- 'ಜನ ನಾಯಗನ್' ಚಿತ್ರದ ಎಚ್‌ಡಿ ಪ್ರಿಂಟ್ ಲೀಕ್ ಮಾಡಿದ ಆರು ಆರೋಪಿಗಳು ಸೈಬರ್ ಪೊಲೀಸರ ವಶಕ್ಕೆ.
- ಇಂಟರ್ನೆಟ್‌ನಲ್ಲಿದ್ದ 300ಕ್ಕೂ ಹೆಚ್ಚು ಪೈರಸಿ ಲಿಂಕ್‌ಗಳನ್ನು ಬ್ಲಾಕ್ ಮಾಡಿದ ಅಧಿಕಾರಿಗಳು
- ಕೆವಿಎನ್ ಪ್ರೊಡಕ್ಷನ್ಸ್ ನೀಡಿದ ದೂರಿನ ಮೇರೆಗೆ ಸೈಬರ್ ವಿಭಾಗದಿಂದ ತನಿಖೆ.
Jana Nayagan Leak: ನಟ ಮತ್ತು ರಾಜಕಾರಿಣಿ ವಿಜಯ್ ಅಭಿನಯದ ಬಹುನಿರೀಕ್ಷಿತ ಸಿನಿಮಾ ಜನನಾಯಗನ್ ರಿಲೀಸ್ಗೂ ಮುನ್ನವೇ ಪೈರಸಿ ಕಾಟಕ್ಕೆ ಒಳಗಾಗಿದೆ. ಸಿನಿಮಾ ನಿರ್ಮಾಣ ಸಂಸ್ಥೆ ಕೆವಿಎನ್ ಕೈಗೊಂಡ ಕಾನೂನು ಪ್ರಕಾರದ ಹೋರಾಟದ ಮೊದಲ ಹಂತದಲ್ಲಿ ಭರ್ಜರಿ ಜಯ ಸಿಕ್ಕಿದೆ. ಸೈಬರ್ ಪೊಲೀಸರು ನಡೆಸಿದ ತನಿಖೆಯಲ್ಲಿ ಆರು ಮಂದಿ ಆರೋಪಿಗಳ ಹೆಡೆಮುರಿಕಟ್ಟಿದ್ದಾರೆ.
ಜನನಾಯಗನ್ ಸಿನಿಮಾದ ಹೈ-ಡೆಫಿನಿಷನ್ ಪ್ರಿಂಟ್ ಅನ್ನು ಕಾನೂನುಬಾಹಿರವಾಗಿ ಹರಿಬಿಟ್ಟಿದ್ದ ಆರು ಮಂದಿಯನ್ನು ಪೊಲೀಸರು ಬಂಧಿಸಿದ್ದು, ಈಗಾಗಲೇ 300ಕ್ಕೂ ಹೆಚ್ಚು ಪೈರಸಿ ಲಿಂಕ್‌ಗಳನ್ನು ತೆರವುಗೊಳಿಸಲಾಗಿದೆ.
ಏನಿದು ಘಟನೆ?
ಏಪ್ರಿಲ್9 ರಂದು ಜನನಾಯಗನ್ ಸಿನಿಮಾದ ಕೆಲವು ದೃಶ್ಯಗಳು ಆನ್ಲೈನ್ನಲ್ಲಿ ಲೀಕ್ ಆಗಿದ್ದವು. ಈ ಬಗ್ಗೆ ಕಾಲಿವುಡ್, ಟಾಲಿವುಡ್ನ ಸಿನಿಮಾ ತಾರೆಯರು ಆಕ್ರೋಶ ವ್ಯಕ್ತಪಡಿಸಿ ಪೋಸ್ಟ್ ಹಂಚಿಕೊಂಡಿದ್ದರು. ಜೊತೆಗೆ ಚಿತ್ರದ ನಿರ್ಮಾಣ ಸಂಸ್ಥೆಯಾದ ಕೆವಿಎನ್ ಪ್ರೊಡಕ್ಷನ್ಸ್(KVN Production) ದೂರು ದಾಖಲಿಸಿತ್ತು. ಸೈಬರ್ ಕ್ರೈಂ ಪೊಲೀಸರು ಈ ಬಗ್ಗೆ ತನಿಖೆ ಆರಂಭಿಸಿದ್ದರು.
ಸದ್ಯ ಬಂಧಿತ ಆರೋಪಿಗಳ ವಿರುದ್ಧ ಭಾರತೀಯ ನ್ಯಾಯ ಸಂಹಿತೆ, ಮಾಹಿತಿ ತಂತ್ರಜ್ಞಾನ ಕಾಯ್ದೆ, ಹಕ್ಕುಸ್ವಾಮ್ಯ ಕಾಯ್ದೆ ಮತ್ತು ಸಿನಿಮಾಟೋಗ್ರಾಫ್ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಪೊಲೀಸರು ಮಾಹಿತಿ ಹಂಚಿಕೊಂಡಿದ್ದಾರೆ. ಸದ್ಯ ಮತ್ತಷ್ಟು ಪೈರಸಿ ಲಿಂಕ್ ಹುಡುಕಾಟಕ್ಕಾಗಿ ಪೊಲೀಸರು ತಂಡ ರಚಿಸಿ, ಪೈರಸಿ ಲಿಂಕ್‌ಗಳನ್ನು ಪತ್ತೆಹಚ್ಚುವುದು ಮತ್ತು ಡಿಜಿಟಲ್ ಸಾಕ್ಷ್ಯಗಳನ್ನು ಸಂಗ್ರಹಿಸುವಲ್ಲಿ ಯಶಸ್ವಿಯಾಗಿದೆ. ತನಿಖೆಯ ವೇಳೆ ಆರೋಪಿಗಳು ಕ್ಲೌಡ್ ಸ್ಟೋರೇಜ್ ಮತ್ತು ಶೇರ್ ಡ್ರೈವ್ ಲಿಂಕ್‌ಗಳ ಮೂಲಕ ಚಿತ್ರವನ್ನು ಹಂಚುತ್ತಿರುವುದು ಬೆಳಕಿಗೆ ಬಂದಿದೆ.
ಪೊಲೀಸರು ಹೇಳಿದ್ದೇನು?
ಬಂಧಿತ ಆರು ಮಂದಿಯನ್ನು ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿದೆ. ಪೈರಸಿಯನ್ನು ಉತ್ತೇಜಿಸುವ ಅಥವಾ ಪೈರೇಟೆಡ್ ಲಿಂಕ್‌ಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುವವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಸೈಬರ್ ವಿಭಾಗ ಎಚ್ಚರಿಸಿದೆ. ಅಲ್ಲದೆ, ಸಾರ್ವಜನಿಕರು ಇಂತಹ ಲಿಂಕ್‌ಗಳನ್ನು ಬಳಸಬಾರದು ಎಂದು ಮಾಹಿತಿ ಹಂಚಿಕೊಳ್ಳಲಾಗಿದೆ, (ಏಜೆನ್ಸೀಸ್).