Ketan Agarwal Murder | ಸ್ನೇಹಿತೆಯ ಆಧಾರ್ ಕಾರ್ಡ್ ಕೇಳಿದ್ದ ಸಿಯಾ ಚಾಟ್‌ನಿಂದ ಬಯಲಾಯ್ತು ಸ್ಕೆಚ್! 
ದೇಶ

ಪೊಲೀಸರ ಕಣ್ಣಿಗೆ ಮಣ್ಣೆರಚಲು ಫ್ಲೈಟ್ ಟಿಕೆಟ್ ಡ್ರಾಮಾ...? ಸ್ನೇಹಿತೆಯ ಆಧಾರ್ ಕಾರ್ಡ್ ಕೇಳಿದ್ದ ಸಿಯಾ ಚಾಟ್‌ನಿಂದ ಬಯಲಾಯ್ತು ಸ್ಕೆಚ್! | Ketan Agarwal Murder

Ketan Agarwal Murder: ಕೇತನ್ ಅಗರ್ವಾಲ್‌ ಕೊಲೆ ಪ್ರಕರಣದಲ್ಲಿ ಈಗ ಒಂದು ಆಘಾತಕಾರಿ ತಿರುವು ಸಿಕ್ಕಿದ್ದು, ಆರೋಪಿ ಸಿಯಾ ಗೋಯಲ್ ತನ್ನ ಸ್ನೇಹಿತೆಯೊಬ್ಬರಿಗೆ ಕಳುಹಿಸಿದ್ದಾಳೆ ಎನ್ನಲಾದ ಸ್ನಾಪ್‌ಚಾಟ್ ಸಂಭಾಷಣೆಯ ಸ್ಕ್ರೀನ್‌ಶಾಟ್ ಈಗ ಪೊಲೀಸರ ಕೈಸೇರಿದೆ. ಹತ್ಯೆಯ ಸಂಚಿನಿಂದ ತನಿಖಾಧಿಕಾರಿಗಳ ಗಮನವನ್ನು ಬೇರೆಡೆಗೆ ಸೆಳೆಯಲು ಮತ್ತು ಸುಳ್ಳು ಕಥೆಯನ್ನು ಸೃಷ್ಟಿಸಲು ಈ ಫ್ಲೈಟ್ ಬುಕಿಂಗ್ ಪ್ರಯತ್ನ ನಡೆದಿರಬಹುದು ಎಂಬ ಶಂಕೆಯನ್ನು ಈ ಚಾಟ್ ಹುಟ್ಟುಹಾಕಿದೆ.
ಮೇ 25 ರಂದು ನಡೆದಿದೆ ಎನ್ನಲಾದ ಈ ಸ್ನಾಪ್‌ಚಾಟ್ ಸಂಭಾಷಣೆಯಲ್ಲಿ ಸಿಯಾ ತನ್ನ ಸ್ನೇಹಿತೆಗೆ, ಯಾವ ಮದುವೆ ನಡೆಯುವುದೇ ಇಲ್ಲವೋ, ಆ ಮದುವೆಗಾಗಿ ನಾನು ಫ್ಲೈಟ್ ಟಿಕೆಟ್ ಬುಕ್ ಮಾಡಬೇಕಿದೆ. ನಿನ್ನ ಆಧಾರ್ ಕಾರ್ಡ್ ಕಳುಹಿಸು ಎಂದು ಸಂದೇಶ ಕಳುಹಿಸಿದ್ದಾಳೆ. ಕೇತನ್ ಸಾವಿಗೂ ಮುನ್ನವೇ ಈ ರೀತಿಯ ಸಿದ್ಧತೆಗಳು ನಡೆದಿದ್ದವೇ ಮತ್ತು ಅಪರಾಧದ ನಂತರ ಪೊಲೀಸರನ್ನು ದಾರಿ ತಪ್ಪಿಸಲು ಈ ಸಂಚು ರೂಪಿಸಲಾಗಿತ್ತೇ ಎಂಬ ನಿಟ್ಟಿನಲ್ಲಿ ತನಿಖಾಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ.
ಮೂಲಗಳ ಪ್ರಕಾರ, ಮೇ 30 ರ ಸುಮಾರಿಗೆ ಅಂದರೆ ಈ ಚಾಟ್ ನಡೆದ ಕೆಲವೇ ದಿನಗಳಲ್ಲಿ ಕೇತನ್‌ನನ್ನು ಕೊಲ್ಲುವ ಪ್ರಯತ್ನಗಳು ಆರಂಭವಾಗಿದ್ದವು. ಸದ್ಯ ಈ ಪುರಾವೆಯನ್ನು ಇತರ ಎಲೆಕ್ಟ್ರಾನಿಕ್ ಸಾಕ್ಷ್ಯಗಳೊಂದಿಗೆ ವಿಶ್ಲೇಷಿಸಲಾಗುತ್ತಿದ್ದು, ಈ ಸ್ನಾಪ್‌ಚಾಟ್ ಸಂಭಾಷಣೆಯ ನೈಜತೆಯನ್ನು ವಿಧಿವಿಜ್ಞಾನ ಪರೀಕ್ಷೆಯ ನಂತರವಷ್ಟೇ ಅಧಿಕೃತವಾಗಿ ಖಚಿತಪಡಿಸಿಕೊಳ್ಳಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.

ಆರೋಪಿಗಳಿಗೆ 14 ದಿನಗಳ ನ್ಯಾಯಾಂಗ ಬಂಧನ

ಈ ಮಹತ್ವದ ಬೆಳವಣಿಗೆಯ ಬೆನ್ನಲ್ಲೇ, ಪುಣೆ ನ್ಯಾಯಾಲಯವು ಆರೋಪಿಗಳಾದ ಸಿಯಾ ಗೋಯಲ್ (20) ಮತ್ತು ಚೇತನ್ ಚೌಧರಿ (22) ಅವರನ್ನು ಜುಲೈ 16 ರವರೆಗೆ 14 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ. ಆರೋಪಿಗಳಿಂದ ವಶಪಡಿಸಿಕೊಂಡ ಮೊಬೈಲ್ ಫೋನ್‌ಗಳಲ್ಲಿ ಕೋಡ್ ಭಾಷೆಗಳಲ್ಲಿರುವ ಚಾಟ್‌ಗಳಿದ್ದು, ಅವುಗಳನ್ನು ಡಿಕೋಡ್ ಮಾಡಲು ಹೆಚ್ಚಿನ ಪೊಲೀಸ್ ಕಸ್ಟಡಿಯ ಅಗತ್ಯವಿದೆ ಎಂದು ಪ್ರಾಸಿಕ್ಯೂಷನ್ ವಾದಿಸಿತ್ತು. ಆದರೆ, ಪೊಲೀಸರಿಗೆ ಈಗಾಗಲೇ ತನಿಖೆ ನಡೆಸಲು ಸಾಕಷ್ಟು ಸಮಯ ನೀಡಲಾಗಿದೆ ಎಂದು ಪ್ರತಿಪಾದಿಸಿದ ಡಿಫೆನ್ಸ್ ವಾದವನ್ನು ಪುರಸ್ಕರಿಸಿದ ನ್ಯಾಯಾಲಯವು ಪೊಲೀಸ್ ಕಸ್ಟಡಿ ಅರ್ಜಿಯನ್ನು ತಿರಸ್ಕರಿಸಿ ಇಬ್ಬರನ್ನೂ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ.
ಜೂನ್ 18 ರಂದು ಲೋಹಗಢ್ ಕೋಟೆಯ ಪ್ರಪಾತಕ್ಕೆ 25 ವರ್ಷದ ಕೇತನ್ ಅಗರ್ವಾಲ್‌ನನ್ನು ತಳ್ಳಿ ಕೊಂದ ಆರೋಪ ಇವರಿಬ್ಬರ ಮೇಲಿದೆ. ಮೃತ ಕೇತನ್ ಮತ್ತು ಸಿಯಾಗೆ ನಿಶ್ಚಿತಾರ್ಥವಾಗಿದ್ದು, ಇದೇ ನವೆಂಬರ್‌ನಲ್ಲಿ ಮದುವೆ ನಿಶ್ಚಯವಾಗಿತ್ತು ಎಂದು ತಿಳಿದುಬಂದಿದೆ(ಏಜೆನ್ಸೀಸ್​).