ಬೆಂಗಳೂರು: ಡಿಜಿಪಿ ಕೆ. ರಾಮಚಂದ್ರ ರಾವ್ ( k ramachandra rao) ತಮ್ಮ ಕಚೇರಿಯಲ್ಲೇ ಸಮವಸ್ತ್ರ ಧರಿಸಿ ಮಹಿಳೆಯರೊಂದಿಗೆ ಸರಸವಾಡಿರುವ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದಂತೆ ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಈ ಸುದ್ದಿ ಬೆನ್ನಲ್ಲೇ ಇದೀಗ ರಾಮಚಂದ್ರ ರಾವ್ ಈ ಬಗ್ಗೆ ಮಾತನಾಡಿದ್ದಾರೆ.
ಖಾಸಗಿವಾಹಿನಿ ಜೊತೆ ಮಾತನಾಡಿದ ಕೆ ರಾಮಚಂದ್ರ ರಾವ್, ನಾನು ಕೂಡ ಇಂದು ಆ ವಿಡಿಯೋವನ್ನು ನೋಡಿದ್ದೇನೆ. ಅದು ಸಂಪೂರ್ಣವಾಗಿ ಕೃತಕ ಬುದ್ಧಿಮತ್ತೆ (AI) ಬಳಸಿ ಸೃಷ್ಟಿಸಿದ ಅಥವಾ ಎಡಿಟ್ ಮಾಡಿರುವ ವಿಡಿಯೋ ಆಗಿದೆ. ಅಲ್ಲಿರುವ ಮಹಿಳೆಯರು ಯಾರು? ಎಂದು ನನಗೆ ಗೊತ್ತಿಲ್ಲ. ನನ್ನ ವೃತ್ತಿಜೀವನಕ್ಕೆ ಕಪ್ಪುಚುಕ್ಕೆ ಹಚ್ಚಲು.. ಯಾರೋ ವಿರೋಧಿಗಳು ಈ ರೀತಿಯ ಷಡ್ಯಂತ್ರ ರೂಪಿಸಿದ್ದಾರೆ ಎಂದು ಸಮರ್ಥಿಸಿಕೊಂಡಿದ್ದಾರೆ.
ನನಗೆ ಯಾರೋ ಫೋನ್ ಮಾಡಿ ಹೇಳಿದ್ದರು. ನಾನು ಇಂದೇ ಇದೆಲ್ಲವನ್ನು ಟಿವಿಯಲ್ಲಿ ನೋಡಿದ್ದೇನೆ. ನನಗೆ ಈ ವಿಡಿಯೋ ಹಾಗೂ ಫೋಟೋ ನೋಡಿ ಶಾಕ್ ಆಗಿದೆ. ಈ ವಿಡಿಯೋ ಎಐ ನಿಂದ ಎಡಿಟ್ ಮಾಡಿದ್ದಾಗಿದೆ. ಈ ವಿಡಿಯೋ ಕುರಿತಾಗಿ ನಾನು ಕಾನೂನು ಕ್ರಮ ತೆಗೆದುಕೊಳ್ಳುತ್ತೇನೆ ಎಂದಿದ್ದಾರೆ.
ಒಂದೆಡೆ ವಿಡಿಯೋ ಎಡಿಟೆಡ್ ಎಂದು ರಾಮಚಂದ್ರ ರಾವ್ ಹೇಳುತ್ತಿದ್ದರೆ, ಮತ್ತೊಂದೆಡೆ ವಿಡಿಯೋದಲ್ಲಿರುವ ದೃಶ್ಯಗಳು ಮತ್ತು ಸ್ಥಳವು ಅವರ ಕಚೇರಿಯನ್ನೇ ಹೋಲುತ್ತಿವೆ ಎಂಬ ವಾದಗಳು ಕೇಳಿಬರುತ್ತಿವೆ.
ನಡೆದಿದ್ದೇನು?:
ವೈರಲ್ ಆಗಿರುವ ವಿಡಿಯೋಗಳಲ್ಲಿ ರಾಮಚಂದ್ರ ರಾವ್ ಅವರು ತಮ್ಮ ಕಚೇರಿಯಲ್ಲೇ ಕುಳಿತು, ಸಮವಸ್ತ್ರದಲ್ಲಿರುವಾಗಲೇ ಹಲವು ಮಹಿಳೆಯೊಬ್ಬರೊಂದಿಗೆ ಸರಸವಾಡುತ್ತಿರುವುದು ವಿಡಿಯೋದಲ್ಲಿ ಸೆರೆಯಾಗಿದೆ. ಈ ವಿಡಿಯೋಗಳನ್ನು ಒಂದೆರಡು ವರ್ಷಗಳ ಹಿದೆ ರೆಕಾರ್ಡ್ ಮಾಡಿರಬಹುದೆಂದು ಹೇಳಲಾಗಿದೆ. ಆದರೆ ವಿಡಿಯೋದಲ್ಲಿರುವ ಮಹಿಳೆ ಯಾರು? ಓರ್ವ ಮಹಿಳೆಯಾ? ಅಥವಾ ಹಲವು ಮಹಿಳೆಯರಾ ಎಂಬುದು ಗೊತ್ತಾಗಿಲ್ಲ. ಈ ವಿಡಿಯೋಗಳನ್ನು ಯಾರು ಚಿತ್ರೀಕರಿಸಿದ್ದಾರೆ? ಇದರ ಉದ್ದೇಶ ಏನು? ಈಗ ಈ ವಿಡಿಯೋಗಳನ್ನು ಬಹಿರಂಗ ಪಡಿಸಿದ್ಯಾಕೆ ಎಂಬುದು ನಿಗೂಢವಾಗಿದೆ.
ಸಮವಸ್ತ್ರದ ಘನತೆ ಮರೆತು, ಕಚೇರಿಯಲ್ಲೇ ಇಂತಹ ಕೃತ್ಯವೆಸಗಿರುವುದು ಬೆಳಕಿಗೆ ಬರುತ್ತಿದ್ದಂತೆ ಎಚ್ಚೆತ್ತ ರಾಜ್ಯ ಸರ್ಕಾರವು ತಕ್ಷಣವೇ ತನಿಖೆಗೆ ಸೂಚಿಸಿದೆ. ಗೃಹ ಇಲಾಖೆಯು ಈ ಬಗ್ಗೆ ವರದಿ ಕೇಳಿದೆ.
ಅಕ್ರಮವಾಗಿ ಚಿನ್ನ ಸಾಗಾಟ ಕೇಸ್ನಲ್ಲಿ ಸಿಕ್ಕಿ ಹಾಕಿಕೊಂಡಿರುವ ನಟಿ ರನ್ಯಾ ರಾವ್ ಅವರ ಮಲತಂದೆ ಆಗಿರುವ ಹಿರಿಯ ಐಪಿಎಸ್ ಅಧಿಕಾರಿ ರಾಮ್ ಚಂದ್ರರಾವ್ ಸದ್ಯ ಡಿಸಿಆರ್ಇ ಡಿಜಿಪಿ ಆಗಿ ಸೇವೆ ಸಲ್ಲಿಸುತ್ತಿದ್ದಾರೆ. ಸಾಕು ಮಗಳು ರನ್ಯಾ ರಾವ್ ಬಂಧನವಾದ ನಂತರ ಸರ್ಕಾರ ಇವರನ್ನು ಕಡ್ಡಾಯ ರಜೆ ಮೇಲೆ ಕಳಿಸಿದ್ದನ್ನು ಇಲ್ಲಿ ಸ್ಮರಿಸಬಹುದು.