ಧಮ್​ ಹೊಡೆಯೋ ಮಂದಿ ತುಟಿ ಸುಟ್ಟಿದ ಐಟಿಸಿ! ಒಂದೇ ವರ್ಷದಲ್ಲಿ 2ನೇ ಬಾರಿ ಬೆಲೆ ಏರಿಕೆ | Cigarette Prices Hike 
ದೇಶ

ಧಮ್​ ಹೊಡೆಯೋ ಮಂದಿ ತುಟಿ ಸುಟ್ಟಿದ ಐಟಿಸಿ! ಒಂದೇ ವರ್ಷದಲ್ಲಿ 2ನೇ ಬಾರಿ ಬೆಲೆ ಏರಿಕೆ | Cigarette Prices Hike

ನವದೆಹಲಿ: ಸಿಗರೇಟ್ ತಯಾರಕ ಸಂಸ್ಥೆಯಾದ ಐಟಿಸಿ (ITC) ಪ್ರಮುಖ ನಿರ್ಧಾರವೊಂದನ್ನು ಕೈಗೊಂಡಿದ್ದು, ವರ್ಷದ ಕೊನೆಯಲ್ಲಿ ಮತ್ತೊಮ್ಮೆ ದಿಢೀರ್​ ಬೆಲೆಯನ್ನು ಏರಿಸಿದೆ. ತನ್ನ ಜನಪ್ರಿಯ ಬ್ರ್ಯಾಂಡ್​ ಆದ 'ಗೋಲ್ಡ್ ಫ್ಲೇಕ್ ಪ್ರೀಮಿಯಂ' (Gold Flake Premium) ಸಿಗರೇಟ್‌ಗಳ ದರವನ್ನು ಹೆಚ್ಚಿಸುವ ಮೂಲಕ ತನ್ನ ಗ್ರಾಹಕರ ತುಟಿಯನ್ನು ಸುಟ್ಟಿದೆ.

ಪ್ರತಿ ಪ್ಯಾಕೆಟ್‌ಗೆ 10 ರೂಪಾಯಿಗಳಷ್ಟು ಬೆಲೆ ಏರಿಕೆಯಾದ ಬೆನ್ನಲ್ಲೇ ಗುರುವಾರ ಷೇರು ಮಾರುಕಟ್ಟೆಯಲ್ಲಿ ಸಿಗರೇಟ್ ಕಂಪನಿಗಳ ಷೇರುಗಳು ಕೂಡ ಕೊಂಚ ಚೇತರಿಕೆ ಕಂಡಿವೆ. ದಿನದ ವಹಿವಾಟಿನಲ್ಲಿ ಐಟಿಸಿ ಮತ್ತು ಗಾಡ್‌ಫ್ರೆ ಫಿಲಿಪ್ಸ್ ಇಂಡಿಯಾ ಕಂಪನಿಗಳ ಷೇರುಗಳು ಶೇ.4ರಷ್ಟು ಏರಿಕೆಯಾಗಿವೆ. ತೆರಿಗೆ ಹೊರೆ ಹೆಚ್ಚಾಗಿರುವುದು ಮತ್ತು ಕಾನೂನುಬದ್ಧ ಸಿಗರೇಟ್ ಮಾರುಕಟ್ಟೆಯಲ್ಲಿ ಮಾರಾಟದ ಒತ್ತಡ ಉಂಟಾಗಿರುವುದರಿಂದ ಈ ಬೆಲೆ ಏರಿಕೆಗೆ ಅನಿವಾರ್ಯ ಎನ್ನಲಾಗಿದೆ.

125-135 ರೂ.ಗೆ ಹೆಚ್ಚಳ

ಮಾರುಕಟ್ಟೆ ಮೂಲಗಳ ಪ್ರಕಾರ, 60ರಿಂದ 70 ಮಿ.ಮೀ ಉದ್ದವಿರುವ 'ಗೋಲ್ಡ್ ಫ್ಲೇಕ್ ಪ್ರೀಮಿಯಂ ರೆಗ್ಯುಲರ್ ಸೈಜ್ ಫಿಲ್ಟರ್ ಟಿಪ್ಡ್' (RSFT) ಸಿಗರೇಟ್‌ಗಳ 10 ಪ್ಯಾಕೆಟ್‌ಗಳ ಬೆಲೆಯನ್ನು ಐಟಿಸಿ 125 ರೂ.ಯಿಂದ 135 ರೂ.ಗೆ ಹೆಚ್ಚಿಸಿದೆ. ಇದು ಸುಮಾರು ಶೇ.8ರಷ್ಟು ಏರಿಕೆಯಾಗಿದೆ. ಹೊಸ ಬೆಲೆಗಳನ್ನು ಹೊಂದಿರುವ ಸಿಗರೇಟ್ ದಾಸ್ತಾನುಗಳು ನವೆಂಬರ್ ನಾಲ್ಕನೇ ವಾರದ ವೇಳೆಗೆ ಗೋದಾಮುಗಳನ್ನು ತಲುಪಲಿವೆ.

2026ರಲ್ಲಿ ಐಟಿಸಿ 'ಗೋಲ್ಡ್ ಫ್ಲೇಕ್ ಪ್ರೀಮಿಯಂ' ಬ್ರ್ಯಾಂಡ್​ನ ಬೆಲೆಯನ್ನು ಹೆಚ್ಚಿಸುತ್ತಿರುವುದು ಇದು ಎರಡನೇ ಬಾರಿಯಾಗಿದೆ. ಇದಕ್ಕೂ ಮೊದಲು, ಜೂನ್ ತಿಂಗಳಲ್ಲಿ ಪ್ರತಿ ಪ್ಯಾಕೆಟ್ ಬೆಲೆಯನ್ನು 115 ರೂ.ಯಿಂದ 125 ರೂಪಾಯಿಗೆ ಏರಿಸಲಾಗಿತ್ತು. ಈಗ ಮತ್ತೆ 10 ರೂಪಾಯಿ ಏರಿಕೆ ಆಗಿರುವುದರಿಂದ, ಈ ವರ್ಷದ ಆರಂಭಿಕ ಬೆಲೆಗೆ ಹೋಲಿಸಿದರೆ ಒಟ್ಟು ಏರಿಕೆ ಸುಮಾರು ಶೇ.17.4ರಷ್ಟು ಹೆಚ್ಚಾಗಿದೆ.

ಶೇ.52ರಷ್ಟು ಏರಿಕೆ

ಬೆಲೆ ಏರಿಕೆಯ ಸುದ್ದಿಯ ಹಿನ್ನೆಲೆಯಲ್ಲಿ, ಗುರುವಾರದ ವಹಿವಾಟಿನಲ್ಲಿ ಐಟಿಸಿ ಷೇರುಗಳು ಶೇ.1.61ರಷ್ಟು ಏರಿಕೆಯಾಗಿ 289.10 ರೂಪಾಯಿಯನ್ನು ತಲುಪಿವೆ. ಮತ್ತೊಂದೆಡೆ, ಗಾಡ್‌ಫ್ರೆ ಫಿಲಿಪ್ಸ್ ಇಂಡಿಯಾ ಷೇರುಗಳು ಶೇ.52ರಷ್ಟು ಏರಿಕೆಯಾಗಿ 1,889 ರೂಪಾಯಿಗೆ ತಲುಪಿವೆ. ಸಿಗರೇಟ್‌ಗಳ ಮೇಲಿನ ತೆರಿಗೆ ಗಣನೀಯವಾಗಿ ಹೆಚ್ಚಾದ ನಂತರ, ಐಟಿಸಿ ತನ್ನ ಬೆಲೆ ನೀತಿಯನ್ನು ಪರಿಶೀಲಿಸುತ್ತಿದೆ.

ಸೆಪ್ಟೆಂಬರ್ ತ್ರೈಮಾಸಿಕ ಫಲಿತಾಂಶಗಳ ಸಂದರ್ಭದಲ್ಲಿ ಕಂಪನಿಯು ಬಹಿರಂಗಪಡಿಸಿದ ಮಾಹಿತಿಯ ಪ್ರಕಾರ, ಕಾನೂನುಬದ್ಧವಾಗಿ ಮಾರಾಟವಾಗುವ ಸಿಗರೇಟ್‌ಗಳು ಮತ್ತು ಅಕ್ರಮವಾಗಿ ಮಾರಾಟವಾಗುವ ಸಿಗರೇಟ್‌ಗಳ ಬೆಲೆಗಳ ನಡುವಿನ ಅಂತರವು ಹೆಚ್ಚಾಗುತ್ತಿದೆ. ಇದು ಕಾನೂನುಬದ್ಧ ಮಾರುಕಟ್ಟೆಯಲ್ಲಿ ಮಾರಾಟದ ಪ್ರಮಾಣದ ಮೇಲೆ ನಿರಂತರ ಒತ್ತಡವನ್ನು ಉಂಟುಮಾಡುತ್ತಿದೆ ಎಂದು ವರದಿಗಳು ತಿಳಿಸಿವೆ.

ಕೇಂದ್ರ ಸರ್ಕಾರ ತೆರಿಗೆ ಹೊರೆಯನ್ನು ಹೆಚ್ಚಿಸುತ್ತಿರುವ ಪ್ರಸ್ತುತ ಸನ್ನಿವೇಶದಲ್ಲಿ, ಲಾಭವನ್ನು ಕಾಯ್ದುಕೊಳ್ಳುವುದು ಮತ್ತು ಬೆಲೆ ಏರಿಕೆಯ ಪರಿಣಾಮವನ್ನು ಗ್ರಾಹಕರ ಮೇಲೆ ಇಳಿಸುವುದು ಸದ್ಯ ಐಟಿಸಿ ಕಂಪನಿಗೆ ಒಂದು ಸವಾಲಾಗಿದೆ. ಮತ್ತೊಂದೆಡೆ, ವಿದೇಶಗಳಿಂದ ಅಕ್ರಮವಾಗಿ ಆಮದು ಮಾಡಿಕೊಳ್ಳಲಾಗುವ ಸಿಗರೇಟುಗಳಿಂದ ಎದುರಾಗುವ ಪೈಪೋಟಿಯನ್ನು ಎದುರಿಸಲು, ಕಂಪನಿಯು ಹೊಸ ಬಗೆಯ ಉತ್ಪನ್ನಗಳು ಮತ್ತು ಟ್ರೇಡ್‌ಮಾರ್ಕ್‌ಗಳ ಮೂಲಕ ತನ್ನ ಸಿಗರೇಟು ಪೋರ್ಟ್‌ಫೋಲಿಯೊವನ್ನು ಬಲಪಡಿಸಲು ಪ್ರಯತ್ನಿಸುತ್ತಿದೆ.

ದೇಶೀಯ ಮಾರುಕಟ್ಟೆಯಲ್ಲಿ ತೆರಿಗೆ ವ್ಯತ್ಯಾಸದ ಲಾಭ ಪಡೆದುಕೊಳ್ಳುವ ಮೂಲಕ ಅಕ್ರಮ ಸಿಗರೇಟು ವ್ಯವಹಾರವು ಹೆಚ್ಚಾಗುತ್ತಿದೆ ಎಂದು ಐಟಿಸಿ ಸ್ಪಷ್ಟಪಡಿಸಿದೆ. ಇಂತಹ ಅಕ್ರಮ ಸರಕುಗಳನ್ನು ವಶಪಡಿಸಿಕೊಳ್ಳುವ ಪ್ರಕರಣಗಳ ಸಂಖ್ಯೆಯೂ ಹೆಚ್ಚಾಗಿದೆ ಎನ್ನಲಾಗಿದೆ,(ಏಜೆನ್ಸೀಸ್).