ದೇಶ

ಭಾರತಕ್ಕೂ ಬಾಂಗ್ಲಾ-ನೇಪಾಳದ ಗತಿ! ಕಾಂಗ್ರೆಸ್ ಸಚಿವ ಅನ್ಸಾರಿ ವಿವಾದಾತ್ಮಕ ಹೇಳಿಕೆಗೆ ಬಿಜೆಪಿ ಆಕ್ರೋಶ | Irfan Ansari Statement

ರಾಂಚಿ: ಜಾರ್ಖಂಡ್‌ನ ಆರೋಗ್ಯ ಸಚಿವ ಇರ್ಫಾನ್ ಅನ್ಸಾರಿ ದೇಶದ ಪರಿಸ್ಥಿತಿಯ ಕುರಿತು ನೀಡಿರುವ ವಿವಾದಾತ್ಮಕ ಹೇಳಿಕೆಯು (Irfan Ansari Statement) ರಾಜ್ಯ ಮತ್ತು ರಾಷ್ಟ್ರ ರಾಜಕೀಯದಲ್ಲಿ ಭಾರೀ ಕೋಲಾಹಲ ಸೃಷ್ಟಿಸಿದೆ. ಭಾರತದಲ್ಲಿನ ಪ್ರಸ್ತುತ ಪರಿಸ್ಥಿತಿಯು ಬಾಂಗ್ಲಾದೇಶ ಮತ್ತು ನೇಪಾಳಕ್ಕಿಂತಲೂ ಹದಗೆಡಬಹುದು ಎಂದಿರುವ ಅವರು, ಯುವಕರು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರ ಒಂದೇ ಒಂದು ಸೂಚನೆಗಾಗಿ ಕಾಯುತ್ತಿದ್ದಾರೆ ಎಂದಿದ್ದಾರೆ. ಈ ಹೇಳಿಕೆಯು ಆಡಳಿತ ಮತ್ತು ವಿರೋಧ ಪಕ್ಷಗಳ ನಡುವೆ ತೀವ್ರ ವಾಕ್ಸಮರಕ್ಕೂ ದಾರಿ ಮಾಡಿಕೊಟ್ಟಿದೆ.

ಗುರುವಾರ ಪಿಟಿಐಗೆ ನೀಡಿದ ಸಂದರ್ಶನದಲ್ಲಿ ಇರ್ಫಾನ್ ಅನ್ಸಾರಿ ಕೇಂದ್ರ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದರು. ಎನ್​ಡಿಎ ಸರ್ಕಾರದ ಅಡಿಯಲ್ಲಿ ಸಮಾಜದ ವಿವಿಧ ವರ್ಗಗಳಲ್ಲಿ ಅತೃಪ್ತಿ ಹೆಚ್ಚುತ್ತಿದೆ. ಯುವಕರು, ರೈತರು, ಮಧ್ಯಮ ವರ್ಗದವರು, ದಲಿತರು, ಆದಿವಾಸಿಗಳು ಮತ್ತು ಮುಸ್ಲಿಮರು ತೀವ್ರ ಸಂಕಷ್ಟ ಎದುರಿಸುತ್ತಿದ್ದು, ದೇಶಾದ್ಯಂತ ಆಕ್ರೋಶ ಭುಗಿಲೆಳುತ್ತಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದರು.

ನಾನು ದೆಹಲಿಗೆ ಹೋಗಿ ಅಲ್ಲಿನ ವಿದ್ಯಾರ್ಥಿಗಳೊಂದಿಗೆ ಮಾತನಾಡಿದೆ. ನಲವತ್ತು ಲಕ್ಷ ಯುವಕರು ಬೀದಿಗಿಳಿದಿದ್ದಾರೆ. ಅವರು ಕೇವಲ ಒಂದು ಆಜ್ಞೆಗಾಗಿ ಕಾಯುತ್ತಿದ್ದಾರೆ. ರಾಹುಲ್ ಗಾಂಧಿ ಏನು ಹೇಳುತ್ತಾರೋ ಅದಕ್ಕಿಂತ ಆಚೆಗೆ ಅವರು ಹೋಗುವುದಿಲ್ಲ. ರಾಹುಲ್ ಜಿ ಅವರೇ ಈ ಯುವಕರನ್ನು ಹಿಡಿದು ಹತೋಟಿಯಲ್ಲಿಟ್ಟಿದ್ದಾರೆ ಎಂದು ಅನ್ಸಾರಿ ವಿವಾದಾತ್ಮಕ ಹೇಳಿಕೆ ನೀಡಿದ್ದರು. ಅಲ್ಲದೆ, ಪ್ರಧಾನಿ ನರೇಂದ್ರ ಮೋದಿಯವರು ಎಚ್ಚೆತ್ತುಕೊಳ್ಳದಿದ್ದರೆ ದೇಶದಲ್ಲಿ ತುರ್ತು ಪರಿಸ್ಥಿತಿಯಂತಹ ವಾತಾವರಣ ನಿರ್ಮಾಣವಾಗಲಿದೆ, ಪರಿಸ್ಥಿತಿಯು ಬಾಂಗ್ಲಾದೇಶ ಮತ್ತು ನೇಪಾಳಕ್ಕಿಂತಲೂ ಹದಗೆಡಲಿದೆ ಎಂದು ನಾಲಿಗೆ ಹರಿಬಿಟ್ಟಿದ್ದರು.

ಬಿಜೆಪಿಯಿಂದ ತೀವ್ರ ಆಕ್ರೋಶ!

ಕಾಂಗ್ರೆಸ್ ನಾಯಕನ ಈ ಹೇಳಿಕೆಯು ಬಿಜೆಪಿಯನ್ನು ಕೆರಳಿಸಿದ್ದು, ಕೇಸರಿ ನಾಯಕರು ಅನ್ಸಾರಿ ಅವರ ಹೇಳಿಕೆಯನ್ನು ದೇಶದ್ರೋಹಿ ಹಾಗೂ ಅರಾಜಕತೆಯನ್ನು ಪ್ರಚೋದಿಸುವಂಥದ್ದು ಎಂದು ಖಂಡಿಸಿದ್ದಾರೆ. ಶುಕ್ರವಾರ ರಾಂಚಿಯ ಡಿಪಿಎಸ್ ಚೌಕ್‌ನಲ್ಲಿ ಜಮಾಯಿಸಿದ ಬಿಜೆಪಿ ಕಾರ್ಯಕರ್ತರು ಇರ್ಫಾನ್ ಅನ್ಸಾರಿ ಪ್ರತಿಕೃತಿಯನ್ನು ದಹಿಸಿ ಆಕ್ರೋಶ ವ್ಯಕ್ತಪಡಿಸಿದರು. ಮುಖ್ಯಮಂತ್ರಿ ಹೇಮಂತ್ ಸೊರೆನ್ ಅವರು ತಕ್ಷಣವೇ ಅನ್ಸಾರಿಯನ್ನು ತಮ್ಮ ಸಂಪುಟದಿಂದ ವಜಾಗೊಳಿಸಬೇಕು ಎಂದು ಬಿಜೆಪಿ ಪ್ರಧಾನ ಕಾರ್ಯದರ್ಶಿ ಅಮರ್ ಬೌರಿ ಆಗ್ರಹಿಸಿದ್ದಾರೆ.

ಪ್ರತಿಭಟನೆಗಷ್ಟೆ ಸೀಮಿತವಾಗದು ಬಿಜೆಪಿ ನಾಯಕರು, ಪಕ್ಷದ ಮಾಜಿ ರಾಜ್ಯ ಅಧ್ಯಕ್ಷ ದೀಪಕ್ ಪ್ರಕಾಶ್ ನೇತೃತ್ವದಲ್ಲಿ ನಿಯೋಗವೊಂದನ್ನು ತೆಗೆದುಕೊಂಡು ಅರ್ಗೋರಾ ಪೊಲೀಸ್ ಠಾಣೆಗೆ ಭೇಟಿ ನೀಡಿ ಅಧಿಕೃತ ದೂರು ದಾಖಲಿಸಿದೆ. ಸಚಿವರು ಯುವಕರನ್ನು ಪ್ರಚೋದಿಸುತ್ತಿದ್ದಾರೆ ಮತ್ತು ಸಮಾಜದಲ್ಲಿ ಅಶಾಂತಿ ಸೃಷ್ಟಿಸಲು ಯತ್ನಿಸುತ್ತಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ. ಅರ್ಗೋರಾ ಪೊಲೀಸ್ ಠಾಣೆಯ ಅಧಿಕಾರಿ ಸತೀಶ್ ಕುಮಾರ್ ಮಾತನಾಡಿ, ದೂರು ಸ್ವೀಕರಿಸಲಾಗಿದೆ ಎಂದು ತಿಳಿಸಿದ್ದು, ಕಾನೂನು ತಜ್ಞರ ಸಲಹೆ ಹಾಗೂ ದೂರಿನ ಪರಿಶೀಲನೆಯ ಬಳಿಕ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.

ಕಾಂಗ್ರೆಸ್ ವಿರುದ್ಧ ಗಂಭೀರ ಆರೋಪ

ಬಿಜೆಪಿ ವಕ್ತಾರ ಪ್ರತುಲ್ ಶಾದೇವ್ ಮಾತನಾಡಿ, ಇರ್ಫಾನ್ ಅನ್ಸಾರಿ ಅವರ ಮಾತುಗಳು ಕಾಂಗ್ರೆಸ್ ಪಕ್ಷದ ಅರಾಜಕತಾ ಸಿದ್ಧಾಂತವನ್ನು ಎತ್ತಿ ತೋರಿಸುತ್ತವೆ ಎಂದಿದ್ದಾರೆ. ಚುನಾವಣಾ ಸೋಲುಗಳಿಂದ ಕಂಗೆಟ್ಟಿರುವ ಕಾಂಗ್ರೆಸ್ ದೇಶದಲ್ಲಿ ಹಿಂಸಾಚಾರ ಮತ್ತು ಅಶಾಂತಿಯನ್ನು ಸೃಷ್ಟಿಸಲು ಹೊಂಚುಹಾಕಿದೆ, ರಾಹುಲ್ ಗಾಂಧಿ ಅವರ ಸೂಚನೆಗೆ 40 ಲಕ್ಷ ಯುವಕರು ಕಾಯುತ್ತಿದ್ದಾರೆ ಎಂಬ ಹೇಳಿಕೆಯು ಗೂಂಡಾಗಿರಿ ಮತ್ತು ಕಾನೂನು ಬಾಹಿರ ಚಟುವಟಿಕೆಗಳಿಗೆ ಬಹಿರಂಗ ಆಹ್ವಾನ ನೀಡಿದಂತಿದೆ ಎಂದು ಅವರು ಆರೋಪಿಸಿದ್ದಾರೆ.

ನಿನ್ನೆ ಮೈಸೂರಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಚಿವ ಅನ್ಸಾರಿ ಹೇಳಿಕೆಯನ್ನು ಉಲ್ಲೇಖಿಸಿದ ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ ಅವರು, ಇಂತಹ ಅರಾಜಕತೆಯ ಕನಸು ಕಾಣುವವರಿಗೆ ತಕ್ಕ ತಿರುಗೇಟು ನೀಡುವ ಸಲುವಾಗಿಯೇ ಈ ಪ್ರಜಾಪ್ರಭುತ್ವ ಉಳಿಸಿ ಅಭಿಯಾನ ನಡೆಸಲಾಗುತ್ತಿದೆ ಎಂದರು. ಒಟ್ಟಾರೆಯಾಗಿ, ಜಾರ್ಖಂಡ್ ಸಚಿವರ ಈ ವಿವಾದಾತ್ಮಕ ಮಾತುಗಳು ರಾಷ್ಟ್ರಮಟ್ಟದಲ್ಲಿ ಸದ್ದು ಮಾಡುತ್ತಿದ್ದು, ಮುಂಬರುವ ದಿನಗಳಲ್ಲಿ ಇದು ಮತ್ತಷ್ಟು ರಾಜಕೀಯ ತಿರುವು ಪಡೆದುಕೊಳ್ಳುವುದರಲ್ಲಿ ಎರಡನೇ ಮಾತಿಲ್ಲ(ಏಜೆನ್ಸೀಸ್​).