ಎಐ ಇಂಪ್ಯಾಕ್ಟ್ ಶೃಂಗಸಭೆಯಲ್ಲಿ ಉದ್ಯಮಿ ಮುಖೇಶ್​ ಅಂಬಾನಿ 
ದೇಶ

ಎಐ ಲೋಕದಲ್ಲಿ ಜಿಯೋ ಮೆಗಾ ಪ್ಲಾನ್: ಭಾರತದಲ್ಲಿ ಕೃತಕ ಬುದ್ಧಿಮತ್ತೆ ಕ್ರಾಂತಿಗೆ 10 ಲಕ್ಷ ಕೋಟಿ ಹೂಡಿಕೆ ಘೋಷಿಸಿದ ಮುಖೇಶ್ ಅಂಬಾನಿ | Mukesh Ambani

ಪ್ರಮುಖ ಮುಖ್ಯಾಂಶಗಳು

  • ದೆಹಲಿಯಲ್ಲಿ ನಡೆಯುತ್ತಿರುವ ಐ ಇಂಪ್ಯಾಕ್ಟ್ ಶೃಂಗಸಭೆ
  • ಜಿಯೋ ಮತ್ತು ರಿಲಾಯನ್ಸ್​ ಇಂಡಸ್ಟ್ರಿ ಮುಂದಿನ ಏಳು ವರ್ಷಗಳ ವರೆಗೆ ಸುಮಾರು 10 ಲಕ್ಷ ಕೋಟಿಯನ್ನು ಹೂಡಿಕೆ ಮಾಡಲಿದೆ: ಮುಖೇಶ್​ ಅಂಬಾನಿ
  • ಈ ಘೋಷಣೆ ಕೇವಲ ವ್ಯಾಪಾರವಲ್ಲ. ಬದಲಾಗಿ ರಾಷ್ಟ್ರ ನಿರ್ಮಾಣಕ್ಕೆ ಮಾಡುತ್ತಿರುವ ಹೂಡಿಕೆ
ನವದೆಹಲಿ: ಭಾರತದಲ್ಲಿ ಕೃತಕ ಬುದ್ದಿಮತ್ತೆ (AI) ಯ ಅಭಿವೃದ್ಧಿಗಾಗಿ, ಜಿಯೋ ಮತ್ತು ರಿಲಾಯನ್ಸ್​ ಇಂಡಸ್ಟ್ರಿ ಮುಂದಿನ ಏಳು ವರ್ಷಗಳ ವರೆಗೆ ಸುಮಾರು 10 ಲಕ್ಷ ಕೋಟಿಯನ್ನು ಹೂಡಿಕೆ ಮಾಡಲಿದೆ ಎಂದು ಉದ್ಯಮಿ ಮುಖೇಶ್​ ಅಂಬಾನಿ (Mukesh Ambani) ಹೇಳಿದ್ದಾರೆ.
ಗುರುವಾರ (ಫೆ. 19) ದೆಹಲಿಯಲ್ಲಿ ನಡೆಯುತ್ತಿರುವ ಎಐ ಇಂಪ್ಯಾಕ್ಟ್ ಶೃಂಗಸಭೆಯಲ್ಲಿ ಮಾತನಾಡುತ್ತಾ, ಹೇಗೆ ಭಾರತದಲ್ಲಿ ಮೊಬೈಲ್​ ಡೇಟಾವನ್ನು ಕಡಿಮೆ ಮಾಡಿದ್ದೇವೋ ಅದೇ ರೀತಿ ಉನ್ನತ ಮಟ್ಟದ ಎಐ ತಂತ್ರಜ್ಞಾನವನ್ನು ಕೈಗೆಟಕುವ ಬೆಲೆಯಲ್ಲಿ ನೀಡುವುದು ನಮ್ಮ ಮುಂದಿನ ಯೋಜನೆಯಾಗಿದೆ ಎಂದು ಅವರು ಹೇಳಿದರು.
ಮೊದಲ ಬಾರಿಗೆ ಮಾನವರು ತನ್ನಂತೆ ಕಲಿಯುವ, ಮಾತನಾಡುವ ಮತ್ತು ವಿಶ್ಲೇಷಿಸುವ ಹಾಗೂ ಉತ್ಪಾದಿಸುವ ಸಾಮರ್ಥ್ಯ ಹೊಂದಿರುವ ತಂತ್ರಜ್ಞಾನವಾದ ಕೃತಕ ಬುದ್ದಿಮತ್ತೆಯನ್ನು ಅಭಿವೃದ್ಧಿ ಪಡಿಸುತ್ತಿದ್ದಾನೆ. ಈ ಎಐ ತಂತ್ರಜ್ಞಾನವು ಪ್ರತಿಯೊಂದುಎಲ್ಲಾ ರೀತಿಯ ಕ್ಷೇತ್ರಗಳಲ್ಲಿ ವೇಗವಾಗಿ, ಉತ್ತಮವಾಗಿ ಹಾಗೂ ಚುರುಕಾಗಿ ಕೆಲಸಮಾಡಲು ಖಂಡಿತವಾಗಿ ಸಹಕಾರಿಯಾಗಲಿದೆ ಎಂದು ಹೇಳಿದರು.

7 ವರ್ಷಗಳಲ್ಲಿ 10 ಲಕ್ಷ ಕೋಟಿ ಹೂಡಿಕೆ

AI ಇಂಪ್ಯಾಕ್ಟ್ ಶೃಂಗಸಭೆ ಇಂಡಿಯಾ 2026 ರಲ್ಲಿ ಮಾತನಾಡಿದ ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್​ನ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಮುಖೇಶ್ ಅಂಬಾನಿ, ಮುಂದಿನ ಏಳು ವರ್ಷಗಳಲ್ಲಿ ಭಾರತದ AI ಸಾಮರ್ಥ್ಯಗಳನ್ನು ವೇಗಗೊಳಿಸಲು ತಮ್ಮ ಕಂಪನಿಯು ಸುಮಾರು 10 ಲಕ್ಷ ಕೋಟಿ ರೂ.ಗಳನ್ನು ಹೂಡಿಕೆ ಮಾಡಲಿದೆ ಎಂದು ಘೋಷಿಸಿದ್ದಾರೆ.
ಈ ಹೂಡಿಕೆ ಕೇವಲ ಬಾಯಿಮಾತಲ್ಲ ಅಥವಾ ಕೇವಲ ವ್ಯಾಪಾರಲ್ಲ, ಬದಲಾಗಿ ಇದೊಂದು ರಾಷ್ಟ್ರ ನಿರ್ಮಾಣಕ್ಕಾಗಿ ಮತ್ತು ಆರ್ಥಿಕ ಮೌಲ್ಯವನ್ನು ವೃದ್ಧಿಸಲು ಹೂಡುತ್ತಿರುವ ಬಂಡವಾಳವಾಗಲಿದೆ ಎಂದಿದ್ದಾರೆ. ದೇಶದ ದೀರ್ಘಕಾಲೀನ ದೃಷ್ಟಿಕೋನದ ಬಗ್ಗೆ ಮಾತನಾಡುತ್ತಾ, ಭಾರತವು ಉನ್ನತ ದರ್ಜೆಯ ಕೃತಕ ಬುದ್ಧಿಮತ್ತೆಯನ್ನು ಬಾಡಿಗೆಗೆ ಪಡೆಯಲು ಶಕ್ತವಾಗಿಲ್ಲ. ಆದ್ದರಿಂದ, ನಾವು ಈ ಬುದ್ಧಿಮತ್ತೆಯ ಬಳಕೆಗೆ ಬೇಕಾಗುವ ವೆಚ್ಚವನ್ನು ಗಣನೀಯವಾಗಿ ಕಡಿಮೆಮಾಡುವ ಯೋಜನೆಯನ್ನು ರೂಪಿಸುತ್ತಿದ್ದೇವೆ ಎಂದು ಹೇಳಿದರು.
ಮುಂದಿನ ವರ್ಷಗಳಲ್ಲಿ ಎಐ ಎನ್ನುವುದು ಸಾಮಾನ್ಯ ಸಂಗತಿಯಾಗಲಿದೆ, ಈಗ ಅಸ್ತಿತ್ವದಲ್ಲಿರುವ ಕಂಪ್ಯೂಟರ್​ಗಳಿಗೆ ಅಷ್ಟು ಸಾಮರ್ಥ್ಯವಿಲ್ಲ, ಹೀಗಾಗಿ ನಾವು ಮುಂದಿನ ದಿನಗಳಲ್ಲಿ ಕಂಪ್ಯೂಟರ್​ ತಂತ್ರಜ್ಞಾನದಲ್ಲಿ ನೂತನ ಆವಿಷ್ಕಾರಗಳನ್ನು ನೋಡುವ ಸಾಧ್ಯತಯಿದೆ ಎಂದು ಹೇಳಿದರು,(ಏಜನ್ಸೀಸ್​).