AIMIM ಮುಖ್ಯಸ್ಥ ಅಸಾದುದ್ದೀನ್ ಓವೈಸಿ  
ದೇಶ

Asaduddin Owaisi | ನಾನು ಹೇಳಿದ ಹಾಗೇಯೇ ಆಯಿತು...; ಆರ್‌ಜೆಡಿ ವಿರುದ್ಧ ಓವೈಸಿ ವಾಗ್ದಾಳಿ

ಪಾಟ್ನಾ: 2025 ರ ಬಿಹಾರ ಚುನಾವಣೆಯಲ್ಲಿ NDAಯ ಅದ್ಭುತ ಜಯಕ್ಕೆ AIMIM ಮುಖ್ಯಸ್ಥ ಅಸಾದುದ್ದೀನ್ ಓವೈಸಿ(Asaduddin Owaisi) ಮುಖ್ಯಮಂತ್ರಿ ನಿತೀಶ್ ಕುಮಾರ್​ರನ್ನು ಶುಕ್ರವಾರ (ನ.14) ಅಭಿನಂದಿಸಿದ್ದಾರೆ. ಅಲ್ಲದೆ, AIMIM ಅಭ್ಯರ್ಥಿಗಳು ಗೆದ್ದಿರುವ ಮತ್ತು ಮುನ್ನಡೆ ಸಾಧಿಸಿರುವ ಐದು ಸ್ಥಾನಗಳ ಮತದಾರರಿಗೆ ಓವೈಸಿ ಧನ್ಯವಾದ ಅರ್ಪಿಸಿದ್ದಾರೆ.
ಈ ಬಗ್ಗೆ ಮಾತನಾಡಿದ AIMIM ಮುಖ್ಯಸ್ಥ ಓವೈಸಿ, AIMIMಗೆ ಮತ ಹಾಕಿದ್ದಕ್ಕಾಗಿ ಬಿಹಾರದ ಜನರಿಗೆ ನಾನು ಧನ್ಯವಾದ ಹೇಳಲು ಬಯಸುತ್ತೇನೆ. ಅಲ್ಲದೆ, ಆ 5 ಸ್ಥಾನಗಳಲ್ಲಿ ಶ್ರಮಿಸಿದ್ದಕ್ಕಾಗಿ ಎಲ್ಲಾ ಅಭ್ಯರ್ಥಿಗಳು ಮತ್ತು ಪಕ್ಷದ ಸದಸ್ಯರಿಗೆ ನಾನು ಅಭಿನಂದನೆಗಳನ್ನು ಸಲ್ಲಿಸಲು ಬಯಸುತ್ತೇನೆ. ನಾವು ಬಿಹಾರದ ಜನರ ಜನಾದೇಶವನ್ನು ಸ್ವೀಕರಿಸುತ್ತೇವೆ. ನಾನು ಸಿಎಂ ನಿತೀಶ್ ಕುಮಾರ್​ರಿಗೆ ಧನ್ಯವಾದ ಹೇಳಲು ಬಯಸುತ್ತೇನೆ. ನಮ್ಮ ಪಕ್ಷವು ಬಿಹಾರದಲ್ಲಿ ಮಾತ್ರವಲ್ಲದೆ ಸೀಮಾಂಚಲದಲ್ಲಿಯೂ ಸಮೃದ್ಧಿಯನ್ನು ತರಲು ಶ್ರಮಿಸುತ್ತದೆ. ಅಲ್ಲಿನ ಜನರಿಗಾಗಿ ಶಾಲೆಗಳು ಮತ್ತು ಆಸ್ಪತ್ರೆಗಳನ್ನು ನಿರ್ಮಿಸಲಾಗುವುದು. ಸೀಮಾಂಚಲದ ಕಲ್ಯಾಣಕ್ಕಾಗಿ ನಾವು ಕೆಲಸ ಮಾಡುತ್ತೇವೆ ಎಂದು ಹೇಳಿದರು.

ಆರ್‌ಜೆಡಿ ವಿರುದ್ಧ ಓವೈಸಿ ವಾಗ್ದಾಳಿ

ಮುಂದುವರೆದು ಮಾತನಾಡಿದ ಓವೈಸಿ, ನನ್ನ ಮೈತ್ರಿಕೂಟದ ಬಗ್ಗೆ ಬಿಹಾರದ ಜನರನ್ನು ದಾರಿ ತಪ್ಪಿಸಲಾಗುತ್ತಿದೆ ಎಂದು ಹೇಳಿದ ಆರ್‌ಜೆಡಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಆರ್‌ಜೆಡಿ ಬಿಜೆಪಿಯನ್ನು ತಡೆಯಲು ಸಾಧ್ಯವಿಲ್ಲ ಎಂದು ಓವೈಸಿ ತಿಳಿಸಿದ್ದರು.
ಆರ್‌ಜೆಡಿ ಬಿಜೆಪಿಯನ್ನು ತಡೆಯಲು ಸಾಧ್ಯವಿಲ್ಲ ಎಂದು ನಾನು ಯಾವಾಗಲೂ ಹೇಳುತ್ತಿದ್ದೆ. ಬಿಹಾರದ ಜನರು ನನ್ನ ಮೈತ್ರಿಕೂಟದಿಂದ ದಾರಿ ತಪ್ಪಿದ್ದಾರೆ ಮತ್ತು ಈ ಫ್ಯಾಸಿಸ್ಟ್ ಶಕ್ತಿಗಳಿಗೆ ಮತ ಹಾಕಬೇಡಿ ಎಂದು ನಾನು ಮನವಿ ಮಾಡಲು ಬಯಸುತ್ತೇನೆ ಎಂದು ಓವೈಸಿ ಹೇಳಿದರು.

ಬಿಜೆಪಿ ಕಾರ್ಯಕರ್ತರನ್ನು ಉದ್ದೇಶಿಸಿ ಪ್ರಧಾನಿ ಮೋದಿ ಭಾಷಣ

ದೆಹಲಿಯ ಪಕ್ಷದ ಕೇಂದ್ರ ಕಚೇರಿಯಲ್ಲಿ ಕಾರ್ಯಕರ್ತರನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, 2025 ರ ಬಿಹಾರ ಚುನಾವಣೆಯ ದೊಡ್ಡ ಗೆಲುವು, ಪಕ್ಷ ಮತ್ತು ಜನರ ಎನ್‌ಡಿಎ ಸರ್ಕಾರದ ಮೇಲಿಟ್ಟಿರುವ ನಂಬಿಕೆಯ ಫಲಿತಾಂಶ. ಕಟ್ಟಾ ಸರ್ಕಾರ್ ಎಂದಿಗೂ ಹಿಂತಿರುಗುವುದಿಲ್ಲ, ಭವಿಷ್ಯದಲ್ಲಿ ರಾಜ್ಯವು ಅಭೂತಪೂರ್ವ ಬೆಳವಣಿಗೆ ಹೊಂದಲಿದೆ ಎಂದು ಭರವಸೆ ನೀಡಿದರು.
ನಾನು ಚುನಾವಣೆ ಪ್ರಚಾರ ಸಮಯದಲ್ಲಿ ಜಂಗಲ್ ರಾಜ್ ಮತ್ತು ಕಟ್ಟಾ ಸರ್ಕಾರ್ ಬಗ್ಗೆ ಟೀಕಿಸಿ ಮಾತನಾಡುತ್ತಿದ್ದಾಗ, ಆರ್‌ಜೆಡಿ ಯಾವುದೇ ಆಕ್ಷೇಪ ವ್ಯಕ್ತಪಡಿಸಲಿಲ್ಲ. ಇದು ಕಾಂಗ್ರೆಸ್​ನ ಅಸಮಾಧಾನಕ್ಕೆ ಕಾರಣವಾಗಿದೆ ಎಂದರು.
2010 ರ ಬಳಿಕ ಬಿಹಾರವು ಎನ್​ಡಿಎ ಮೈತ್ರಿಕೂಟಕ್ಕೆ ದೊಡ್ಡ ಜನಾದೇಶವನ್ನು ನೀಡಿದೆ, ಎಲ್ಲಾ ಮಿತ್ರಪಕ್ಷಗಳ ಪರವಾಗಿ ಬಿಹಾರದ ಜನರು ನೀಡಿದ ಬೆಂಬಲಕ್ಕೆ ಧನ್ಯವಾಧ ತಿಳಿಸಿದ ಪ್ರಧಾನಿ, ಇಂದು ಬಿಹಾರವು ದೇಶದಲ್ಲಿ ಅತಿ ಹೆಚ್ಚು ಯುವಜನರನ್ನು ಹೊಂದಿರುವ ರಾಜ್ಯಗಳಲ್ಲಿ ಒಂದಾಗಿದೆ, ಇದರಲ್ಲಿ ಪ್ರತಿಯೊಂದು ಧರ್ಮ ಮತ್ತು ಜಾತಿಯ ಯುವಕರು ಸೇರಿದ್ದಾರೆ. ಅವರ ಆಸೆಗಳು, ಆಕಾಂಕ್ಷೆಗಳು ಮತ್ತು ಕನಸುಗಳು ಜಂಗಲ್ ರಾಜ್‌ನ ಹಳೆಯ, ಕೋಮುವಾದದ ಸೂತ್ರವನ್ನೇ ಛಿದ್ರಗೊಳಿಸಿವೆ ಎಂದರು.
ಬಿಹಾರದ ಮತದಾರರು ಅಭಿವೃದ್ಧಿ ಹೊಂದಿದ ಬಿಹಾರಕ್ಕೆ ಮತ ಹಾಕಿದ್ದಾರೆ, ಸಮೃದ್ಧ ಬಿಹಾರಕ್ಕೆ ಮತ ಹಾಕಿದ್ದಾರೆ. ಚುನಾವಣಾ ಪ್ರಚಾರದ ಸಮಯದಲ್ಲಿ ದಾಖಲೆಯ ಮತದಾನಕ್ಕಾಗಿ ಒತ್ತಾಯಿಸಿದ್ದೆ, ಅವರು ನನ್ನ ಮಾತಿನಂತೆ ನಡೆದುಕೊಂಡು ಎಲ್ಲಾ ದಾಖಲೆಗಳನ್ನು ಮುರಿದಿದ್ದಾರೆ. ಇಲ್ಲಿಯವರೆಗೆ ಕಾಂಗ್ರೆಸ್ ಮತ್ತು ಆರ್‌ಜೆಡಿ ನಾಯಕರು ಛಠಿ ಮೈಯಾಗೆ ಅವಮಾನಿಸಿದ್ದಕ್ಕೆ ಕ್ಷಮೆಯಾಚಿಸಿಲ್ಲ. ರಾಜ್ಯದ ಜನ ಆ ಮಾತುಗಳನ್ನು ಎಂದಿಗೂ ಮರೆಯುವುದಿಲ್ಲ. ಬಿಹಾರದ ಹೆಮ್ಮೆ ಮತ್ತು ಗೌರವ ನಮ್ಮ ಮೊದಲ ಆದ್ಯತೆ ಎಂದರು.
ಕಾಂಗ್ರೆಸ್ ಈಗ ಮುಸ್ಲಿಂ ಲೀಗ್ ಮಾವೋವಾದಿ ಕಾಂಗ್ರೆಸ್ ಆಗಿ ಮಾರ್ಪಟ್ಟಿದೆ, ಕೈ ಪಕ್ಷದ ಸಂಪೂರ್ಣ ಕಾರ್ಯಸೂಚಿ ಈಗ ಅದರ ಸುತ್ತಲೇ ಸುತ್ತುತ್ತಿದೆ. ಕಾಂಗ್ರೆಸ್‌ನೊಳಗೂ ಕೂಡ ಪ್ರತ್ಯೇಕ ಬಣ ಸಿದ್ಧವಾಗುತ್ತಿದ್ದು, ಮತ್ತೊಂದು ಪ್ರಮುಖ ವಿಭಜನೆ ಉಂಟಾದರೂ ಅಚ್ಚರಿಪಡಬೇಕಿಲ್ಲ ಎಂದು ಹೇಳಿದರು.
ಈ ದೊಡ್ಡ ಮಟ್ಟದ ಫಲಿತಾಂಶ ಹೊರ ಹೊಮ್ಮಲು ಮಹಿಳೆಯರು ಮತ್ತು ಯುವಕರ ಪಾತ್ರ ದೊಡ್ಡದಿದ್ದು, ಬಿಹಾರದ ಕೆಲವು ಪಕ್ಷಗಳು 'ಎಂವೈ' ( ಮುಸ್ಲಿಂ, ಯಾದವ್​ ) ಎಂಬ ಓಲೈಕೆ ಸೂತ್ರಕ್ಕೆ ಜೋತು ಬಿದ್ದವು, ನಮ್ಮ ಹೊಸ 'ಎಂವೈ' (ಮಹಿಳೆಯರು, ಯುವಕರು) ಸೂತ್ರ ನಮ್ಮ ಮೇಲೆ ಭರವಸೆ ಇಟ್ಟಿದ್ದು, ಅದನ್ನು ನೂತನ ಸರ್ಕಾರ ಉಳಿಸಿಕೊಳ್ಳಲಿದೆ ಎಂದು ಹೇಳಿದರು, (ಏಜೆನ್ಸೀಸ್).