ನ್ಯಾ. ಸೂರ್ಯಕಾಂತ್ 
ದೇಶ

ಇಂದು ಭಾರತದ 53ನೇ ಸಿಜೆಐ ಆಗಿ ಪ್ರಮಾಣ ವಚನ ಸ್ವೀಕರಿಸಲಿರುವ ನ್ಯಾ. ಸೂರ್ಯಕಾಂತ್ | Justice Surya Kant

ನವದೆಹಲಿ: ಭಾರತದ ಸುಪ್ರೀಂಕೋರ್ಟ್​​ನ 53ನೇ ಮುಖ್ಯ ನ್ಯಾಯಮೂರ್ತಿಯಾಗಿ ನ್ಯಾ. ಸೂರ್ಯಕಾಂತ್(Justice Surya Kant) ಇಂದು(ನ. 24) ಪ್ರಮಾಣವಚನ ಸ್ವೀಕರಿಸಲಿದ್ದು, ರಾಷ್ಟ್ರಪತಿ ದ್ರೌಪದಿ ಮುರ್ಮು ಪ್ರತಿಜ್ಞಾವಿಧಿ ಬೋಧಿಸಲಿದ್ದಾರೆ. ಅವರು 2027 ಫೆಬ್ರವರಿ 9ರವರೆಗೆ ಸೇವೆ ಸಲ್ಲಿಸಲಿದ್ದಾರೆ.
ಭಾನುವಾರ(ನ. 23) ಸಿಜೆಐ ಗವಾಯಿ ನಿವೃತ್ತಿ ಹೊಂದಿದ ಹಿನ್ನೆಲೆ ಸುಪ್ರೀಂ ಕೋರ್ಟ್‌ನ ಅತ್ಯಂತ ಹಿರಿಯ ನ್ಯಾಯಾಧೀಶರನ್ನು ತಮ್ಮ ಉತ್ತರಾಧಿಕಾರಿಯಾಗಿ ನೇಮಿಸುವ ಸಂಪ್ರದಾಯದ ಪ್ರಕಾರ ನ್ಯಾ. ಸೂರ್ಯಕಾಂತ್ ಹೆಸರನ್ನು ಶಿಫಾರಸ್ಸು ಮಾಡಿದ್ದರು.
ಸಿಜೆಐ ಗವಾಯಿ ಅವರ ಶಿಫಾರಸಿನ ಮೇರೆಗೆ ಸಂವಿಧಾನದ 124ನೇ ವಿಧಿಯ ಷರತ್ತು (2) ರ ಮೂಲಕ ನೀಡಲಾದ ಅಧಿಕಾರವನ್ನು ಚಲಾಯಿಸಿ ರಾಷ್ಟ್ರಪತಿಗಳು ಈ ಹಿಂದೆ ನ್ಯಾಯಮೂರ್ತಿ ಸೂರ್ಯ ಕಾಂತ್ ಅವರನ್ನು ಭಾರತದ ಮುಂದಿನ ಮುಖ್ಯ ನ್ಯಾಯಮೂರ್ತಿಯಾಗಿ ನೇಮಿಸಿದ್ದರು.
ನ್ಯಾ. ಸೂರ್ಯಕಾಂತ್ ಯಾರು?
1962 ಫೆಬ್ರವರಿ 10ರಂದು ಹರಿಯಾಣದ ಮಧ್ಯಮ ವರ್ಗದ ಕುಟುಂಬದಲ್ಲಿ ಜನಿಸಿದ ನ್ಯಾಯಮೂರ್ತಿ ಸೂರ್ಯಕಾಂತ್, 1984ರಲ್ಲಿ ಹಿಸಾರ್‌ನಲ್ಲಿ ತಮ್ಮ ಕಾನೂನು ವೃತ್ತಿಯನ್ನು ಪ್ರಾರಂಭಿಸಿದ್ದರು. ಬಳಿಕ ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್‌ನಲ್ಲಿ ಪ್ರಾಕ್ಟೀಸ್ ಮಾಡಲು ಚಂಡೀಗಢಕ್ಕೆ ತೆರಳಿದರು.
2000 ಜುಲೈ ತಿಂಗಳಲ್ಲಿ ಹರಿಯಾಣದ ಅತ್ಯಂತ ಕಿರಿಯ ಅಡ್ವೊಕೇಟ್ ಜನರಲ್ ಆಗಿ ನೇಮಕಗೊಂಡಿದ್ದ ಅವರು 2001ರಲ್ಲಿ ಹಿರಿಯ ವಕೀಲರಾಗಿ ನೇಮಕಗೊಂಡರು. 2004 ಜನವರಿ 9ರಂದು ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್‌ನ ಖಾಯಂ ನ್ಯಾಯಾಧೀಶರಾಗಿ ಬಡ್ತಿ ಪಡೆದರು. ನಂತರ 2018 ಅಕ್ಟೋಬರ್​ನಿಂದ 2019 ಮೇ 24,ರವರೆಗೆ ಸುಪ್ರೀಂ ಕೋರ್ಟ್‌ಗೆ ಬಡ್ತಿ ಪಡೆಯುವವರೆಗೆ ಹಿಮಾಚಲ ಪ್ರದೇಶ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಯಾಗಿ ಸೇವೆ ಸಲ್ಲಿಸಿದರು. ನವೆಂಬರ್ 2024 ರಿಂದ ಸುಪ್ರೀಂ ಕೋರ್ಟ್ ಕಾನೂನು ಸೇವೆಗಳ ಸಮಿತಿಯ ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ಸಿಜೆಐ ಆಗಿ ನೇಮಕಗೊಂಡ ಬಳಿಕ ನ್ಯಾ. ಸೂರ್ಯಕಾಂತ್ ಹೇಳಿದ್ದೇನು?
ಶನಿವಾರ(ನ. 22) 7 ಕೃಷ್ಣ ಮೆನನ್ ಮಾರ್ಗದಲ್ಲಿರುವ ತಮ್ಮ ಅಧಿಕೃತ ನಿವಾಸದಲ್ಲಿ ಮಾಧ್ಯಮಗಳೊಂದಿಗೆ ಅನೌಪಚಾರಿಕ ಸಂವಾದ ನಡೆಸಿ ಮಾತನಾಡಿರುವ ಅವರು, ಪ್ರಸ್ತುತ ಸುಪ್ರೀಂ ಕೋರ್ಟ್‌ನಲ್ಲಿ ಬಾಕಿ ಇರುವ ಪ್ರಕರಣಗಳ ಸಂಖ್ಯೆ 90,000 ದಾಟಿದೆ. ನ್ಯಾಯಾಧೀಶರ ಅತ್ಯುತ್ತಮ ಬಳಕೆಯನ್ನು ಖಚಿತಪಡಿಸಿಕೊಳ್ಳುವ ಮೂಲಕ ಬಾಕಿ ಇರುವ ಪ್ರಕರಣಗಳನ್ನು ಕಡಿಮೆ ಮಾಡುವ ಗುರಿಯನ್ನು ಹೊಂದಿದ್ದೇನೆ ಎಂದು ಹೇಳಿದ್ದಾರೆ.
ಹೈಕೋರ್ಟ್‌ಗಳು ಮತ್ತು ಕೆಳ ನ್ಯಾಯಾಲಯಗಳು ನಿರ್ಧಾರಗಳನ್ನು ತೆಗೆದುಕೊಳ್ಳಲು ಸಾಧ್ಯವಾಗದ ಕಾರಣ ಕಾನೂನಿನ ಪ್ರಶ್ನೆಗಳನ್ನು ನಿರ್ಧರಿಸಲು ನಾನು ಆದ್ಯತೆಯ ಮೇಲೆ ಸಂವಿಧಾನ ಪೀಠಗಳನ್ನು ರಚಿಸುತ್ತೇನೆ. ಅಲ್ಲಿಯೂ ಬಾಕಿ ಇರುವ ಪ್ರಕರಣಗಳನ್ನು ಕಡಿಮೆ ಮಾಡಲು ಕೆಲಸ ಮಾಡ್ತೇನೆ ಎಂದು ತಿಳಿಸಿದ್ದಾರೆ.
ನ್ಯಾಯಾಂಗ ಬಡ್ತಿಗಳು ಮತ್ತು ಸುಧಾರಣೆಗಳ ಕುರಿತು ಮಾತನಾಡಿದ್ದು, ಇಡೀ ದೇಶ ಇಂದು ಮಧ್ಯಸ್ಥಿಕೆಯ ಬಗ್ಗೆ ಮಾತನಾಡುತ್ತಿದೆ. ಮಧ್ಯಸ್ಥಿಕೆಯು ಬಾಕಿ ಪ್ರಕರಣಗಳನ್ನು ಗಣನೀಯವಾಗಿ ಕಡಿಮೆ ಮಾಡುತ್ತದೆ. ಖಾಸಗಿ ನಿಗಮಗಳು, ಬಹುರಾಷ್ಟ್ರೀಯ ಕಂಪನಿಗಳು, ಬ್ಯಾಂಕುಗಳು ಇತ್ಯಾದಿಗಳು ಆಂತರಿಕ ಮಧ್ಯವರ್ತಿಗಳಿಗೆ ತರಬೇತಿ ನೀಡುವಂತೆ ಕೋರಿ ಸುಪ್ರೀಂ ಕೋರ್ಟ್ ಅನ್ನು ಸಂಪರ್ಕಿಸಿವೆ. ಮಧ್ಯಸ್ಥಿಕೆಯು ಈ ಸಮಯದ ಅಗತ್ಯವಾಗಿದೆ ಎಂದು ನಾನು ಭಾವಿಸುತ್ತೇನೆ ಎಂದಿದ್ದಾರೆ.
ಸರ್ಕಾರವು ಅತಿದೊಡ್ಡ ದಾವೆದಾರನಾಗಿದ್ದು, ಸೋತ ವಿಷಯಗಳಲ್ಲಿಯೂ ಸಹ ಮೇಲ್ಮನವಿ ಸಲ್ಲಿಸುತ್ತದೆ. ಸರ್ಕಾರ ಮತ್ತು ಅದರ ಸಂಸ್ಥೆಗಳು ಮಧ್ಯಸ್ಥಿಕೆಯನ್ನು ಆರಿಸಿಕೊಳ್ಳುವಂತೆ ಪ್ರೋತ್ಸಾಹಿಸುತ್ತೇನೆ. ಜೊತೆಗೆ ಸುಪ್ರೀಂ ಕೋರ್ಟ್ ಮತ್ತು ನ್ಯಾಯಾಧೀಶರ ಸಾಮಾಜಿಕ ಮಾಧ್ಯಮ ಟ್ರೋಲಿಂಗ್ ಕುರಿತು, ತಮ್ಮ ವೃತ್ತಿಜೀವನದ ಯಾವುದೇ ಹಂತದಲ್ಲಿ ಒತ್ತಡವನ್ನು ಅನುಭವಿಸಿಲ್ಲ. ಸಮಸ್ಯೆ ಬಂದರೆ ಪರಿಹಾರವೂ ಬರುತ್ತದೆ ಎಂದು ಹೇಳಿದ್ದಾರೆ (ಏಜೆನ್ಸೀಸ್).