Child Rape in Jharkhand ಸಾಂದರ್ಭಿಕ ಚಿತ್ರ 
ದೇಶ

3 ವರ್ಷದ ಮಗುವಿನ ಮೇಲೆ ಲೈಂಗಿಕ ದೌರ್ಜನ್ಯ!...ದಂಡದ ಹಣದಲ್ಲಿ ಎಣ್ಣೆ ಪಾರ್ಟಿ ಮಾಡಿದ ಗ್ರಾಮಸ್ಥರು Child Rape in Jharkhand

ರಾಂಚಿ: ಜಾರ್ಖಂಡ್‌ನ ಗುಮ್ಲಾ ಜಿಲ್ಲೆಯ ಪಾಲ್ಮಾ ಗ್ರಾಮದಲ್ಲಿ ಮಾನವೀಯತೆಯೇ ತಲೆತಗ್ಗಿಸುವ ಘಟನೆಯೊಂದು ನಡೆದಿದೆ. ಮೂರು ವರ್ಷದ ಹೆಣ್ಣು ಮಗುವಿನ ಮೇಲೆ ಅತ್ಯಾಚಾರ (Child Rape in Jharkhand) ಎಸಗಿದ ಅಪರಾಧವನ್ನು ಪೊಲೀಸರಿಗೆ ವರದಿ ಮಾಡುವ ಬದಲು, ಗ್ರಾಮ ಪಂಚಾಯತ್ ತಾನೇ ಕಾನೂನನ್ನು ಕೈಗೆತ್ತಿಕೊಂಡು ಆರೋಪಿಗೆ ದಂಡ ವಿಧಿಸಿ ಪ್ರಕರಣವನ್ನು ಮುಚ್ಚಿಹಾಕಲು ಯತ್ನಿಸಿರುವುದು ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.

ವಿಶ್ವಾಸ ದ್ರೋಹ ಎಸಗಿ ಕೃತ್ಯ!

ಪೊಲೀಸ್ ಮೂಲಗಳ ಪ್ರಕಾರ, ಸಂಜೆ 4 ಗಂಟೆಯ ಸುಮಾರಿಗೆ ಆರೋಪಿ ಸುನಿಲ್ ಲೋಹರಾ ಸಂತ್ರಸ್ತೆಯ ಮನೆಗೆ ಬಂದಿದ್ದನು. ಮಗುವಿನ ತಾಯಿಗೆ ನೀವು ಕೆಲಸಕ್ಕೆ ಹೋಗಿ, ಮಗುವನ್ನು ನಾನು ನೋಡಿಕೊಳ್ಳುತ್ತೇನೆ ಎಂದು ನಂಬಿಸಿ, ಆಕೆಯ ವಿಶ್ವಾಸ ಗಳಿಸಿದ್ದಾನೆ. ತಾಯಿ ಹೋದ ನಂತರ ಮಗುವನ್ನು ತನ್ನ ಕೋಣೆಗೆ ಕರೆದೊಯ್ದು ಅತ್ಯಾಚಾರ ಎಸಗಿದ್ದಾನೆ. ಸ್ವಲ್ಪ ಸಮಯದ ನಂತರ ಮಗುವಿನ ಚೀರಾಟ ಕೇಳಿ ತಾಯಿ ಓಡಿ ಬಂದಾಗ, ಬಾಲಕಿ ರಕ್ತಸಿಕ್ತವಾಗಿ ಗಂಭೀರ ಸ್ಥಿತಿಯಲ್ಲಿರುವುದು ಕಂಡುಬಂದಿದೆ. ಇದರಿಂದ ಗ್ರಾಮದಲ್ಲಿ ಕೋಲಾಹಲ ಸೃಷ್ಟಿಯಾಗಿದೆ.

ಪಂಚಾಯತ್‌ನ ಕ್ರೂರ ನಡೆ ಮತ್ತು ಮದ್ಯದ ಪಾರ್ಟಿ

ಮಗುವನ್ನು ಮೊದಲು ಖಾಸಗಿ ವೈದ್ಯರ ಬಳಿ ಕರೆದೊಯ್ಯಲಾಯಿತಾದರೂ, ಪೊಲೀಸರಿಗೆ ದೂರು ನೀಡುವ ಬದಲು ಭಾನುವಾರ ತುರ್ತು ಪಂಚಾಯತ್ ಸಭೆ ಕರೆಯಲಾಯಿತು. ಕಾನೂನು ಪ್ರಕ್ರಿಯೆಯನ್ನು ಹತ್ತಿಕ್ಕಲು ಯೋಜಿಸಿದ ಕೆಲವು ಪಂಚಾಯತ್ ಸದಸ್ಯರು, ಆರೋಪಿಗೆ 1 ಲಕ್ಷ ರೂಪಾಯಿ ದಂಡ ವಿಧಿಸಿದರು. ಆರೋಪಿ ಸುನಿಲ್ ಸ್ಥಳದಲ್ಲೇ 20,000 ರೂ. ಪಾವತಿಸಿ, ಉಳಿದ 80,000 ರೂ.ಗಳನ್ನು ಒಂದು ವಾರದೊಳಗೆ ಸಂತ್ರಸ್ತೆ ಕುಟುಂಬಕ್ಕೆ ನೀಡುವುದಾಗಿ ಒಪ್ಪಿಕೊಂಡಿದ್ದನು.
ಪ್ರಕರಣದಲ್ಲಿ ಅತ್ಯಂತ ಆಘಾತಕಾರಿ ವಿಷಯವೆಂದರೆ, ವಶಪಡಿಸಿಕೊಂಡ 20,000 ರೂ. ಹಣವನ್ನು ಗ್ರಾಮದ ಕೆಲವರು ಮದ್ಯ ಹಾಗೂ ಮಾಂಸದ ಔತಣಕೂಟಕ್ಕೆ ಬಳಸಿ ಸಂಭ್ರಮಿಸಿದ್ದಾರೆ.

ಪೊಲೀಸರ ಸಕಾಲಿಕ ಭೇಟಿ - ಆರೋಪಿ ಬಂಧನ

ಗ್ರಾಮಸ್ಥರೊಬ್ಬರು ನೀಡಿದ ರಹಸ್ಯ ಸುಳಿವಿನ ಆಧಾರದ ಮೇಲೆ ಪೊಲೀಸರು ತಕ್ಷಣವೇ ಹಳ್ಳಿಗೆ ಧಾವಿಸಿದಾಗ ಈ ಅಮಾನವೀಯ ಕೃತ್ಯದ ಸತ್ಯಾಂಶ ಹೊರಬಂದಿದೆ. ಪೊಲೀಸರು ಸ್ಥಳದಲ್ಲೇ ಪ್ರಮುಖ ಆರೋಪಿ ಸುನಿಲ್ ಲೋಹರಾನನ್ನು ಬಂಧಿಸಿ, ಎಫ್‌ಐಆರ್ ದಾಖಲಿಸಿಕೊಂಡಿದ್ದಾರೆ. ತಾಯಿಯ ಹೇಳಿಕೆಯನ್ನು ದಾಖಲಿಸಿಕೊಂಡು ಮಗುವಿಗೆ ಸೂಕ್ತ ಕಾನೂನು ಹಾಗೂ ವೈದ್ಯಕೀಯ ನೆರವು ಕಲ್ಪಿಸಲಾಗಿದೆ.

ಪಂಚಾಯತ್ ಪಾತ್ರದ ತನಿಖೆ

ಈ ಅಪರಾಧವನ್ನು ಮುಚ್ಚಿಹಾಕಲು ಯತ್ನಿಸಿದವರು, ಸಾಕ್ಷ್ಯ ನಾಶಕ್ಕೆ ಕೈಹಾಕಿದವರು ಮತ್ತು ಸಂತ್ರಸ್ತ ಕುಟುಂಬದ ಮೇಲೆ ಒತ್ತಡ ಹೇರಿದವರ ವಿರುದ್ಧ ಪೊಲೀಸರು ಈಗ ತನಿಖೆ ತೀವ್ರಗೊಳಿಸಿದ್ದು, ಸಭೆ ಕರೆದವರು ಯಾರು ಎಂಬುದರ ಪರಿಶೀಲನೆ ನಡೆಸಲಾಗುತ್ತಿದೆ.  ಇದೇ ವೇಳೆ, ಅರಂಗಿ ಪಂಚಾಯತ್ ಮುಖ್ಯಸ್ಥ ಲೋಡೋ ಏಕಾ ಪ್ರತಿಕ್ರಿಯಿಸಿ, ಪಾಲ್ಮಾ ಗ್ರಾಮದಲ್ಲಿ ನಡೆದ ಸಭೆಯ ಬಗ್ಗೆ ತಮಗೆ ಯಾವುದೇ ಮುನ್ಸೂಚನೆ ಇರಲಿಲ್ಲ ಮತ್ತು ತಾವು ಇದರಿಂದ ದೂರ ಉಳಿದಿದ್ದಾಗಿ ತಿಳಿಸಿದ್ದಾರೆ.
ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣಗಳಲ್ಲಿ ಯಾವುದೇ ರೀತಿಯ ಸಾಮಾಜಿಕ ಒಪ್ಪಂದ, ಪಂಚಾಯತ್ ತೀರ್ಪು ಅಥವಾ ಹಣಕಾಸಿನ ವಹಿವಾಟು ಕಾನೂನುಬಾಹಿರ ಮತ್ತು ಕಠಿಣ ಶಿಕ್ಷಾರ್ಹ ಅಪರಾಧ ಎಂದು ಕಾನೂನು ತಜ್ಞರು ಎಚ್ಚರಿಸಿದ್ದಾರೆ (ಏಜೆನ್ಸೀಸ್​).