Andhra Pradesh Minister Makeup Troll 
ದೇಶ

ಆಂಧ್ರ ಗೃಹ ಸಚಿವೆ 'ಒಂದು ಕಿಲೋಗ್ರಾಂ ಮೇಕಪ್​ ಹಾಕ್ತಾರೆ' ಎಂದ YSRP ನಾಯಕ; ಸಿಡಿದೆದ್ದ ಟಿಡಿಪಿ..Makeup Troll

ಅನಂತಪುರ: ಆಂಧ್ರಪ್ರದೇಶದ ರಾಜಕೀಯದಲ್ಲಿ ಸದ್ಯ ಮೇಕಪ್​ ವಿಚಾರಕ್ಕೆ ಕೊಟ್ಟ ಹೇಳಿಕೆಗಳು ಚರ್ಚೆಗೆ ಗ್ರಾಸವಾಗಿದೆ. ವೈಎಸ್​ಆರ್​ಪಿ ಮುಖಂಡ ಅಮರನಾಥ್​ ಅವರು ಇಲ್ಲಿನ ಗೃಹಸಚಿವೆ ವಂಗಲಪುಡಿ ಅನಿತಾ ಅವರ ಕುರಿತು ಮಾತನಾಡಿರುವುದು ತೆಲುಗು ದೇಶಂ ಪಕ್ಷದ ನಾಯಕರ ಕೆಂಗಣ್ಣಿಗೆ ಗುರಿಯಾಗಿದೆ
ಯುವಜನ ಶ್ರಮಿಕ ರೈತ ಕಾಂಗ್ರೆಸ್ ಪಕ್ಷ (ವೈಎಸ್​ಆರ್​ಪಿ) ನಾಯಕ ಅಮರನಾಥ್​ ಬುಧವಾರ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮಾತನಡುವ ವೇಳೆ, ತೆಲುಗು ದೇಶಂ ಪಕ್ಷವನ್ನು ತೆಗಳುವ ಭರದಲ್ಲಿ ಗೃಹ ಸಚಿವೆ ವಂಗಲಪುಡಿ ಅನಿತಾ ಅವರ ಮೇಕಪ್​ ಕುರಿತಾಗಿ ಹೇಳಿಕೆ ಕೊಟ್ಟಿರುವುದು ಸದ್ಯ ವಿವಾದಕ್ಕೆ ಕಾರಣವಾಗಿದೆ.

ಏನಿದು ವಿವಾದ?

ಗೃಹ ಸಚಿವೆ ವಂಗಲಪುಡಿ ಅನಿತಾ ಅವರ ಮುಖದಲ್ಲಿ 'ಕಿಲೋಗ್ರಾಂ ಮೇಕಪ್'​ ಹಾಕಿದ್ದರು ಎಂದು ಹೇಳಿರುವುದರ ವಿರುದ್ಧ ಟಿಡಿಪಿ ಬೆಂಬಲಿಗರು ಹಾಗೂ ಪಕ್ಷದ ಕಾರ್ಯಕರ್ತರು ಕಿಡಿಕಾರಿದ್ದಾರೆ. ಜೊತೆಗೆ, ಅಮರನಾಥ್​ ಅವರ ಸ್ತ್ರೀ ದ್ವೇಷಿ ಹೇಳಿಕೆ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಒತ್ತಡ ಹೇರಿದ್ದಾರೆ.
ಈ ಬಗ್ಗೆ ಗೃಹ ಸಚಿವೆ ಮಾತನಾಡಿದ್ದು,' ಸಾರ್ವಜನಿಕ ಸಭೆಯಲ್ಲಿ ನನ್ನ ಬಗ್ಗೆ ಮಾತನಾಡಿ ಅವಮಾನಿಸಿರುವುದು ನನಗೆ ಮಾಡಿರುವ ಅವಮಾನ ಮಾತ್ರವಲ್ಲ. ದಲಿತರನ್ನು ಗುರಿಯಾಗಿಸಿಕೊಂಡು ನಡೆಸಿರುವ ಜಾತಿವಾದಿಯ ದಾಳಿಯಾಗಿದೆ. ಇಂತಹ ಹೇಳಿಕೆಗೆ ನಾವು ಬೆದರೋದಿಲ್ಲ. ನಾವು ನಮ್ಮ ಸಾರ್ವಜನಿಕ ಸೇವೆಯನ್ನು ಮುಂದುವರೆಸುತ್ತೇವೆ' ಎಂದು ಅನಿತಾ ಅವರು ಗುಡುಗಿದರು.

ಸಾಮಾನ್ಯ ಮಹಿಳೆಗೆ ಮಾಡುವ ಅವಮಾನ

'ಗೃಹ ಸಚಿವೆ ಅನಿತಾ ಅವರ ವಿರುದ್ಧ ಕೊಟ್ಟಿರುವ ಹೇಳಿಕೆಗಳು ಖಂಡನೀಯ. ಒಬ್ಬ ಮಹಿಳೆಯ ಉಡುಪು, ನೋಟದ ಬಗ್ಗೆ ಕಾಮೆಂಟ್​ ಮಾಡುವುದು ಸಾಮಾನ್ಯ ಮಹಿಳೆಯನ್ನು ಅವಮಾನಿಸಿದಂತೆ' ಎಂದು ಆಂಧ್ರಪ್ರದೇಶದ ಡಿಸಿಎಂ ಪವನ್​ ಕಲ್ಯಾಣ್​ ಅವರು ಕೆಂಡಕಾರಿದರು.

ನಾರಾ ಲೋಕೇಶ್ ಹೇಳಿದ್ದಿಷ್ಟು

'ಸಚಿವ ನಾರಾ ಲೋಕೇಶ್ ಮಾತನಾಡಿ, ಗೃಹ ಸಚಿವೆ ವಂಗಲಪುಡಿ ಅನಿತಾ ಅವರ ಬಗ್ಗೆ ಮಾಜಿ ಸಚಿವ ಗುಡಿವಾಡ ಅಮರನಾಥ್ ಮಾತನಾಡಿರುವುದು ನೋಡಿದರೆ, ಅವರು ಮಹಿಳೆಯರಿಗೆ ಎಷ್ಟರ ಮಟ್ಟಕ್ಕೆ ಗೌರವವನ್ನು ನೀಡುತ್ತಿದ್ದಾರೆ ಎನ್ನುವುದು ತಿಳಿದುಬರುತ್ತದೆ. ವೈ.ಎಸ್. ಜಗನ್ ಮೋಹನ್ ರೆಡ್ಡಿ ಅವರ ಸ್ವಂತ ಕುಟುಂಬದವರಿಗೆ ಹೀಗೆ ಹೇಳಿಕೆ ಕೊಟ್ಟಿದ್ದರೆ, ಅವರು ಸಹ ಹೀಗೆ ಪ್ರತಿಕ್ರಿಯೆ ಕೊಡ್ತಿದ್ದರು' ಎಂದು ಕಿಡಿಕಾರಿದರು

ಟಿಡಿಪಿ ಕಿಡಿ, ಪ್ರತಿಭಟನೆ

'ಗೃಹ ಸಚಿವೆ ಅನಿತಾ ವಿರುದ್ಧ ವೈಎಸ್‌ಆರ್‌ಸಿಪಿ ನಾಯಕ ಗುಡಿವಾಡ ಅಮರನಾಥ್ ಅವರು ನಡೆಸಿದ್ದು ವೈಯಕ್ತಿಕ ದಾಳಿ.ರಾಜಕೀಯ ಟೀಕೆ ನೀತಿಗಳು, ಆಡಳಿತಕ್ಕೆ ಸೀಮಿತವಾಗಿರಬೇಕು ಮತ್ತು ವ್ಯಕ್ತಿಯನ್ನು ಗುರಿಯಾಗಿಸಿಕೊಂಡು ಹೇಳಿಕೆ ಕೊಡಬಾರದು' ಎಂದು ತೆಲುಗು ದೇಶಂ ಪಕ್ಷದ ನಾಯಕರು ಕಿಡಿಕಾರಿದ್ದಾರೆ. ವೈಎಸ್​ಆರ್​ಪಿ ಮಾಜಿ ಸಚಿವನ ವಿರುದ್ಧ ನಾನಾ ಭಾಗದಲ್ಲಿ ಟಿಡಿಪಿ ಪ್ರತಿಭಟನೆ ನಡೆಸಿತು, (ಏಜೆನ್ಸೀಸ್).