PM Modi Uzbekistan Visit > ತಾಷ್ಕೆಂಟ್‌ನಲ್ಲಿರುವ ಲಾಲ್ ಬಹದ್ದೂರ್ ಶಾಸ್ತ್ರಿ ಸ್ಮಾರಕಕ್ಕೆ ಭೇಟಿ ನೀಡಿದ ಪ್ರಧಾನಿ ಮೋದಿ! 
ದೇಶ

ತಾಷ್ಕೆಂಟ್ ಮಣ್ಣಿನಲ್ಲಿ ಲಾಲ್ ಬಹದ್ದೂರ್ ಶಾಸ್ತ್ರಿ ನೆನಪು ಹುದುಗಿದ್ದೇಕೆ..? ಪ್ರಧಾನಿ ಮೋದಿ ಭೇಟಿ ಬೆನ್ನಲ್ಲೇ ಶಾಸ್ತ್ರಿ ಸ್ಟ್ರೀಟ್ ಇತಿಹಾಸ ವೈರಲ್! | PM Modi Uzbekistan Visit

ಭಾರತದ ಮಾಜಿ ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತ್ರಿ ಅವರು ದೇಶಕ್ಕೆ ನೀಡಿದ ಅಚಲ ಸಮರ್ಪಣೆ ಮತ್ತು ಕೊಡುಗೆಗಳು ಇಂದಿನ ಪೀಳಿಗೆಗೆ ಸ್ಫೂರ್ತಿಯಾಗುತ್ತಿವೆ ಎಂದು ನೆನಪಿಸಿಕೊಂಡ ಪ್ರಧಾನಿ ನರೇಂದ್ರ ಮೋದಿ ಅವರು ತಾಷ್ಕೆಂಟ್‌ನಲ್ಲಿರುವ ಅವರ ಸ್ಮಾರಕಕ್ಕೆ ಪುಷ್ಪನಮನ ಸಲ್ಲಿಸಿದರು.

ಎರಡು ದಿನಗಳ ಉಜ್ಬೇಕಿಸ್ತಾನ್‌ ಪ್ರವಾಸಲ್ಲಿರುವ ಪ್ರಧಾನಿ ಮೋದಿ, ಎರಡನೇ ದಿನದಂದು ಕೇಂದ್ರ ತಾಷ್ಕೆಂಟ್‌ನ ಶಾಸ್ತ್ರಿ ರಸ್ತೆಯ ಗ್ರೀನ್ ಪಾರ್ಕ್ ಪ್ರದೇಶದಲ್ಲಿರುವ ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಸ್ಮಾರಕ ಸ್ಥಳಕ್ಕೆ ಭೇಟಿ ನೀಡಿ, ಅವರ ಪ್ರತಿಮೆಗೆ ಪುಷ್ಪನಮನ ಸಲ್ಲಿಸಿದರು. ತಾಷ್ಕೆಂಟ್‌ನ ಸ್ಥಳೀಯ ಸರ್ಕಾರವು ಮಾಜಿ ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತ್ರಿ ಅವರ ನೆನಪು ಹಾಗೂ ಅವರು ಸಾರಿದ ಶಾಂತಿಯ ಪರಂಪರೆಯನ್ನು ಗೌರವಿಸಲು ಕೇಂದ್ರ ತಾಷ್ಕೆಂಟ್‌ನ ರಸ್ತೆಯೊಂದಕ್ಕೆ ಶಾಸ್ತ್ರಿ ಸ್ಟ್ರೀಟ್ ಎಂದು ಹೆಸರಿಟ್ಟಿದೆ ಮತ್ತು ಅಲ್ಲಿ ಅವರ ಕಂಚಿನ ಪ್ರತಿಮೆಯನ್ನು ಸ್ಥಾಪಿಸಿದೆ.

ಈ ನಡುವೆ ವಿದೇಶಾಂಗ ವ್ಯವಹಾರಗಳ ಸಚಿವಾಲಯವು (MEA) ಪ್ರತಿಕ್ರಿಯಿಸಿದ್ದು, ಶಾಸ್ತ್ರಿ ಸ್ಮಾರಕದಲ್ಲಿ ಪ್ರಧಾನಿ ಮೋದಿ ಅವರು ಪುಷ್ಪನಮನ ಸಲ್ಲಿಸುವ ಮೂಲಕ ಮಾಜಿ ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಪರಂಪರೆಯನ್ನು ಗೌರವಿಸಿದ್ದಾರೆ ಎಂದು ತಿಳಿಸಿದೆ. ಅವರ ಜೀವನವು ಸರಳತೆ, ಧೈರ್ಯ ಮತ್ತು ದೇಶಕ್ಕಾಗಿಯೇ ಅರ್ಪಿಸಿಕೊಂಡ ಅಚಲ ಸಮರ್ಪಣೆಯ ಸಂಕೇತವಾಗಿತ್ತು. ಅಲ್ಲದೆ, ಶಾಸ್ತ್ರೀಜಿಯವರ ಐತಿಹಾಸಿಕ ಘೋಷಣೆಯಾದ ಜೈ ಜವಾನ್, ಜೈ ಕಿಸಾನ್ ಇಡೀ ದೇಶದಾದ್ಯಂತ ಇಂದಿಗೂ ಹಲವು ಪೀಳಿಗೆಗಳಿಗೆ ಸ್ಫೂರ್ತಿ ನೀಡುತ್ತಲೇ ಇದೆ ಎಂದು ವಿದೇಶಾಂಗ ಸಚಿವಾಲಯ ಹೇಳಿದೆ.

ಭಾರತ-ಉಜ್ಬೇಕಿಸ್ತಾನ್ ಮಧ್ಯೆ ಬಿಗ್ ಡೀಲ್!

ತಾಷ್ಕೆಂಟ್‌ನಲ್ಲಿ ಉಜ್ಬೇಕಿಸ್ತಾನ್ ಅಧ್ಯಕ್ಷ ಶಾವ್ಕತ್ ಮಿರ್ಜಿಯೊಯೆವ್ ಅವರೊಂದಿಗೆ ನಡೆಸಿದ ನಿಯೋಗ ಮಟ್ಟದ ಮಾತುಕತೆಯ ಸಂದರ್ಭದಲ್ಲಿ, ಭಾರತ ಮತ್ತು ಉಜ್ಬೇಕಿಸ್ತಾನ್ ದೇಶಗಳು ಯುರೇನಿಯಂ ಪೂರೈಕೆಗಾಗಿ ದೀರ್ಘಾವಧಿಯ ಚೌಕಟ್ಟನ್ನು ಸ್ಥಾಪಿಸಲು ಸಮ್ಮತಿಸಿವೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಘೋಷಿಸಿದ್ದಾರೆ.
ಇದೇ ವೇಳೆ, ಎರಡೂ ದೇಶಗಳು ತಮ್ಮ ದ್ವಿಪಕ್ಷೀಯ ಸಂಬಂಧವನ್ನು ಸಮಗ್ರ ಆಯಕಟ್ಟಿನ ಪಾಲುದಾರಿಕೆ ಮಟ್ಟಕ್ಕೆ ಏರಿಸಲು ನಿರ್ಧರಿಸಿವೆ. ಪ್ರಸ್ತುತ 1 ಬಿಲಿಯನ್ ಡಾಲರ್‌ಗಿಂತ ಹೆಚ್ಚಿರುವ ವಾರ್ಷಿಕ ದ್ವಿಪಕ್ಷೀಯ ವ್ಯಾಪಾರದ ಪ್ರಮಾಣವನ್ನು 2030ರ ವೇಳೆಗೆ 5 ಬಿಲಿಯನ್ ಡಾಲರ್‌ಗೆ ಹೆಚ್ಚಿಸುವ ಮಹತ್ವಾಕಾಂಕ್ಷೆಯ ಗುರಿಯನ್ನು ಹೊಂದಲಾಗಿದೆ. ಭಾರತವು ತನ್ನ ನಾಗರಿಕ ಪರಮಾಣು ಇಂಧನ ಅಗತ್ಯಗಳಿಗಾಗಿ ಉಜ್ಬೇಕಿಸ್ತಾನ್‌ನಿಂದ ಯುರೇನಿಯಂ ಆಮದು ಮಾಡಿಕೊಳ್ಳಲು ಯೋಜಿಸುತ್ತಿರುವುದರಿಂದ ಈ ಒಪ್ಪಂದವು ಅತ್ಯಂತ ಪ್ರಮುಖವಾಗಿದೆ.

ದೀರ್ಘಾವಧಿಯ ಯುರೇನಿಯಂ ಪೂರೈಕೆಗೆ ಸಮ್ಮತಿ

ಎರಡೂ ದೇಶಗಳ ನಡುವಿನ ಇಂಧನ ಸಹಕಾರದ ಮುಂದಿನ ಹಂತವನ್ನು ವಿವರಿಸಿದ ಪ್ರಧಾನಿ ಮೋದಿ, ನಾವು ಯುರೇನಿಯಂ ಪೂರೈಕೆಗಾಗಿ ಸುದೀರ್ಘ ಅವಧಿಯ ವ್ಯವಸ್ಥೆಯನ್ನು ಸ್ಥಾಪಿಸಲಿದ್ದೇವೆ ಎಂದು ಮಾತುಕತೆಯ ವೇಳೆ ತಿಳಿಸಿದರು.
ಹೊಸ ಸಮಗ್ರ ಆಯಕಟ್ಟಿನ ಪಾಲುದಾರಿಕೆಯ ಅಡಿಯಲ್ಲಿ ಭಾರತ ಮತ್ತು ಉಜ್ಬೇಕಿಸ್ತಾನ್ ನಿರ್ದಿಷ್ಟ ಗುರಿಗಳನ್ನು ನಿಗದಿಪಡಿಸಿಕೊಳ್ಳಬೇಕು ಎಂದು ಪ್ರಧಾನಿ ಮೋದಿ ಹೇಳಿದರು. ದ್ವಿಪಕ್ಷೀಯ ಸಹಕಾರಕ್ಕೆ ಮಾರ್ಗದರ್ಶನ ನೀಡಲು ವಿದೇಶಾಂಗ ಸಚಿವರ ಮಟ್ಟದ ಸಮನ್ವಯ ಮಂಡಳಿಯನ್ನು ಸ್ಥಾಪಿಸಲು ಅವರು ಪ್ರಸ್ತಾಪಿಸಿದರು ಮತ್ತು ಪ್ರಸ್ತುತ ಕಾರ್ಯದರ್ಶಿ ಮಟ್ಟದಲ್ಲಿರುವ ಜಂಟಿ ಆಯೋಗವನ್ನು ಸಚಿವರ ಮಟ್ಟಕ್ಕೆ ಮೇಲ್ದರ್ಜೆಗೇರಿಸಲಾಗುವುದು ಎಂದು ತಿಳಿಸಿದರು. ಇದರ ಜೊತೆಗೆ, ಎರಡೂ ದೇಶಗಳ ಕಂಪನಿಗಳನ್ನು ಒಳಗೊಂಡ ಉದ್ಯಮ ಶೃಂಗಸಭೆಯನ್ನು ಜಂಟಿಯಾಗಿ ಆಯೋಜಿಸಲು ನಿರ್ಧರಿಸಲಾಗಿದೆ(ಏಜೆನ್ಸೀಸ್​).