ಬಿಜೇಂದ್ರ ಪ್ರಸಾದ್ ಯಾದವ್ ಮತ್ತು ವಿಜಯ್ ಕುಮಾರ್ ಚೌಧರಿ 
ದೇಶ

ಬಿಜೆಪಿ ನೇತೃತ್ವದ ನೂತನ ಸರ್ಕಾರದಲ್ಲಿ ಜೆಡಿಯುಗೆ ಎರಡು ಡಿಸಿಎಂ ಸ್ಥಾನ; ನಿತೀಶ್ ಕುಮಾರ್ ಪುತ್ರನಿಗಿಲ್ಲ ಡಿಸಿಎಂ ಭಾಗ್ಯ | DyCM post

ಪಾಟ್ನಾ: ಬಿಹಾರದಲ್ಲಿ ಬಿಜೆಪಿ ನೇತೃತ್ವದ ಮೊದಲ ಸಮ್ಮಿಶ್ರ ಸರ್ಕಾರದಲ್ಲಿ ಜೆಡಿಯುಗೆ ಎರಡು ಉಪಮುಖ್ಯಮಂತ್ರಿ ಸ್ಥಾನ ನೀಡಲಾಗಿದ್ದು, ಹಿರಿಯ ನಾಯಕರಾದ ಬಿಜೇಂದ್ರ ಪ್ರಸಾದ್ ಯಾದವ್ ಮತ್ತು ವಿಜಯ್ ಕುಮಾರ್ ಚೌಧರಿ ಅವರು ಉಪಮುಖ್ಯಮಂತ್ರಿಗಳಾಗಿ ಪ್ರಮಾಣವಚನ ಸ್ವೀಕಾರ ಮಾಡಲಿದ್ದಾರೆ.
ನಿತೀಶ್ ಕುಮಾರ್ ಸಿಎಂ ಸ್ಥಾನ ತೊರೆದ ಬಳಿಕ ಅವರ ಪುತ್ರ ನಿಶಾಂತ್ ಕುಮಾರ್ ನೂತನ ಸರ್ಕಾರದಲ್ಲಿ ಡಿಸಿಎಂ ಆಗಲಿದ್ದಾರೆ ಎನ್ನಲಾಗಿತ್ತು. ಆದರೆ ನಿಶಾಂತ್ ಕುಮಾರ್ ಅವರು ಡಿಸಿಎಂ ಹುದ್ದೆಯನ್ನು ನಿರಾಕರಿಸಿದ್ದು, ಸಾಂಸ್ಥಿಕ ಕೆಲಸಗಳತ್ತ ಗಮನಹರಿಸಲು ಆದ್ಯತೆ ನೀಡಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಮಂಗಳವಾರ ಸಂಜೆ ನಡೆದ ಜೆಡಿಯು ಕೋರ್ ಕಮಿಟಿ ಸಭೆಯಲ್ಲಿ ಇಬ್ಬರು ಡಿಸಿಎಂ ನೇಮಿಸುವ ನಿರ್ಧಾರ ತೆಗೆದುಕೊಂಡಿದ್ದು, ಕೋಸಿ ಪ್ರದೇಶದ ಸುಪೌಲ್‌ನಿಂದ ಒಂಬತ್ತು ಬಾರಿ ಶಾಸಕರಾಗಿರುವ 79 ವರ್ಷದ ಯಾದವ್ ಮೊದಲ ಡಿಸಿಎಂ ಆಗಿ, ಮತ್ತು ನಿತೀಶ್ ಕುಮಾರ್ ಅವರ ಆಪ್ತ ಎಂದು ಪರಿಗಣಿಸಲಾಗಿರುವ ವಿಜಯ್ ಚೌಧರಿಯವರನ್ನು ಎರಡನೇ ಡಿಸಿಎಂ ಆಯ್ಕೆ ಮಾಡಲಾಗಿದೆ.
ಬಿಜೇಂದ್ರ ಯಾದವ್ ಮತ್ತು ವಿಜಯ್ ಚೌಧರಿ ಯಾರು?
ಬಿಜೇಂದ್ರ ಯಾದವ್ ಒಬಿಸಿ ಸಮುದಾಯಕ್ಕೆ ಸೇರಿದ್ದು, ಒಬ್ಬ ಅನುಭವಿ ಸಮಾಜವಾದಿ. 1990 ರಿಂದ ಸುಪೌಲ್ ವಿಧಾನಸಭಾ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದಾರೆ. ದಿ. ಶರದ್ ಯಾದವ್ ಅವರ ಆಪ್ತರು ಎಂದು ಪರಿಗಣಿಸಲ್ಪಟ್ಟಿದ್ದಾರೆ. ಜೆಡಿ(ಯು) ಸೇರುವ ಮೊದಲು ಜನತಾ ದಳದೊಂದಿಗೆ ತಮ್ಮ ರಾಜಕೀಯ ಜೀವನವನ್ನು ಆರಂಭಿಸಿದ್ದಾರೆ. ಲಾಲು ಯಾದವ್ ಸರ್ಕಾರದಲ್ಲೂ ಸಚಿವರಾಗಿ ಸೇವೆ ಸಲ್ಲಿಸಿದ್ದಾರೆ.
ಇನ್ನೂ ವಿಜಯ್ ಕುಮಾರ್ ಚೌಧರಿ ಮೇಲ್ಜಾತಿಯ ಭೂಮಿಹಾರ್ ಸಮುದಾಯಕ್ಕೆ ಸೇರಿದವರಾಗಿದ್ದು, ಸಮಷ್ಟಿಪುರ ಜಿಲ್ಲೆಯ ಸರೈರಂಜನ್ ಕ್ಷೇತ್ರದಿಂದ ನಾಲ್ಕು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದಾರೆ. ನಿತೀಶ್ ಕುಮಾರ್ ಅವರೊಂದಿಗೆ ನಿಕಟ ಸಂಬಂಧ ಹೊಂದಿದ್ದಾರೆ. ಕಾಂಗ್ರೆಸ್​ನಿಂದ ರಾಜಕೀಯ ಜೀವನವನ್ನು ಆರಂಭಿಸಿದ್ದು, 2005ರಲ್ಲಿ ಜೆಡಿಯು ಸೇರಿದ್ದಾರೆ. ಪಕ್ಷದ ಅಧ್ಯಕ್ಷರಾಗಿ, ವಿಧಾನಸಭೆ ಸ್ಪೀಕರ್ ಆಗಿ ಸೇವೆ ಸಲ್ಲಿಸಿದ್ದಾರೆ. ಜೊತೆಗೆ ನಿತೀಶ್ ಸರ್ಕಾರದಲ್ಲಿ ಹಣಕಾಸು ಮತ್ತು ಜಲಸಂಪನ್ಮೂಲದಂತಹ ಪ್ರಮುಖ ಖಾತೆಗಳನ್ನು ಸಹ ಅವರು ನಿರ್ವಹಿಸಿದ್ದಾರೆ (ಏಜೆನ್ಸೀಸ್).