Yogi Adityanath | ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್  
ದೇಶ

ನಾವು ಮಾಫಿಯಾಗಳ ಮುಂದೆ ತಲೆಬಾಗುವವರಲ್ಲ, ಹೆಣ್ಣುಮಕ್ಕಳ ತಂಟೆಗೆ ಬಂದರೆ ನರಕದ ದಾರಿ ತೋರಿಸುತ್ತೇವೆ ಎಂದ ಸಿಎಂ ಯೋಗಿ! | Yogi Adityanath

ವಾರಣಾಸಿ: ಉತ್ತರ ಪ್ರದೇಶದಲ್ಲಿ ಮಹಿಳೆಯರು ಮತ್ತು ಹೆಣ್ಣುಮಕ್ಕಳ ಭದ್ರತೆಗೆ ಭಂಗ ತರುವ ಅಪರಾಧಿಗಳಿಗೆ ಜೈಲು ಅಥವಾ ನರಕ ಬಿಟ್ಟರೆ ಬೇರೆ ದಾರಿಯಿಲ್ಲ ಎಂದು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ (Yogi Adityanath) ಅವರು ಖಡಕ್ ಎಚ್ಚರಿಕೆ ನೀಡಿದ್ದಾರೆ. ವಾರಣಾಸಿಯ ಪಿಂಡ್ರಾ ವಿಧಾನಸಭಾ ಕ್ಷೇತ್ರದಲ್ಲಿ ಆಯೋಜಿಸಲಾಗಿದ್ದ ದುಡಿಯುವ ಮಹಿಳೆಯರ ಸನ್ಮಾನ ಸಮಾರಂಭವನ್ನುದ್ದೇಶಿಸಿ ಮಾತನಾಡಿದ ಅವರು, ಕಳೆದ 9 ವರ್ಷಗಳಲ್ಲಿ ರಾಜ್ಯದಲ್ಲಿ ಮಹಿಳಾ ಸುರಕ್ಷತೆ ಮತ್ತು ಸಬಲೀಕರಣದ ಚಿತ್ರಣ ಸಂಪೂರ್ಣವಾಗಿ ಬದಲಾಗಿದೆ ಎಂದು ಹೇಳಿದರು.
ಮಹಿಳಾ ಸಬಲೀಕರಣ ಎಂಬುದು ಕೇವಲ ಘೋಷಣೆಗಳಿಗೆ ಸೀಮಿತವಾಗದೆ ನೆಲಮಟ್ಟದಲ್ಲಿ ಅನುಭವಕ್ಕೆ ಬರಬೇಕು ಎಂದಿರುವ ಸಿಎಂ ಯೋಗಿ, 2017 ಕ್ಕೂ ಮೊದಲು ಹೆಣ್ಣುಮಕ್ಕಳು ಶಾಲೆಗೆ ಹೋಗಲು ಮತ್ತು ಸುರಕ್ಷಿತವಾಗಿ ಮನೆಗೆ ಮರಳಲು ಕುಟುಂಬಗಳು ಭಯಪಡುವ ವಾತಾವರಣವಿತ್ತು. ಆದರೆ, ಇಂದು ಆ ಪರಿಸ್ಥಿತಿ ಬದಲಾಗಿದ್ದು, ಹೆಣ್ಣುಮಕ್ಕಳು ತಮ್ಮ ಕನಸುಗಳನ್ನು ನನಸಾಗಿಸಲು ಎಷ್ಟೇ ದೂರ ಸಾಗಿದರೂ ಡಬಲ್ ಇಂಜಿನ್ ಸರ್ಕಾರ ಅವರ ಬೆನ್ನಿಗೆ ನಿಲ್ಲಲಿದೆ ಎಂದು ಅವರು ಭರವಸೆ ನೀಡಿದರು. ಶೌಚಾಲಯಗಳ ಕೊರತೆ, ಅಡುಗೆಮನೆಯ ಹೊಗೆ, ಆರೋಗ್ಯ ವೆಚ್ಚ ಹಾಗೂ ಉದ್ಯೋಗದ ಅಭಾವದಂತಹ ಸಮಸ್ಯೆಗಳನ್ನು ಸರ್ಕಾರ ಒಂದೊಂದಾಗಿ ಪರಿಹರಿಸಿದೆ ಎಂದರು.

ಪೊಲೀಸ್ ಪಡೆಯಲ್ಲಿ ಮಹಿಳೆಯರ ಸಂಖ್ಯೆ 50,000 ಕ್ಕೆ ಹೆಚ್ಚಳ

ಮಹಿಳಾ ಸುರಕ್ಷತೆಗಾಗಿ ಜಾರಿಗೆ ತಂದಿರುವ ಮಿಷನ್ ಶಕ್ತಿ, ಮಹಿಳಾ ಬೀಟ್ ಪೊಲೀಸ್ ವ್ಯವಸ್ಥೆ ಹಾಗೂ 1090, 181 ಸಹಾಯವಾಣಿಗಳನ್ನು ಬಲಪಡಿಸಲಾಗಿದೆ. 2017 ರಲ್ಲಿ ಕೇವಲ 10,000 ಇದ್ದ ಮಹಿಳಾ ಪೊಲೀಸ್ ಸಿಬ್ಬಂದಿಯ ಸಂಖ್ಯೆ ಪ್ರಸ್ತುತ 44,000 ಕ್ಕೆ ಏರಿಕೆಯಾಗಿದ್ದು, ಹೊಸ ನೇಮಕಾತಿಯೊಂದಿಗೆ 50,000 ದಾಟಲಿದೆ. ಇದಲ್ಲದೆ, ವೀರಾಂಗನೆ ಅವಂತಿ ಬಾಯಿ ಲೋಧಿ, ಉದಾ ದೇವಿ ಪಾಸಿ ಮತ್ತು ಝಲ್ಕಾರಿ ಬಾಯಿ ಕೋರಿ ಅವರ ಹೆಸರಿನಲ್ಲಿ ಮೂರು ಮಹಿಳಾ ಪಿಎಸಿ ಬೆಟಾಲಿಯನ್‌ಗಳನ್ನು ಸ್ಥಾಪಿಸಲಾಗುತ್ತಿದೆ ಎಂದು ತಿಳಿಸಿದರು

ವಿರೋಧ ಪಕ್ಷಗಳ ವಿರುದ್ಧ ವಾಗ್ದಾಳಿ

ಪ್ರತಿಪಕ್ಷಗಳ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ ಯೋಗಿ ಆದಿತ್ಯನಾಥ್, ಕೆಲವರು ಚುನಾವಣೆಯ ಸಂದರ್ಭದಲ್ಲಿ ಜಾತಿಯ ಹೆಸರಿನಲ್ಲಿ ಸಮಾಜವನ್ನು ಒಡೆಯಲು ಯತ್ನಿಸುತ್ತಾರೆ, ಆದರೆ ಭೀಕರ ಮಾಫಿಯಾಗಳ ವಿರುದ್ಧ ಕ್ರಮ ಕೈಗೊಳ್ಳಲು ಹೆದರುತ್ತಾರೆ ಎಂದು ವಾಗ್ದಾಳಿ ನಡೆಸಿದರು. ನಾವು ವೋಟ್ ಬ್ಯಾಂಕ್‌ಗಾಗಿ ಮಾಫಿಯಾಗಳ ಮುಂದೆ ಕೈಮುಗಿದು ನಿಲ್ಲುವವರಲ್ಲ. ಮಹಿಳೆಯರ ಭದ್ರತೆಗೆ ಕಂಟಕವಾಗುವ ಗೂಂಡಾಗಳಿಗೆ ಜೈಲು ಅಥವಾ ನರಕವೇ ಅಂತಿಮ ತಾಣವಾಗಲಿದೆ ಎಂದು ಎಚ್ಚರಿಸಿದರು(ಏಜೆನ್ಸೀಸ್​).