Shashi Tharoor | ಸಂಸದ ಶಶಿ ತರೂರ್​ ಮತ್ತು ಬಿಜೆಪಿ ವಕ್ತಾರ ಶೆಹಜಾದ್ ಪೂನಾವಾಲಾ 
ದೇಶ

ಪ್ರಧಾನಿ ಮೋದಿಗೆ ಶಶಿ ತರೂರ್​ ಶ್ಲಾಘನೆ; ಹಿಂದಿನ ಘಟನೆ ಮೆಲುಕು ಹಾಕಿದ ಬಿಜೆಪಿ ವಕ್ತಾರ, ಏನಿದು ಫತ್ವಾ ವಿವಾದ..? | Shashi Tharoor

ದೆಹಲಿ: ಸೊಮವಾರ ನಡೆದ ರಾಮನಾಥ್ ಗೋಯೆಂಕಾ ಸ್ಮಾರಕ ಉಪನ್ಯಾಸದಲ್ಲಿ ಮಾತನಾಡಿದ್ದ ಪ್ರಧಾನಿ ನರೇಂದ್ರ ಮೋದಿ ಭಾಷಣವನ್ನು, ಸಂಸದ ಶಶಿ ತರೂರ್ ಹೊಗಳಿದ್ದಕ್ಕಾಗಿ ವಿಪಕ್ಷಗಳಿಂದ ಟೀಕೆ ಎದುರಿಸುತ್ತಿರುವ ತರೂರ್​ ಬೆಂಬಲಕ್ಕೆ ನಿಂತಿರುವ ಬಿಜೆಪಿ, ಕಾಂಗ್ರೆಸ್​ ವಿರುದ್ಧ ವಾಗ್ದಾಳಿ ನಡೆಸಿದೆ.
ತಮ್ಮ ಎಕ್ಸ್​ ಖಾತೆಯಲ್ಲಿ ಪೋಸ್ಟ್​ ಹಂಚಿಕೊಂಡಿರುವ ಬಿಜೆಪಿ ವಕ್ತಾರ ಶೆಹಜಾದ್ ಪೂನಾವಾಲಾ, ಈ ಹಿಂದೆ ಶಶಿ ತರೂರ್​ ಬಿಜೆಪಿಯ ಹಿರಿಯ ಎಲ್.ಕೆ. ಅಡ್ವಾಣಿ ಅವರನ್ನು ಹೊಗಳಿದಾಗ ಫತ್ವಾ (ಅಸಹಿಷ್ಣುತೆಯನ್ನು ಸೂಚಿಸುವ ತೀರ್ಪು ಅಥವಾ ಸುಗ್ರೀವಾಜ್ಞೆ) ಹೊರಡಿಸಿದ್ದನ್ನು ಉಲ್ಲೇಖಿಸಿದ್ದು, ಎಲ್.ಕೆ. ಅಡ್ವಾಣಿಯನ್ನು ಹೊಗಳಿದ್ದಕ್ಕಾಗಿ ಮತ್ತು ವಂಶಪಾರಂಪರ್ಯ ರಾಜಕೀಯದ ವಿರುದ್ಧ ಬರೆದಿದ್ದಕ್ಕಾಗಿ ಶಶಿ ತರೂರ್ ಪಕ್ಷದಿಂದ ಟೀಕೆ ಎದುರಿಸಿದ್ದರು.
ಶಶಿ ತರೂರ್ ಪ್ರಧಾನಿ ಮೋದಿಯವರ ಭಾಷಣವನ್ನು ಹೊಗಳುತ್ತಾರೆ, ಇತ್ತ ನಿರೀಕ್ಷೆಯಂತೆ ಕಾಂಗ್ರೆಸ್ ಅವರ ವಿರುದ್ಧ ವಾಗ್ದಾಳಿ ನಡೆಸುತ್ತದೆ. ಕಳೆದ ಸಲ ಎಲ್.ಕೆ. ಅಡ್ವಾಣಿ ಅವರನ್ನು ಬೆಂಬಲಿಸಿದ್ದಾಗ, ಅವರ ಪಕ್ಷದ ನಾಯಕರು ತರೂರ್​ ವಿರುದ್ಧ ಫತ್ವಾ ಹೊರಡಿಸಿದ್ದರು. ತರೂರ್​ ವಂಶಪಾರಂಪರ್ಯ ರಾಜಕೀಯದ ಬಗ್ಗೆ ಲೇಖನ ಬರೆದರು ಮತ್ತು ಅದನ್ನು ನಿಂದಿಸಲಾಯಿತು. ಕಾಂಗ್ರೆಸ್ ಐಎನ್‌ಸಿ, ಇಂದಿರಾ ನಾಜಿ ಕಾಂಗ್ರೆಸ್. ಪರಿವಾರದ ಹಿತಾಸಕ್ತಿಯಲ್ಲ, ರಾಷ್ಟ್ರೀಯ ಹಿತಾಸಕ್ತಿಯ ನಿಲುವನ್ನು ತೆಗೆದುಕೊಳ್ಳುವ ಯಾರನ್ನೂ ಅದು ಸಹಿಸುವುದಿಲ್ಲ ಎಂದು ಹೇಳಿದರು.

ಪ್ರಧಾನಿ ಮೋದಿ ಭಾವನಾತ್ಮಕ ಮನಸ್ಥಿತಿಯಲ್ಲಿದ್ದರು: ತರೂರ್

ಪ್ರಧಾನಿ ನರೇಂದ್ರ ಮೋದಿ ಅವರು ಯಾವಾಗಲೂ ಚುನಾವಣಾ ಮೂಡ್‌ನಲ್ಲಿದ್ದಾರೆ ಎಂಬ ಆರೋಪದ ಕುರಿತು ಉಲ್ಲೇಖಿಸಿದ್ದ ತರೂರ್​, ಪ್ರಧಾನಿ ಜನರ ಸಮಸ್ಯೆಗಳನ್ನು ಪರಿಹರಿಸಲು ನಿಜವಾಗಿಯೂ ಭಾವನಾತ್ಮಕ ಮೂಡ್‌ನಲ್ಲಿದ್ದಾರೆ ಎಂದು ಬರೆದುಕೊಂಡಿದ್ದಾರೆ.
ಭಾಷಣದ ಮಹತ್ವದ ಭಾಗವು ಮೆಕಾಲೆ ಅವರ 200 ವರ್ಷಗಳ ಗುಲಾಮ ಮನಸ್ಥಿತಿಯ ಪರಂಪರೆಯನ್ನು ಉರುಳಿಸಲು ಮೀಸಲಾಗಿತ್ತು. ಭಾರತದ ಪರಂಪರೆ, ಭಾಷೆಗಳು ಮತ್ತು ಜ್ಞಾನ ವ್ಯವಸ್ಥೆಗಳಲ್ಲಿ ಹೆಮ್ಮೆಯನ್ನು ಪುನಃಸ್ಥಾಪಿಸಲು ಪ್ರಧಾನಿ ಮೋದಿ 10 ವರ್ಷಗಳ ರಾಷ್ಟ್ರೀಯ ಧ್ಯೇಯಕ್ಕೆ ಮನವಿ ಮಾಡಿದರು ಎಂದು ತರೂರ್ ತಮ್ಮ ಪೋಸ್ಟ್‌ನಲ್ಲಿ ಸೇರಿಸಿಕೊಂಡಿದ್ದಾರೆ.

ಮಲ್ಲಿಕಾರ್ಜುನ ಖರ್ಗೆ ವಿರುದ್ಧ ಸ್ಪರ್ಧಿಸಿದ್ದ ತರೂರ್​

ಕಾಂಗ್ರೆಸ್​ ಪಕ್ಷದ ಸಮಗ್ರ ನಾಯಕತ್ವಕ್ಕೆ ಕರೆ ನೀಡಿದ ಕಾಂಗ್ರೆಸ್‌ನ ಜಿ-23 ನಾಯಕರಲ್ಲಿ ತರೂರ್ ಕೂಡ ಒಬ್ಬರು . ನಂತರ ಗಾಂಧಿ-ನೆಹರು ಕುಟುಂಬದ ಬೆಂಬಲಿತ ಅಭ್ಯರ್ಥಿಯಾಗಿದ್ದ ಮಲ್ಲಿಕಾರ್ಜುನ ಖರ್ಗೆ ವಿರುದ್ಧ ಎಐಸಿಸಿ ಅಧ್ಯಕ್ಷ ಸ್ಥಾನಕ್ಕೆ ತರೂರ್ ಸ್ಪರ್ಧಿಸಿದ್ದರು, ಆದರೆ ಆ ಚುನಾವಣೆಯಲ್ಲಿ ಅವರು ಸೋಲನುಭವಿಸಬೇಕಾಯಿತು.
ಕಾಂಗ್ರೆಸ್ ಮತ್ತು ಸಂಸದ ಶಶಿ ತರೂರ್ ನಡುವೆ ಎಲ್ಲವೂ ಸರಿ ಇಲ್ಲ ಎಂಬ ಚರ್ಚೆಗಳ ನಡುವೆ ಈ ಹೊಸ ವಿವಾದ ಹುಟ್ಟಿಕೊಂಡಿದ್ದು, ಈ ಹಿಂದೆ ಅಡ್ವಾಣಿಯವರನ್ನು ಹೊಗಳುವುದು ಅಥವಾ ಕುಟುಂಬ ರಾಜಕೀಯದ ನ್ಯೂನತೆಗಳನ್ನು ಎತ್ತಿ ತೋರಿಸುವ ಲೇಖನವಾಗಿರಲಿ, ತರೂರ್​ರ ಅಭಿಪ್ರಾಯಗಳು ವಿವಾದಗಳಾಗಿ ರೂಪತಳೆದಿವೆ.
ಈ ವಿಷಯವಾಗಿ ಕಾಂಗ್ರೆಸ್, ಶಶಿ ತರೂರ್ ವಿರುದ್ಧ ಯಾವುದೇ ಕಠಿಣ ಕ್ರಮ ಕೈಗೊಳ್ಳದಿದ್ದರೂ ಅಥವಾ ಯಾವುದೇ ನೋಟಿಸ್​ ನೀಡದಿದ್ದರೂ, ಅದರ ಕೆಲವು ಎರಡನೇ ಹಂತದ ನಾಯಕರು ತರೂರ್​ ವಿರುದ್ಧ ವಾಗ್ದಾಳಿ ನಡೆಸುತ್ತಲೇ ಇದ್ದಾರೆ(ಏಜೆನ್ಸಿಸ್​).