ಮುಂಬೈ: ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ವಿಕೆಟ್ ಕೀಪರ್-ಬ್ಯಾಟರ್ ಜಿತೇಶ್ ಶರ್ಮಾ ತಮ್ಮ ಸಾರ್ವಕಾಲಿಕ ಐಪಿಎಲ್ ತಂಡವನ್ನು ಹೆಸರಿಸಿದ್ದು, ಅಚ್ಚರಿ ಎಂಬಂತೆ ಇದರಿಂದ ಬ್ಯಾಟಿಂಗ್ ದಿಗ್ಗಜ ವಿರಾಟ್ ಕೊಹ್ಲಿಯನ್ನು ಕೈಬಿಟ್ಟಿದ್ದಾರೆ.
ಕಳೆದ ವರ್ಷದ ಐಪಿಎಲ್ನಲ್ಲಿ ಕೊಹ್ಲಿಯೊಂದಿಗೆ ಡ್ರೆಸ್ಸಿಂಗ್ ರೂಂ ಹಂಚಿಕೊಂಡಿದ್ದ ಜಿತೇಶ್, ವಿರಾಟ್ರೊಂದಿಗೆ ಉತ್ತಮ ಒಡನಾಟ ಕೂಡ ಹೊಂದಿದ್ದಾರೆ, ಹೀಗಿದ್ದಾಗಲು ಕಿಂಗ್ ಕೊಹ್ಲಿಯನ್ನು ಹೊರಗಿಟ್ಟು ಹನ್ನೊಂದರ ಬಳಗವನ್ನು ಸಿದ್ಧಪಡಿಸಿದ್ದು ಅನೇಕರಿಗೆ ಅಚ್ಚರಿ ತಂದರೆ, ಇನ್ನು ಕೆಲವರ ಆಕ್ರೋಶಕ್ಕೂ ಕಾರಣವಾಗಿದೆ.
ಕಳೆದ ವರ್ಷದ ಹರಾಜಿನಲ್ಲಿ 11 ಕೋಟಿ ರೂಪಾಯಿಗೆ ಆರ್ಸಿಬಿ ಬಳಗ ಸೇರಿಕೊಂಡಿದ್ದ ಜಿತೇಶ್ ಫಿನಿಷರ್ ಪಾತ್ರ ನಿಭಾಯಿಸಿದ್ದರು. ಈ ಋತುವಿನಲ್ಲಿ 11 ಇನ್ನಿಂಗ್ಸ್‌ಗಳಲ್ಲಿ 176.35 ರ ಸ್ಟ್ರೈಕ್ ರೇಟ್‌ನೊಂದಿಗೆ 261 ರನ್ ಗಳಿಸಿದರು.
ಧೋನಿಗೆ ನಾಯಕತ್ವ
ಕ್ರಿಕ್‌ಟ್ರಾಕರ್‌ಗೆ ನೀಡಿದ ಸಂದರ್ಶನದಲ್ಲಿ, ಜಿತೇಶ್ ರೋಹಿತ್ ಶರ್ಮಾ ಮತ್ತು ಆಡಮ್ ಗಿಲ್ಕ್ರಿಸ್ಟ್ರನ್ನು ಆರಂಭಿಕ ಆಟಗಾರರನ್ನಾಗಿ ಹೆಸರಿಸಿದ್ದು, ಈ ಜೋಡಿ ಎರಡನೇ ವರ್ಷದ ಐಪಿಎಲ್ನಲ್ಲಿ ಡೆಕ್ಕನ್ ಚಾರ್ಜರ್ಸ್ ತಂಡ ಪರ ಆಡಿದ್ದರು. 3 ನೇ ಸ್ಥಾನದಲ್ಲಿ ಭಾರತದ ಪ್ರಸ್ತುತ T20I ನಾಯಕ ಸೂರ್ಯಕುಮಾರ್ ಯಾದವ್ ಸ್ಥಾನ ಪಡೆದಿದ್ದಾರೆ.
ಮಧ್ಯಮ ಕ್ರಮಾಂಕವನ್ನು ದಕ್ಷಿಣ ಆಫ್ರಿಕಾದ ದಿಗ್ಗಜರಾದ ಜಾಕ್ಸ್ ಕಾಲಿಸ್ ಮತ್ತು ಎಬಿ ಡಿವಿಲಿಯರ್ಸ್, ನಾಯಕ ಎಂಎಸ್ ಧೋನಿ, ಆಲ್ರೌಂಡರ್ ಹಾರ್ದಿಕ್ ಪಾಂಡ್ಯ ಮತ್ತು ಅಕ್ಷರ್ ಪಟೇಲ್ ಕಾಣಿಸಿಕೊಂಡಿದ್ದಾರೆ. ಬೌಲಿಂಗ್ ವಿಭಾಗವನ್ನು ಗಮನಿಸುವುದಾದರೆ ಸ್ಪಿನ್ ಮಾಂತ್ರಿಕ ವರುಣ್ ಚಕ್ರವರ್ತಿ, ಜಸ್ಪ್ರೀತ್ ಬುಮ್ರಾ ಮತ್ತು ಜೋಶ್ ಹ್ಯಾಜಲ್‌ವುಡ್ ಕೂಡ ಸ್ಥಾನ ಪಡೆದಿದ್ದಾರೆ.
ಜಿತೇಶ್ ಶರ್ಮಾರ ಸಾರ್ವಕಾಲಿಕ ಐಪಿಎಲ್ ತಂಡ
ರೋಹಿತ್ ಶರ್ಮಾ, ಆಡಮ್ ಗಿಲ್‌ಕ್ರಿಸ್ಟ್ (WK), ಸೂರ್ಯಕುಮಾರ್ ಯಾದವ್, ಜಾಕ್ವೆಸ್ ಕಾಲಿಸ್, ಎಬಿ ಡಿವಿಲಿಯರ್ಸ್, ಹಾರ್ದಿಕ್ ಪಾಂಡ್ಯ, ಎಂಎಸ್ ಧೋನಿ (ನಾಯಕ), ಅಕ್ಷರ್ ಪಟೇಲ್, ವರುಣ್ ಚಕ್ರವರ್ತಿ, ಜಸ್ಪ್ರೀತ್ ಬುಮ್ರಾ, ಜೋಶ್ ಹ್ಯಾಜಲ್‌ವುಡ್ (ಏಜೆನ್ಸೀಸ್).