ISRO  
ದೇಶ

ಬಾಹ್ಯಾಕಾಶ ಧೂಳು ಪತ್ತೆ ಹಚ್ಚಿದ ಇಸ್ರೋ

ಬಾಬುಪ್ರಸಾದ್​ ಮೋಡಿಸ್​
ಬೆಂಗಳೂರು: ಬಾಹ್ಯಾಕಾಶ ಸಂಶೋಧನೆಯಲ್ಲಿ ಮತ್ತೊಂದು ಮೈಲಿಗಲ್ಲು ಸ್ಥಾಪಿಸಿರುವ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ), ತನ್ನದೇ ಆದ ಸ್ವದೇಶಿ ನಿರ್ವಿುತ ಡೆಕ್ಸ್ (ಡಸ್ಟ್ ಎಕ್ಸ್ ಪೆರಿಮೆಂಟ್) ಉಪಕರಣದ ಮೂಲಕ ಅಂತರ್ಗ್ರಹ ಧೂಳಿನ ಕಣಗಳನ್ನು ಯಶಸ್ವಿಯಾಗಿ ಪತ್ತೆಹಚ್ಚಿದೆ. ಪ್ರತಿ ಸಾವಿರ ಸೆಕೆಂಡ್ಗೆ ಒಮ್ಮೆ ಭೂಮಿಯ ವಾತಾವರಣಕ್ಕೆ ಅಪ್ಪಳಿಸುವ ಈ ಸಣ್ಣ ಕಣಗಳನ್ನು ಕಾಸ್ಮಿಕ್ ಇನ್ವೇಡರ್ಸ್ ಎಂದು ಹೆಸರಿಸಲಾಗಿದೆ.

ಏನಿದು ಡೆಕ್ಸ್ ಸಾಧನ?

ಅಹಮದಾಬಾದ್ನ ಫಿಸಿಕಲ್ ರಿಸರ್ಚ್ ಲ್ಯಾಬೊರೇಟರಿ ಅಭಿವೃದ್ಧಿಪಡಿಸಿರುವ ಧೂಳು ಪತ್ತೆಕಾರಕ ಸಾಧನವು ಕೇವಲ 3 ಕೆಜಿ ತೂಕ ಹೊಂದಿದೆ. ಕಳೆದ ವರ್ಷ ಪಿಎಸ್ಎಲ್ವಿ ರಾಕೆಟ್ ಮೂಲಕ ಉಡಾವಣೆ ಮಾಡಲಾಗಿದ್ದ ಪೋಯಂ ಉಪಗ್ರಹದ ಕಕ್ಷೀಯ ವೇದಿಕೆಯಲ್ಲಿ ಇದನ್ನು ಅಳವಡಿಸಲಾಗಿತ್ತು. ಇದು ಕೇವಲ 4.5 ವಾಟ್ ವಿದ್ಯುತ್ ಬಳಸಿಕೊಂಡು ಅತ್ಯಂತ ವೇಗವಾಗಿ ಚಲಿಸುವ ಬಾಹ್ಯಾಕಾಶ ಧೂಳಿನ ಪ್ರಭಾವವನ್ನು ದಾಖಲಿಸುವ ಸಾಮರ್ಥ್ಯ ಹೊಂದಿದೆ.

ಮುಂದಿನ ಗುರಿ ಮಂಗಳ, ಶುಕ್ರ

ಪ್ರಸ್ತುತ ಭೂಮಿಯ ಕಕ್ಷೆಯಲ್ಲಿ ಯಶಸ್ವಿಯಾಗಿರುವ ಈ ತಂತ್ರಜ್ಞಾನವು ಮುಂದಿನ ದಿನಗಳಲ್ಲಿ ಮಂಗಳ ಮತ್ತು ಶುಕ್ರ ಗ್ರಹಗಳ ಸಂಶೋಧನೆಗೆ ನೀಲನಕ್ಷೆಯಾಗಲಿದೆ. ಚಂದ್ರನ ಮೇಲ್ಮೈಯಲ್ಲಿರುವ ಧೂಳಿನ ಬಗ್ಗೆಯೂ ಇದು ಹೆಚ್ಚಿನ ಮಾಹಿತಿ ನೀಡುವ ಸಾಧ್ಯತೆ ಇದೆ. ಹೊಸ ಸಂಶೋಧನೆ ಭವಿಷ್ಯದ ಮಾನವ ಸಹಿತ ಬಾಹ್ಯಾಕಾಶ ಯೋಜನೆಗಳ ಸುರಕ್ಷತೆಯ ದೃಷ್ಟಿಯಿಂದ ಅತ್ಯಂತ ಮಹತ್ವದ್ದಾಗಿದೆ. ಉಪಗ್ರಹಗಳಿಗೆ ಈ ಕಣಗಳಿಂದ ಆಗುವ ಅಪಾಯವನ್ನು ತಪ್ಪಿಸಲು ಈ ದತ್ತಾಂಶ ಸಹಕಾರಿಯಾಗಲಿದೆ ಎಂದು ಇಸ್ರೋ ತಿಳಿಸಿದೆ.

ಸಂಶೋಧನೆ ವಿವರ

·ಜನವರಿ 1, 2024ರಿಂದ ಫೆಬ್ರವರಿ 9, 2024ರ ನಡುವಿನ ಅವಧಿಯಲ್ಲಿ ಭೂಮಿಯ ವಾತಾವರಣದ 350 ಕಿ.ಮೀ ಎತ್ತರದಲ್ಲಿ ಈ ಸಾಧನವು ಹಲವಾರು ಧೂಳಿನ ಕಣಗಳ ಅಪ್ಪಳಿಸುವಿಕೆಯನ್ನು ದಾಖಲಿಸಿದೆ.
·ಧೂಮಕೇತುಗಳು ಮತ್ತು ಕ್ಷುದ್ರಗ್ರಹಗಳಿಂದ ಹೊರಬರುವ ಸೂಕ್ಷ್ಮ ಕಣಗಳು ಭೂಮಿ ವಾತಾವರಣದಲ್ಲಿ ‘ಉಲ್ಕೆಗಳ ಪದರ’ವನ್ನು ರೂಪಿಸುತ್ತವೆ. ಇವು ರಾತ್ರಿ ಆಕಾಶ ದಲ್ಲಿ ನಮಗೆ ಬೀಳುವ ನಕ್ಷತ್ರಗಳಂತೆ ಗೋಚರಿಸುತ್ತವೆ.
·140 ಡಿಗ್ರಿ ನೋಟವನ್ನು ಹೊಂದಿರುವ ಈ ಡಿಟೆಕ್ಟರ್, ಬಾಹ್ಯಾಕಾಶ ತ್ಯಾಜ್ಯ ಮತ್ತು ನೈಸರ್ಗಿಕ ಧೂಳಿನ ನಡುವಿನ ವ್ಯತ್ಯಾಸವನ್ನು ಗುರುತಿಸುವಲ್ಲಿ ಯಶಸ್ವಿಯಾಗಿದೆ.