ಸೋನಮ್ ವಾಂಗ್ಚುಕ್ ಮತ್ತು ಜೆ ಪಿ ನಡ್ಡಾ 
ದೇಶ

ಗುರುಗ್ರಾಮ್ ಆಸ್ಪತ್ರೆಯಲ್ಲಿ ಸೋನಮ್ ವಾಂಗ್ಚುಕ್ ಭೇಟಿಯಾದ ಜೆಪಿ ನಡ್ಡಾ, ಜಿತೇಂದ್ರ ಸಿಂಗ್; ಆರೋಗ್ಯ ವಿಚಾರಣೆ | JP Nadda

ನವದೆಹಲಿ: ಗುರುಗ್ರಾಮದ ಮೇದಾಂತ ಆಸ್ಪತ್ರೆಯಲ್ಲಿರುವ ಸಾಮಾಜಿಕ ಕಾರ್ಯಕರ್ತ ಸೋನಮ್ ವಾಂಗ್ಚುಕ್ ಅವರನ್ನು ಕೇಂದ್ರ ಸಚಿವರಾದ ಜೆ.ಪಿ. ನಡ್ಡಾ(JP Nadda) ಮತ್ತು ಜಿತೇಂದ್ರ ಸಿಂಗ್ ಮಂಗಳವಾರ(ಜು. 21) ಭೇಟಿಯಾಗಿ ಆರೋಗ್ಯ ವಿಚಾರಣೆ ನಡೆಸಿದ್ದಾರೆ ಎಂದು ವರದಿಯಾಗಿದೆ.
ನೀಟ್ ಪರೀಕ್ಷೆ ಅಕ್ರಮ ಹೊಣೆಗಾರಿಕೆ ಮತ್ತು ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆಗೆ ಒತ್ತಾಯಿಸಿ ಜಂತರ್ ಮಂತರ್​ನಲ್ಲಿ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದ ವಾಂಗ್ಚುಕ್ ಅವರನ್ನು, ದೆಹಲಿ ಹೈಕೋರ್ಟ್ ಆದೇಶದ ಮೇರೆಗೆ ಹೆಚ್ಚಿನ ಚಿಕಿತ್ಸೆಗಾಗಿ ಸಫ್ದರ್ಜಂಗ್ ಆಸ್ಪತ್ರೆಯಿಂದ ಗುರುಗ್ರಾಮದ ಮೇದಾಂತ ಆಸ್ಪತ್ರೆಗೆ ದಾಖಲಿಸಲಾಗಿದೆ.
ಈ ಕುರಿತು ವರದಿ ಮಾಡಿರುವ ಪಿಟಿಐ, ಕೇಂದ್ರ ಸಚಿವರಾದ ಜೆ.ಪಿ. ನಡ್ಡಾ ಮತ್ತು ಜಿತೇಂದ್ರ ಸಿಂಗ್ ಅವರು ಆಸ್ಪತ್ರೆಯಲ್ಲಿ ಸೋನಮ್ ವಾಂಗ್ಚುಕ್ ಅವರನ್ನು ಭೇಟಿ ಮಾಡಿದ್ದಾರೆ ಎಂದು ಬಲ್ಲಮೂಲಗಳನ್ನು ಉಲ್ಲೇಖಿಸಿ ತಿಳಿಸಿದೆ.
ಇನ್ನೂ ಮೇದಾಂತ ಆಸ್ಪತ್ರೆಯ ಅಧಿಕಾರಿಯೊಬ್ಬರು, ಸಂಜೆ 7.30ರ ಸುಮಾರಿಗೆ ಬಿಗಿ ಭದ್ರತೆಯಲ್ಲಿ ಆಂಬುಲೆನ್ಸ್‌ನಲ್ಲಿ ವಾಂಗ್‌ಚುಕ್ ಅವರನ್ನು ಮೇದಾಂತ ಆಸ್ಪತ್ರೆಗೆ ಕರೆತರಲಾಯಿತು. ಆಂತರಿಕ ಔಷಧ ತಜ್ಞೆ ಡಾ. ಸುಶೀಲಾ ಕಟಾರಿಯಾ ಅವರ ಮೇಲ್ವಿಚಾರಣೆಯಲ್ಲಿ ಅವರನ್ನು ಐಸಿಯು 8ರಲ್ಲಿ ದಾಖಲಿಸಲಾಗಿದೆ ಎಂದು ತಿಳಿಸಿದ್ದಾರೆ (ಏಜೆನ್ಸೀಸ್).