ದೋಣಿ ದುರಂತದ ಬಗ್ಗೆ ಕ್ಯಾಪ್ಟನ್ ಮಹೇಶ್ ಪಟೇಲ್ ಮಾತು
- ಮಧ್ಯಪ್ರದೇಶದ ನರ್ಮದಾ ನದಿಯಲ್ಲಿ ಸಂಭವಿಸಿದ ದೋಣಿ ದುರಂತ
- ದೋಣಿ ದುರಂತದಲ್ಲಿ ಇಲ್ಲಿಯವರೆಗೆ 9 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ
- ಅಪಘಾತ ನೆನೆದು ಕಣ್ಣೀರಿಟ್ಟ ಬೋಟ್ನ ಕ್ಯಾಪ್ಟನ್
ಮಧ್ಯಪ್ರದೇಶ: ಬರ್ಗಿ ಡ್ಯಾಮ್ನ ನರ್ಮದಾ ನದಿಯಲ್ಲಿ ದೋಣಿ ಮಗುಚಿದ ಪರಿಣಾಮ ಅದರಲ್ಲಿದ್ದ ಪ್ರಯಾಣಿಕರ ಪೈಕಿ 9 ಮಂದಿ ದಾರುಣವಾಗಿ ಸಾವನ್ನಪ್ಪಿದ ದುರಂತ ಘಟನೆ (Jabalpur Boat Accident) ಸದ್ಯ ಮೃತರ ಕುಟುಂಬಸ್ಥರನ್ನು ಕಣ್ಣೀರಿನಲ್ಲಿ ಕೈತೊಳೆಯುವಂತೆ ಮಾಡಿದೆ. ಮತ್ತೊಂದೆಡೆ, ದುರ್ಘಟನೆ ನೆನೆದು ಬೋಟ್ನ ಚಾಲಕ ಕಣ್ಣೀರಿಡುತ್ತಿದ್ದಾರೆ.
ಗುರುವಾರ (ಏ.30) ಸಂಭವಿಸಿದ ದೋಣಿ ದುರಂತದ ಬಗ್ಗೆ ಎನ್ಡಿಟಿವಿ ಜೊತೆ ಮುಕ್ತವಾಗಿ ಮಾತನಾಡಿದ ಕ್ರ್ಯೂಸ್ ಬೋಟ್ ಕ್ಯಾಪ್ಟನ್ ಮಹೇಶ್ ಪಟೇಲ್, ನನ್ನಿಂದ ಎಷ್ಟು ಜನರನ್ನು ಉಳಿಸಲು ಸಾಧ್ಯವೋ ಆ ಪ್ರಯತ್ನವನ್ನು ನಾನು ಮಾಡಿದ್ದೇನೆ. 9 ಮಂದಿಯ ಸಾವಿಗೆ ಮನದಾಳದಿಂದ ಕ್ಷಮೆಯಾಚಿಸುತ್ತೇನೆ ಎಂದು ಕಣ್ಣೀರಿಟ್ಟರು.
ಈ ದುರ್ಘಟನೆ ಹೇಗೆ ಸಂಭವಿಸಿತು ಎಂಬುದನ್ನು ಎಳೆ ಎಳೆಯಾಗಿ ಬಿಚ್ಚಿಟ್ಟ ಪಟೇಲ್, ಕಮಾರಿಯಾ ದ್ವೀಪದಿಂದ ನಾವು ಹೊರಟೆವು. ಆದರೆ, ಇದಕ್ಕಿದ್ದಂತೆ ಹವಾಮಾನ ಬದಲಾಯಿತು. ಅದಾಗಲೇ ನೀರಿನ ಮಧ್ಯಕ್ಕೆ ತಲುಪಿದ್ದ ನಮಗೆ, ಯಾವುದೇ ವಾರ್ನಿಂಗ್ ಅಥವಾ ಕೆಟ್ಟ ಹವಾಮಾನ ಪರಿಸ್ಥಿತಿ ಕುರಿತಾಗಿ ಎಚ್ಚರಿಕೆಗಳು ಸಿಗಲಿಲ್ಲ. ಯಾವಾಗ ಗಾಳಿ ಜೋರಾಗಿ ಬೀಸಲಾರಂಭಿಸಿತೋ, ಆಗಲೇ ಬೋಟ್ ಅನ್ನು ದಡಕ್ಕೆ ತಿರುಗಿಸಿದೆ. ಆದ್ರೆ, ಅಷ್ಟರೊಳಗೆ ದೋಣಿಗೆ ಹಾನಿಗೊಳಗಾಯಿತು ಎಂದರು.
ಬೋಟ್ನೊಳಗೆ ನೀರು ತುಂಬುತ್ತಿದ್ದಂತೆ ನಾನು ಸಹಾಯಕ್ಕೆ ಹೆಲ್ಪ್ ಡೆಸ್ಕ್ನವರಿಗೆ ಕರೆ ಮಾಡಿದೆ. ಅವರು ಬರುವ ಮುನ್ನವೇ ದೋಣಿಯಲ್ಲಿ ಅರ್ಧದಷ್ಟು ನೀರು ತುಂಬಿ ಹೋಗಿತ್ತು ಎಂದರು. ಇದೇ ವೇಳೆ, ಬದುಕುಳಿದ ಪ್ರಯಾಣಿಕರು ಮಾತನಾಡಿ, ವೇಗದ ಗಾಳಿ ಬೀಸುತ್ತಿದ್ದಂತೆ ಬೋಟ್ ಹಿಂತಿರುಗಿಸಲು ನಾವು ಕೇಳಿಕೊಂಡರೂ ಅವರು ತಿರುಗಿಸಲಿಲ್ಲ ಎಂಬ ಆರೋಪ ಕೇಳಿಬಂದಿದೆ ಎಂಬುದಕ್ಕೆ ಉತ್ತರಿಸಿದ ಪಟೇಲ್, ಇಲ್ಲ. ಅಲ್ಲಿ ಯಾರೊಬ್ಬರೂ ಸಹ ಆ ರೀತಿ ಕೇಳಿಕೊಳ್ಳಲಿಲ್ಲ ಎಂದಿದ್ದಾರೆ.
ನಾನು ಮೊದಲೇ ಲೈಫ್ ಜ್ಯಾಕೆಟ್ಗಳನ್ನು ಹಾಕಿಕೊಳ್ಳುವಂತೆ ಸೂಚಿಸಿದೆ. ಆದರೆ, ಬಹುತೇಕ ಪ್ರಯಾಣಿಕರು ಅದಕ್ಕೆ ಒಪ್ಪಲಿಲ್ಲ. ಬದಲಿಗೆ ಹಾಡಿಗೆ ಕುಣಿಯುತ್ತಾ, ಮೋಜಿನಲ್ಲಿ ತೊಡಗಿದ್ದರು. ಎಲ್ಲರ ಬಳಿಯೂ ಲೈಫ್ ಜ್ಯಾಕೆಟ್ಗಳು ಇದೆಯೇ ಎಂಬುದನ್ನು ದೋಣಿ ಮುಳುಗುವ ವೇಳೆಗೆ ಖಾತ್ರಿ ಪಡಿಸಿಕೊಂಡು, ಕಡೆಯದಾಗಿ ಅಲ್ಲಿಂದ ಹೊರಬಂದವನೇ ನಾನು ಎಂದರು.
ಈ ದುರ್ಘಟನೆ ಬಳಿಕ ನನ್ನನ್ನು ಕೆಲಸದಿಂದ ತೆಗೆದು ಹಾಕಿದ್ದಾರೆ. ನನ್ನ ಸಂಪಾದನೆ ಮೇಲೆಯೇ ನಿಂತಿದ್ದ ಕುಟುಂಬಕ್ಕೆ ಈಗ ಭಾರೀ ಸಂಕಷ್ಟ ಎದುರಾಗಿದೆ. 27 ಸಾವಿರ ರೂ. ಸಂಬಳದಿಂದ ಕುಟುಂಬದ ಜೀವನ ಸಾಗುತ್ತಿತ್ತು. ನಾನು ಕ್ಷಮೆ ಕೇಳುತ್ತೇನೆ. ಈ ದುರಂತದಿಂದ ಆಘಾತಕ್ಕೀಡಾಗಿದ್ದೇನೆ. ಊಟ ತಿನ್ನಲು, ನಿದ್ರೆ ಮಾಡಲು ಸಾಧ್ಯವಾಗುತ್ತಿಲ್ಲ ಎಂದು ದುಃಖದ ಮಾತುಗಳನ್ನಾಡಿದರು,(ಏಜೆನ್ಸೀಸ್).