Jitan Ram Manjhi | ವಂದೇ ಮಾತರಂ ಚರ್ಚೆಯ ನಡುವೆ ಕೇಂದ್ರ ಸಚಿವ ಮಾಂಝಿ ವಿವಾದಾತ್ಮಕ ಹೇಳಿಕೆ!
ವಂದೇ ಮಾತರಂ (Vande Mataram) ಗೀತೆಯನ್ನು ಸಂಪೂರ್ಣವಾಗಿ ಹಾಡಲು ವಿರೋಧ ವ್ಯಕ್ತಪಡಿಸಿರುವವರ ವಿರುದ್ಧ ಕೇಂದ್ರ ಸಚಿವ ಜಿತನ್ ರಾಮ್ ಮಾಂಝಿ ತೀವ್ರ ವಾಗ್ದಾಳಿ ನಡೆಸಿದ್ದು, ಈ ವಿಚಾರವನ್ನು ಮುಂದುವರಿಸಿದರೆ ಜನರು ತಕ್ಕ ಉತ್ತರ ನೀಡಲಿದ್ದಾರೆ ಎಂದು ಎಚ್ಚರಿಸಿದ್ದಾರೆ. ರಾಷ್ಟ್ರಗೀತೆ ಜನ ಗಣ ಮನದಂತೆಯೇ ವಂದೇ ಮಾತರಂಗೂ ಕಾನೂನು ರಕ್ಷಣೆ ದೊರೆತಿರುವ ಹಿನ್ನೆಲೆಯಲ್ಲಿ ಈ ಚರ್ಚೆ ಮುನ್ನಲೆಗೆ ಬಂದಿದೆ.
ತಮ್ಮ ಎಕ್ಸ್ ಖಾತೆಯಲ್ಲಿ ಪೋಸ್ಟ್ ಹಂಚಿಕೊಂಡಿರುವ ಕೇಂದ್ರ ಸಚಿವ ಮಾಂಝಿ, ತುಕ್ಡೆ-ತುಕ್ಡೆ ಗ್ಯಾಂಗ್ (tukde-tukde gang) ಎಂದು ಉಲ್ಲೇಖಿಸಿದ್ದಾರೆ. ಆದರೆ, ತಮ್ಮ ಪೋಸ್ಟ್‌ನಲ್ಲಿ ಅವರು ಯಾವುದೇ ರಾಜಕೀಯ ಪಕ್ಷ ಅಥವಾ ವ್ಯಕ್ತಿಯ ಹೆಸರನ್ನು ಪ್ರಸ್ತಾಪಿಸಿಲ್ಲ.
ತಮ್ಮ ಅಧಿಕೃತ ಎಕ್ಸ್ ಖಾತೆಯಲ್ಲಿ ಪೋಸ್ಟ್ ಹಂಚಿಕೊಂಡಿರುವ ಮಾಂಝಿ, ಸಂಸತ್ತಿನಲ್ಲಿ ಅಂಗೀಕಾರಗೊಂಡಿರುವ ರಾಷ್ಟ್ರೀಯ ಗೀತೆ ವಂದೇ ಮಾತರಂ ಅನ್ನು ತುಂಡರಿಸುವ ಬಗ್ಗೆ ತುಕ್ಡೆ-ತುಕ್ಡೆ ಗ್ಯಾಂಗ್ ಈಗ ಮಾತನಾಡುತ್ತಿದೆ ಎಂದು ಕಿಡಿಕಾರಿದ್ದಾರೆ. ವಿರೋಧಿಸುತ್ತಿರುವವರು ಕಾಲಕ್ರಮೇಣ ತಮ್ಮ ಬುದ್ಧಿಯನ್ನು ತಿದ್ದಿಕೊಳ್ಳದಿದ್ದರೆ, ಸಾರ್ವಜನಿಕರೇ ಅವರಿಗೆ ತಕ್ಕ ಪಾಠ ಕಲಿಸಲಿದ್ದಾರೆ ಮತ್ತು ಜನರು ಅವರನ್ನು ಸೀಳಿ ಹಾಕಲಿದ್ದಾರೆ ಎಂದು ಎಚ್ಚರಿಸಿದ್ದಾರೆ.
ಅಧಿಕೃತ ಸರ್ಕಾರಿ ಸಮಾರಂಭಗಳಲ್ಲಿ ಹಾಗೂ ರಾಜಕೀಯ ಪಕ್ಷದ ಕಾರ್ಯಕ್ರಮಗಳಲ್ಲಿ ವಂದೇ ಮಾತರಂ ಗೀತೆಯನ್ನು ಸಂಪೂರ್ಣವಾಗಿ ಹಾಡಬೇಕೇ ಅಥವಾ ಬೇಡವೇ ಎಂಬ ಚರ್ಚೆ ಈಗಾಗಲೇ ಜೋರಾಗಿ ನಡೆಯುತ್ತಿದೆ. ಇಂತಹ ಸಮಯದಲ್ಲಿ ಮಾಂಝಿ ಅವರು ನೀಡಿರುವ ಈ ಹೇಳಿಕೆಯು ಪ್ರಸ್ತುತ ನಡೆಯುತ್ತಿರುವ ರಾಜಕೀಯ ಚರ್ಚೆಗೆ ಮತ್ತಷ್ಟು ಕಾವು ನೀಡಿದೆ.
ಸಂಪೂರ್ಣ ವಂದೇ ಮಾತರಂ ಹಾಡದಿರಲು ಕಾಂಗ್ರೆಸ್ ನಿರ್ಧಾರ
ರಾಹುಲ್ ಗಾಂಧಿ, ಸೋನಿಯಾ ಗಾಂಧಿ, ಪ್ರಿಯಾಂಕಾ ಗಾಂಧಿ ಮತ್ತು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಸೇರಿದಂತೆ 88 ಹಿರಿಯ ಪಕ್ಷದ ನಾಯಕರು ಭಾಗವಹಿಸಿದ್ದ ಕಾಂಗ್ರೆಸ್ ಕಾರ್ಯಕಾರಿ ಸಮಿತಿಯ (CWC) ಇತ್ತೀಚಿನ ಸಭೆಯ ನಂತರ ಈ ವಿವಾದ ಭುಗಿಲೆದ್ದಿದೆ. ಸಭೆಯಲ್ಲಿ ತೆಗೆದುಕೊಂಡ ನಿರ್ಧಾರದ ಪ್ರಕಾರ, ಕಾಂಗ್ರೆಸ್ ಕಾರ್ಯಕ್ರಮಗಳಲ್ಲಿ ವಂದೇ ಮಾತರಂ ಅನ್ನು ಹಿಂದಿನಂತೆಯೇ, ಅಂದರೆ ಕೇವಲ ಮೊದಲ ಎರಡು ಪ್ಯಾರಾಗಳನ್ನು ಮಾತ್ರ ಹಾಡಲಾಗುವುದು. ಪಕ್ಷದ ಕಾರ್ಯಕ್ರಮಗಳಲ್ಲಿ ಸಂಪೂರ್ಣ ರಾಷ್ಟ್ರೀಯ ಗೀತೆಯನ್ನು ಹಾಡುವುದಿಲ್ಲ ಎಂದು ನಿರ್ಧರಿಸಲಾಗಿದೆ. ಈ ನಿರ್ಧಾರವು ರಾಜಕೀಯ ವಿರೋಧಿಗಳಿಂದ ತೀವ್ರ ಟೀಕೆಗೆ ಗುರಿಯಾಗಿದ್ದು, ಈ ನಿಲುವನ್ನು ಟೀಕಿಸಿದ ನಾಯಕರಲ್ಲಿ ಮಾಂಝಿ ಕೂಡ ಸೇರಿದ್ದಾರೆ.
ವಂದೇ ಮಾತರಂಗೆ ಕಾನೂನು ಮಾನ್ಯತೆ
ಭಾರತವು ಸ್ವಾತಂತ್ರ್ಯ ಪಡೆದ ಸುಮಾರು ಎಂಟು ದಶಕಗಳ ನಂತರ ವಂದೇ ಮಾತರಂಗೆ ಕಾನೂನು ಮಾನ್ಯತೆ ದೊರೆತ ಬೆನ್ನಲ್ಲೇ ಈ ವಿವಾದ ತಲೆದೋರಿದೆ. ವಂದೇ ಮಾತರಂ ಕಾಯ್ದೆಯನ್ನು ಜುಲೈ 30ರಂದು ಸಂಸತ್ತು ಅಂಗೀಕರಿಸಿತು. ಇದರ ನಂತರ, ಆಗಸ್ಟ್ 13ರಂದು ಸಂಸತ್ತಿನಲ್ಲಿ ಮೊದಲ ಬಾರಿಗೆ ಈ ರಾಷ್ಟ್ರೀಯ ಗೀತೆಯನ್ನು ಹಾಡಲಾಯಿತು. ತದನಂತರ ಆಗಸ್ಟ್ 15ರಂದು ಮೊದಲ ಬಾರಿಗೆ ಕೆಂಪುಕೋಟೆಯಲ್ಲಿಯೂ ಇದನ್ನು ಹಾಡಲಾಯಿತು. ಆದರೆ, ಸ್ವಾತಂತ್ರ್ಯ ದಿನಾಚರಣೆಯಂದು ಕಾಂಗ್ರೆಸ್ ಕಚೇರಿಯಲ್ಲಿ ವಂದೇ ಮಾತರಂ ಅನ್ನು ಸಂಪೂರ್ಣವಾಗಿ ಹಾಡದಿದ್ದಾಗ ಈ ವಿಚಾರವು ರಾಜಕೀಯವಾಗಿ ವಿವಾದದ ಸ್ವರೂಪ ಪಡೆದುಕೊಂಡಿತು.
ವಂದೇ ಮಾತರಂ ರಾಜಕೀಯ ವಿವಾದವಾಗಿದ್ದೇಕೆ..?
ರಾಜಕೀಯ ಮತ್ತು ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಈ ಗೀತೆಯ ಸಂಪೂರ್ಣ ಆವೃತ್ತಿಯನ್ನು ಎಷ್ಟರಮಟ್ಟಿಗೆ ಹಾಡಬೇಕು ಎಂಬುದರ ಸುತ್ತ ಈಗಿನ ವಿವಾದ ಕೇಂದ್ರೀಕೃತವಾಗಿದೆ. ಸಂಪೂರ್ಣ ಗೀತೆಯನ್ನು ಹಾಡುವುದನ್ನು ಬೆಂಬಲಿಸುವವರು ರಾಷ್ಟ್ರೀಯ ಗೀತೆಯನ್ನು ಅದರ ಸಂಪೂರ್ಣ ರೂಪದಲ್ಲಿ ಗೌರವಿಸಬೇಕು ಎಂದು ವಾದಿಸುತ್ತಿದ್ದರೆ, ಕಾಂಗ್ರೆಸ್ ಮಾತ್ರ ತನ್ನ ಪಕ್ಷದ ಕಾರ್ಯಕ್ರಮಗಳಲ್ಲಿ ಕೇವಲ ಮೊದಲ ಎರಡು ನುಡಿಗಳನ್ನು ಹಾಡುವ ತನ್ನ ಹಳೆಯ ಪದ್ಧತಿಯನ್ನೇ ಉಳಿಸಿಕೊಳ್ಳಲು ನಿರ್ಧರಿಸಿದೆ