ಅಮೆರಿಕ-ಇರಾನ್ ಒಪ್ಪಂದದ ಬೆನ್ನಲ್ಲೇ ಇಸ್ರೇಲ್ ಶಾಕ್: ಗಾಜಾ, ಲೆಬನಾನ್, ಸಿರಿಯಾದಿಂದ ಸೇನೆಯನ್ನು ವಾಪಸ್ ಕರೆಸಿಕೊಳ್ಳಲ್ಲ ಎಂದ ಪಿಎಂ ನೆತನ್ಯಾಹು!
ಟೆಲ್ ಅವಿವ್: ಅಮೆರಿಕ ಮತ್ತು ಇರಾನ್ ನಡುವೆ ಐತಿಹಾಸಿಕ ಶಾಂತಿ ಒಪ್ಪಂದ ಏರ್ಪಟ್ಟ ಬೆನ್ನಲ್ಲೇ ಮಧ್ಯಪ್ರಾಚ್ಯದ ಜಾಗತಿಕ ರಾಜಕಾರಣದಲ್ಲಿ ಮತ್ತೊಂದು ಭಾರಿ ಸಂಚಲನ ಸೃಷ್ಟಿಯಾಗಿದೆ. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಇರಾನ್ ಮೇಲಿನ ಕಡಲ ದಿಗ್ಬಂಧನವನ್ನು ತಕ್ಷಣದಿಂದಲೇ ತೆರವುಗೊಳಿಸಲು ಆದೇಶಿಸಿದ ಕೆಲವೇ ಗಂಟೆಗಳಲ್ಲಿ, ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು(Benjamin Netanyahu) ಜಗತ್ತಿಗೆ ಕಠಿಣ ಸಂದೇಶ ರವಾನಿಸಿದ್ದಾರೆ. ಗಾಜಾ, ಲೆಬನಾನ್ ಮತ್ತು ಸಿರಿಯಾದಿಂದ ಇಸ್ರೇಲ್ ಸೇನೆ ಸದ್ಯಕ್ಕೆ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ, ದೇಶದ ರಕ್ಷಣೆಗಾಗಿ ಎಷ್ಟು ದಿನ ಬೇಕೋ ಅಷ್ಟು ದಿನ ನಮ್ಮ ಸೈನಿಕರು ಅಲ್ಲೇ ಬೀಡುಬಿಡಲಿದ್ದಾರೆ ಎಂದು ನೆತನ್ಯಾಹು ಸೋಮವಾರ ಘೋಷಿಸಿದ್ದಾರೆ.
ದೂರದರ್ಶನದ ನೇರ ಪ್ರಸಾರದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಇಸ್ರೇಲ್ ಪ್ರಧಾನಿ, ಮಧ್ಯಪ್ರಾಚ್ಯದ ಶಾಂತಿ ಒಪ್ಪಂದ ಏನೇ ಇರಲಿ, ಇಸ್ರೇಲ್ ತನ್ನ ಸುರಕ್ಷತೆಯ ವಿಷಯದಲ್ಲಿ ಯಾವುದೇ ರಾಜಿ ಮಾಡಿಕೊಳ್ಳುವುದಿಲ್ಲ ಎಂದು ಖಡಕ್ ಆಗಿ ಹೇಳಿದ್ದಾರೆ.
"ಸುರಕ್ಷತಾ ವಲಯಗಳಿಂದ ಸೇನೆ ವಾಪಸ್ ಇಲ್ಲ": ನೆತನ್ಯಾಹು ಖಡಕ್ ವಾರ್ನಿಂಗ್
ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ತಮ್ಮ ಮಿಲಿಟರಿ ನಿಲುವನ್ನು ಸಮರ್ಥಿಸಿಕೊಂಡು, ನಾವು ಇಸ್ರೇಲ್ ದೇಶದ ಸುತ್ತಲೂ ಅತ್ಯಂತ ಆಳವಾದ ಸುರಕ್ಷತಾ ವಲಯಗಳನ್ನು ಸ್ಥಾಪಿಸಿದ್ದೇವೆ. ಗಾಜಾ ಪಟ್ಟಿ, ಲೆಬನಾನ್ ಮತ್ತು ಸಿರಿಯಾ ದೇಶಗಳಲ್ಲಿ ನಾವು ಈ ರಕ್ಷಣಾ ಕೋಟೆಗಳನ್ನು ನಿರ್ಮಿಸಿದ್ದೇವೆ. ನಾನು ಜಗತ್ತಿಗೆ ಸ್ಪಷ್ಟಪಡಿಸಲು ಬಯಸುತ್ತೇನೆ. ನಮ್ಮ ದೇಶವನ್ನು ಶತ್ರುಗಳಿಂದ ರಕ್ಷಿಸಲು ಎಷ್ಟು ಸಮಯ ಅಗತ್ಯವೋ, ಅಷ್ಟು ಸಮಯದವರೆಗೆ ನಮ್ಮ ಸೈನಿಕರು ಈ ಸುರಕ್ಷತಾ ವಲಯಗಳಲ್ಲೇ ಮುಂದುವರಿಯಲಿದ್ದಾರೆ ಎಂದು ಸಾರಿದ್ದಾರೆ.
ಅಮೆರಿಕವು ಇರಾನ್ ಜೊತೆ ಒಪ್ಪಂದ ಮಾಡಿಕೊಂಡು ಯುದ್ಧ ಅಂತ್ಯಗೊಳಿಸಲು ಮುಂದಾಗಿದ್ದರೂ, ಇಸ್ರೇಲ್ ಮಾತ್ರ ತನ್ನ ಗಡಿ ಭಾಗಗಳಲ್ಲಿ ಶತ್ರುಗಳ ಉಪಟಳ ಅಡಗಿಸಲು ಸೇನಾ ಕಾರ್ಯಾಚರಣೆಯ ಬಿಗಿ ಹಿಡಿತವನ್ನು ಸಡಿಲಗೊಳಿಸುವುದಿಲ್ಲ ಎಂಬುದನ್ನು ಈ ಮೂಲಕ ನೆತನ್ಯಾಹು ಸಾಬೀತುಪಡಿಸಿದ್ದಾರೆ.
ಇರಾನ್ ಅಣು ಬಾಂಬ್ ಭೀತಿಯನ್ನು ಸಂಪೂರ್ಣ ಧೂಳೀಪಟ ಮಾಡಿದ್ದೇವೆ!
ಇದೇ ವೇಳೆ ಇರಾನ್ ವಿರುದ್ಧ ಇಸ್ರೇಲ್ ನಡೆಸಿದ ಭೀಕರ ದಾಳಿಯ ಯಶಸ್ಸನ್ನು ನೆತನ್ಯಾಹು ಹೆಮ್ಮೆಯಿಂದ ಹಂಚಿಕೊಂಡಿದ್ದಾರೆ. ನಮ್ಮ ಅಮೆರಿಕನ್ ಮಿತ್ರರೊಂದಿಗೆ ಸೇರಿ ಇರಾನ್‌ನಿಂದ ಇಸ್ರೇಲ್ ಮೇಲಿದ್ದ ತಕ್ಷಣದ ಪರಮಾಣು ದಾಳಿಯ ಭೀತಿಯನ್ನು ನಾವು ಯಶಸ್ವಿಯಾಗಿ ಮೆಟ್ಟಿ ನಿಂತಿದ್ದೇವೆ. ಇಸ್ರೇಲ್ ಇತಿಹಾಸದಲ್ಲೇ ಅತ್ಯಂತ ದೊಡ್ಡ ಪ್ರಮಾಣದ ವಾಯುದಾಳಿ ಕಾರ್ಯಾಚರಣೆಯನ್ನು ಇರಾನ್ ವಿರುದ್ಧ ನಡೆಸಲಾಗಿತ್ತು ಎಂದು ವಿವರಿಸಿದ್ದಾರೆ.
ನಾವು ಇರಾನ್‌ನ ಪ್ರಮುಖ ಪರಮಾಣು ವಿಜ್ಞಾನಿಗಳನ್ನು ಗುರಿಯಾಗಿಸಿದ್ದೇವೆ. ಅಲ್ಲಿನ ಭಯೋತ್ಪಾದಕ ಆಡಳಿತದ ಉನ್ನತ ನಾಯಕರನ್ನು ಮಟ್ಟ ಹಾಕಿದ್ದೇವೆ. ಇರಾನ್‌ನ ಅಣು ಸ್ಥಾವರಗಳನ್ನು ಸಂಪೂರ್ಣವಾಗಿ ಹಾನಿಗೊಳಿಸಿದ್ದೇವೆ. ಅವರ ಕ್ಷಿಪಣಿ ಉತ್ಪಾದನಾ ಕಾರ್ಖಾನೆಗಳು, ನೌಕಾಸೇನೆ ಮತ್ತು ವಾಯುಪಡೆಯನ್ನು ಸಂಪೂರ್ಣವಾಗಿ ಧೂಳೀಪಟ ಮಾಡಿದ್ದೇವೆ. ಇರಾನ್ ನಾಗರಿಕರ ಮೇಲೆ ದೌರ್ಜನ್ಯ ಎಸಗುತ್ತಿದ್ದ ಬಸಿಜ್ ಕಮಾಂಡರ್‌ಗಳನ್ನು ಹತ್ಯೆ ಮಾಡಿದ್ದೇವೆ. ನಮ್ಮ ಈ ದಾಳಿಯಿಂದ ಇರಾನ್ ಆರ್ಥಿಕತೆಗೆ ನೂರಾರು ಬಿಲಿಯನ್ ಡಾಲರ್‌ಗಳಿಂದ ಹಿಡಿದು ಸುಮಾರು ಒಂದು ಟ್ರಿಲಿಯನ್ ಡಾಲರ್‌ನಷ್ಟು ಭಾರಿ ಹಾನಿಯಾಗಿದೆ ಎಂದು ನೆತನ್ಯಾಹು ದಾಳಿಯ ಭೀಕರತೆಯನ್ನು ಬಿಚ್ಚಿಟ್ಟಿದ್ದಾರೆ.
ಇಸ್ರೇಲ್ ವಿನಾಶದಿಂದ ಪಾರಾಗಿದೆ: ಹರ್ಷ ವ್ಯಕ್ತಪಡಿಸಿದ ಪ್ರಧಾನಿ
ಇಸ್ರೇಲ್‌ನ ಸಂಪೂರ್ಣ ಜನಸಂಖ್ಯೆಯನ್ನು ನಾಶಪಡಿಸಬೇಕು ಎಂದು ನಮ್ಮ ತಲೆಯ ಮೇಲೆ ತೂಗಾಡುತ್ತಿದ್ದ ಇರಾನ್‌ನ ಅಣುಬಾಂಬ್ ಮತ್ತು ಯುದ್ಧದ ಭೀತಿಯನ್ನು ಮುಂಬರುವ ಹಲವು ವರ್ಷಗಳ ಕಾಲ ಜಾರದಂತೆ ನಾವು ಮುಗಿಸಿದ್ದೇವೆ. ಇಸ್ರೇಲ್ ದೇಶವನ್ನು ಸರ್ವನಾಶದಿಂದ ನಾವು ಯಶಸ್ವಿಯಾಗಿ ರಕ್ಷಿಸಿದ್ದೇವೆ ಎಂದು ಬೆಂಜಮಿನ್ ನೆತನ್ಯಾಹು ಸಂತಸ ವ್ಯಕ್ತಪಡಿಸಿದ್ದಾರೆ.
ಅಮೆರಿಕ-ಇರಾನ್ ನಡುವಿನ ಹೊಸ ಒಪ್ಪಂದದಿಂದಾಗಿ ಇರಾನ್ ನಿಟ್ಟುಸಿರು ಬಿಡುತ್ತಿರುವಾಗಲೇ, ಇಸ್ರೇಲ್ ತನ್ನ ನೆರೆಹೊರೆಯ ದೇಶಗಳಾದ ಗಾಜಾ, ಲೆಬನಾನ್ ಮತ್ತು ಸಿರಿಯಾದಲ್ಲಿ ತನ್ನ ಮಿಲಿಟರಿ ಕಣ್ಗಾವಲನ್ನು ಇನ್ನಷ್ಟು ಬಿಗಿಗೊಳಿಸಿರುವುದು ಮಧ್ಯಪ್ರಾಚ್ಯದಲ್ಲಿ ಮತ್ತೊಂದು ಸುತ್ತಿನ ರಾಜತಾಂತ್ರಿಕ ಸಂಘರ್ಷಕ್ಕೆ ನಾಂದಿ ಹಾಡಿದೆ,(ಏಜೆನ್ಸೀಸ್).