪ ವನ್ನು ತೋರಿಸಬೇಕೆಂದು ಪರಮಾತ್ಮನು ಯಾರನ್ನು ಆಯ್ಕೆ ಮಾಡಿಕೊಳ್ಳುತ್ತಾನೆಯೋ ಅವರಿಗೆ ಮಾತ್ರ ಲಭಿಸುತ್ತಾನೆ. ಈ ಮಾತು ಕೈಲಾಸ ಪರ್ವತಕ್ಕೂ ಅನ್ವಯಿಸುತ್ತದೆ. ಜೀವನದಲ್ಲಿ ಒಮ್ಮೆಯಾದರೂ ಕೈಲಾಸವನ್ನು ನೋಡಬೇಕೆಂದು ಎಲ್ಲರೂ ಬಯಸುತ್ತಾರೆ. ಅನೇಕರು ಅದಕ್ಕಾಗಿ ಪ್ರಯತ್ನ ಕೂಡ ಮಾಡುತ್ತಾರೆ, ಮತ್ತೆ ಕೆಲವರು ಪ್ರವಾಸ ಕೂಡ ಆರಂಭಿಸುತ್ತಾರೆ. ಹೀಗೆ ಬಯಸಿದವರು, ಪ್ರಯತ್ನ ಮಾಡಿದವರು ಮತ್ತು ಹೊರಟು ನಿಂತವರೆಲ್ಲರಿಗೂ ಕೈಲಾಸ ಯಾತ್ರೆ ಲಭಿಸುವುದಿಲ್ಲ.
ಕೆಲವರಿಗೆ ಏನೆಲ್ಲ ಮಾಡಿದರೂ ಆ ಯೋಗವು ಪ್ರಾಪ್ತವಾಗುವುದಿಲ್ಲ. ಏಕೆಂದರೆ ಶಿವನ ವಾಸಸ್ಥಾನವಾದ ಆ ಕೈಲಾಸವು ಶಿವನಷ್ಟೇ ಪವಿತ್ರವಾದದ್ದು. ಅದು ತನ್ನ ಸ್ವರೂಪವನ್ನು ಯಾರಿಗೆ ತೋರಿಸಬೇಕೆಂದು ಬಯಸುತ್ತದೆಯೋ ಅಂಥವರಿಗೆ ಮಾತ್ರ ಇಲ್ಲಿಗೆ ಬರಲು ಮತ್ತು ಬಂದ ನಂತರ ಪರಿಕ್ರಮದ ಯಾತ್ರೆಯನ್ನು ಪೂರ್ಣಗೊಳಿಸಲು ಸಾಧ್ಯವಾಗುತ್ತದೆ. ನಮ್ಮನ್ನು ಕರೆಸಿಕೊಂಡು ದರ್ಶನ ಮತ್ತು ಪರಿಕ್ರಮಗಳೆರಡನ್ನೂ ನಿರಾತಂಕವಾಗಿ ಪೂರೈಸಲು ಅವಕಾಶ ಮತ್ತು ಸಾಮರ್ಥ್ಯಗಳನ್ನು ಅನುಗ್ರಹಿಸುವ ಮೂಲಕ ಅದಕ್ಕಾಗಿ ನಮ್ಮನ್ನು ಕೂಡ ಆಯ್ಕೆ ಮಾಡಿಕೊಂಡಿರುವುದಕ್ಕಾಗಿ ಕೈಲಾಸಕ್ಕೆ ಮತ್ತು ಅದರ ಅಧಿಪತಿಯಾದ ಶಿವನಿಗೆ ಧನ್ಯತಾ ಭಾವವನ್ನು ಹೊಂದಿದ್ದೇವೆ.
ಕೈಲಾಸ ಯಾತ್ರೆಯು ದೈಹಿಕ ಶಕ್ತಿಯಿಂದ ಮಾತ್ರ ಸಂಪನ್ನಗೊಳ್ಳುವ ಯಾತ್ರೆಯಲ್ಲ. ಭಾವದಲ್ಲಿ ಭಕ್ತಿ, ಮನದಲ್ಲಿ ಸಮರ್ಪಣ ಭಾವವಿದ್ದರೆ ಮಾತ್ರ ಪೂರ್ಣಗೊಳಿಸಬಹುದಾದ ಯಾತ್ರೆಯಿದು. ಕೈಲಾಸದ ದಿವ್ಯತೆಯ ಆಕರ್ಷಣೆಯು ಅನನ್ಯ ಮತ್ತು ಅನುಪಮ. ಎಷ್ಟು ಬಾರಿ ನೋಡಿದರೂ ಮತ್ತೆ ಮತ್ತೆ ನೋಡಬೇಕೆಂಬ ಹಂಬಲ ಭಾವದಲ್ಲಿ ಇಂಬು ಪಡೆಯುತ್ತಿರುತ್ತದೆ. ಅದರ ದಿವ್ಯತೆಯ ಪ್ರಭಾವ ನಮ್ಮ ಮೈಮನಗಳನ್ನು ವ್ಯಾಪಕವಾಗಿ ಆವರಿಸಿಕೊಂಡು ಬಿಟ್ಟಿದೆ. ಹೀಗಾಗಿ ಇನ್ನೊಮ್ಮೆ ಕೈಲಾಸದ ಬಳಿ ಹೋಗಬೇಕೆಂಬ ಭಾವ ಮನದಲ್ಲಿ ಚಿಗುರೊಡೆಯುತ್ತಲೇ ಇದೆ. ಅದು ದೇಹದ ಜತೆಗಾದರೂ ಸರಿ! ಕೇವಲ ಆತ್ಮಸ್ವರೂಪದಲ್ಲಾದರೂ ಸರಿ! ಕೈಲಾಸನಾಥನ ಕರೆ ಹೇಗಾಗುತ್ತದೆಯೋ ಹಾಗೆ! ಪ್ರೇರಣೆ ಮತ್ತು ಅಪ್ಪಣೆ ಎಂದು ಬರುತ್ತದೆಯೋ ಅಂದು!