Air Ambulance Crash | ಜಾರ್ಖಂಡ್‌ನ ಛತ್ರ ಜಿಲ್ಲೆಯಲ್ಲಿ ಸಂಭವಿಸಿದ ಏರ್ ಆಂಬ್ಯುಲೆನ್ಸ್ ದುರಂತ
ರಾಂಚಿ: ಬದುಕುವ ಆಸೆಯಿಂದ ಸಾಲ ಮಾಡಿ ಹತ್ತಿದ ವಿಮಾನ, ಆ ಕುಟುಂಬದ ಪಾಲಿಗೆ ಮೃತ್ಯುಪಾಶವಾಗುತ್ತದೆ ಎಂದು ಯಾರ ಕಲ್ಪನೆಯಲ್ಲೂ ಇರಲಿಲ್ಲ. ಜಾರ್ಖಂಡ್‌ನ ಛತ್ರ ಜಿಲ್ಲೆಯಲ್ಲಿ ಇಂದು ಮುಂಜಾನೆ ಸಂಭವಿಸಿದ ಏರ್ ಆಂಬ್ಯುಲೆನ್ಸ್ ದುರಂತ (Air Ambulance Crash) ಕೇವಲ ತಾಂತ್ರಿಕ ವೈಫಲ್ಯವಲ್ಲ, ಅದು ಒಂದು ಬಡ ಕುಟುಂಬದ ಕನಸುಗಳು ನುಚ್ಚುನೂರಾದ ಕಥೆ.
ಈ ಅಪಘಾತದಲ್ಲಿ ಭಾಗಿಯಾದ ಚಾರ್ಟರ್ ವಿಮಾನವನ್ನು ಬಾಡಿಗೆಗೆ ಪಡೆಯಲು ಕುಟಂಬ 8 ಲಕ್ಷ ರೂಪಾಯಿ ಸಾಲ ಮಾಡಿದೆ ಎಂದು ವರದಿಯಾಗಿದ್ದು, ಅದರಲ್ಲಿದ್ದ ರೋಗಿ, ಆತನ ಪತ್ನಿ ಹಾಗೂ ವೈದ್ಯಕೀಯ ಸಿಬ್ಬಂದಿ ಸೇರಿದಂತೆ ಒಟ್ಟು 7 ಜನರು ಸಾವನ್ನಪ್ಪಿದ್ದಾರೆ.
ಕಳೆದ ಸೋಮವಾರ ಚಂದ್ವಾದಲ್ಲಿರುವ ತಮ್ಮ ಸಣ್ಣ ಹೋಟೆಲ್‌ನಲ್ಲಿ ವಿದ್ಯುತ್ ಶಾರ್ಟ್ ಸರ್ಕ್ಯೂಟ್‌ನಿಂದಾಗಿ ಸಂಜಯ್ಗೆ ತುಂಬಾ ಗಾಯಗಳಾಗಿದ್ದವು, ಮೊದಲು ರಾಂಚಿಯ ಆಸ್ಪತ್ರೆಗೆ ದಾಖಲಿಸಲಾಗಿತ್ತು, ಅಲ್ಲಿ ಗುಣಮುಖರಾಗದ ಹಿನ್ನಲೆಯಲ್ಲಿ ಹೆಚ್ಚಿನ ಚಿಕಿತ್ಸೆಗಾಗಿ ದೆಹಲಿಯ ಏಮ್ಸ್ ಆಸ್ಪತ್ರೆಗೆ ದಾಖಲಿಸಲು ಕುಟುಂಬ ನಿರ್ಧರಿಸಿತ್ತು.
ಸಂಜಯ್ರನ್ನು ದೆಹಲಿಗೆ ಕರೆದೊಯ್ಯಲು ತುರ್ತಾಗಿ ಏರ್ ಆಂಬ್ಯುಲೆನ್ಸ್ ಅಗತ್ಯವಿತ್ತು. ಆದರೆ ಅದರ ಬಾಡಿಗೆ ಬರೋಬ್ಬರಿ 8 ಲಕ್ಷ ರೂಪಾಯಿ. ಸಂಜಯ್ ಅವರ ಕುಟುಂಬಕ್ಕೆ ಅಷ್ಟು ದೊಡ್ಡ ಮೊತ್ತವನ್ನು ಹೊಂದಿಸುವುದು ಅಸಾಧ್ಯವಾಗಿತ್ತು. ಆದರೂ, ಹೇಗಾದರೂ ಮಾಡಿ ಸಂಜಯ್ ಅವರನ್ನು ಉಳಿಸಿಕೊಳ್ಳಲೇಬೇಕೆಂಬ ಹಠಕ್ಕೆ ಬಿದ್ದ ಕುಟುಂಬಸ್ಥರು, ಪರಿಚಯಸ್ಥರಿಂದ 8 ಲಕ್ಷ ರೂಪಾಯಿ ಸಾಲ ಪಡೆದಿದ್ದರು.
ವಿಮಾನ ದುರಂತ
ರಾಂಚಿ ವಿಮಾನ ನಿಲ್ದಾಣದಿಂದ ಸಂಜೆ 7.11 ಕ್ಕೆ ಹೊರಟ ವಿಮಾನವು, ಸ್ವಲ್ಪ ಸಮಯದ ಬಳಿಕ ಸಿಮಾರಿಯಾ ಬಳಿ ಪತನಗೊಂಡಿದೆ ಎಂದು ಮೂಲಗಳು ತಿಳಿಸಿವೆ. ಈ ಮಾರಕ ಅಪಘಾತಕ್ಕೆ ಗುಡುಗು ಸಹಿತ ಮಳೆ ಕಾರಣವಾಗಿರಬಹುದು ಎಂದು ಛತ್ರ ಜಿಲ್ಲಾಧಿಕಾರಿ ಕೀರ್ತಿಶ್ರೀ ಜಿ ತಿಳಿಸಿದ್ದಾರೆ.
ಅಪಘಾತಕ್ಕೀಡಾದ ಏರ್ ಆಂಬ್ಯುಲೆನ್ಸ್‌ನಲ್ಲಿದ್ದ ಏಳು ಜನರನ್ನು ಪತ್ತೆಹಚ್ಚಲಾಗಿದೆ ಎಂದು ಎಸ್‌ಡಿಪಿಒ ಶುಭಂ ಖಂಡೇಲ್ವಾಲ್ ತಿಳಿಸಿದ್ದಾರೆ. ಮೃತರನ್ನು ಕ್ಯಾಪ್ಟನ್ ವಿವೇಕ್ ವಿಕಾಸ್ ಭಗತ್, ಕ್ಯಾಪ್ಟನ್ ಸವ್ರಜ್‌ದೀಪ್ ಸಿಂಗ್, ಸಂಜಯ್ ಕುಮಾರ್, ವಿಕಾಸ್ ಕುಮಾರ್ ಗುಪ್ತಾ, ಸಚಿನ್ ಕುಮಾರ್ ಮಿಶ್ರಾ, ಅರ್ಚನಾ ದೇವಿ ಮತ್ತು ಧುರು ಕುಮಾರ್ ಎಂದು ಹೆಸರಿಸಲಾಗಿದೆ.
ಡಿಜಿಸಿಎ ಹೇಳಿದ್ದೇನು..?
ಅಪಘಾತದ ಕುರಿತು ನಾಗರಿಕ ವಿಮಾನಯಾನ ನಿರ್ದೇಶನಾಲಯ (ಡಿಜಿಸಿಎ) ಪತ್ರಿಕಾ ಪ್ರಕಟಣೆ ಬಿಡುಗಡೆ ಮಾಡಿದ್ದು, ಪ್ರತಿಕೂಲ ಹವಾಮಾನದಿಂದಾಗಿ ವಿಮಾನವು ರಾಡಾರ್ ಜೊತೆಗಿನ ಸಂಪರ್ಕವನ್ನು ಕಳೆದುಕೊಂಡಿದೆ ಎಂದು ವಾಯುಯಾನ ನಿಯಂತ್ರಣ ಸಂಸ್ಥೆ ತಿಳಿಸಿದೆ. ಘಟನೆಯ ತನಿಖೆಗಾಗಿ ಎಎಐಬಿ ತಂಡವನ್ನು ಕಳುಹಿಸಲಾಗಿದೆ ಎಂದು ಡಿಜಿಸಿಎ ಹೇಳಿದೆ(ಏಜೆನ್ಸೀಸ್).