ಎಡಿಸಿ ಹುದ್ದೆಯಲ್ಲಿದ್ದುಕೊಂಡು ಮದುವೆ ಆಗಬಹುದೇ? ಮೇಜರ್ ರಿಷಭ್ ಸಿಂಗ್ ಸಂಬ್ಯಾಲ್ ನೀಡಿದ ಉತ್ತರವಿದು...Major Rishabh Singh Sambyal  
ದೇಶ

ಎಡಿಸಿ ಹುದ್ದೆಯಲ್ಲಿದ್ದುಕೊಂಡು ಮದುವೆ ಆಗಬಹುದೇ? ಮೇಜರ್ ರಿಷಭ್ ಸಿಂಗ್ ಸಂಬ್ಯಾಲ್ ನೀಡಿದ ಉತ್ತರವಿದು...Major Rishabh Singh Sambyal

ಪ್ರಮುಖ ಮುಖ್ಯಾಂಶಗಳು

  • ಮೇಜರ್ ರಿಷಭ್ ಸಿಂಗ್ ಸಂಬ್ಯಾಲ್ ಭಾರತೀಯ ಸೇನೆಗೆ ನಿವೃತ್ತಿ ಘೋಷಣೆ
  • ರಾಷ್ಟ್ರಪತಿ ಎಡಿಸಿ ಹುದ್ದೆಗಾಗಿ ಮದುವೆಯನ್ನೇ ತ್ಯಾಗ ಮಾಡಿದ್ದ ಮಾಜಿ ಮೇಜರ್
  • 12 ವರ್ಷಗಳ ಕಾಲ ಭಾರತೀಯ ಸೇನೆಯಲ್ಲಿ ನಿಷ್ಠೆಯಿಂದ ಸೇವೆ ಸಲ್ಲಿಸಿದ ಮೇಜರ್
  • ದೇಶದ ಅತ್ಯುನ್ನತ ಹುದ್ದೆಯ ಗೌರವ ಹೆಚ್ಚಿಸಿದ ಮಾಜಿ ಎಡಿಸಿ ರಿಷಭ್ ಸಿಂಗ್
ನವದೆಹಲಿ: ರಾಷ್ಟ್ರಪತಿ ದ್ರೌಪದಿ ಮುರ್ಮು ಅವರ ಎಡಿಸಿ (Aide-de-Camp) ಆಗಿ ಸೇವೆ ಸಲ್ಲಿಸಿ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಜನಪ್ರಿಯತೆ ಗಳಿಸಿದ್ದ ಮೇಜರ್ ರಿಷಭ್ ಸಿಂಗ್ ಸಂಬ್ಯಾಲ್ ( Major Rishabh Singh Sambyal ), ಭಾರತೀಯ ಸೇನೆಗೆ ನಿವೃತ್ತಿ ಘೋಷಿಸಿದ್ದು, ಅವರ ಇತ್ತೀಚಿನ ಸಂದರ್ಶನವೊಂದು ಈಗ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿದೆ.
ಫ್ರೆಂಚ್ ಭಾಷೆಯಿಂದ ಬಂದಿರುವ 'ಎಡಿಸಿ' ಹುದ್ದೆಯು ರಾಷ್ಟ್ರಪತಿಯವರ ಎಲ್ಲಾ ಅಧಿಕೃತ ಮತ್ತು ವೈಯಕ್ತಿಕ ವ್ಯವಹಾರಗಳನ್ನು ನಿರ್ವಹಿಸುವುದಾಗಿದೆ. ರಾಷ್ಟ್ರಪತಿಯವರ ದಿನಚರಿ, ಕಾರ್ಯಕ್ರಮಗಳ ಶಿಷ್ಟಾಚಾರವನ್ನು ನಿರ್ವಹಿಸುವುದು ಮತ್ತು ಮಾತುಕತೆಯನ್ನು ಸಂಘಟಿಸುವುದು ಎಡಿಸಿ ಹುದ್ದೆಯಲ್ಲಿರುವವರ ಮುಖ್ಯ ಜವಾಬ್ದಾರಿಯಾಗಿದೆ. ಈ ಹುದ್ದೆಯಲ್ಲಿ ಯಾರನ್ನೂ ಸಂಪೂರ್ಣವಾಗಿ ನಂಬಲು ಸಾಧ್ಯವಿಲ್ಲದ ಕಾರಣ ರಾಷ್ಟ್ರಪತಿಯವರ ಭದ್ರತೆ ಹಾಗೂ ಗೌರವವನ್ನು ಕಾಪಾಡಲು ಎಡಿಸಿಗಳು ಸದಾ ಎಚ್ಚರಿಕೆಯಿಂದಿರಬೇಕಾಗುತ್ತದೆ ಎಂದು ಪ್ರಖ್ಯಾತ ಯೂಟ್ಯೂಬರ್​ ರಾಜ್​ ಶಮಾನಿ ಜತೆಗಿನ ಸಂದರ್ಶನದಲ್ಲಿ ಸಂಬ್ಯಾಲ್​ ಅವರು ತಿಳಿಸಿದ್ದಾರೆ.
ರಾಷ್ಟ್ರಪತಿಯವರ ಎಡಿಸಿ ಆಗಿ ಆಯ್ಕೆಯಾದಾಗ ಮೊದಲ ಬಾರಿಗೆ ರಾಷ್ಟ್ರಪತಿಗಳನ್ನು ನೋಡಿದಾಗ ನನಗೆ ನನ್ನ ತಾಯಿಯೇ ನಿಂತಿರುವಂತೆ ಭಾಸವಾಯಿತು ಎಂದು ಮೆಲುಕುಹಾಕಿರುವ ಮೇಜರ್ ರಿಷಭ್, ತಾನು ರಾಷ್ಟ್ರಪತಿಯವರೊಂದಿಗೆ ಕಳೆದ ಮೂರು ವರ್ಷಗಳನ್ನು ಅತ್ಯಂತ ಹೆಮ್ಮೆಯಿಂದ ಕಳೆದಿದ್ದು, ಸ್ವಂತ ತಾಯಿಗಿಂತಲೂ ಹೆಚ್ಚು ಸಮಯವನ್ನು ರಾಷ್ಟ್ರಪತಿಯವರ ಜೊತೆಯೇ ಕಳೆದಿರುವುದಾಗಿ ಸಂಬ್ಯಾಲ್​ ಅವರು ಭಾವುಕರಾಗಿ ನುಡಿದಿದ್ದಾರೆ.
ರಾಷ್ಟ್ರಪತಿಯವರ ಎಡಿಸಿ (ADC) ಆಗಿ ಸೇವೆ ಸಲ್ಲಿಸುವ ಅಧಿಕಾರಿಯ ಕೆಲಸದ ಹೊರೆಯು ಅತ್ಯಂತ ಕಠಿಣ ಮತ್ತು ಬೇಡಿಕೆಯಿಂದ ಕೂಡಿದ್ದು, ವೈಯಕ್ತಿಕ ಜೀವನ ಅಥವಾ ಸಾಮಾಜಿಕ ಒಡನಾಟಕ್ಕೆ ಸಮಯ ಮಾಡಿಕೊಳ್ಳುವುದು ಅವರಿಗೆ ಬಹುತೇಕ ಅಸಾಧ್ಯವಾಗಿರುತ್ತದೆ. ಆ ನಿರ್ದಿಷ್ಟ ಅಧಿಕಾರಾವಧಿಯಲ್ಲಿ ಅವರು ಪ್ರಾಯೋಗಿಕವಾಗಿ ಕುಟುಂಬದ ಕಾರ್ಯಕ್ರಮಗಳು ಅಥವಾ ಮದುವೆಗಳನ್ನು ತಪ್ಪಿಸಿಕೊಳ್ಳುವುದು ಅನಿವಾರ್ಯವಾಗುತ್ತದೆ. ಅವರ ಸಂಪೂರ್ಣ ಆದ್ಯತೆಯು ಶೇ. 100 ರಷ್ಟು ದೇಶ ಸೇವೆಗೆ ಮತ್ತು ತಮ್ಮ ಕರ್ತವ್ಯಗಳ ನಿರ್ವಹಣೆಗೆ ಮಾತ್ರ ಮೀಸಲಾಗಿರುತ್ತದೆ ಎಂದು ಮೇಜರ್ ರಿಷಭ್ ಸಿಂಗ್ ಸಂಬ್ಯಾಲ್ ವಿವರಿಸಿದ್ದಾರೆ.
ತಮ್ಮ ಯೌವನದಲ್ಲೇ ನಿವೃತ್ತಿ ಪಡೆಯಲು ಪ್ರಮುಖ ಕಾರಣವನ್ನು ವಿವರಿಸಿರುವ ಸಂಬ್ಯಾಲ್​ ಅವರು, ಒಬ್ಬ ಮಗನಾಗಿ ತನಗೆ ಕುಟುಂಬದ ಕೆಲವು ಜವಾಬ್ದಾರಿಗಳಿದ್ದು, ದೇಶದ ಸೇವೆ ಮಾಡಿದ ಸಂತೃಪ್ತಿಯೊಂದಿಗೆ ಈಗ ಆ ಜವಾಬ್ದಾರಿಗಳನ್ನು ಪೂರೈಸುವ ಸಮಯ ಬಂದಿದೆ ಎಂದು ಸ್ಪಷ್ಟಪಡಿಸಿದ್ದಾರೆ.
ಎಡಿಸಿ ಹುದ್ದೆಯನ್ನು ಅಲಂಕರಿಸಲು ತಾನು ಮದುವೆಯನ್ನೇ ತ್ಯಾಗ ಮಾಡಬೇಕಾಯಿತು ಎಂದು ಮುಕ್ತವಾಗಿ ಹೇಳಿಕೊಂಡಿರುವ ಸಂಬ್ಯಾಲ್​ ಅವರು, ಆ ಹುದ್ದೆಯಲ್ಲಿದ್ದಾಗ ಸಾಮಾನ್ಯ ಜನರಂತೆ ಹೊರಗೆ ಹೋಗಲು ಸಾಧ್ಯವಿಲ್ಲದ ಕಾರಣ ಹೊರಗಿನ ಪ್ರಪಂಚದೊಂದಿಗೆ ಯಾವುದೇ ಸಂಪರ್ಕ ಇರಲಿಲ್ಲವಾದರೂ, ಆ ಏಕಾಂತವನ್ನು ನಾನು ಪಾಸಿಟಿವ್​ ಆಗಿ ಸ್ವೀಕರಿಸಿ ಪ್ರತಿದಿನ ಕನಿಷ್ಠ ಒಂದು ಗಂಟೆ ಹೊಸ ವಿಷಯಗಳನ್ನು ಕಲಿಯಲು ಬಳಸಿಕೊಂಡೆ ಎಂದು ವಿವರಿಸಿದ್ದಾರೆ.
ಸುಮಾರು 12 ವರ್ಷಗಳ ಕಾಲ ಭಾರತೀಯ ಸೇನೆಯಲ್ಲಿ ನಿಷ್ಠೆಯಿಂದ ಸೇವೆ ಸಲ್ಲಿಸಿ, ದೇಶದ ಅತ್ಯುನ್ನತ ಹುದ್ದೆಯ ಗೌರವವನ್ನು ಹೆಚ್ಚಿಸಿರುವ ಮೇಜರ್ ರಿಷಭ್ ಸಿಂಗ್ ಸಂಬ್ಯಾಲ್ ಅವರ ಈ ಸ್ಪೂರ್ತಿದಾಯಕ ಪಯಣವು ಈಗ ದೇಶಾದ್ಯಂತ ಇರುವ ಯುವಕರಿಗೆ ಮಾದರಿಯಾಗಿದೆ, (ಏಜೆನ್ಸೀಸ್​).