ಮದುವೆ ದಿನವೇ ಅಕ್ಕ-ತಂಗಿ ಸಾವಿಗೆ ಶರಣು! Jodhpur Sisters
- ತಮ್ಮಿಬ್ಬರು ಹೆಣ್ಣು ಮಕ್ಕಳಿಗೆ ಮದುವೆ ಮಾಡಲು ಎಲ್ಲ ಸಿದ್ಧತೆಗಳು ನಡೆದಿದ್ದವು
- ಇನ್ನೇನು ಕೆಲವೇ ಕ್ಷಣಗಳಲ್ಲಿ ಮದುವೆ ಸಮಾರಂಭ ನಡೆಯಬೇಕಿತ್ತು
- ಅಷ್ಟರಲ್ಲಿ ಮದುವೆ ಮನೆಯಲ್ಲಿ ಸೂತಕದ ಛಾವೆ ಆವರಿಸಿದೆ
- ರಾಜಸ್ಥಾನದ ಜೋಧ್ಪುರ ಜಿಲ್ಲೆಯ ಮನಾಯಿ ಗ್ರಾಮದಲ್ಲಿ ನಡೆದಿದೆ
Jodhpur Sisters : ತಮ್ಮಿಬ್ಬರು ಹೆಣ್ಣು ಮಕ್ಕಳಿಗೆ ಮದುವೆ ಮಾಡಲು ಎಲ್ಲ ಸಿದ್ಧತೆಗಳು ನಡೆದಿದ್ದವು. ವೇದಿಕೆ ಕೂಡ ಸಜ್ಜಾಗಿತ್ತು. ಮನೆಯಲ್ಲಿ ಹಬ್ಬದ ವಾತಾವರಣ ಮೂಡಿತ್ತು. ಇನ್ನೇನು ಕೆಲವೇ ಕ್ಷಣಗಳಲ್ಲಿ ಮದುವೆ ಸಮಾರಂಭ ನಡೆಯಬೇಕಿತ್ತು. ಅಷ್ಟರಲ್ಲಿ ಮದುವೆ ಮನೆಯಲ್ಲಿ ಸೂತಕದ ಛಾವೆ ಆವರಿಸಿದೆ. ಇಬ್ಬರು ಸಹೋದರಿಯರು ವಿಷಕಾರಿ ಪದಾರ್ಥ ಸೇವನೆ ಮಾಡಿ, ಮದುವೆ ದಿನವೇ ದುರಂತ ಸಾವಿಗೀಡಾಗಿದ್ದಾರೆ.
ಮೃತ ಸಹೋದರಿಯರನ್ನು ಶೋಭಾ (25) ಮತ್ತು ವಿಮಲಾ (23) ಎಂದು ಗುರುತಿಸಲಾಗಿದೆ. ಈ ಘಟನೆ ರಾಜಸ್ಥಾನದ ಜೋಧ್ಪುರ ಜಿಲ್ಲೆಯ ಮನಾಯಿ ಗ್ರಾಮದಲ್ಲಿ ನಡೆದಿದೆ. ಎಲ್ಲವೂ ಅಂದುಕೊಂಡಂತೆ ನಡೆದಿದ್ದರೆ ಶನಿವಾರ (ಫೆ.21) ಅವರಿಬ್ಬರ ವಿವಾಹ ನಡೆಯಬೇಕಿತ್ತು. ಆದರೆ, ಘೋರ ವಿಧಿಯಾಟಕ್ಕೆ ಮದುವೆ ಮನೆ ಇದೀಗ ಸೂತಕದ ಮನೆಯಾಗಿದೆ. ಸಂಭ್ರಮದ ನಗು ಕೇಳಿಬರಬೇಕಿದ್ದ ಮನೆಯಲ್ಲಿ ಇದೀಗ ಅಳು ಕೇಳಿಸುತ್ತಿದೆ.
ಶೋಭಾ ಮತ್ತು ವಿಮಲಾ ಮದುವೆಗೆ ಶುಕ್ರವಾರ ರಾತ್ರಿ ಸಿದ್ಧತೆಗಳು ಭರದಿಂದ ಸಾಗುತ್ತಿತ್ತು. ಇದರ ನಡುವೆ ಅವರಿಬ್ಬರು ವಿಷ ಸೇವನೆ ಮಾಡಿ ಸಾವಿಗೆ ಶರಣಾಗಿದ್ದಾರೆ. ಇದಕ್ಕೂ ಮುನ್ನ ವಿಷ ಸೇವಿಸಿರುವುದು ಗೊತ್ತಾದ ಕೂಡಲೇ ಇಬ್ಬರನ್ನು ಜೋಧ್ಪುರದ ಖಾಸಗಿ ಆಸ್ಪತ್ರೆಗೆ ಕುಟುಂಬಸ್ಥರು ಕರೆದೊಯ್ದರು. ಆದರೆ, ಆಸ್ಪತ್ರೆಗೆ ಬರುವಷ್ಟರಲ್ಲೇ ಇಬ್ಬರು ಮೃತಪಟ್ಟಿದ್ದಾರೆ ಎಂದು ವೈದ್ಯರು ತಿಳಿಸಿದರು.
ಜೋಧ್ಪುರ ಎಡಿಸಿಪಿ ಹೇಳಿದ್ದೇನು?
ಶುಕ್ರವಾರ ತಡರಾತ್ರಿಯವರೆಗೂ ಅವರ ಮನೆಯಲ್ಲಿ ವಿವಾಹ ಸಂಭ್ರಮ ಮುಂದುವರಿದಿತ್ತು. ಮಧ್ಯರಾತ್ರಿಯ ಸುಮಾರಿಗೆ ಇಬ್ಬರೂ ವಧುಗಳು ನಿದ್ರೆಗೆ ಜಾರಿದರು. ಬೆಳಗ್ಗೆ 4 ಗಂಟೆ ಸುಮಾರಿಗೆ ಇಬ್ಬರ ಆರೋಗ್ಯ ಹದಗೆಟ್ಟಿತು. ಇದನ್ನು ಗಮನಿಸಿದ ಕುಟುಂಬ ಸದಸ್ಯರು ಕೂಡಲೇ ಅವರಿಬ್ಬರನ್ನು ಖಾಸಗಿ ಆಸ್ಪತ್ರೆಗೆ ಕರೆದೊಯ್ದರು. ಆದರೆ, ಆಸ್ಪತ್ರೆಗೆ ಬರುವಷ್ಟರಲ್ಲಿ ಮೃತಪಟ್ಟಿದ್ದಾರೆಂದು ವೈದ್ಯರು ಘೋಷಿಸದರು. ಇದಾದ ಬಳಿಕ ಇಬ್ಬರ ಶವಗಳನ್ನು ಮನೆಗೆ ತರಲಾಯಿತು. ಆನಂತರ ಅಂತ್ಯಕ್ರಿಯೆಯ ಸಿದ್ಧತೆಗಳು ಪ್ರಾರಂಭವಾದವು ಎಂದು ಜೋಧ್ಪುರ ಎಡಿಸಿಪಿ (ಪಶ್ಚಿಮ) ರೋಷನ್ ಮೀನಾ ಹೇಳಿದ್ದಾರೆ.
ಸಾವಿನ ಸುದ್ದಿ ತಿಳಿದ ಪೊಲೀಸರು ಸ್ಥಳಕ್ಕೆ ಆಗಮಿಸಿ ಅಂತ್ಯಕ್ರಿಯೆ ವ್ಯವಸ್ಥೆಗಳನ್ನು ಸ್ಥಗಿತಗೊಳಿಸಿ, ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ಶವಾಗಾರಕ್ಕೆ ಕಳುಹಿಸಿದರು. ಶವಪರೀಕ್ಷೆ ಮುಗಿದ ಬಳಿಕ ಎರಡೂ ಶವಗಳನ್ನು ಕುಟುಂಬಕ್ಕೆ ಹಿಂತಿರುಗಿಸಲಾಯಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಪ್ರಾಥಮಿಕ ತನಿಖೆಗಳು ಸಹೋದರಿಯರು ವಿಷಕಾರಿ ವಸ್ತುವನ್ನು ಸೇವಿಸಿ ಸಾವಿಗೀಡಾಗಿಬಹುದು ಎಂದು ಸೂಚಿಸುತ್ತವೆ. ಆದಾಗ್ಯೂ, ಮರಣೋತ್ತರ ಪರೀಕ್ಷೆಯ ವರದಿ ಪೂರ್ಣಗೊಂಡ ನಂತರ ಸಾವಿಗೆ ನಿಖರವಾದ ಕಾರಣವನ್ನು ದೃಢಪಡಿಸಲಾಗುವುದು. ಇಲ್ಲಿಯವರೆಗೆ, ಘಟನಾ ಸ್ಥಳದಿಂದ ಯಾವುದೇ ಆತ್ಮಹತ್ಯೆ ಪತ್ರ ಪತ್ತೆಯಾಗಿಲ್ಲ ಎಂದು ಅಧಿಕಾರಿಗಳು ಹೇಳಿದ್ದಾರೆ, (ಏಜೆನ್ಸೀಸ್).