‘ಚುನಾವಣೆಗಳಲ್ಲಿ ಗೆಲ್ಲಲಾಗದ ಇವರು ಅಧಿಕಾರಕ್ಕಾಗಿ ಬೀದಿಗಿಳಿದಿದ್ದಾರೆ.’
‘ವಿರೋಧಪಕ್ಷದ ನಾಯಕ, ಪ್ರಧಾನಮಂತ್ರಿ ನಿವಾಸವನ್ನು ಘೕರಾವ್ ಮಾಡಲು ಹೊರಟಿದ್ದರು.’
‘ಇದು ನಮ್ಮ ಆಂತರಿಕ ಸಮಸ್ಯೆಯಷ್ಟೇ ಆಗಿದ್ದರೆ, ಸುಲಭವಾಗಿ ಪರಿಹರಿಸಬಹುದಿತ್ತು. ಆದರೆ, ಇದರ ಹಿಂದೆ ವಿದೇಶಿ ಶಕ್ತಿಗಳಿವೆ. ಹೀಗಾಗಿ ಇದು ದೇಶದ ಸುರಕ್ಷೆಯ ಸಮಸ್ಯೆಯಾಗಿದೆ.’
ಈ ಮಾತುಗಳನ್ನು ಯಾರು ಯಾವಾಗ ಹೇಳಿದರು? ದೇಶದ ಪ್ರಸಕ್ತ ಪರಿಸ್ಥಿತಿಯನ್ನು ನೋಡಿದರೆ, ಈ ಪ್ರಶ್ನೆಗೆ ಉತ್ತರ ಪ್ರಧಾನಮಂತ್ರಿ ನರೇಂದ್ರ ಮೋದಿ ಅಥವಾ ಅವರ ಮಂತ್ರಿಮಂಡಲದ ಒಬ್ಬರು ಸದಸ್ಯರು ಅಥವಾ ಬಿಜೆಪಿ ಮುಖಂಡರಲ್ಲೊಬ್ಬರು ಹೇಳಿದ್ದಾರೆ ಅನಿಸಿಬಿಡುತ್ತದೆ. ಆದರೆ, ಈ ಮಾತುಗಳನ್ನು ಹೇಳಿದವರು ಮಾಜಿ ಪ್ರಧಾನಮಂತ್ರಿ ಇಂದಿರಾಗಾಂಧಿ! 1975ರ ಜುಲೈ ತಿಂಗಳಲ್ಲಿ ಅವರನ್ನು ಸಂದರ್ಶಿಸಿದ ಬಿಬಿಸಿ ಪತ್ರಕರ್ತರು ‘ಭಾರತದಲ್ಲಿ ತುರ್ತು ಪರಿಸ್ಥಿತಿಯನ್ನು ನೀವು ಘೊಷಿಸಿದ್ದೇಕೆ?’ ಎಂದು ಪ್ರಶ್ನಿಸಿದಾಗ, ಅದಕ್ಕೆ ಉತ್ತರವಾಗಿ ಈ ಮೂರು ಅಂಶಗಳನ್ನು ಇಂದಿರಾ ಉಲ್ಲೇಖಿಸಿದರು. ಹೌದು, ಅಂದಿನ ವಿರೋಧಪಕ್ಷಗಳೆಲ್ಲವೂ ಒಟ್ಟುಗೂಡಿ ಇಂದಿರಾರ ವಿರುದ್ಧ ವರ್ಷದಿಂದಲೂ ಆಂದೋಲನ ಆರಂಭಿಸಿದ್ದವು.
‘ಸಂಪೂರ್ಣ ಕ್ರಾಂತಿ’ ಎಂಬ ಹೆಸರಿನಲ್ಲಿ ಆಂದೋಲನ ಆರಂಭಿಸಿದ್ದ ಜಯಪ್ರಕಾಶ ನಾರಾಯಣ ದೆಹಲಿಯ ರಾಮ್ೕಲಾ ಮೈದಾನದಲ್ಲಿ ಆಂದೋಲನಕಾರರನ್ನು ಉದ್ದೇಶಿಸಿ ಮಾತನಾಡುತ್ತ ತಮ್ಮ ಹಿರಿಯ ಅಧಿಕಾರಿಗಳ ಆಜ್ಞೆಗಳನ್ನು ಧಿಕ್ಕರಿಸುವಂತೆ ಸೈನಿಕರಿಗೆ ಮತ್ತು ಪೊಲೀಸರಿಗೆ ಕರೆ ಕೊಟ್ಟರು ಎಂದೂ ಕೇಳಿದ್ದೇನೆ. ಸಂಸ್ಥಾ ಕಾಂಗ್ರೆಸ್ ನಾಯಕ ಮತ್ತು ಇಂದಿರಾ ವಿರೋಧಿ ಪಾಳಯದ ಪ್ರಮುಖ ನೇತಾರರಾದ ಮುರಾರ್ಜಿ ದೇಸಾಯಿ ಆಗ ಪ್ರಧಾನಮಂತ್ರಿಗಳ ನಿವಾಸವಾಗಿದ್ದ ನಂಬರ್ 1, ಜನಪಥ್ಅನ್ನು ಘೕರಾಯಿಸಲು ಹೊರಟಿದ್ದರು. ಇದೆಲ್ಲದರ ಹಿಂದೆ ಅಮೆರಿಕಾದ ಯುಎಸ್ಎಐಡಿ ಮತ್ತು ಸಿಐಎ ಇದ್ದವು ಎಂಬ ಗುಮಾನಿ ಎಲ್ಲೆಡೆ ಹರಡಿತ್ತು. ಅದಕ್ಕೆ ಕಾರಣ ಇಲ್ಲದಿರಲಿಲ್ಲ. ತಮ್ಮ ವಿರೋಧವನ್ನು ನಿರ್ಲಕ್ಷಿಸಿ ಪಾಕಿಸ್ತಾನವನ್ನು ಎರಡಾಗಿ ಸೀಳಿದ, ಸೋವಿಯತ್ ಯೂನಿಯನ್ ಜತೆ ಘನಿಷ್ಟ ಸ್ನೇಹ ಬೆಳೆಸಿದ, ಅಣ್ವಸ್ತ್ರ ನಿಷೇಧ ಒಪ್ಪಂದವನ್ನು (ಎನ್ಪಿಟಿ) ಧಿಕ್ಕರಿಸಿ ಅಣ್ವಸ್ತ್ರ ಪರೀಕ್ಷೆ ನಡೆಸಿದ ಇಂದಿರಾರನ್ನು ಕಿತ್ತೊಗೆಯುವುದು ತಮ್ಮ ಬಹುಮುಖ್ಯ ವಿದೇಶಾಂಗ ನೀತಿಗಳಲ್ಲೊಂದು ಎಂದು ಅಧ್ಯಕ್ಷ ರಿಚರ್ಡ್ ನಿಕ್ಸನ್ ಮತ್ತವರ ರಾಷ್ಟ್ರೀಯ ಸುರಕ್ಷಾ ಸಲಹೆಗಾರ ಹೆನ್ರಿ ಕಿಸಿಂಜರ್ ತಿಳಿದಿದ್ದ ಕಾಲ ಅದು. ಅದಕ್ಕೆ ಪೂರಕವಾಗಿ ಮುರಾರ್ಜಿ ದೇಸಾಯಿ 1960ರ ದಶಕದ ಉತ್ತರಾರ್ಧದಿಂದಲೂ ಸಿಐಎ ಏಜೆಂಟ್ ಆಗಿದ್ದರು ಮತ್ತು ಅದಕ್ಕಾಗಿ ಆ ಇಂದಿರಾ-ವಿರೋಧಿ ಭಾರತೀಯ ರಾಜಕಾರಣಿಗೆ ಅಮೆರಿಕಾದ ಗುಪ್ತಚರ ಸಂಸ್ಥೆಯಿಂದ ತಿಂಗಳಿಗೆ 20,000 ಡಾಲರ್ಗಳು ಸಂದಾಯವಾಗುತ್ತಿದ್ದವು ಎನ್ನುವುದು ದೇಸಾಯಿ ಸಾಯುವುದಕ್ಕೂ ಎಷ್ಟೋ ವರ್ಷಗಳ ಮೊದಲಿನಿಂದಲೂ ಈ ದೇಶದಲ್ಲಿ ಹರಿದಾಡುತ್ತಿದ್ದ ಸುದ್ದಿ.
ಈಗ ವರ್ತಮಾನಕ್ಕೆ ಬರೋಣ, 1975ರಂತೆಯೇ 2026 ಸಹ ಇರುವುದನ್ನು ಗುರುತಿಸೋಣ.
ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು ಬಿಜೆಪಿ ಚುನಾವಣೆಗಳಲ್ಲಿ ಮೋಸವೆಸಗಿದೆ ಮತ್ತು ‘ವೋಟ್ಚೋರಿ’ ಮಾಡಿದೆ ಎಂದು ಮತ್ತೆ ಮತ್ತೆ ಆರೋಪಿಸಿ, ಅದಕ್ಕೆ ಯಾವ ಆಧಾರವನ್ನೂ ನೀಡದೆ, ‘ನೀವು ವೋಟ್ಚೋರಿ ಮಾಡಿಲ್ಲ ಎಂದು ಸಾಬೀತುಪಡಿಸಿ!’ ಎಂದು ಮೋದಿಯವರನ್ನೇ ಪ್ರಶ್ನಿಸುವ ವಿಚಿತ್ರ ಹಾಗೂ ನಗೆಪಾಟಲಿನ ತರ್ಕದ ರಾಹುಲ್ ಗಾಂಧಿ..
‘ಇನ್ನು ಮುಂದೆ ಈ ದೇಶದ ಪ್ರಜಾಪ್ರಭುತ್ವದ ಭವಿಷ್ಯ ನಿರ್ಧಾರವಾಗುವುದು ಸಂಸತ್ನಲ್ಲಿ ಅಲ್ಲ, ಬೀದಿಯಲ್ಲಿ!’ ಎಂದು ಪ್ರಜಾಪ್ರಭುತ್ವ-ವಿರೋಧಿ ಹೇಳಿಕೆ ನೀಡುವ ಯೋಗೇಂದ್ರ ಯಾದವ್..
‘ಹೌದು, ಸರ್ಕಾರ ಬದಲಾವಣೆ ನಮ್ಮ ಉದ್ದೇಶ’ ಎಂದು ಘೊಷಿಸುವ ವಕೀಲ ಪ್ರಶಾಂತ ಭೂಷಣ್..
‘ಬಂಗ್ಲಾ ದೇಶದ ಆಂದೋಲನಕಾರರು ನಮಗೆ ದಾರಿ ತೋರಿದ್ದಾರೆ, ಅದಕ್ಕಾಗಿ ಅವರಿಗೆ ನಾವು ಕೃತಜ್ಞರಾಗಿದ್ದೇವೆ!’ ಎಂದು ಹೇಳುವ ಎಡಪಂಥೀಯ ವಿದ್ಯಾರ್ಥಿ ನಾಯಕಿ ನೇಹಾ ಬೋರಾ..
ಸಿಇಟಿ ಪೇಪರ್ ಲೀಕ್ ವಿಷಯವೆತ್ತಿಕೊಂಡು ಜಂತರ್ವುಂತರ್ನಲ್ಲಿ ಪ್ರದರ್ಶನ ನಡೆಸಲು ಒಂದು ದಿನ ಬೆಳಿಗ್ಗೆ 10ರಿಂದ ಸಂಜೆ 5ರವರೆಗೆ ಅನುಮತಿ ಪಡೆದು, ಅದನ್ನು ತಿಂಗಳುಗಟ್ಟಲೇ ಹಗಲು ರಾತ್ರಿ ಎನ್ನದೇ ನಡೆಸಿ, ಸರಕಾರದ ಮೇಲೆ ಒತ್ತಡ ಹೇರಿ ಶಿಕ್ಷಣ ಮಂತ್ರಿಗಳ ರಾಜೀನಾಮೆ ಪಡೆದು, ಸ್ಟಾರ್ ಹೋಟೆಲ್ನಲ್ಲಿ ಮೋಜು ಮಾಡಿದ ಮೇಲೆ ಮುಖ್ಯಚುನಾವಣಾಧಿಕಾರಿ, ಪ್ರಧಾನಮಂತ್ರಿ, ಭಾರತದ ಮುಖ್ಯ ನ್ಯಾಯಾಧೀಶರ ವಿರುದ್ಧವಾಗಿ ಆಂದೋಲನ ವಿಸ್ತರಿಸಿ, ಬಂಧನಕ್ಕೊಳಗಾಗಿ, ಮುಚ್ಚಳಿಕೆ ಬರೆದುಕೊಟ್ಟಮೇಲೂ ಆ ಮುಚ್ಚಳಿಕೆಯನ್ನೇ ಕಸದ ಬುಟ್ಟಿಗೆ ಎಸೆದು ಮತ್ತೆ ನಿಯಮಗಳನ್ನು ಉಲ್ಲಂಘಿಸಿ ಯಾವ ನಿಯಮಕ್ಕೂ ತಾವು ಬೆಲೆಕೊಡುವವರಲ್ಲ ಎಂದು ತೋರಿಸಿಕೊಳ್ಳುವ ಕಾಕ್ರೋಚ್ ಜನತಾಪಾರ್ಟಿ ನಾಯಕವರ್ಗ..
ಇಷ್ಟೂ ಜನ ಒಟ್ಟುಗೂಡಿದರೆ, ಏನಾಗಬಹುದು? ಎನ್ನುವುದನ್ನು ನಾವು ಅ. 10ರ ಮಹಾಲಯ ಅಮವಾಸ್ಯೆಯಿಂದಲೂ ನೋಡುತ್ತಲೇ ಇದ್ದೇವೆ. ಇದೇ ಸಮಯದಲ್ಲಿ ಯೂರೋಪ್ನ ಫ್ರಾನ್ಸ್, ಬೆಲ್ಜಿಯಂ, ಪೋರ್ಚುಗಲ್, ಇಟಲಿ, ಅಲ್ಬೇನಿಯಾ ದೇಶಗಳು ವ್ಯಾಪಕ ಆಂದೋಲನಗಳಲ್ಲಿ ಸಿಲುಕಿಹೋಗಿವೆ. ಫ್ರಾನ್ಸ್ನಲ್ಲಂತೂ ಅದು ವಿಕೋಪಕ್ಕೆ ಹೋಗಿ ಆಂದೋಲನಕಾರರು ಸರ್ಕಾರಿ ಮತ್ತು ಖಾಸಗಿ ಆಸ್ತಿಪಾಸ್ತಿಗಳಿಗೆ ಹಾನಿ ಎಸಗಿದ್ದಾರೆ, ಅಂಗಡಿ-ಮುಂಗಟ್ಟುಗಳನ್ನು ಲೂಟಿ ಮಾಡಿದ್ದಾರೆ, ಕಟ್ಟಡಗಳಿಗೆ ಬೆಂಕಿ ಹಚ್ಚಿದ್ದಾರೆ, ಸುರಕ್ಷಾಪಡೆಗಳು ಸುಮಾರು 1800 ದಂಗೆಕೋರರನ್ನು ಬಂಧಿಸಿವೆ.
ಇದೆಲ್ಲವನ್ನೂ ಮಾಡುತ್ತಿರುವುದು ಹದಗೆಟ್ಟ ಶಿಕ್ಷಣ ವ್ಯವಸ್ಥೆಯಿಂದ ಬೇಸತ್ತ ವಿದ್ಯಾರ್ಥಿಗಳು ಎಂದು ದೊಡ್ಡದಾಗಿ ಪ್ರಚಾರವಾದರೂ ಅದರಲ್ಲಿ ಹುರುಳಿಲ್ಲ ಎನ್ನುವುದು ಬೆಳಕಿಗೆ ಬಂದಿದೆ. ಫಾಕ್ಸ್ ನ್ಯೂಸ್ನ ತನಿಖಾವರದಿಯ ಪ್ರಕಾರ ಫ್ರಾನ್ಸ್ನ ಹಿಂಸಾತ್ಮಕ ಗಲಭೆಗಳಲ್ಲಿ ಭಾಗಿಯಾಗಿರುವುದು 54 ಸಂಘಟನೆಗಳು. ಇವುಗಳಲ್ಲಿ 16 ಮಾತ್ರ ವಿದ್ಯಾರ್ಥಿ ಸಂಘಟನೆಗಳು. ಅವುಗಳಲ್ಲಿ ಕಮ್ಯುನಿಸ್ಟ್ ಮತ್ತು ಇಸ್ಲಾಮಿಕ್ ವಿದ್ಯಾರ್ಥಿಗಳ ಸಂಘಟನೆಗಳೂ ಸೇರಿವೆ. ಇನ್ನುಳಿದ 38 ಸಂಘಟನೆಗಳು ದೇಶ ವಿದೇಶಗಳ ಕಾರ್ವಿುಕ ಒಕ್ಕೂಟಗಳು, ಎಡಪಂಥೀಯ ಮತ್ತು ತಥಾಕಥಿತ ಪ್ರಗತಿಪರ ಗುಂಪುಗಳು ಮತ್ತು ಉತ್ತರ ಆಫ್ರಿಕಾ ಹಾಗೂ ಪಶ್ಚಿಮ ಏಷ್ಯಾದ ಮುಸ್ಲಿಂ ವಲಸಿಗರ ಪರವಾಗಿ ಕೆಲಸ ಮಾಡುವ ಸಂಘಟನೆಗಳು.
‘ಗಾರ್ಡನ್ ಆಫ್ ದ ವರ್ಡ್’ ಎಂದು ತನ್ನನ್ನು ತಾನು ಕರೆದುಕೊಂಡು ಬೀಗುತ್ತಿದ್ದ ಯೂರೋಪಿಗೆ ಇಂಥಾ ಸ್ಥಿತಿ! ಇಂತಹದು ನಮ್ಮ ಭಾರತದಲ್ಲಿ ಆಗಬಹುದಿತ್ತೇ? ಅರ್ಧ ಶತಮಾನದ ಹಿಂದೆ ತುರ್ತು ಪರಿಸ್ಥಿಯನ್ನು ಹೇರಲು ಇಂದಿರಾರನ್ನು ಪ್ರೇರೇಪಿಸಿದಂತಹ ವ್ಯಕ್ತಿಗಳು ಇಂದು ಸಹ ರಾಷ್ಟ್ರರಾಜಕಾರಣದಲ್ಲಿ ಕಾಣಸಿಗುತ್ತಿರುವುದನ್ನು ಈಗಾಗಲೇ ಸೂಚ್ಯವಾಗಿ ನಿಮ್ಮ ಮುಂದಿರಿಸಿದ್ದೇನೆ. ಅವರು ನಿರ್ವಿುಸುತ್ತಿರುವ ಸನ್ನಿವೇಶಗಳನ್ನು ಈಗ ಗಮನಿಸೋಣ.
ರಾಹುಲ್ಗಾಂಧಿ ಮತ್ತಿತರ ಕಾಂಗ್ರೆಸ್ ನಾಯಕರು ದೇಶದ ವಿವಿಧ ಸಂಸ್ಥೆಗಳ ಮೇಲೆ ಜನತೆಯ ವಿಶ್ವಾಸವನ್ನು ಕುಗ್ಗಿಸುವ ಪ್ರಯತ್ನಗಳನ್ನು ಮತ್ತೆ ಮತ್ತೆ ನಡೆಸುತ್ತಲೇ ಇದ್ದಾರೆ. ಮಾಜಿ ಸೇನಾ ದಂಡನಾಯಕ ಹಾಗೂ ಮಾಜಿ ರಕ್ಷಣಾ ಸೇವೆಗಳ ಮುಖ್ಯಸ್ಥರಾದ ಜ. ಬಿಪಿನ್ ರಾವತ್ರನ್ನು ‘ಸಡಕ್ ಕಾ ಗೂಂಡಾ’ ಎಂದು ಕರೆದಿದ್ದಾರೆ; ಉರಿ ಸರ್ಜಿಕಲ್ ದಾಳಿ, ಬಾಲಾಕೋಟ್ ವಾಯುದಾಳಿ ಮತ್ತು ಆಪರೇಶನ್ ಸಿಂಧೂರ ಬಗ್ಗೆ ಪ್ರಶ್ನೆಗಳನ್ನೆತ್ತಿದ್ದಾರೆ, ಜಗತ್ತನ್ನೇ ನಿಬ್ಬೆರಗಾಗಿಸಿದ ಮತ್ತು ಅಣ್ವಸ್ತ್ರ ರಾಷ್ಟ್ರವಾದ ಪಾಕಿಸ್ತಾನ ಕದನವಿರಾಮಕ್ಕಾಗಿ ಮೊರೆ ಇಡುವಂತೆ ಮಾಡಿದ ಅದನ್ನು ಚುಟ್ಪುಟ್ ಘಟನೆಗಳೆಂದು ಮೂದಲಿಸಿದ್ದಾರೆ; ಸೇನೆಯ ನಂತರ ರಫಾಯಲ್ ಯುದ್ಧವಿಮಾನಗಳ ಖರೀದಿಯ ವಿಷಯದಲ್ಲಿ ಅರ್ತಾಕ ಪ್ರಶ್ನೆಗಳನ್ನೆತ್ತಿದ್ದಾರೆ. ಹೀಗೆ ರಾಷ್ಟ್ರರಕ್ಷಣೆಯ ಜವಾಬ್ದಾರಿ ಹೊತ್ತ ರಕ್ಷಣಾ ಪಡೆಗಳು ಮತ್ತು ಅವುಗಳ ಸಾಮರ್ಥ್ಯದ ಬಗ್ಗೆ ಜನತೆಯಲ್ಲಿ ಅಪನಂಬಿಕೆ ಹುಟ್ಟಿಸುವ ದೇಶವಿರೋಧಿ ಪ್ರಯತ್ನದ ಜತೆಜತೆಗೆ ನಮ್ಮ ಶತ್ರು ದೇಶಗಳ ಪರವಾದ ನಡೆಗಳನ್ನೂ ಪ್ರದರ್ಶಿಸಿದ್ದಾರೆ.
ಮೋದಿ ಸರ್ಕಾರವನ್ನು ಇಳಿಸಿ ನಾವು ಅಧಿಕಾರಕ್ಕೇರಲು ಸಹಾಯ ಮಾಡಿ ಎಂದು ಪಾಕಿಸ್ತಾನವನ್ನು ಕೇಳುವುದರೊಂದಿಗೆ ಚೀನಾದೊಂದಿಗಿನ ದೊಕ್ಲಾಮ್ ಬಿಕ್ಕಟ್ಟಿನ ಸಂಧರ್ಭದಲ್ಲಿ ನವದೆಹಲಿಯಲ್ಲಿನ ಚೀನಿ ರಾಯಭಾರ ಕಚೇರಿಗೆ ಗುಟ್ಟಾಗಿ ಭೇಟಿ ಇತ್ತು ಹಕ್ಕಾ ನೂಡಲ್ಸ್ ಬಾರಿಸಿ ಬಂದಿದ್ದಾರೆ. ಕಾಂಗ್ರೆಸ್ ನೇತಾರರು ಸೇನೆ ಮತ್ತು ರಾಷ್ಟ್ರರಕ್ಷಣೆಯ ಕುರಿತಾಗಿ ಇಂತಹ ಋಣಾತ್ಮಕ ನಡೆಗಳನ್ನು ಪ್ರದರ್ಶಿಸುವುದರೊಂದಿಗೆ ಈಗ ಮುಖ್ಯ ಚುನಾವಣಾಧಿಕಾರಿಗಳನ್ನು ಅಪರಾಧಿ ಸ್ಥಾನದಲ್ಲಿ ನಿಲ್ಲಿಸಿ ಅವರ ಮೇಲೆ ತಾವು ಮಾಡುತ್ತಿರುವ ಆಪಾದನೆಗಳನ್ನು ಒಪ್ಪಿಕೊಂಡು ತನಿಖೆಯಲ್ಲಿ ಅಪೂ›ವರ್ ಆಗುವಂತೆ ಹೇಳುವ ಮಟ್ಟಕ್ಕೆ ಬಂದಿದ್ದಾರೆ. ಹೀಗೆ ದೇಶದ ಎಲ್ಲ ಪ್ರಮುಖ ಸಂಸ್ಥೆಗಳನ್ನು ಅಪರಾಧಿ ಸ್ಥಾನದಲ್ಲಿ ನಿಲ್ಲಿಸಿ ಆ ಮೂಲಕ ಮೋದಿ ಸರ್ಕಾರದ ಬಗೆಗೂ ಜನತೆ ವಿಶ್ವಾಸ ಕಳೆದುಕೊಳ್ಳುವಂತೆ ಮಾಡುವ ಪ್ರಯತ್ನ ಇದಾಗಿದೆ. ಈ ಅರ್ಥದಲ್ಲಿ ಇಂದು ಕಾಂಗ್ರೆಸ್ ವರ್ತಿಸುತ್ತಿರುವ ಬಗೆ ಅಂದು ವಿರೋಧ ಪಕ್ಷಗಳು ಇಂದಿರಾ ಸರಕಾರದ ವಿರುದ್ಧ ವರ್ತಿಸಿದ ಬಗೆಗಿಂತಲೂ ಕೀಳುಮಟ್ಟದ್ದಾಗಿವೆ.
ಈ ಪ್ರಯತ್ನಗಳು ‘ರೆಜೀಮ್ ಚೇಂಜ್’ಗಾಗಿ ಎಂದು ವಕೀಲ ಪ್ರಶಾಂತ ಭೂಷಣ ಮತ್ತು ಕಾಂಗ್ರೆಸ್ ರಾಜ್ಯಸಭಾ ಸದಸ್ಯ ಪವನ್ಖೇರಾ ಹೇಳುವುದರ ಅರ್ಥ ಮೋದಿ ಸರಕಾರವನ್ನು ಕೆಳಗಿಳಿಸುವುದಾಗಿದೆ. ಹೀಗೆ ಕೆಳಗಿಳಿಸುವ ಬಗೆಯನ್ನು ಉಗ್ರ ಎಡಪಂಥೀಯ ವಿದ್ಯಾರ್ಥಿ ಸಂಘಟನೆ ಎಐಎಸ್ಎಯ ಅಧ್ಯಕ್ಷೆ ನೇಹಾಬೋರಾ ಹೇಳುತ್ತಾರೆ. ಎರಡು ವರ್ಷಗಳ ಹಿಂದೆ ಬಂಗ್ಲಾದೇಶದಲ್ಲಿ ವಿದ್ಯಾರ್ಥಿಗಳ ಹೆಸರಿನಲ್ಲಿ ಇಸ್ಲಾಮಿಕ್ ಮೂಲಭೂತವಾದಿಗಳು ಬೀದಿಗಿಳಿದು ರಂಪವೆಬ್ಬಿಸಿ, ಮಾಧ್ಯಮ ಕಚೇರಿಗಳಿಗೆ ಬೆಂಕಿ ಇಟ್ಟದ್ದಲ್ಲದೇ ಪ್ರಧಾನಿ ಷೇಕ್ಹಸೀನಾ ದೇಶ ತೊರೆದು ಓಡುವಂತೆ ಮಾಡಿದ್ದು ಈ ಮಾವೋವಾದಿ ವಿದ್ಯಾರ್ಥಿ ನಾಯಕಿಗೆ ದಾರಿತೋರುತ್ತಿದೆಯಂತೆ. ಅಂದರೆ, ಇವರ ಇರಾದೆ ಭಾರತವನ್ನು ಬೃಹದಾಕಾರದ ಬಂಗ್ಲಾದೇಶವನ್ನಾಗಿಸುವುದು, ಅಲ್ಲಿ ಆದ ಹಿಂಸಾಚಾರವನ್ನು ಇಲ್ಲಿ ಬೃಹತ್ಪ್ರಮಾಣದಲ್ಲಿ ಕಾಣುವುದಾಗಿದೆ! ವಿಚಿತ್ರವೆಂದರೆ, ಇಂತಹ ಇರಾದೆಯ ವಿದ್ಯಾರ್ಥಿ ನಾಯಕಿ ರಾಹುಲ್ ಗಾಂಧಿಯವರಿಗೆ ಅಚ್ಚುಮೆಚ್ಚಿನವರಾಗಿದ್ದಾರೆ! ಕಾಂಗ್ರೆಸ್ ನೇತಾರ ತಮ್ಮದೇ ವಿದ್ಯಾರ್ಥಿ ಸಂಘಟನೆ ಎನ್ಎಸ್ಯುುಐ ಪದಾಧಿಕಾರಿಗಳನ್ನು ನಿರ್ಲಕ್ಷಿಸಿ ಈ ಮಾವೋವಾದಿ ವಿದ್ಯಾರ್ಥಿ ನಾಯಕಿಗೆ ಎಲ್ಲೆಲ್ಲಿಯೂ ಪ್ರಾಧಾನ್ಯತೆ ಕೊಟ್ಟದ್ದನ್ನು ನಾವು ನೋಡಿದ್ದೇವೆ.
ಶೇರನಿ ಎಂದು ಬಣ್ಣಿಸಿದ್ದನ್ನು ಕೇಳಿದ್ದೇವೆ. ಸುಪ್ರೀಂ ಕೋರ್ಟಿಗೆ ಹೋದಾಗಲಂತೂ ಹಿರಿಯ ಕಾಂಗ್ರೆಸ್ ನಾಯಕ ಮತ್ತು ಹಲವು ಅರ್ಥಗಳಲ್ಲಿ ಕಾಂಗ್ರೆಸ್ನ ಬೆನ್ನೆಲುಬಿನಂತೆಯೇ ಇರುವ ಕರ್ನಾಟಕದ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ಅವಮಾನಕರವಾಗಿ ಹಿಂದಿರಿಸಿ ನೇಹಾಬೋರಾರನ್ನು ರಾಹುಲ್ಗಾಂಧಿ ಮುಂದಿರಿಸಿದ ಅಕ್ಷಮ್ಯ ಕೃತ್ಯವನ್ನು ಕಂಡು ದೇಶವೇ ದಂಗಾಗಿ ಹೋಯಿತು. ಸಾಧ್ಯವಾದಷ್ಟು ಮಟ್ಟಿಗೆ ಸಮಾಜದ ಎಲ್ಲ ವರ್ಗಗಳನ್ನು ಜತೆಯಲ್ಲಿ ಸೇರಿಸಿಕೊಂಡು ಮುಂದೆ ಹೋಗುತ್ತಿರುವ ಶಿವಕುಮಾರ್ ಅವರಿಗಿಂತ ಕೋಮು ಗಲಭೆಕಾರರನ್ನು ತನಗೆ ದಾರಿತೋರುವವರು ಎಂದು ನಂಬುವ ನೇಹಾಬೋರಾ ಭಾರತದ ಪ್ರಧಾನಮಂತ್ರಿಯಾಗಬಯಸುವ ರಾಹುಲ್ಗಾಂಧಿಯವರಿಗೆ ಹೇಗೆ ಮುಖ್ಯವಾಗುತ್ತಾರೆ ಎಂದು ಅರ್ಥವಾಗುವುದಿಲ್ಲ.
ಇದೆಲ್ಲವನ್ನೂ ರಾಹುಲ್ಗಾಂಧಿ ಮತ್ತವರ ಕಾಂಗ್ರೆಸ್ ಪಕ್ಷ ಮಾಡಿದ್ದು ನವರಾತ್ರಿಯ ಉತ್ಸವಗಳ ಸಂದರ್ಭದಲ್ಲಿ, ಅಂದರೆ ದೇಶದಲ್ಲಿ ವ್ಯಾಪಾರ-ವಹಿವಾಟು ಭಾರಿ ಪ್ರಮಾಣದಲ್ಲಿ ನಡೆಯುವ ದಿನಗಳಲ್ಲಿ! ಇದರರ್ಥ ದೇಶದ ಅರ್ಥವ್ಯವಸ್ಥೆಗೆ ಧಕ್ಕೆಯೊದಗುವಂತೆ ಮಾಡುವುದು, ಅಭಿವೃದ್ಧಿದರವನ್ನು ಕೆಳಗಿಳಿಸುವುದು, ಆ ಮೂಲಕ ಮೋದಿ ಸರ್ಕಾರದ ಜನಪ್ರಿಯತೆಯನ್ನು ಕುಗ್ಗಿಸುವುದು ರಾಹುಲ್ಗಾಂಧಿ ಮತ್ತವರ ಸಹಚರಿಗಳ ಇರಾದೆಯೇ? ಇದನ್ನು ನಿರಾಕರಿಸುವಂತೆ, ನ. 1ರವರೆಗೆ ಯಾವ ಆಂದೋಲನವನ್ನೂ ನಡೆಸದೇ ರಾಜಧಾನಿಯಲ್ಲಿ ವ್ಯಾಪಾರ ವಹಿವಾಟು ಸಹಜವಾಗಿಯೇ ನಡೆಯುವಂತೆ ಮಾಡುವುದಾಗಿ ಕಾಂಗ್ರೆಸ್ ಪಕ್ಷವೇನೋ ನಂತರ ಹೇಳಿತು. ಆದರೆ ಈ ‘ಸನ್ನಡತೆಗೆ’ ನಿಜವಾದ ಕಾರಣದ ಬೆಕ್ಕು ಚೀಲದಿಂದ ಹೊರಬಿದ್ದದ್ದು ಅ. 18ರ ರಾತ್ರಿ ರಾಹುಲ್ಗಾಂಧಿ ಸುದ್ದಿ ಇಲ್ಲದೇ ಹನೋಯ್ಗೆ ವಿಮಾನವೇರಿದಾಗ! ಬಹುಶಃ ನ. 1ರ ಹೊತ್ತಿಗೆ ಹಿಂತಿರುಗಿ ರಾಮ್ೕಲಾ ಮೈದಾನದಲ್ಲಿ ಆಂದೋಲನದ ನೇತೃತ್ವ ವಹಿಸುತ್ತಾರೆ. ಇದು ಹೇಗೆ ಮುಂದುವರೆಯುತ್ತದೆಯೋ ಮತ್ತು ಇದರಿಂದಾಗಿ ನ. 8ರವರೆಗೂ ದೆಹಲಿಯಲ್ಲಿ ದೊಡ್ಡದಾಗಿ ನಡೆಯುವ ದೀಪಾವಳಿ ವ್ಯಾಪಾರವಹಿವಾಟಿಗೆ ಹಾನಿಯಾಗುವುದಿಲ್ಲವೇ?
ಇದೇ ಸಂದರ್ಭದಲ್ಲಿ ಸಿಜೆಪಿ ತನ್ನದೇ ಬೇರೆ ದಾರಿಯಲ್ಲಿ ಆಂದೋಲನ ನಡೆಸಿದೆ. ಇಲ್ಲಿ ನಿಜವಾಗಿ ನಡೆಯುತ್ತಿರುವುದೇನೆಂದರೆ, ಮೋದಿ ವಿರುದ್ಧದ ಗಲಾಟೆಯನ್ನು ಯಾರು ಅತಿ ಹೆಚ್ಚು ಸದ್ದಿನೊಂದಿಗೆ ಮಾಡಬಲ್ಲರೆಂದು ರಾಹುಲ್ ಗಾಂಧಿ ಮತ್ತು ಸಿಜೆಪಿ ನಡುವಿನ ಸ್ಪರ್ಧೆ! ಈ ಕಾರಣದಿಂದಲೇ ಇದು ಜನಬೆಂಬಲವನ್ನು ಗಳಿಸಿಕೊಳ್ಳುವುದರಲ್ಲಿಯೂ ಸೋಲುತ್ತಿದೆ ಮತ್ತು ಇಬ್ಬರ ಬಾಯಿಗಳನ್ನು ಸಂವಿಧಾನಾತ್ಮಕವಾಗಿ ಹಾಗೂ ಕಾನೂನಾತ್ಮಕವಾಗಿ ಬಂದ್ ಮಾಡಲು ಮೋದಿ ಸರ್ಕಾರದ ಮುಂದೆ ಹಲವು ದಾರಿಗಳಿವೆ. ಇವುಗಳನ್ನು ಲೇಖನದ ಮುಂದಿನವಾರ ಎರಡನೆಯ ಭಾಗದಲ್ಲಿ ವಿಶ್ಲೇಷಿಸೋಣ.