ದೆಹಲಿಗೆ ಹೊರಟ್ಟಿದ್ದ ಏರ್ ಇಂಡಿಯಾ ಎಕ್ಸ್ಪ್ರೆಸ್ ಫ್ಲೈಟ್ ದಿಢೀರ್ ಯು-ಟರ್ನ್
- ಸೌದಿ ಅರೇಬಿಯಾದ ದಮ್ಮಾಮ್ನಿಂದ ದೆಹಲಿಗೆ ಹೊರಟಿದ್ದ ಏರ್ ಇಂಡಿಯಾ ಎಕ್ಸ್ಪ್ರೆಸ್ ವಿಮಾನ
- ವಾಶ್ರೂಂನಲ್ಲಿ ಬಾಂಬ್ ಎಂದು ಬರೆದ ಟಿಶ್ಯೂ ಪೇಪರ್ ಪತ್ತೆ
- ಕೆಲಕಾಲ ಭಾರಿ ಆತಂಕ ಸೃಷ್ಟಿಸಿದ ಬೆನ್ನಲ್ಲೇ ವಿಮಾನವನ್ನು ಅಹಮದಾಬಾದ್ನಲ್ಲಿ ಲ್ಯಾಂಡಿಂಗ್
ನವದೆಹಲಿ: ಸೌದಿ ಅರೇಬಿಯಾದ ದಮ್ಮಾಮ್ನಿಂದ ದೆಹಲಿಗೆ ಹೊರಟಿದ್ದ ಏರ್ ಇಂಡಿಯಾ ಎಕ್ಸ್ಪ್ರೆಸ್ ವಿಮಾನದ ವಾಶ್ರೂಂನಲ್ಲಿ ಟಿಶ್ಯೂ ಪೇಪರ್ ಪತ್ತೆಯಾಗಿದ್ದು, ಅದರಲ್ಲಿ ಬರೆದಿದ್ದ ಬಾಂಬ್ ಎಂದ ಪದ ಕೆಲಕಾಲ ಭಾರಿ ಆತಂಕ ಸೃಷ್ಟಿಸಿದ ಬೆನ್ನಲ್ಲೇ ವಿಮಾನವನ್ನು ಅಹಮದಾಬಾದ್ಗೆ ತಿರುಗಿಸಿದ ಪ್ರಕರಣದ ತನಿಖೆ ಸದ್ಯ ಇನ್ನಷ್ಟು ಚುರುಕುಗೊಂಡಿದೆ.
ವಿಮಾನದ ಶೌಚಾಲಯದಲ್ಲಿ ಬೆದರಿಕೆ ಸಂದೇಶ ಪತ್ತೆಯಾದ ಬಳಿಕ ಮುನ್ನೆಚ್ಚರಿಕಾ ಕ್ರಮವಾಗಿ ವಿಮಾನವನ್ನು ಪೈಲಟ್ ಅಹಮದಾಬಾದ್ಗೆ ತಿರುಗಿಸಿದರು. ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬ್ಬಂದಿಯೊಬ್ಬರು ಹಾಗೂ ಪ್ರಯಾಣಿಕರೊಬ್ಬರನ್ನು ವಿಚಾರಣೆಗೆ ಒಳಪಡಿಸಲಾಗಿದ್ದು, ಟಿಶ್ಯೂ ಪೇಪರ್ನಲ್ಲಿ ಬಾಂಬ್ ಎಂದು ಬರೆದಿದ್ದು ಯಾರು? ಅದನ್ನು ಯಾವ ಕಾರಣಕ್ಕೆ ವಾಶ್ರೂಮ್ನಲ್ಲಿ ಇಟ್ಟು ಬಂದರು ಎಂಬ ಪ್ರಶ್ನೆಗಳು ತೀವ್ರ ಗೊಂದಲ, ಅನುಮಾನಗಳಿಗೆ ಕಾರಣವಾಗಿದೆ.
ಏನಿದು ಪ್ರಕರಣ?
ಕಳೆದ ಸೋಮವಾರ (ಸೆ.01) ದಮ್ಮಾಮ್ನಿಂದ ದೆಹಲಿಗೆ ಪ್ರಯಾಣಿಸುತ್ತಿದ್ದ ಏರ್ ಇಂಡಿಯಾ ಎಕ್ಸ್ಪ್ರೆಸ್ ವಿಮಾನದಲ್ಲಿದ್ದ ಸಿಬ್ಬಂದಿಯೊಬ್ಬರು ಶೌಚಾಲಯಕ್ಕೆ ತೆರಳಿದ್ದಾಗ, ಅಲ್ಲಿ, ಬಾಂಬ್ ಎಂದು ಬರೆಯಲಾಗಿದ್ದ ಟಿಶ್ಯೂ ಪೇಪರ್ ನೋಡಿದ್ದಾರೆ. ತಕ್ಷಣವೇ, ಈ ಕುರಿತು ಮಾಹಿತಿ ಪಡೆದ ಪೈಲಟ್, ಕೂಡಲೇ ವಿಮಾನದಲ್ಲಿ ಪ್ರಯಾಣಿಸುತ್ತಿದ್ದ 32 ಪ್ರಯಾಣಿಕರು ಹಾಗೂ 8 ಮಂದಿ ಸಿಬ್ಬಂದಿ ಸೇರಿ ಒಟ್ಟು 40 ಜನರ ಜೀವ ಅಮೂಲ್ಯ ಎಂದು ಹೆಚ್ಚು ಸಮಯ ವ್ಯರ್ಥ ಮಾಡದೆ ಅಹಮದಾಬಾದ್ನಲ್ಲಿ ಲ್ಯಾಂಡ್ ಮಾಡಿದರು.
ತನಿಖೆ ಚುರುಕು
ಘಟನೆ ಸಂಬಂಧ ಏರ್ ಇಂಡಿಯಾ ಸಂಸ್ಥೆಯು ಅಹಮದಾಬಾದ್ ವಿಮಾನ ನಿಲ್ದಾಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ಸದ್ಯ ಪ್ರಕರಣದ ತನಿಖೆಯನ್ನು ಕ್ರೈಂ ಬ್ರಾಂಚ್ ವಹಿಸಿಕೊಂಡಿದೆ. ಈ ಮಧ್ಯೆ, ವಿಮಾನದ ಸಿಬ್ಬಂದಿಯ ಹ್ಯಾಂಡ್ರೈಟಿಂಗ್ ಹೋಲಿಕೆ ಬಗ್ಗೆ ಅನುಮಾನಗಳು ವ್ಯಕ್ತವಾಗಿವೆ. ಪ್ರಾಥಮಿಕ ತನಿಖೆ ಮತ್ತು ಪರಿಶೀಲನೆ ವೇಳೆ ಬೆದರಿಕೆ ಪತ್ರದಲ್ಲಿದ್ದ ಕೈಬರಹವು ಸಿಬ್ಬಂದಿಯೊಬ್ಬರ ಹ್ಯಾಂಡ್ರೈಟಿಂಗ್ಗೆ ಹೋಲುವಂತಿದೆ ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಆ ಸಿಬ್ಬಂದಿಯನ್ನು ಪೊಲೀಸರು ಕಸ್ಟಡಿಗೆ ಪಡೆದು ವಿಚಾರಣೆ ಕೈಗೊಂಡಿದ್ದಾರೆ ಎಂದು ವರದಿಯಾಗಿದೆ,(ಏಜೆನ್ಸೀಸ್).