ನವದೆಹಲಿ: E20 ಅಲ್ಲ, ಇದು 420 ಎಂದು ದೇಶದ ಪ್ರಮುಖ ತೈಲ ಮಾರುಕಟ್ಟೆ ಕಂಪನಿಗಳು ನಿಗದಿತ ಶೇಕಡಾ 20ಕ್ಕಿಂತ ಹೆಚ್ಚಿನ ಎಥೆನಾಲ್ ಮಿಶ್ರಣ ಅಂಶದೊಂದಿಗೆ ಪೆಟ್ರೋಲ್ ಅನ್ನು ಪೂರೈಸುತ್ತಿವೆ. ಮತ್ತು ಸಾರ್ವಜನಿಕರ ವಾಹನಗಳಿಂದ ಪೆಟ್ರೋಲ್ ಕಳ್ಳತನ ಮಾಡಲಾಗುತ್ತಿದೆ ಎಂದು ಕಾಂಗ್ರೆಸ್ ನಾಯಕ ಮತ್ತು ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಆರೋಪಿಸಿದ್ದಾರೆ.
ಕರ್ನಾಟದ ಏಳು ಜಿಲ್ಲೆಗಳ ವಿವಿಧ ಬಂಕ್ಗಳಿಂದ ಸಂಗ್ರಹಿಸಲಾದ ಒಟ್ಟು 63 ಇಂಧನ ಮಾದರಿಯನ್ನು ಪ್ರಯೋಗಾಲಯ ಪರೀಕ್ಷೆಯಲ್ಲಿನ ವರದಿಯನ್ನು ಆಧಾರಿಸಿ ರಾಹುಲ್ ಗಾಂಧಿ ಈ ಆರೋಪ ಮಾಡಿದ್ದು, ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ರಾಹುಲ್ ಗಾಂಧಿ ಉಲ್ಲೇಖಿಸಿದ ಮಾಹಿತಿಯ ಪ್ರಕಾರ, ಇಂಡಿಯನ್ ಆಯಿಲ್ ಕಾರ್ಪೊರೇಷನ್ (IOCL) ಮತ್ತು ಹಿಂದೂಸ್ತಾನ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್ (HPCL) ನಿಂದ ಸಂಗ್ರಹಿಸಿದ ಮಾದರಿಗಳಲ್ಲಿ ಎಥೆನಾಲ್ ಪ್ರಮಾಣವು ಕ್ರಮವಾಗಿ ಶೇಕಡಾ 31.2 ಮತ್ತು ಶೇಕಡಾ 30.5 ರಷ್ಟಿರುವುದು ಕಂಡು ಬಂದಿದೆ.
ಈ ಕುರಿತು ಎಕ್ಸ್ನಲ್ಲಿ ಪೋಸ್ಟ್ ಹಾಕಿರುವ ಅವರು, ಸರ್ಕಾರದಿಂದ ಮಾನ್ಯತೆ ಪಡೆದ ಪ್ರಯೋಗಾಲಯದಲ್ಲಿ ಪರೀಕ್ಷಿಸಲಾದ 14 ಮಾದರಿಗಳಲ್ಲಿ 11 ಮಾದರಿಗಳಲ್ಲಿ ಶೇ.20ಕ್ಕಿಂತ ಹೆಚ್ಚು ಎಥೆನಾಲ್ ಇದೆ. E20 ಎಂಬುದು 420 ಆಗಿ ಮಾರ್ಪಟ್ಟಿದೆ. ಕೇಂದ್ರ ಸರ್ಕಾರ ಸಾರ್ವಜನಿಕರ ವಾಹನಗಳಿಂದ ಪೆಟ್ರೋಲ್ ಕಳ್ಳತನ ಮಾಡುತ್ತಿದೆ ಎಂದು ಕಿಡಿಕಾರಿದ್ದಾರೆ.
IOCL, HPCL, BPCL, ನಯಾರಾ, ಶೆಲ್ ಹೀಗೆ ಸರ್ಕಾರಿ ಅಥವಾ ಖಾಸಗಿ ಕಂಪನಿಗಳು, ಯಾವುದೂ ಹೊರತಾಗಿಲ್ಲ, ಎಲ್ಲವೂ ನಿಗದಿತ ಮಿತಿಯನ್ನು ಮೀರಿವೆ. ಅಷ್ಟೇ ಅಲ್ಲ, ಈ ಕಂಪನಿಗಳ ಸ್ವಂತ ಪ್ರಯೋಗಾಲಯಗಳು ಎಥೆನಾಲ್ ಪ್ರಮಾಣದ ಬಗ್ಗೆ ವರದಿಯನ್ನೇ ನೀಡಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಜನರಿಗೆ ತಿಳಿಸಿರುವ ಅವರು, ಸರಳವಾಗಿ ಹೇಳುವುದಾದರೆ, ನೀವು ದುಬಾರಿ ಬೆಲೆ ಕೊಟ್ಟು ಪೆಟ್ರೋಲ್ ಖರೀದಿಸುತ್ತಿದ್ದೀರಿ, ಆದರೆ ನಿಮ್ಮ ವಾಹನದ ಟ್ಯಾಂಕ್ಗೆ ಎಥೆನಾಲ್ ತುಂಬಲಾಗುತ್ತಿದೆ. ಇದರಿಂದ ನಷ್ಟ ಯಾರಿಗೆ? ನಿಮಗೇ! ನಿಮ್ಮ ವಾಹನವು ಇಷ್ಟೊಂದು ಪ್ರಮಾಣದ ಎಥೆನಾಲ್ ಅನ್ನು ತಡೆದುಕೊಳ್ಳುವಂತೆ ವಿನ್ಯಾಸಗೊಂಡಿಲ್ಲ.
ಇದರ ಪರಿಣಾಮವಾಗಿ ವಾಹನದ ಮೈಲೇಜ್ ಕಡಿಮೆಯಾಗುತ್ತದೆ ಮತ್ತು ಪದೇ ಪದೇ ಮೆಕ್ಯಾನಿಕ್ ಬಳಿಗೆ ಹೋಗಬೇಕಾದ ಪರಿಸ್ಥಿತಿ ಎದುರಾಗುತ್ತದೆ. ನೀವು ಬಹಳ ಉತ್ಸಾಹದಿಂದ ಖರೀದಿಸಿದ ವಾಹನವು ಹಾಳಾಗುತ್ತಿದೆ. ಇದಲ್ಲದೆ, ಪೆಟ್ರೋಲ್ ಬಂಕ್ಗಳಲ್ಲಿ ನಿಮ್ಮ ವಾಹನಕ್ಕೆ ಏನು ತುಂಬಲಾಗುತ್ತಿದೆ ಎಂಬುದರ ಬಗ್ಗೆ ಯಾವುದೇ ಸೂಚನೆ ಇಲ್ಲ, ಗ್ರಾಹಕರಿಗೆ ಬೇರೆ ಆಯ್ಕೆಯೂ ಇಲ್ಲ ಎಂದು ಹೇಳಿದ್ದಾರೆ.
ಮುಂದುವರೆದು ಪ್ರಧಾನಿ ಮೋದಿಯವರಿಗೆ ಪ್ರಶ್ನಿಸಿರುವ ಅವರು, ಮೋದಿ ಅವರೇ, ಈ ಬಗ್ಗೆ ನಮಗೆ ಉತ್ತರಿಸಿ, ದೇಶದ ವಾಹನಗಳ ಟ್ಯಾಂಕ್ಗೆ ನೀವು ಏನು ತುಂಬಿಸುತ್ತಿದ್ದೀರಿ? ಪೆಟ್ರೋಲ್ನಲ್ಲಿ ವಾಸ್ತವವಾಗಿ ಎಷ್ಟು ಎಥೆನಾಲ್ ಇದೆ? ಶೇಕಡಾ 20ಕ್ಕಿಂತ ಹೆಚ್ಚು ಎಥೆನಾಲ್ ಬೆರೆಸುತ್ತಿರುವ ಕಂಪನಿಗಳ ವಿರುದ್ಧ ಯಾವಾಗ ಕ್ರಮ ಕೈಗೊಳ್ಳುತ್ತೀರಿ? ಚರ್ಚೆಯ ಸವಾಲು ಇನ್ನೂ ಇದೆ. ಈ ವಿಷಯವನ್ನು ಅದಕ್ಕೆ ಸೇರಿಸಿಕೊಳ್ಳೋಣ. ನಿಮ್ಮ ನೀತಿಗಳಿಂದ ನಿಜವಾಗಿಯೂ ಲಾಭ ಪಡೆಯುತ್ತಿರುವವರು ಯಾರು? ಎಂದು ಕಿಡಿಕಾರಿದ್ದಾರೆ.
ಕರ್ನಾಟ ಕಾಂಗ್ರೆಸ್ ಸರ್ಕಾರವು, ಶುಕ್ರವಾರ(ನ. 06) ಇ20 ಪೆಟ್ರೋಲ್ಗೆ ಸಂಬಂಧಿಸಿದಂತೆ ಆಘಾತಕಾರಿ ಸಂಗತಿಗಳನ್ನು ಬಹಿರಂಗಪಡಿಸಿದೆ. ಪೆಟ್ರೋಲ್ನಲ್ಲಿ ಶೇ.20ರಷ್ಟು ಎಥೆನಾಲ್ ಅನ್ನು ಬೆರೆಸಬೇಕಿದ್ದರೂ, ಕೆಲವು ತೈಲ ಕಂಪನಿಗಳು ನಿಗದಿತ ಮಿತಿಗಿಂತ ಹೆಚ್ಚು ಎಥೆನಾಲ್ ಅನ್ನು ಮಿಕ್ಸಿಂಗ್ ಮಾಡುತ್ತಿವೆ ಎಂದು ಆರೋಪಿಸಿದೆ (ಏಜೆನ್ಸೀಸ್).