Maulana Mahmood Madani | ಜಮಿಯತ್ ಉಲೇಮಾ-ಎ-ಹಿಂದ್ ಅಧ್ಯಕ್ಷ ಮೌಲಾನಾ ಮಹಮೂದ್ ಮದನಿ
ಭೋಪಾಲ್: ತಮ್ಮ ಇತ್ತೀಚಿನ ಹೇಳಿಕೆಗಳನ್ನು ಬಲವಾಗಿ ಸಮರ್ಥಿಸಿಕೊಂಡಿರುವ ಮೌಲಾನಾ ಮಹಮೂದ್ ಮದನಿ(Mahmood Madani), ನಾನು ಆಡಿದ ಪ್ರತಿಯೊಂದು ಮಾತಿನ ಮೇಲೆಯು ದೃಢವಾಗಿ ನಿಲ್ಲುವುದಾಗಿ ಹೇಳಿದರು. ಅಲ್ಲದೆ, ಹಿಂಸೆ ಮತ್ತು ಅನ್ಯಾಯದ ವಿರುದ್ಧ ನನ್ನ ಮಾತುಗಳು ಬೇರೂರಿವೆ ಎಂದು ಪ್ರತಿಪಾದಿಸಿದ್ದಾರೆ.
ಈ ಬಗ್ಗೆ ಮಾತನಾಡಿದ ಮದನಿ, ನಾವು ಕಳೆದ 30 ವರ್ಷಗಳಿಂದ ಗಲಭೆಗಳು ಮತ್ತು ಬಾಂಬ್ ಸ್ಫೋಟಗಳನ್ನು ಮಾಡುವವರ ವಿರುದ್ಧ ಹೋರಾಡುತ್ತಿದ್ದೇವೆ. ಅಲ್ಲದೆ, ನಮ್ಮ ಸಮುದಾಯದ ಮೇಲೆ ಆಗುತ್ತಿರುವ ದಬ್ಬಾಳಿಕೆ ಮತ್ತು ಅನ್ಯಾಯದ ವಿರುದ್ಧ ಮಾತನಾಡುವುದು ನಮ್ಮ ಜಿಹಾದ್ ಎಂದಿದ್ದಾರೆ. ದಂಗೆಕೋರರನ್ನು ಮುಗ್ಧರಂತೆ ನೋಡಲಾಗುತ್ತದೆ. ಆದರೆ, ನಾವು ಮಾತನಾಡಿದಾಗ, ನಮಗೆ ಜಿಹಾದಿಗಳ ಹಣೆಪಟ್ಟಿ ಕಟ್ಟಲಾಗುತ್ತದೆ ಎಂದು ಕಿಡಿಕಾರಿದ್ದಾರೆ.
ಮುಂದುವರೆದು ಮಾತನಾಡಿದ ಮದನಿ, ಇದು ನಮ್ಮ ಹೋರಾಟ, ಮತ್ತು ನಾವು ಇದನ್ನು ಮುಂದುವರಿಸುತ್ತೇವೆ. ಅಲ್ಲದೆ, ನನ್ನ ಭಾಷಣದಲ್ಲಿ ನಾನು ಹಿಂತೆಗೆದುಕೊಳ್ಳಲು ಬಯಸುವುದಿಲ್ಲ. ನಾನು ಸರಿಯಾದದ್ದನ್ನು ಹೇಳಿದ್ದೇನೆ ಮತ್ತು ನಾನು ಅದನ್ನು ಹೇಳುತ್ತಲೇ ಇರುತ್ತೇನೆ ಎಂದು ತಮ್ಮ ಭಾಷಣವನ್ನು ಸಮರ್ಥಿಸಿಕೊಂಡಿದ್ದಾರೆ.
ವಂದೇ ಮಾತರಂ ವಿವಾದವನ್ನು ಉದ್ದೇಶಿಸಿ ಮಾತನಾಡಿದ ಮದನಿ, ಹೌದು, ನಾನು ವಂದೇ ಮಾತರಂ ಹೇಳಿದ್ದೆ. ಆದರೆ, ಯಾರೂ ನಮ್ಮನ್ನು ಅದನ್ನು ಹೇಳುವಂತೆ ಒತ್ತಾಯಿಸಲು ಸಾಧ್ಯವಿಲ್ಲ. ನಾವು ಒಬ್ಬ ದೇವರನ್ನು ನಂಬುತ್ತೇವೆ. ಬೇರೆ ಯಾವುದಕ್ಕೂ ನಮಸ್ಕರಿಸುವಂತೆ ನಮ್ಮನ್ನು ಏಕೆ ಒತ್ತಾಯಿಸುತ್ತೀರಿ? ನಾವು ಮುಸ್ಲಿಮರಾಗಿಯೇ ಉಳಿಯೋಣ ಎಂದು ಸ್ಪಷ್ಟಪಡಿಸಿದ್ದಾರೆ.
ಸುಪ್ರೀಂ ಕೋರ್ಟ್‌ಗೆ ಸಂಬಂಧಿಸಿದ ತಮ್ಮ ಅಭಿಪ್ರಾಯಗಳ ಟೀಕೆಗೆ ಪ್ರತಿಕ್ರಿಯಿಸಿದ ಮದನಿ, ತಮ್ಮ ಸಂಘಟನೆ ಪ್ರತಿನಿಧಿಸುವ ಸಮುದಾಯದ ಕಳವಳಗಳನ್ನು ವ್ಯಕ್ತಪಡಿಸುವುದು ತಮ್ಮ ಜವಾಬ್ದಾರಿಯಾಗುತ್ತದೆ. ನನ್ನ ಸಮುದಾಯವನ್ನು ಚಿಂತೆಗೀಡು ಮಾಡುವ ಸಮಸ್ಯೆಗಳ ಬಗ್ಗೆ ನಾನು ಮಾತನಾಡದಿದ್ದರೆ, ಯಾರು ಮಾತನಾಡುತ್ತಾರೆ?" ಎಂದು ಮದನಿ ಪ್ರಶ್ನಿಸಿದ್ದಾರೆ. ನಾನು ತಪ್ಪು ಎಂದು ಹೇಳಲು ಜನರು ಸ್ವತಂತ್ರರಾಗಿದ್ದಾರೆ. ಅದರೆ, ಅದು ನನಗೆ ಮುಖ್ಯವಲ್ಲ. ವ್ಯಕ್ತಪಡಿಸಬೇಕಾದ ಕಳವಳಗಳನ್ನು ನಾನು ವ್ಯಕ್ತಪಡಿಸಿದ್ದೇನೆ ಎಂದು ಹೇಳಿದ್ದಾರೆ.
ಮದನಿ ಹೇಳಿದ್ದೇನು..?
ನಮ್ಮ ಮೇಲೆ ದಬ್ಬಾಳಿಕೆ ನಡೆದರೆ ಜಿಹಾದ್ ಇರುತ್ತದೆ ಎಂದು ಜಮಿಯತ್ ಉಲೇಮಾ-ಎ-ಹಿಂದ್ ಅಧ್ಯಕ್ಷ ಮೌಲಾನಾ ಮಹಮೂದ್ ಮದನಿ ವಿವಾದತ್ಮಕ ಹೇಳಿಕೆಯನ್ನು ನೀಡಿದ್ದರು. ಅಲ್ಲದೆ, ದೇಶದಲ್ಲಿರುವ ನ್ಯಾಯಾಂಗ ಮತ್ತು ಸರ್ಕಾರ ಅಲ್ಪಸಂಖ್ಯಾತರ ಹಕ್ಕುಗಳನ್ನು ದುರ್ಬಲಗೊಳಿಸುತ್ತಿದೆ ಎಂದು ಆರೋಪಿಸಿದ್ದರು.
ಈ ಬಗ್ಗೆ ಮಾತನಾಡಿದ ಮದನಿ, ವಿವಾದಿತ ಕಟ್ಟಡ ಬಾಬರಿ ಮಸೀದಿ ಮತ್ತು ತ್ರಿವಳಿ ತಲಾಖ್ ಪ್ರಕರಣಗಳು ಸೇರಿದಂತೆ ಇತ್ತೀಚಿನ ನ್ಯಾಯಾಲಯದ ತೀರ್ಪುಗಳು ಸರ್ಕಾರದ ಒತ್ತಡದಲ್ಲಿ ಕಾರ್ಯನಿರ್ವಹಿಸುತ್ತಿದೆ ಎಂದು ಸೂಚಿಸುತ್ತವೆ. ಅಲ್ಲದೆ, ಇತ್ತೀಚಿನ ವರ್ಷಗಳಲ್ಲಿ ಸಂವಿಧಾನದಲ್ಲಿ ಖಾತರಿಪಡಿಸಲಾದ ಅಲ್ಪಸಂಖ್ಯಾತರ ಹಕ್ಕುಗಳನ್ನು ಬಹಿರಂಗವಾಗಿ ಉಲ್ಲಂಘಿಸುವ ಇಂತಹ ಅನೇಕ ನಿರ್ಧಾರಗಳು ಹೊರಹೊಮ್ಮಿವೆ ಎಂದಿದ್ದಾರೆ.
ಉನ್ನತ ನ್ಯಾಯಾಲಯವು ಸುಪ್ರೀಂ ಆಗಲು ಅರ್ಹವಲ್ಲ..?
1991 ರ ಪೂಜಾ ಸ್ಥಳಗಳ ಕಾಯ್ದೆಯ ಹೊರತಾಗಿಯೂ ನಡೆಯುತ್ತಿರುವ ಪ್ರಕರಣಗಳನ್ನು ಉಲ್ಲೇಖಿಸಿದ ಮದನಿ, ಸಂವಿಧಾನವನ್ನು ಅಲ್ಲಿ ರಕ್ಷಿಸುವವರೆಗೆ ಮಾತ್ರ ಸುಪ್ರೀಂಕೋರ್ಟ್ ಅನ್ನು ಸುಪ್ರೀಂ ಎಂದು ಕರೆಯಲು ಅರ್ಹತೆ ಇದೆ. ಅದರೆ, ಅದು ಸಂಭವಿಸದಿದ್ದರೆ, ಸರ್ವೋಚ್ಚ ಎಂದು ಕರೆಯಲು ಅರ್ಹವಲ್ಲ ಎನ್ನುವ ಮೂಲಕ ಮದನಿ ವಿವಾದವನ್ನು ಸೃಷ್ಟಿಸಿದ್ದಾರೆ.
ಭಾರತದಲ್ಲಿ ಮುಸ್ಲಿಮರ ಬಗ್ಗೆ ಸಾರ್ವಜನಿಕ ಭಾವನೆಗಳ ಬಗ್ಗೆ ಮಾತನಾಡಿದ ಮದನಿ, ಶೇ.10 ರಷ್ಟು ಜನರು ಅವರನ್ನು ಬೆಂಬಲಿಸುತ್ತಿದ್ದಾರೆ. ಅಲ್ಲದೆ, ಶೇ.30 ರಷ್ಟು ಜನರು ಅವರನ್ನು ವಿರೋಧಿಸುತ್ತಿದ್ದಾರೆ. ಆದರೆ ಶೇ 60 ರಷ್ಟು ಜನರು ಮೌನವಾಗಿದ್ದಾರೆ. ಈ ಮೂಕವಾಗಿರುವ ಬಹುಸಂಖ್ಯಾತರೊಂದಿಗೆ ಸಕ್ರಿಯವಾಗಿ ತೊಡಗಿಸಿಕೊಳ್ಳಲು ಮುಸ್ಲಿಮರನ್ನು ಒತ್ತಾಯಿಸಿದ್ದಾರೆ. ಅದರೆ, ಈ ಶೇ.60 ರಷ್ಟು ಜನರು ಮುಸ್ಲಿಮರ ವಿರುದ್ಧ ತಿರುಗಿದರೆ, ದೇಶದಲ್ಲಿ ದೊಡ್ಡ ಅಪಾಯ ಎದುರಾಗುತ್ತದೆ ಎಂದು ಎಚ್ಚರಿಸಿದ್ದಾರೆ.
ಜಿಹಾದ್ ಯಾವಾಗಲೂ ಪವಿತ್ರ - ಮದನಿ
ಲವ್ ಜಿಹಾದ್, ಲ್ಯಾಂಡ್ ಜಿಹಾದ್, ಎಜುಕೇಶನ್ ಜಿಹಾದ್ ಮತ್ತು ಸ್ಪಿಟ್ ಜಿಹಾದ್ ಮುಂತಾದ ಪದಗಳನ್ನು ಮುಸ್ಲಿಂ ನಂಬಿಕೆ ಮತ್ತು ಗುರುತನ್ನು ಅವಮಾನಿಸುವ ಉದ್ದೇಶದಿಂದ ಬಳಸಲಾಗುತ್ತಿದೆ. ಇಸ್ಲಾಂ ಮತ್ತು ಮುಸ್ಲಿಮರ ಶತ್ರುಗಳು ಜಿಹಾದ್ ಅನ್ನು ನಿಂದನೆ, ಸಂಘರ್ಷ ಮತ್ತು ಹಿಂಸೆಯ ಸಮಾನಾರ್ಥಕ ಪದವನ್ನಾಗಿ ಮಾಡಿದ್ದಾರೆ. ಅಲ್ಲದೆ, ಸರ್ಕಾರ ಮತ್ತು ಮಾಧ್ಯಮಗಳಲ್ಲಿನ ಜವಾಬ್ದಾರಿಯುತ ಧ್ವನಿಗಳು ಇಂತಹ ಪದಗಳನ್ನು ಬಳಸುವುದರಲ್ಲಿ ನಾಚಿಕೆಪಡುವುದಿಲ್ಲ ಎಂದು ಮದನಿ ಹೇಳಿದ್ದಾರೆ.
ಕುರಾನ್ ಜಿಹಾದ್ನ್ನು ವೈಯಕ್ತಿಕ ಕರ್ತವ್ಯ ಮತ್ತು ಸಮಾಜದ ಕಲ್ಯಾಣ ಸೇರಿದಂತೆ ಬಹು ಸಂದರ್ಭಗಳಲ್ಲಿ ಉಲ್ಲೇಖಿಸುತ್ತದೆ. ಈ ಪದವು ಯುದ್ಧಕ್ಕೆ ಸಂಬಂಧಿಸಿದ್ದರೂ ಸಹ, ಅದು ದಬ್ಬಾಳಿಕೆಯನ್ನು ಕೊನೆಗೊಳಿಸುವುದಕ್ಕೆ ಸಂಬಂಧಿಸಿದೆ. ಅಲ್ಲದೆ, ಜಿಹಾದ್ ಅನ್ಯಾಯದ ವಿರುದ್ಧ ಪ್ರತಿರೋಧವು ನಂಬಿಕೆಯ ಅವಿಭಾಜ್ಯ ಅಂಗವಾಗಿದೆ ಎಂದು ಮದನಿ ಪ್ರತಿಪಾದಿಸಿದ್ದಾರೆ,(ಏಜೆನ್ಸೀಸ್).