Ajay Chautala | ಜನನಾಯಕ ಜನತಾ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಜಯ್ ಸಿಂಗ್ ಚೌಟಾಲಾ 
ದೇಶ

ನೇಪಾಳ, ಬಾಂಗ್ಲಾದೇಶದಂತೆ ದಂಗೆ ಎದ್ದರೆ ಮಾತ್ರ ಕೇಂದ್ರ ಸರ್ಕಾರವನ್ನು ಕಿತ್ತೆಸೆಯಲು ಸಾಧ್ಯ..ನಾಲಿಗೆ ಹರಿಬಿಟ್ಟ ಜೆಜೆಪಿ ಅಧ್ಯಕ್ಷ ಚೌಟಾಲಾ | Ajay Chautala

ಚಂಡೀಗಢ: ಕೇಂದ್ರದಲ್ಲಿ ಅಧಿಕಾರದಲ್ಲಿರುವ ಎನ್‌ಡಿಎ ಸರ್ಕಾರವನ್ನು ಉರುಳಿಸಲು ಬಾಂಗ್ಲಾದೇಶ ಮತ್ತು ನೇಪಾಳದಂತೆ ಪ್ರತಿಭಟನೆಯನ್ನು ಪ್ರಾರಂಭಿಸಲು ಸಮಯ ಕೂಡಿ ಬಂದಿದೆ ಎಂದು ಜನನಾಯಕ ಜನತಾ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಜಯ್ ಸಿಂಗ್ ಚೌಟಾಲಾ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ಈ ಹೇಳಿಕೆಯ ಕುರಿತಾದ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿದ್ದು, ಬಾಂಗ್ಲಾ ಮತ್ತು ನೇಪಾಳದಲ್ಲಿ ನಡೆದ ದೊಡ್ಡ ಮಟ್ಟದ ಪ್ರತಿಭಟನೆಗಳಲ್ಲಿ ಯುವಕರು ಸಾಮೂಹಿಕವಾಗಿ ಭಾಗವಹಿಸಿದ್ದು, ಈಗ ಭಾರತದಲ್ಲೂ ಅದೇ ರೀತಿಯ ಹೋರಾಟದ ಅಗತ್ಯವಿದೆ ಎಂದು ಚೌಟಾಲಾ ಹೇಳಿದ್ದಾರೆ.
ಯುವಕರು ತಮ್ಮನ್ನು ತಾವು ಸಂಘಟಿಸಿಕೊಳ್ಳುವ ಸಮಯ ಬಂದಿದ್ದು, ನಮ್ಮ ನೆರೆಯ ದೇಶಗಳಲ್ಲಿ ನಡೆದ ಪ್ರತಿಭಟನೆಗಳಂತೆ, ಶ್ರೀಲಂಕಾದಲ್ಲಿ, ಬಾಂಗ್ಲಾದೇಶದ, ನೇಪಾಳದ ಯುವಕರು ಸರ್ಕಾರವನ್ನು ದೇಶ ಬಿಡುವಂತೆ ಒತ್ತಾಯಿಸಿದ ರೀತಿ, ಪ್ರಸ್ತುತ ಸರ್ಕಾರವನ್ನು ಅಧಿಕಾರದಿಂದ ಕೆಳಗಿಳಿಸಲು ಭಾರತದಲ್ಲಿಯೂ ಅದೇ ತಂತ್ರಗಳನ್ನು ಜಾರಿಗೆ ತರಬೇಕಾಗುತ್ತದೆ ಎಂದು ಹೇಳಿದರು. ನೀವು ಕಾಂಗ್ರೆಸ್ ಪಕ್ಷವನ್ನು ವಿರೋಧ ಪಕ್ಷವನ್ನಾಗಿ ಆಯ್ಕೆ ಮಾಡಿದ್ದೀರಿ. ಆದರೆ ಆ ಪಕ್ಷ ಬಿಜೆಪಿಯ ಬಿ ಟೀಮ್​ನಂತೆ ವರ್ತಿಸುತ್ತಿದೆ. ಹರಿಯಾಣದ ಪ್ರತಿಯೊಬ್ಬ ವ್ಯಕ್ತಿಗೂ ಇದು ತಿಳಿದಿದೆ ಎಂದರು.

ಚೌಟಾಲಾ ವಿರುದ್ಧ ಬಿಜೆಪಿ ವಾಗ್ದಾಳಿ

ಬಿಜೆಪಿ ರಾಷ್ಟ್ರೀಯ ವಕ್ತಾರ ಪ್ರದೀಪ್​ ಭಂಡಾರಿ ಚೌಟಾಲಾ ಹೇಳಿಕೆಯನ್ನು ಟೀಕಿಸಿದ್ದು, ಈ ಭಾರತ ವಿರೋಧಿ ನಿರೂಪಣೆಯ ಬೆಂಕಿಯನ್ನು ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಹೊತ್ತಿಸಿದ್ದು, ನಿರಂತರ ಸೋಲುಗಳ ಬಳಿಕ ವಿರೋಧ ಪಕ್ಷದ ನಾಯಕರು ರಾಜಕೀಯ ವಿರೋಧಿಗಳಾಗುವ ಬದಲು ಭಾರತೀಯ ಪ್ರಜಾಪ್ರಭುತ್ವದ ವಿರೋಧಿಗಳಾಗಿ ಬದಲಾಗಿದ್ದಾರೆ! ಎಂದು ತಮ್ಮ ಎಕ್ಸ್‌ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
ಬಿಜೆಪಿಯ ಶೆಹಜಾದ್ ಪೂನವಾಲಾ ಕೂಡ ಚೌಟಾಲಾ ವಿರುದ್ಧ ವಾಗ್ದಾಳಿ ನಡೆಸಿದ್ದು, ರಾಜಕೀಯವಾಗಿ ಮುಂದುವರೆಯಲು ವಿರೋಧ ಪಕ್ಷವು ಪ್ರಜಾಪ್ರಭುತ್ವದ ವಿರುದ್ಧ ಹೋಗಲು ಸಿದ್ಧವಾಗಿದೆ, ಆ ಪಕ್ಷದ ನಾಯಕರಿಗೆ ದೇಶದ ಹಿತಾಸಕ್ತಿಗಳಿಗಿಂತ, ತಮ್ಮ ವೈಯಕ್ತಿಕ ಹಿತಾಸಕ್ತಿಗಳನ್ನು ಉಳಿಸಿಕೊಳ್ಳುವುದೆ ಮುಖ್ಯವಾಗಿದೆ ಎಂದು ಆರೋಪಿಸಿದರು. 
ಹರಿಯಾಣ ಸಚಿವ ಕೃಷ್ಣ ಬೇಡಿ, ಚೌಟಾಲಾ ಹೇಳಿಕೆಗಳನ್ನು ಅಸಂಬದ್ಧ ಎಂದು ಕರದಿದ್ದಾರೆ. ಇದು ಸಂವಿಧಾನ ಮತ್ತು ಪ್ರಜಾಪ್ರಭುತ್ವಕ್ಕೆ ವಿರುದ್ಧವಾಗಿದ್ದು, ಆ ಪಕ್ಷವು ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಎಂದು ಹೇಳಿಕೊಳ್ಳುತ್ತದೆ. ಆದ್ದರಿಂದ, ಆ ಪಕ್ಷದ ನಿಜವಾದ ಸಾರ ಅಥವಾ ಶಕ್ತಿ ಏನೆಂದು ನಮಗೆ ನಿಜವಾಗಿಯೂ ತಿಳಿದಿಲ್ಲ ಎಂದರು(ಏಜೆನ್ಸೀಸ್​).