Prison Love Story ಸಾಂದರ್ಭಿಕ ಚಿತ್ರ
ಮಧ್ಯಪ್ರದೇಶ: ಮಹಿಳಾ ಜೈಲು ಅಧಿಕಾರಿಯೊಬ್ಬರು ಕೊಲೆ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆ ಅನುಭವಿಸಿದ್ದ ಮಾಜಿ ಖೈದಿಯನ್ನು (Prison Love Story) ವಿವಾಹವಾಗಿರುವ ಘಟನೆ ಮಧ್ಯಪ್ರದೇಶದ ಸತ್ನಾದಲ್ಲಿ ನಡೆದಿದ್ದು, ಸಧ್ಯ ಎಲ್ಲೆಡೆ ಚರ್ಚೆಗೆ ಗ್ರಾಸವಾಗಿದೆ.
ವರದಿಗಳ ಪ್ರಕಾರ, ಸತ್ನಾ ಕೇಂದ್ರ ಕಾರಾಗೃಹದ ಸಹಾಯಕ ಸೂಪರಿಂಟೆಂಡೆಂಟ್ ಫಿರೋಜಾ ಖಾಟೂನ್, ಜೈಲಿನಲ್ಲಿ ವಾರಂಟ್ ಇನ್ಚಾರ್ಜ್ ಆಗಿ ಕೆಲಸ ಮಾಡುತ್ತಿದ್ದರು. ಈ ವೇಳೆ ಧರ್ಮೇಂದ್ರ ಸಿಂಗ್ ಅವರನ್ನು ಭೇಟಿಯಾಗಿದ್ದು, ಅವರು 2007 ರಲ್ಲಿ ಕೌನ್ಸಿಲರ್ ಕೊಲೆ ಮತ್ತು ನಂತರ ಶವವನ್ನು ಹೂಳಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಜೀವಾವಧಿ ಶಿಕ್ಷೆಯನ್ನು ಅನುಭವಿಸುತ್ತಿದ್ದರು.
ಜೈಲಿನಲ್ಲಿದ್ದಾಗ, ಸಿಂಗ್ ಜೈಲು ಅಧಿಕಾರಿಗಳಿಗೆ ವಾರಂಟ್ ಸಂಬಂಧಿತ ಕೆಲಸಗಳಲ್ಲಿ ಸಹಾಯ ಮಾಡುತ್ತಿದ್ದರು. ಈ ಕೆಲಸದ ನಿಮಿತ್ತ ಅವರು ಖಾಟೂನ್ ಅವರೊಂದಿಗೆ ನಿಯಮಿತವಾಗಿ ಸಂಪರ್ಕ ಸಾಧಿಸುತ್ತಿದ್ದರು. ಈ ಸಮಯದಲ್ಲಿ ಅವರಿಬ್ಬರ ವೃತ್ತಿಪರ ಸಂವಹನಗಳು ಕ್ರಮೇಣ ಸ್ನೇಹವಾಗಿ ಚಿಗುರೊಡೆದು ಪ್ರೀತಿಯಾಗಿ ಮುಂದುವರೆಯಿತು.
ಕಾನೂನಿನ ಪ್ರಕಾರ 14 ವರ್ಷಗಳ ಸುದೀರ್ಘ ಜೈಲು ಶಿಕ್ಷೆಯನ್ನು ಪೂರೈಸಿದ ಸಿಂಗ್, ಸುಮಾರು ನಾಲ್ಕು ವರ್ಷಗಳ ಹಿಂದೆಯೇ ಜೈಲಿನಿಂದ ಬಿಡುಗಡೆಗೊಂಡರು. ಉತ್ತಮ ನಡವಳಿಕೆಯ ಆಧಾರದ ಮೇಲೆ ಬಿಡುಗಡೆಯಾದ ನಂತರ ದಂಪತಿ ವಿವಾಹದ ಮೂಲಕ ತಮ್ಮ ಸಂಬಂಧವನ್ನು ಔಪಚಾರಿಕಗೊಳಿಸಲು ನಿರ್ಧರಿಸಿದರು.
ಈ ಅಪರೂಪದ ಜೋಡಿಯ ಮದುವೆಯು ಮೇ 5 ರಂದು ಛತ್ತರ್‌ಪುರ ಜಿಲ್ಲೆಯಲ್ಲಿ ನೆರವೇರಿತು. ವಿಶೇಷವೆಂದರೆ, ಸಮಾಜದ ಟೀಕೆಗಳು ಅಥವಾ ವಿರೋಧಗಳನ್ನು ತಪ್ಪಿಸಲು ವರ ಸಿಂಗ್ ಅವರು ತಮ್ಮ ವಿವಾಹದ ಆಮಂತ್ರಣ ಪತ್ರಿಕೆಯಲ್ಲಿ ಹೆಸರನ್ನು ಬದಲಾಯಿಸಿಕೊಂಡಿದ್ದರು. ಈ ಮೂಲಕ ವಿವಾಹವು ಯಾವುದೇ ಗದ್ದಲವಿಲ್ಲದೆ ಶಾಂತಿಯುತವಾಗಿ ನಡೆಯುವಂತೆ ಎಚ್ಚರಿಕೆ ವಹಿಸಲಾಗಿತ್ತು.
ಈ ಅಂತರ್ಧರ್ಮೀಯ ವಿವಾಹಕ್ಕೆ ಖಾಟೂನ್ ಅವರ ಮುಸ್ಲಿಂ ಕುಟುಂಬ ಸದಸ್ಯರು ಬೆಂಬಲ ನೀಡಲಿಲ್ಲ. ಅವರ ಅನುಪಸ್ಥಿತಿಯಲ್ಲಿ, ವಿಶ್ವ ಹಿಂದೂ ಪರಿಷತ್ ಜಿಲ್ಲಾ ಉಪಾಧ್ಯಕ್ಷ ರಾಜಬಹಾದೂರ್ ಮಿಶ್ರಾ ಮತ್ತು ಅವರ ಪತ್ನಿ 'ಕನ್ಯಾದಾನ'ವನ್ನು ನೆರವೇರಿಸಿದರು. ಈ ಕಾರ್ಯಕ್ರಮದಲ್ಲಿ ಬಜರಂಗದಳದ ಸದಸ್ಯರು ಸಹ ಉಪಸ್ಥಿತರಿದ್ದರು.
ಈ ಕಾರ್ಯಕ್ರಮಕ್ಕೆ ಸತ್ನಾ ಕೇಂದ್ರ ಕಾರಾಗೃಹದ ಅಧಿಕಾರಿಗಳು, ಉದ್ಯೋಗಿಗಳು ಮತ್ತು ಕೈದಿಗಳು ಸಹ ನವವಿವಾಹಿತ ದಂಪತಿಗಳಿಗೆ ಶುಭಾಶಯಗಳನ್ನು ತಿಳಿಸಿದ್ದಾರೆ (ಏಜೆನ್ಸೀಸ್).