ರಾಹುಲ್ ಗಾಂಧಿ ಮತ್ತು ಪ್ರಧಾನಿ ಮೋದಿ 
ದೇಶ

ಹುಡುಗರು ನಿಂದಿಸಿದ್ರೆ ತೊಂದರೆಯಿಲ್ಲ, ಆದರೆ ಹುಡುಗಿಯರು ನಿಂದಿಸಿದ್ರೆ ಸಾಂಸ್ಕೃತಿಕ ಆಘಾತ; ಪ್ರಧಾನಿ ಮೋದಿ ವಿರುದ್ಧ ರಾಹುಲ್ ಗಾಂಧಿ ವಾಗ್ದಾಳಿ | Rahul Gandhi

ಮುಂಬೈ: ದೆಹಲಿಯ ಜಂತರ್​ ಮಂತರ್​ನಲ್ಲಿ ನಡೆದ ಪ್ರತಿಭಟನೆಯಲ್ಲಿ ಹುಡುಗಿಯರು ನಿಂದನೀಯ ಭಾಷೆಗಳನ್ನು ಬಳಸಿದ್ದನ್ನು ಕೇಳಿ ನನಗೆ ಸಾಂಸ್ಕೃತಿಕ ಆಘಾತವಾಯಿತು ಎಂಬ ಪ್ರಧಾನಿ ಮೋದಿಯವರ ಹೇಳಿಕೆಯನ್ನು ಟೀಕಿಸಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ(Rahul Gandhi), ಹುಡುಗರು ಅಸಭ್ಯವಾಗಿ ನಿಂದಿಸಿದ್ರೆ ಯಾವುದೇ ತೊಂದರೆಯಿಲ್ಲ, ಆದರೆ ಹುಡುಗಿಯರು ಅದನ್ನು ಮಾಡಿದ್ರೆ ಅದು ಸಾಂಸ್ಕೃತಿಕ ಆಘಾತವಾಗುತ್ತದೆ ಎಂದು ವಾಗ್ದಾಳಿ ನಡೆಸಿದ್ದಾರೆ.
ಶನಿವಾರ(ಆ. 22) ಸಂಜೆ ಮಹಾರಾಷ್ಟ್ರದ ಪುಣೆಯಲ್ಲಿ ಮಹಿಳೆಯರಿಗಾಗಿ ವಿಶೇಷವಾಗಿ ಆಯೋಜಿಸಲಾಗಿದ್ದ ಛತ್ರೋನ್ ಕಿ ಗೂಂಜ್ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಅವರು, ಪ್ರಶ್ನೆ ಪತ್ರಿಕೆ ಸೋರಿಕೆ ವಿರುದ್ಧದ ಪ್ರತಿಭಟನೆಯಲ್ಲಿ ಹುಡುಗರು, ಹುಡುಗಿಯರು ಇಬ್ಬರೂ ನಿಂದನೀಯ ಭಾಷೆಯನ್ನು ಬಳಸಿದ್ದಾರೆ. ಆದರೆ ಪ್ರಧಾನಿ ಮೋದಿ ಹುಡುಗಿಯರು ಅಂತಹ ಭಾಷೆಯನ್ನು ಬಳಸಿದ್ದನ್ನು ನಿರ್ದಿಷ್ಟವಾಗಿ ಉಲ್ಲೇಖಿಸಿ ಅದನ್ನು ಸಾಂಸ್ಕೃತಿಕ ಆಘಾತ ಎಂದು ಕರೆದಿದ್ದಾರೆ ಎಂದು ಕಿಡಿಕಾರಿದ್ದಾರೆ.
ಪ್ರಧಾನಿ ಮೋದಿಯವರ ವಿಡಿಯೋವನ್ನೂ ಎಲ್​ಇಡಿ ಸ್ಕ್ರೀನ್​ ಮೇಲೆ ತೋರಿಸಿ ಆಕ್ರೋಶ ವ್ಯಕ್ತಪಡಿಸಿದ ಅವರು, ಹುಡುಗರು ಅಸಭ್ಯವಾಗಿ ನಿಂದಿಸಿದ್ರೆ, ಅವರಿಗೆ ಯಾವುದೇ ಸಮಸ್ಯೆಯಿಲ್ಲ. ಮತ್ತು ಅದನ್ನು ಅನುಮತಿಸಲಾಗುತ್ತದೆ. ಆದರೆ ಹುಡುಗಿ ಅದನ್ನು ಮಾಡಿದ್ರೆ, ಸಾಂಸ್ಕೃತಿಕ ಆಘಾತ ಎನ್ನಲಾಗುತ್ತದೆ. ಮತ್ತು ನಾನು ಅವರನ್ನು ಕ್ಷಮಿಸಿದ್ದೇನೆ ಎನ್ನುತ್ತಾರೆ. ಇದನ್ನು ನೋಡಿದ್ರೆ, ಹುಡುಗರಿಗೆ ಸಿಗುವ ಸ್ವಾತಂತ್ರ್ಯ, ಹುಡುಗಿಯರಿಗೆ ಸಿಗಲ್ಲ, ಅವರನ್ನು ನಿರ್ಬಂಧಿಸುವುದನ್ನು ಇದು ಸೂಚಿಸುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಹುಡುಗಿಗೆ ಒಂದು ಸ್ಥಾನವಿದೆ, ಅವಳನ್ನು ಪಂಜರದಲ್ಲಿ ಕೂಡಿಹಾಕಬೇಕು, ನಿಯಂತ್ರಿಸಬೇಕು. ಹಾಗೂ ಅವಳು ಕೆಲಸ ಮಾಡಬಾರದು. ಆದರೆ ಹುಡುಗರಿಗೆ ಸಂಪೂರ್ಣ ಸ್ವಾತಂತ್ರ್ಯ ನೀಡಬೇಕು. ಅವರು ಏನು ಬೇಕಾದರೂ ಮಾಡಬಹುದು, ಅವರು ದೌರ್ಜನ್ಯವೆಸಗಲು ಬಯಸಿದರೆ ದೌರ್ಜನ್ಯವೆಸಗಬಹುದು, ಕೆಲಸ ಮಾಡಲು ಬಯಸಿದರೆ ಕೆಲಸ ಮಾಡಬಹುದು. ಇದ್ಯಾವ ಮನಸ್ಥಿತಿ, ಇಂತಹ ಹಿಂದೂಸ್ತಾನ ನಮಗೆ ಬೇಡ. ಹುಡುಗರು ಮತ್ತು ಹುಡುಗಿಯರು ಇಬ್ಬರೂ ಗೌರವವನ್ನು ಪಡೆಯಬೇಕು ಎಂದು ಹೇಳಿದ್ದಾರೆ.
ಇದೇ ವೇಳೆ ಮಹಿಳೆ ಬಾಲ್ಯದಲ್ಲಿ ತನ್ನ ತಂದೆಗೆ ವಿಧೇಯಳಾಗಿರಬೇಕು, ಯೌವನದಲ್ಲಿ ತನ್ನ ಗಂಡನಿಗೆ ಸೇರಬೇಕು ಹಾಗೂ ವೃದ್ಯಾಪ್ಯದಲ್ಲಿ ಮಕ್ಕಳ ಅಧೀನದಲ್ಲಿರಬೇಕೆಂಬ ಮನಸ್ಮೃತಿ ಶ್ಲೋಕದ ವಿರುದ್ಧ ಕಿಡಿಕಾರಿದ ಅವರು, ಈ ಮಾತುಗಳು ನಾಚಿಗೇಡಿನವು, ಇಂತಹ ಮಾತುಗಳನ್ನು ಹೇಳಬಾರದಿತ್ತು. ಮಹಿಳೆಯರು ಯಾರಿಗೂ ಸೇರಿದವರಲ್ಲ, ನಿಮ್ಮನ್ನು ಹೊರತುಪಡಿಸಿ. ನೀವು ನಿಮ್ಮ ತಂದೆ, ಸಹೋದರ, ಗಂಡ, ಮಗನೊಂದಿಗೆ ಸಂಬಂಧವನ್ನು ಹೊಂದಿದ್ದೀರಿ, ಆದರೆ ನೀವು ಅವರಿಗೆ ಸೇರಿದವರಲ್ಲ, ಮತ್ತು ನೀವು ನಿಮಗೆ ಸೇರಿದವರು ಎಂದಿದ್ದಾರೆ.
ಮಗಳು, ಹೆಂಡತಿ ಅಥವಾ ತಾಯಿಯಾಗುವುದರಲ್ಲಿ ಯಾವುದೇ ತಪ್ಪಿಲ್ಲ, ಆದರೆ ಆ ಸಂಬಂಧಗಳು ಮಹಿಳೆಯ ಸಂಪೂರ್ಣ ಗುರುತನ್ನು ವ್ಯಾಖ್ಯಾನಿಸಲು ಸಾಧ್ಯವಿಲ್ಲ. ಮಹಿಳೆಯರು ದೇಶದ ಅತಿದೊಡ್ಡ ಆಸ್ತಿ. ಅವರು ತಮ್ಮನ್ನು ತಾವು ರಕ್ಷಿಸಿಕೊಳ್ಳಲು ಮತ್ತು ತಮ್ಮ ಮೇಲೆ ನಂಬಿಕೆಯಿಡುವಂತೆ ಒತ್ತಾಯಿಸಿದ್ದಾರೆ. ಮತ್ತು ಗಂಡಾಳ್ವಿಕೆಯ ಪಿತೃಪ್ರಭುತ್ವ ವ್ಯವಸ್ಥೆಯನ್ನು ನಾಶಪಡಿಸುವಂತೆ ಕರೆ ನೀಡಿದರು (ಏಜೆನ್ಸೀಸ್).