ಆರೋಪಿ ರಾಜೀವ್ ಗೌಡ 
ದೇಶ

ಪೌರಾಯುಕ್ತೆಗೆ ಬೆದರಿಕೆ ಹಾಕಿದ ಪ್ರಕರಣ; ಆರೋಪಿ ರಾಜೀವ್​​ ಗೌಡಗೆ 14 ದಿನಗಳ ನ್ಯಾಯಾಂಗ ಬಂಧನ | Rajiv Gowda

ಬೆಂಗಳೂರು: ಚಿಕ್ಕಬಳ್ಳಾಪುರ ಜಿಲ್ಲೆಯ ಶಿಡ್ಲಘಟ್ಟ ನಗರಸಭೆ ಪೌರಾಯುಕ್ತೆ ಜಿ.ಅಮೃತಾಗೆ ಬೆದರಿಕೆಯನ್ನೊಡ್ಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಮಾಜಿ ಕಾಂಗ್ರೆಸ್ ಮುಖಂಡ ರಾಜೀವ್ ಗೌಡ ಸಲ್ಲಿಸಿದ್ದ ಮಧ್ಯಂತರ ಜಾಮೀನು ಅರ್ಜಿಯನ್ನು ಶಿಡ್ಲಘಟ್ಟ ಕೋರ್ಟ್ ವಜಾಗೊಳಿಸಿದ್ದು,​ 14 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ.
ಪ್ರಕರಣದ ದಾಖಲಾಗುತ್ತಿದ್ದ ಹೊರರಾಜ್ಯಕ್ಕೆ ಪರಾರಿಯಾಗುತ್ತಿದ್ದ ರಾಜೀವ್ ಗೌಡನನ್ನು ಶಿಡ್ಲಘಟ್ಟ ಪೊಲೀಸರು ಖಚಿತ ಮಾಹಿತಿ ಮೇರೆಗೆ ಕರ್ನಾಟಕ-ಕೇರಳ ಗಡಿ ಭಾಗದಲ್ಲಿ ಸೋಮವಾರ ಬೆಳಿಗ್ಗೆ ಆರೋಪಿಯನ್ನು ವಶಕ್ಕೆ ಪಡೆದುಕೊಂಡಿದ್ದರು. ನ್ಯಾಯಾಧೀಶರ ಮುಂದೆ ಹಾಜರುಪಡಿಸಿದ್ದರು.
ಇಂದು ರಾಜೀವ್ ಗೌಡ ಸಲ್ಲಿಸಿದ್ದ ಮಧ್ಯಂತರ ಜಾಮೀನು ಕೋರಿ ಸಲ್ಲಿಸಿದ್ದ ಅರ್ಜಿಯನ್ನು ವಿಚಾರಣೆ ನಡೆಸಿದ್ದ ಜೆಎಂಎಫ್​ಸಿ ಕೋರ್ಟ್​, ಅರ್ಜಿ ವಜಾಗೊಳಿಸಿ, 14 ದಿನಗಳ ಕಾಲ ನ್ಯಾಯಾಂಗ ಬಂಧನ ವಿಧಿಸಿದೆ. ಇನ್ನೂ ಪ್ರಕರಣದಲ್ಲಿ ಪರಾರಿಯಾಗಲು ಸಹಾಯ ಮಾಡಿದ ಆರೋಪದಲ್ಲಿ ಬಂಧಿತರಾಗಿದ್ದ ಮಂಗಳೂರಿನ ಉದ್ಯಮಿ ಮೈಕಲ್​ಗೆ ಕೋರ್ಟ್​ ಜಾಮೀನು ನೀಡಿದೆ. 
ಕಳೆದ ಜ.14 ರಂದು ಶಿಡ್ಲಘಟ್ಟ  ಪೌರಾಯುಕ್ತ ಜಿ.ಅಮೃತಾಗೆ ಫ್ಲೆಕ್ಸ್‌ ತೆರವು ವಿಚಾರವಾಗಿ ರಾಜೀವ್‌ ಗೌಡ ಮೊಬೈಲ್‌ ಕರೆ ಮಾಡಿ ಬೆದರಿಕೆಯನ್ನೊಡ್ಡಿದ್ದ ಆಡಿಯೋ ವೈರಲ್‌ ಆಗಿತ್ತು. ಚಪ್ಪಲಿಯಲ್ಲಿ ಹೊಡೆಸುವ, ಜನರನ್ನು ದಂಗೆ ಏಳಿಸುವ, ಬೆಂಕಿ ಹಚ್ಚುವ ಮಾತುಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿ, ಆಕ್ರೋಶ ವ್ಯಕ್ತವಾಗಿತ್ತು.
ಇದಕ್ಕೆ ಸಂಬಂಧಿಸಿದಂತೆ ಶಿಡ್ಲಘಟ್ಟ ನಗರ ಪೊಲೀಸ್‌ ಠಾಣೆಯಲ್ಲಿ ಪೌರಾಯುಕ್ತೆ ಅಮೃತಾ,  ಸರ್ಕಾರಿ ಅಧಿಕಾರಿ ಕರ್ತವ್ಯ ನಿರ್ವಹಣೆಗೆ ಅಡ್ಡಿ, ಬೆದರಿಕೆ, ಅವಾಚ್ಯ ಶಬ್ದಗಳಿಂದ ನಿಂದನೆ ಸೇರಿದಂತೆ ವಿವಿಧ ಆರೋಪಗಳಡಿ ದೂರು ನೀಡಿದ್ದರಿಂದ ಪ್ರಕರಣ ದಾಖಲಾಗಿತ್ತು.