ಆರೋಪಿ ಪತಿ, ಮೃತ ಮಹಿಳೆ  
ದೇಶ

3 ವರ್ಷವಷ್ಟೇ ಆಕೆಯ ಜೊತೆ... ಪತ್ನಿ ಕೊಂದು ಸಮಾಧಿ ಮಾಡಿದ ಪತಿ! ಖಾಕಿಗೆ ಸಿಕ್ಕ ಪತ್ರದಲ್ಲಿತ್ತು ಭಯಾನಕ ಸಂಗತಿ

ಪ್ರಮುಖ ಮುಖ್ಯಾಂಶಗಳು

  • ಪತ್ನಿಯನ್ನು ಕೊಂದು ಸಮಾಧಿ ಮಾಡಿದ ಪತಿ ಕಡೆಗೂ ಖಾಕಿ ಬಲೆಗೆ
  • ಕೆಲಸವಿಲ್ಲದ ಗಂಡನಿಂದ ಕೊಲೆ, ಇಬ್ಬರು ಮಕ್ಕಳು ಅನಾಥ
  • ಇಡೀ ಘಟನೆಯ ಕರಾಳತೆಯನ್ನು ಪತ್ರದಲ್ಲಿ ಬರೆದಿಟ್ಟಿದ್ದ ಪಾಪಿ
ಗುಜರಾತ್​: ನಾಲ್ಕು ದಿನಗಳ ಹಿಂದೆಯಷ್ಟೇ ಸೂರತ್​ನ ಗೋದದಾರ ಪೊಲೀಸ್ ಠಾಣೆಗೆ ಹೋಗಿದ್ದ ಆರೋಪಿ, ತನ್ನ ಪತ್ನಿ ಶಿಲ್ಪಾ ಸಾಲ್ವಿ ನಾಪತ್ತೆಯಾಗಿದ್ದಾಳೆ. ವೃತ್ತಿಯಲ್ಲಿ ಡಯಟಿಶಿನ್ ಆಗಿರುವ ಹೆಂಡತಿ, ಇದ್ದಕ್ಕಿದ್ದಂತೆ ಕಣ್ಮರೆಯಾಗಿದ್ದಾಳೆ. ದಯವಿಟ್ಟು ಆಕೆಯನ್ನು ಹುಡುಕಿಕೊಡಿ ಎಂದು ಪೊಲೀಸರ ಬಳಿ ದೂರಿನ ಮೂಲಕ ಬೇಡಿಕೊಂಡಿದ್ದ. ಆದರೆ, ಅದೇ 4 ದಿನಗಳ ಬಳಿಕ ಪತ್ರವನ್ನು ಬರೆದಿಟ್ಟು ಆತ ದಿಢೀರ್​ ಪರಾರಿಯಾದ ಘಟನೆ ಸದ್ಯ ಪೊಲೀಸರನ್ನೇ ಅಚ್ಚರಿಗೆ ದೂಡಿದೆ.  
ಪತ್ನಿಯನ್ನು ಹುಡುಕಿಕೊಡಿ ಎಂದು ಸ್ವತಃ ತಾನೇ ಪೊಲೀಸ್​ ಠಾಣೆಗೆ ಬಂದು ದೂರು ನೀಡಿದ ಅಸಾಮಿ, ತನಿಖೆ ಚುರುಕುಗೊಳ್ಳುತ್ತಿದ್ದಂತೆ ಲೆಟರ್​ ಬರೆದಿಟ್ಟು ನಾಪತ್ತೆಯಾದ ಬೆನ್ನಲ್ಲೇ ಇಡೀ ಪ್ರಕರಣದ ಅಸಲಿ ಕಥೆ ಇಂಚಿಂಚಾಗಿ ಬಯಲಾಗಿದೆ. ಆರೋಪಿ ಗಂಡನನ್ನು ವಿಶಾಲ್ ಸಾಲ್ವಿ ಎಂದು ಪೊಲೀಸರು ಗುರುತಿಸಿದ್ದಾರೆ. ಖಾಕಿ ಕಣ್ಣಿನಿಂದ ಪರಾರಿಯಾದ ವ್ಯಕ್ತಿಯನ್ನು ಕಡೆಗೂ ಸಾಕ್ಷಿ ಸಮೇತ ಅಧಿಕಾರಿಗಳು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.  
ತನ್ನ ಮನೆಯಲ್ಲಿ ಸಿಕ್ಕ ವಿಶಾಲ್​ ಬರೆದಿಟ್ಟ ಪತ್ರವನ್ನು ವಶಪಡಿಸಿಕೊಂಡ ಖಾಕಿ, ಅದರಲ್ಲಿದ್ದ ವಿಷಯವನ್ನು ತಿಳಿದು ಬೆರಗಾದರು. ಬಿಳಿ ಹಾಳೆಯ ಪೇಪರ್​ನಲ್ಲಿ ತನ್ನ ಪಾಪ ಕೃತ್ಯದ ಇಂಚಿಂಚೂ ಮಾಹಿತಿಯನ್ನು ಬರೆದಿದ್ದ ಆರೋಪಿ, ಹೆಂಡತಿಯ ದೇಹದ ಬಗ್ಗೆಯೂ ಸುಳಿವು ನೀಡಿದ್ದ. ಲೆಟರ್​ನಲ್ಲಿದ್ದ ಅಂಶಗಳನ್ನು ಬೆನ್ನತ್ತಿದ ಪೊಲೀಸರಿಗೆ, ನಗರದ ಸಲಾಬತ್‌ಪುರ ಪ್ರದೇಶದಲ್ಲಿ ಒಂದು ಪಾಳುಬಿದ್ದ, ಶಿಥಿಲಗೊಂಡ ಮನೆಗೆ ಹೋಗುವ ಪರಿಸ್ಥಿತಿ ಎದುರಾಯಿತು. ಅಲ್ಲಿದ್ದ ಮರದ ತುಂಡುಗಳನ್ನು ತೆಗೆದ ಖಾಕಿಗೆ, ಸಿಮೆಂಟ್ ಮಿಕ್ಸಿಂಗ್​ನಿಂದ ಕೊಳೆಯುತ್ತಿದ್ದ ಶಿಲ್ಪಾಳ ದೇಹ ಪತ್ತೆಯಾಯಿತು. ಮೃತದೇಹವನ್ನು ವಶಪಡಿಸಿಕೊಂಡ ಬೆನ್ನಲ್ಲೇ ಆರೋಪಿಗಾಗಿ ಹುಡುಕಾಡಿದ ಪೊಲೀಸರು, ಕಡೆಗೂ ಆತನನ್ನು ನಗರದ ಹೊರವಲಯದಲ್ಲಿರುವ ಗ್ರಾಮೀಣ ಪ್ರದೇಶದಲ್ಲಿ ವಿಶಾಲ್​ನನ್ನು ಬಂಧಿಸಿದರು. 

ಪತ್ರದಲ್ಲಿ ಏನು ಬರೆದಿದ್ದ? 

ಪೊಲೀಸರ ಮಾಹಿತಿ ಪ್ರಕಾರ, ಶಿಲ್ಪಾ ಮತ್ತು ವಿಶಾಲ್ 2010ರಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಈ ಜೋಡಿಗೆ 13 ಮತ್ತು 8 ವರ್ಷ ವಯಸ್ಸಿನ ಇಬ್ಬರು ಗಂಡು ಮಕ್ಕಳಿದ್ದಾರೆ. ಶಿಲ್ಪಾ ಎಂಎಸ್ಸಿ ಪದವಿಧರೆಯಾಗಿದ್ದು, ವೃತ್ತಿಯಲ್ಲಿ ಡಯಟಿಶಿನ್​ ಆಗಿ ಕೆಲಸ ಮಾಡುತ್ತಿದ್ದರು. ಇತ್ತೀಚೆಗೆ ತಮ್ಮದೇ ಒಂದು ಕ್ಲಿನಿಕ್ ಕೂಡ ತೆರೆದಿದ್ದರು ಎಂದು ವರದಿಯಾಗಿದೆ. ಮತ್ತೊಂದೆಡೆ, ಆರೋಪಿ ವಿಶಾಲ್ ವಜ್ರ ಪಾಲಿಶಿಂಗ್ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದ. ಆದರೆ, ಕಳೆದ ಕೆಲವು ವರ್ಷಗಳಿಂದ ನಿರುದ್ಯೋಗ ಸಮಸ್ಯೆಯಿಂದ ಮನೆಯಲ್ಲಿ ಖಾಲಿಯಿದ್ದ ಎನ್ನಲಾಗಿದೆ.

ಇನ್ನೊಬ್ಬನೊಂದಿಗೆ ಸಂಬಂಧ

ನಮ್ಮಿಬ್ಬರ ಮಧ್ಯೆ ಆಗಾಗ್ಗೆ ಜಗಳ ನಡೆಯುತ್ತಿತ್ತು. ಈ ವೇಳೆ, ನಾನು ಶಿಲ್ಪಾಗೆ ಯಾರೊಂದಿಗೋ ಸಂಬಂಧವಿದೆ ಎಂದು ಅನುಮಾನಿಸಿದೆ. ಅವಳ ಮೊಬೈಲ್ ಫೋನ್ ಚೆಕ್​ ಮಾಡಲು ಹೋದೆ. ಆದರೆ, ಅದಕ್ಕೆ ಅವಳು ಅವಕಾಶ ಕೊಡಲಿಲ್ಲ. ಇದೇ ಕಾರಣಕ್ಕೆ ಪದೇ ಪದೇ ನನಗೂ ಆಕೆಗೂ ಜಟಾಪಟಿ ನಡೆಯುತ್ತಿತ್ತು. ನನಗೆ ಅವಳ ಯಾವ ನಡೆಯು ಇಷ್ಟವಾಗುತ್ತಿರಲಿಲ್ಲ. ಇದನ್ನು ಸಹಿಸಲೂ ಆಗುತ್ತಿರಲಿಲ್ಲ. ಅವಳನ್ನು ನಾನೇ ಕೊಂದಿದ್ದು. ನಮ್ಮ ಹಳೆಯ ಶೀಟಿನ ಮನೆಯಲ್ಲಿ ಆಕೆಯ ಮೃತದೇಹವನ್ನು ಮುಚ್ಚಿಟ್ಟಿದ್ದೀನಿ ಎಂದು ಆರೋಪಿ ಪತ್ರದಲ್ಲಿ ಉಲ್ಲೇಖಿಸಿದ್ದಾನೆ. 

ಪತ್ರ ಸಿಕ್ಕಿದ್ದು ಕಿರಿಯ ಮಗನಿಂದ

ವಿಶಾಲ್​ ಮನೆಯಿಂದ ಕಾಣೆಯಾದ ಕೆಲವೇ ದಿನಗಳಲ್ಲಿ ತಂದೆ ರೂಮ್​ನಲ್ಲಿ ಒಂದು ಚೀಟಿ ಬರೆದಿಟ್ಟು ಹೋಗಿದ್ದಾರೆ ಎಂದು ಕಿರಿಯ ಪುತ್ರ ಪೊಲೀಸರಿಗೆ ತಿಳಿಸಿದ್ದಾನೆ. ಪತ್ರ ತೆರೆದಾಗ, ಅದರಲ್ಲಿ ಪಾಪ ನನ್ನಿಂದಲೇ ಆಗಿದೆ ಎಂದು ಮತ್ತು ಪತ್ನಿಯ ಮೃತದೇಹವಿರುವ ಸ್ಥಳವನ್ನು ತಿಳಿಸಿರುವುದು ಸ್ಪಷ್ಟವಾಗಿದೆ,(ಏಜೆನ್ಸೀಸ್).