Delimitation Bill | ಮೋದಿ ಸರ್ಕಾರದ ಮಸೂದೆಗೆ ವೈಎಸ್‌ಆರ್‌ಸಿಪಿ ಸಾಥ್ 
ದೇಶ

ಮೋದಿ ಸರ್ಕಾರದ ಮಸೂದೆಗೆ ವೈಎಸ್‌ಆರ್‌ಸಿಪಿ ಸಾಥ್; ಜಗನ್ ನಡೆಗೆ ಕಾಂಗ್ರೆಸ್ ಕೆಂಡಾಮಂಡಲ! | Delimitation Bill

Delimitation Bill: ಕೇಂದ್ರ ಸರ್ಕಾರದ ಕ್ಷೇತ್ರ ಪುನರ್ವಿಂಗಡಣೆ ಮತ್ತು ಸಾಂವಿಧಾನಿಕ ತಿದ್ದುಪಡಿ ಮಸೂದೆಗೆ ಆಂದ್ರ ಪ್ರದೇಶದ ವೈಎಸ್‌ಆರ್ ಕಾಂಗ್ರೆಸ್ ಪಕ್ಷವು (ವೈಎಸ್‌ಆರ್‌ಸಿಪಿ) ಬೆಂಬಲ ನೀಡಲು ನಿರ್ಧರಿಸಿದೆ. ಇದು ವಿರೋಧ ಪಕ್ಷಗಳ ಒಕ್ಕೂಟಕ್ಕೆ ದೊಡ್ಡ ಆಘಾತವನ್ನು ನೀಡಿದ್ದು, ಸಂಸತ್ತಿನಲ್ಲಿ ಮಸೂದೆಗಳನ್ನು ಅಂಗೀಕರಿಸಲು ಪ್ರಯತ್ನಿಸುತ್ತಿರುವ ಆಡಳಿತಾರೂಢ ಎನ್‌ಡಿಎ ಒಕ್ಕೂಟಕ್ಕೆ ಹೊಸ ಬಲ ಬಂದಂತಾಗಿದೆ.
ಈ ಕುರಿತು ಮಾಹಿತಿ ನೀಡಿರುವ ವೈಎಸ್‌ಆರ್‌ಸಿಪಿ ಪ್ರಧಾನ ಕಾರ್ಯದರ್ಶಿ ಸಜ್ಜಲ ರಾಮಕೃಷ್ಣ ರೆಡ್ಡಿ, ಲೋಕಸಭಾ ಸ್ಥಾನಗಳನ್ನು ಜನಸಂಖ್ಯೆಯ ಆಧಾರದ ಮೇಲೆ ಶೇಕಡಾ 50 ರಷ್ಟು ಹೆಚ್ಚಿಸುವ ಕ್ರಮಕ್ಕೆ ತಮ್ಮ ಪಕ್ಷದ ಯಾವುದೇ ಆಕ್ಷೇಪವಿಲ್ಲ ಎಂದು ತಿಳಿಸಿದ್ದಾರೆ. ಸ್ಥಾನಗಳ ಹೆಚ್ಚಳವು ಪ್ರಮಾಣಾನುಗುಣವಾಗಿ ಇರುವುದರಿಂದ ದಕ್ಷಿಣ ಭಾರತದ ರಾಜ್ಯಗಳ ಪ್ರಾತಿನಿಧ್ಯದ ಕುರಿತಾದ ಕಳವಳಗಳನ್ನು ಇದು ಪರಿಹರಿಸಲಿದೆ ಎಂಬುದು ಪಕ್ಷದ ವಾದವಾಗಿದೆ.
ಪ್ರಸ್ತುತ ಲೋಕಸಭೆಯಲ್ಲಿ 4 ಮತ್ತು ರಾಜ್ಯಸಭೆಯಲ್ಲಿ 7 ಸಂಸದರನ್ನು ಹೊಂದಿರುವ ವೈಎಸ್‌ಆರ್‌ಸಿಪಿಯ ಬೆಂಬಲವು, ಸಂವಿಧಾನ ತಿದ್ದುಪಡಿಗೆ ಅಗತ್ಯವಿರುವ ಮೂರನೇ ಎರಡರಷ್ಟು ಬಹುಮತವನ್ನು ಕ್ರೋಢೀಕರಿಸಲು ಕೇಂದ್ರ ಸರ್ಕಾರಕ್ಕೆ ಸಹಕಾರಿಯಾಗುವುದರಲ್ಲಿ ಅನುಮಾನವಿಲ್ಲ.

ಕಾಂಗ್ರೆಸ್​ ನಾಯಕರಿಂದ ಟೀಕೆ

ಈ ಕ್ರಮವನ್ನು ಕಾಂಗ್ರೆಸ್ ನಾಯಕ ಮಾಣಿಕ್ಯಮ್​ ಟ್ಯಾಗೋರ್ ತಮ್ಮ ಎಕ್ಸ್ ಖಾತೆಯಲ್ಲಿ ಪೋಸ್ಟ್ ಹಂಚಿಕೊಳ್ಳುವ ಮೂಲಕ ಖಂಡಿಸಿದ್ದು, ಸಿಬಿಐ ಪ್ರಕರಣಗಳಿಂದ ತಾತ್ಕಾಲಿಕ ರಕ್ಷಣೆ ಪಡೆಯಲು ಜಗನ್ ಮೋಹನ್ ರೆಡ್ಡಿ ಆಂಧ್ರಪ್ರದೇಶದ ಹಿತಾಸಕ್ತಿಯನ್ನು ಮೋದಿ ಸರ್ಕಾರದ ಬಳಿ ರಾಜಿ ಮಾಡಿಕೊಂಡಿದ್ದಾರೆ ಎಂದು ಆರೋಪಿಸಿದ್ದಾರೆ. ಈ ಮಸೂದೆಯು ದೇಶದಲ್ಲಿ ಉತ್ತರ-ದಕ್ಷಿಣ ಭಾರತದ ವಿಭಜನೆಗೆ ಕಾರಣವಾಗಲಿದೆ ಎಂಬ ಆತಂಕ ವ್ಯಕ್ತಪಡಿಸಿರುವ ಕಾಂಗ್ರೆಸ್ ನಾಯಕರಾದ ಪ್ರಿಯಾಂಕಾ ಗಾಂಧಿ ಮತ್ತು ಕೆ.ಸಿ. ವೇಣುಗೋಪಾಲ್ ಸಹ ಈ ವಿಷಯದಲ್ಲಿ ಸರ್ಕಾರದ ವಿರುದ್ಧ ಕಿಡಿಕಾರಿದ್ದು, ಮೊದಲು ಜಾತಿ ಜನಗಣತಿ ನಡೆಸಬೇಕು ಮತ್ತು ಒಬಿಸಿಗಳ ಹಕ್ಕುಗಳನ್ನು ರಕ್ಷಿಸಬೇಕು ಎಂದು ಒತ್ತಾಯಿಸಿದ್ದಾರೆ.

ಸರ್ಕಾರ ಸ್ಪಷ್ಟನೆ..

ವಿರೋಧ ಪಕ್ಷಗಳ ಈ ಆರೋಪಗಳನ್ನು ಕೇಂದ್ರ ಸರ್ಕಾರವು ಸಾರಾಸಗಟಾಗಿ ತಳ್ಳಿಹಾಕಿದ್ದು, ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹ ಸಚಿವ ಅಮಿತ್ ಷಾ ದಕ್ಷಿಣದ ರಾಜ್ಯಗಳಿಗೆ ಯಾವುದೇ ರೀತಿಯ ಅನ್ಯಾಯವಾಗುವುದಿಲ್ಲ ಎಂದು ಭರವಸೆ ನೀಡಿದ್ದಾರೆ. ವಿರೋಧ ಪಕ್ಷಗಳು ಸಾರ್ವಜನಿಕರನ್ನು ದಾರಿ ತಪ್ಪಿಸುತ್ತಿವೆ ಎಂದು ಟೀಕಿಸಿರುವ ಕೇಂದ್ರ ಸರ್ಕಾರವು ಕ್ಷೇತ್ರ ಪುನರ್ವಿಂಗಡಣೆಯ ಬಳಿಕವೂ ಎಲ್ಲ ರಾಜ್ಯಗಳ ಸಮತೋಲನವನ್ನು ಕಾಯ್ದುಕೊಳ್ಳಲಾಗುವುದು ಎಂದು ಸ್ಪಷ್ಟಪಡಿಸಿದೆ. ಈ ಎಲ್ಲಾ ರಾಜಕೀಯ ಜಿದ್ದಾಜಿದ್ದಿನ ನಡುವೆ, ಇಂದು (ಶುಕ್ರವಾರ.ಏ 17) ಲೋಕಸಭೆಯಲ್ಲಿ ಮಸೂದೆಯ ಮೇಲೆ ಮಹತ್ವದ ಮತದಾನ ನಡೆಯಲಿದ್ದು, ಇಡೀ ದೇಶದ ಗಮನ ಸಂಸತ್ತಿನತ್ತ ನೆಟ್ಟಿದೆ.

ಏನಿದು ಡಿಲಿಮಿಟೇಶನ್..?

ಲೋಕಸಭೆ ಮತ್ತು ರಾಜ್ಯ ವಿಧಾನಸಭೆಗಳಲ್ಲಿ ಮಹಿಳೆಯರಿಗೆ ಶೇ 33ರಷ್ಟು ಸ್ಥಾನಗಳನ್ನು ಮೀಸಲಿಡುವ ಐತಿಹಾಸಿಕ ತೀರ್ಮಾನವನ್ನು 2029ರ ಸಾರ್ವತ್ರಿಕ ಚುನಾವಣೆಯಿಂದ ಜಾರಿಗೆ ತರಲು ಕೇಂದ್ರ ಸರ್ಕಾರ ಗಂಭೀರ ಸಿದ್ಧತೆ ನಡೆಸಿದೆ. ಈ ಪ್ರಕ್ರಿಯೆಯ ಅತ್ಯಂತ ನಿರ್ಣಾಯಕ ಭಾಗವಾಗಿರುವ ಕ್ಷೇತ್ರ ಪುನರ್ವಿಂಗಡಣೆ (ಡಿಲಿಮಿಟೇಶನ್) ಕುರಿತು ಈಗ ವ್ಯಾಪಕ ಚರ್ಚೆಗಳು ನಡೆಯುತ್ತಿವೆ.
ಭಾರತದ ಸಂವಿಧಾನದ 82ನೇ ವಿಧಿಯ ಪ್ರಕಾರ, ಪ್ರತಿ ಜನಗಣತಿಯ ಬಳಿಕ ಜನಸಂಖ್ಯೆಯ ಆಧಾರದ ಮೇಲೆ ಕ್ಷೇತ್ರಗಳನ್ನು ಪುನರಚಿಸುವುದು ಕಡ್ಡಾಯವಾಗಿದೆ. 1952 ರಿಂದ ದಶಕಕ್ಕೊಮ್ಮೆ ಮೂರು ಬಾರಿ ಈ ಪ್ರಕ್ರಿಯೆ ನಡೆದಿದ್ದರೂ, 1976 ರಲ್ಲಿ ತರಲಾದ 42ನೇ ಸಾಂವಿಧಾನಿಕ ತಿದ್ದುಪಡಿಯು ಈ ಪರಿಷ್ಕರಣೆಯನ್ನು 2001ರವರೆಗೆ ಸ್ಥಗಿತಗೊಳಿಸಿತ್ತು. ಇದಾದ ಬಳಿಕ ಲೋಕಸಭಾ ಸ್ಥಾನಗಳ ಸಂಖ್ಯೆಯನ್ನು 543ಕ್ಕೆ ಸೀಮಿತಗೊಳಿಸಿ, ಅದನ್ನು ಮತ್ತಷ್ಟು ಕಾಲ ಮುಂದುವರಿಸಲಾಗಿತ್ತು. ಈಗ ದಶಕಗಳ ನಂತರ ಮತ್ತೆ ಈ ಪ್ರಕ್ರಿಯೆಗೆ ಚಾಲನೆ ನೀಡಲಾಗುತ್ತಿದೆ(ಏಜೆನ್ಸೀಸ್​).