jewellery 
ದೇಶ

ಶೋ ರೂಂಗೆ ನುಗ್ಗಿ 10 ನಿಮಿಷಗಳಲ್ಲಿ 4.5 ಕೋಟಿ ಮೌಲ್ಯದ ಆಭರಣ ದರೋಡೆ! ವಿಡಿಯೋ ಇಲ್ಲಿದೆ ನೋಡಿ..

ಮೈಸೂರು: ಮೈಸೂರು ಜಿಲ್ಲೆಯ ಹುಣಸೂರು ಪಟ್ಟಣದಲ್ಲಿ ಭಾನುವಾರ ಮಧ್ಯಾಹ್ನ ಹಾಡಹಗಲೇ ಸಿನಿಮೀಯ ಶೈಲಿಯಲ್ಲಿ ಚಿನ್ನದ ಅಂಗಡಿಯೊಂದರಲ್ಲಿ ದರೋಡೆ ನಡೆದಿದೆ. ಈ ಘಟನೆಗೆ ಸಂಬಂಧಿಸಿದ ವಿಡಿಯೋ ವೈರಲ್​ ಆಗಿದೆ.
ಹುಣಸೂರು ಬಸ್ ನಿಲ್ದಾಣದ ಹಿಂಭಾಗದ ಬೈಪಾಸ್ ರಸ್ತೆಯಲ್ಲಿರುವ 'ಸ್ಕೈ ಗೋಲ್ಡ್ ಅಂಡ್ ಡೈಮಂಡ್ಸ್' ಆಭರಣ ಮಳಿಗೆಗೆ ನುಗ್ಗಿದ ಐವರು ಮುಖವಾಡ ಧಾರಿ ದರೋಡೆಕೋರರು, ಸಿಬ್ಬಂದಿಗೆ ಪಿಸ್ತೂಲ್ ತೋರಿಸಿ ಬೆದರಿಕೆ ಹಾಕಿ ಸುಮಾರು 4.5 ಕೋಟಿ ರೂಪಾಯಿ ಮೌಲ್ಯದ ಚಿನ್ನ ಮತ್ತು ವಜ್ರಾಭರಣಗಳನ್ನು ಲೂಟಿ ಮಾಡಿ ಪರಾರಿಯಾಗಿದ್ದಾರೆ.
ಸಿಸಿಟಿವಿ ದೃಶ್ಯಗಳಲ್ಲಿ ಘಟನೆ ಸೆರೆ..!
ಮಧ್ಯಾಹ್ನ ಸುಮಾರು 2 ಗಂಟೆ 4 ನಿಮಿಷಕ್ಕೆ ಬೈಕ್‌ಗಳಲ್ಲಿ ಬಂದ ದರೋಡೆಕೋರರು ಅಂಗಡಿಗೆ ನುಗ್ಗಿದ್ದಾರೆ. ಐವರಲ್ಲಿ ಕೆಲವರು ಕೈಯಲ್ಲಿ ಪಿಸ್ತೂಲ್ ಹಿಡಿದು ಸಿಬ್ಬಂದಿಯನ್ನು ಬೆದರಿಸಿದರೆ, ಒಬ್ಬರು ಶೋಕೇಸ್‌ಗಳಲ್ಲಿದ್ದ ದೊಡ್ಡ ಗಾತ್ರದ ಚಿನ್ನಾಭರಣಗಳನ್ನು ಗುಡ್ಡೆ ಹಾಕಿ ಬ್ಯಾಗ್‌ಗಳಿಗೆ ತುಂಬಿಸಿದ್ದಾರೆ. ಕೇವಲ 8 ರಿಂದ 10 ನಿಮಿಷಗಳಲ್ಲಿ ಸುಮಾರು 5 ಕೆ.ಜಿ. ತೂಕದ ಚಿನ್ನ ಮತ್ತು ವಜ್ರಾಭರಣಗಳನ್ನು ದೋಚಿ, ಮೊದಲೇ ತಂದಿದ್ದ ಚೀಲಗಳಲ್ಲಿ ತುಂಬಿಕೊಂಡು ಪರಾರಿಯಾಗಿದ್ದಾರೆ. ಅಂಗಡಿಯ ಸಿಸಿಟಿವಿ ದೃಶ್ಯಗಳಲ್ಲಿ ಈ ಘಟನೆ ಸೆರೆಯಾಗಿದೆ.
ಘಟನೆಯ ಬಳಿಕ ಸ್ಥಳಕ್ಕೆ ಧಾವಿಸಿದ ಪೊಲೀಸರು, ಸಿಸಿಟಿವಿ ದೃಶ್ಯಗಳು ಮತ್ತು ಫೊರೆನ್ಸಿಕ್ ಸಾಕ್ಷ್ಯಗಳನ್ನು ಸಂಗ್ರಹಿಸಿ ತನಿಖೆ ಆರಂಭಿಸಿದ್ದಾರೆ. ಮೈಸೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹಾಗೂ ಐಜಿಪಿ ಸ್ಥಳ ಪರಿಶೀಲಿಸಿದ್ದಾರೆ.ಈ ದರೋಡೆಯಿಂದ ಪಟ್ಟಣದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ. ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಜನರಲ್ಲಿ ಭಯ ಹುಟ್ಟಿಸಿದೆ. ಪೊಲೀಸರು ಶೀಘ್ರವೇ ಆರೋಪಿಗಳನ್ನು ಬಂಧಿಸುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ,(ಏಜೆನ್ಸೀಸ್​).