ಮದುವೆ ಸೀಸನ್‌ ಮುನ್ನವೇ ಗ್ರಾಹಕರಿಗೆ ಜಾಕ್‌ಪಾಟ್; ಚಿನ್ನದ ದರದಲ್ಲಿ ಭಾರಿ ಇಳಿಕೆ 
ದೇಶ

ಮದುವೆ ಸೀಸನ್‌ ಮುನ್ನವೇ ಗ್ರಾಹಕರಿಗೆ ಜಾಕ್‌ಪಾಟ್; ಚಿನ್ನದ ದರದಲ್ಲಿ ಭಾರಿ ಇಳಿಕೆ..Gold Price Fall

ಬೆಂಗಳೂರು: ಕಳೆದ ವಾರ ಸತತವಾಗಿ ಏರಿಕೆ ಕಂಡು ಆಭರಣ ಪ್ರಿಯರ ನಿದ್ದೆಗೆಡಿಸಿದ್ದ ಚಿನ್ನದ(Gold Price Fall) ಬೆಲೆ, ಇಂದು ಮಂಗಳವಾರ (ಫೆ.3) ಭಾರಿ ಕುಸಿತ ಕಂಡಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿನ ಬೆಳವಣಿಗೆಗಳು ಮತ್ತು ಹೂಡಿಕೆದಾರರ ಮನೋಭಾವ ಬದಲಾಗಿರುವುದರಿಂದ ದೇಶೀಯ ಮಾರುಕಟ್ಟೆಯಲ್ಲಿ ಹಳದಿ ಲೋಹದ ಬೆಲೆ ಗಣನೀಯವಾಗಿ ಇಳಿದಿದೆ.

ನಗರವಾರು ದರ ವಿವರ (ಪ್ರತಿ 1 ಗ್ರಾಂಗೆ)

ಇಂದಿನ ವಹಿವಾಟಿನಲ್ಲಿ ದೇಶದ ಪ್ರಮುಖ ನಗರಗಳಲ್ಲಿ ಚಿನ್ನದ ದರವು ಈ ಕೆಳಗಿನಂತಿದೆ.
ಬೆಂಗಳೂರು: 24 ಕ್ಯಾರೆಟ್ (ಶುದ್ಧ ಚಿನ್ನ) ₹15,175 ಇದ್ದರೆ, 22 ಕ್ಯಾರೆಟ್ ₹13,910 ಹಾಗೂ 18 ಕ್ಯಾರೆಟ್ ಚಿನ್ನದ ಬೆಲೆ ₹11,381 ಆಗಿದೆ.
ದೆಹಲಿ: ರಾಷ್ಟ್ರ ರಾಜಧಾನಿಯಲ್ಲಿ ಬೆಲೆ ಸ್ವಲ್ಪ ಹೆಚ್ಚಿದ್ದು, 24 ಕ್ಯಾರೆಟ್ ಚಿನ್ನ ₹15,190 ಹಾಗೂ 22 ಕ್ಯಾರೆಟ್ ಚಿನ್ನ ₹13,925 ಕ್ಕೆ ಮಾರಾಟವಾಗುತ್ತಿದೆ.
ಮುಂಬೈ: ವಾಣಿಜ್ಯ ನಗರಿ ಮುಂಬೈನಲ್ಲಿ 24 ಕ್ಯಾರೆಟ್ ಚಿನ್ನ ₹15,175 ಮತ್ತು 22 ಕ್ಯಾರೆಟ್ ಚಿನ್ನ ₹13,910 ಇದೆ.
ಕೋಲ್ಕತ್ತಾ: ಇಲ್ಲಿಯೂ ಬೆಲೆ ಮುಂಬೈ ಮತ್ತು ಬೆಂಗಳೂರಿನಷ್ಟೇ ಸ್ಥಿರವಾಗಿದ್ದು, 24 ಕ್ಯಾರೆಟ್ ಚಿನ್ನ ₹15,175 ಕ್ಕೆ ಲಭ್ಯವಿದೆ.

ಬೆಲೆ ಇಳಿಕೆಗೆ ಕಾರಣವೇನು..?

ಮಾರುಕಟ್ಟೆ ತಜ್ಞರ ಪ್ರಕಾರ, ಈ ದಿಢೀರ್ ಇಳಿಕೆಗೆ ಎರಡು ಪ್ರಮುಖ ಕಾರಣಗಳಿವೆ.
ಲಾಭದ ಬುಕಿಂಗ್: ಚಿನ್ನದ ಬೆಲೆ ಕಳೆದ ವಾರ ದಾಖಲೆ ಮಟ್ಟ ತಲುಪಿದ್ದರಿಂದ, ಹೂಡಿಕೆದಾರರು ತಮ್ಮಲ್ಲಿದ್ದ ಚಿನ್ನವನ್ನು ಮಾರಾಟ ಮಾಡಿ ಲಾಭವನ್ನು ಪಡೆದುಕೊಳ್ಳುತ್ತಿದ್ದಾರೆ. ಇದರಿಂದ ಮಾರುಕಟ್ಟೆಯಲ್ಲಿ ಚಿನ್ನದ ಪೂರೈಕೆ ಹೆಚ್ಚಾಗಿ ಬೆಲೆ ಇಳಿಕೆಯಾಗಿದೆ.
ಜಾಗತಿಕ ಪ್ರಭಾವ: ಅಮೆರಿಕ ಮತ್ತು ಭಾರತದ ನಡುವಿನ ನೂತನ ವಾಣಿಜ್ಯ ಒಪ್ಪಂದದಿಂದಾಗಿ ಹೂಡಿಕೆದಾರರು ಚಿನ್ನದ ಬದಲಾಗಿ ಷೇರು ಮಾರುಕಟ್ಟೆಯತ್ತ ಮುಖ ಮಾಡುತ್ತಿದ್ದಾರೆ. ಇದು ಸುರಕ್ಷಿತ ಹೂಡಿಕೆಯಾದ ಚಿನ್ನದ ಮೇಲಿನ ಬೇಡಿಕೆಯನ್ನು ತಾತ್ಕಾಲಿಕವಾಗಿ ತಗ್ಗಿಸಿದೆ.

ಆಭರಣ ಪ್ರಿಯರಿಗೆ ಸಿಹಿ ಸುದ್ದಿ

ಮದುವೆ ಮತ್ತು ಶುಭ ಸಮಾರಂಭಗಳ ಸೀಸನ್ ಆರಂಭವಾಗುತ್ತಿರುವ ಈ ಸಂದರ್ಭದಲ್ಲಿ ಚಿನ್ನದ ಬೆಲೆ ಇಳಿಕೆಯಾಗಿರುವುದು ಸಾಮಾನ್ಯ ಗ್ರಾಹಕರಿಗೆ ದೊಡ್ಡ ಸಮಾಧಾನ ತಂದಿದೆ. 22 ಕ್ಯಾರೆಟ್ ಚಿನ್ನದ ದರ ₹14,000 ಕ್ಕಿಂತ ಕೆಳಕ್ಕೆ ಬಂದಿರುವುದು ಆಭರಣ ಖರೀದಿಗೆ ಪ್ರಶಸ್ತ ಸಮಯ ಎಂದು ವಿಶ್ಲೇಷಿಸಲಾಗುತ್ತಿದೆ,(ಏಜೆನ್ಸೀಸ್).