WhatsApp  
ದೇಶ

ವಾಟ್ಸ್​ಆ್ಯಪ್​ ಪ್ರೈವಸಿ ಬರೀ ಭ್ರಮೆಯೇ?

ನಿಮ್ಮ ವಾಟ್ಸ್​ಆಪ್ ಸಂದೇಶಗಳು ನಿಜವಾಗಿಯೂ ಸುರಕ್ಷಿತವೇ? ಮೆಟಾ ಕಂಪನಿ ಬಳಸುವ ಎಂಡ್-ಟು-ಎಂಡ್ ಎನ್ಕ್ರಿಪ್ಶನ್ ತಂತ್ರಜ್ಞಾನ ಕೇವಲ ಒಂದು ಕಣ್ಕಟ್ಟು ಎಂದು ಆರೋಪಿಸಿ ಅಮೆರಿಕದಲ್ಲಿ ಗಂಭೀರ ಕಾನೂನು ಸಮರ ಶುರುವಾಗಿದೆ. ಬಳಕೆದಾರರ ಖಾಸಗಿ ಸಂಭಾಷಣೆಗಳನ್ನು ಕಂಪನಿ ಓದಬಲ್ಲದು ಎಂದು ಕೇಸು ದಾಖಲಿಸಿದವರು ವಾದಿಸುತ್ತಿದ್ದು, ಈ ಮೊಕದ್ದಮೆ ಜಾಗತಿಕವಾಗಿ ಸಂಚಲನ ಮೂಡಿಸಿದೆ. ಮತ್ತೊಂದೆಡೆ, ‘ಮೆಟಾ-ವಾಟ್ಸ್​ಆಪ್ ಭಾರತದ ಕಾನೂನನ್ನು ಪಾಲಿಸಲಿ, ಇಲ್ಲವೆ ಭಾರತ ಬಿಟ್ಟು ಹೋಗಲಿ’ ಎಂದು ಸುಪ್ರೀಂ ಕೋರ್ಟ್ ಮಂಗಳವಾರ ತೀಕ್ಷ್ಣವಾಗಿ ಹೇಳಿದೆ. ಅಲ್ಲದೆ, ಭಾರತೀಯರ ಮಾಹಿತಿ ಶೇರ್ ಮಾಡಲು ಅನುಮತಿ ನೀಡುವುದಿಲ್ಲ ಎಂದಿರುವ ಸುಪ್ರೀಂಕೋರ್ಟ್ ವಾಟ್ಸ್​ಆಪ್​ನ ಪ್ರೖೆವಸಿ ನೀತಿಯ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ.
ವಾಟ್ಸ್​ಆಪ್ ತನ್ನ ಸಂದೇಶಗಳು ‘ಎಂಡ್-ಟು-ಎಂಡ್ ಎನ್ಕ್ರಿಪ್ಶನ್’ ಹೊಂದಿವೆ ಎಂದು ಹೇಳಿಕೊಳ್ಳುತ್ತದೆ. ಅಂದರೆ, ಸಂದೇಶ ಕಳುಹಿಸುವವರು ಮತ್ತು ಸ್ವೀಕರಿಸುವವರನ್ನು ಹೊರತುಪಡಿಸಿ ಮಧ್ಯದಲ್ಲಿ ವಾಟ್ಸ್​ಆಪ್ ಅಥವಾ ಮೆಟಾ ಕಂಪನಿಯೂ ಅದನ್ನು ಓದಲು ಸಾಧ್ಯವಿಲ್ಲ ಎಂಬುದು ಅದರ ಭರವಸೆ. ಇದನ್ನು ನಂಬಿಯೇ ವಾಟ್ಸ್​ಆಪ್ ಬಳಕೆದಾರರ ಸಂಖ್ಯೆ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಲೇ ಇದೆ. ಆದರೆ, ಇತ್ತೀಚಿನ ಪ್ರಕರಣದಲ್ಲಿ ಈ ಸುರಕ್ಷತಾ ವ್ಯವಸ್ಥೆಯು ಕೇವಲ ಒಂದು ಗಿಮಿಕ್ ಎಂಬ ಆರೋಪ ಕೇಳಿಬಂದಿರುವುದು ಬಳಕೆದಾರರಲ್ಲಿ ತೀವ್ರ ಆತಂಕ ಮೂಡಿಸಿದೆ ಮತ್ತು ಮಾಹಿತಿ ಸೋರಿಕೆಯಿಂದ ಆಗುವ ಅನಾಹುತಗಳಿಗೆ ಹೊಣೆ ಯಾರು, ಈ ಕುರಿತು ತಪ್ಪಿತಸ್ಥರನ್ನು ಹೇಗೆ ಶಿಕ್ಷಿಸುವುದು ಎಂಬ ಕುರಿತಂತೆ ಸರಣಿ ಪ್ರಶ್ನೆಗಳು ಉದ್ಭವವಾಗಿವೆ. ಅಷ್ಟಕ್ಕೂ, ವಾಟ್ಸ್​ಆಪ್ ಮತ್ತು ಅದರ ಮಾತೃಸಂಸ್ಥೆ ಮೆಟಾ ವಿರುದ್ಧ ಹಲವು ಬಾರಿ ಇಂಥ ಗಂಭೀರ ಆರೋಪಗಳು ಕೇಳಿಬಂದಿವೆ.
ಅಮೆರಿಕದಲ್ಲಿ ಮೊಕದ್ದಮೆ: ಅಮೆರಿಕದ ಸ್ಯಾನ್ ಫ್ರಾನ್ಸಿಸ್ಕೋ ಫೆಡರಲ್ ನ್ಯಾಯಾಲಯದಲ್ಲಿ ಮೆಟಾ ವಿರುದ್ಧ ‘ಕ್ಲಾಸ್ ಆಕ್ಷನ್’ (Class-Action) ದಾವೆ ದಾಖಲಾಗಿದೆ. ಮೆಟಾ ಕಂಪನಿಯು ತನ್ನ ಉದ್ಯೋಗಿಗಳಿಗೆ ಬಳಕೆದಾರರ ಖಾಸಗಿ ಸಂದೇಶಗಳನ್ನು ಪ್ರವೇಶಿಸಲು ಅವಕಾಶ ನೀಡಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಮೆಟಾ ಇಂಜಿನಿಯರ್​ಗಳು ವಿಶೇಷ ಇಂಟರ್ನಲ್ ಸಿಸ್ಟಮ್ ಮೂಲಕ ಬಳಕೆದಾರರ ಚಾಟ್​ಗಳನ್ನು ನೋಡಬಹುದು ಮತ್ತು ವಿಶ್ಲೇಷಿಸಬಹುದು ಎಂದು ಆರೋಪಿಸಲಾಗಿದೆ. ಭಾರತ ಸೇರಿದಂತೆ ಆಸ್ಟ್ರೇಲಿಯಾ, ಬ್ರೆಜಿಲ್, ಮೆಕ್ಸಿಕೋ ಮತ್ತು ದಕ್ಷಿಣ ಆಫ್ರಿಕಾದ ಬಳಕೆದಾರರ ಗುಂಪೊಂದು ಈ ಮೊಕದ್ದಮೆ ಹೂಡಿದೆ. ವಾಟ್ಸ್ ಆಪ್ ಮತ್ತು ಮೆಟಾ ಸುರಕ್ಷೆಯ ಹೆಸರಲ್ಲಿ ತನ್ನ ಕೋಟ್ಯಂತರ ಬಳಕೆದಾರರನ್ನು ಮೋಸ ಮಾಡುತ್ತಿವೆ ಎಂದು ಆರೋಪಿಸಲಾಗಿದೆ.
ಏನಿದು ಎಂಡ್-ಟು-ಎಂಡ್ ಎನ್ಕ್ರಿಪ್ಶನ್?
ವಾಟ್ಸ್​ಆಪ್​ನಲ್ಲಿ ನಡೆಯುವ ಪ್ರತೀ ಚಾಟ್ ಎಂಡ್-ಟು-ಎಂಡ್ ಎನ್ಕ್ರಿಪ್ಶನ್ ಹೊಂದಿದೆ ಎಂಬುದು ಮೆಟಾ ಕಂಪನಿಯ ಪ್ರತಿಪಾದನೆ. ಅಂದರೆ, ಒಬ್ಬ ಬಳಕೆದಾರ ಯಾವುದೇ ಸಂದೇಶ ಕಳುಹಿಸಿದರೆ, ಅದು ಒಂದು ರಹಸ್ಯ ಕೋಡ್ ರೂಪದಲ್ಲಿ ಬದಲಾಗುತ್ತದೆ ಮತ್ತು ಅದನ್ನು ಕೇವಲ ಸಂದೇಶ ಸ್ವೀಕರಿಸುವವನ ಸ್ಮಾರ್ಟ್​ಫೋನ್ ಮಾತ್ರ ಡಿಕೋಡ್ ಮಾಡಬಲ್ಲದು. ಹಾಗಾಗಿ, ಸಂದೇಶಗಳನ್ನು ಕಳಿಸಿದವರು ಮತ್ತು ಸ್ವೀಕರಿಸಿದವರು ಮಾತ್ರ ಓದಲು ಸಾಧ್ಯವಿದ್ದು, ಮಧ್ಯದಲ್ಲಿ ವಾಟ್ಸ್ ಆಪ್ ಅಥವಾ ಅದರ ಮಾತೃಸಂಸ್ಥೆ ಮೆಟಾ ಈ ಸಂದೇಶಗಳನ್ನು ನೋಡಲು/ಓದಲು ಸಾಧ್ಯವಿಲ್ಲ ಎಂಬುದು ಕಂಪನಿಯ ಸ್ಪಷ್ಟನೆ.
ಗಂಭೀರ ಆರೋಪಗಳು
ಐದು ದೇಶಗಳ ವಾಟ್ಸ್​ಆಪ್ ಬಳಕೆದಾರರ ಗುಂಪು ಹೇಳುವ ಪ್ರಕಾರ, ಎಲ್ಲ ಖಾಸಗಿ ಮಾತುಕತೆ (ಚಾಟ್) ಯನ್ನು ಸಂಗ್ರಹಿಸುವ, ಅದನ್ನು ವಿಶ್ಲೇಷಿಸುವ ಮತ್ತು ಅದನ್ನು ಬಹಿರಂಗೊಳಿಸುವ ಕ್ಷಮತೆ ಮೆಟಾ ಕಂಪನಿ ಹೊಂದಿದ್ದು, ಇದು ಆಪ್ ಬಳಕೆದಾರರ ಖಾಸಗಿತನದ ಹಕ್ಕನ್ನು ಸಂಪೂರ್ಣವಾಗಿ ಉಲ್ಲಂಘಿಸುತ್ತದೆ.
ಮೆಟಾ ಕಂಪನಿ ಕೆಲ ತಂತ್ರಜ್ಞಾನ ಹೊಂದಿದ್ದು, ಈ ಮೂಲಕ ಅದು ಬಳಕೆದಾರರ ಸಂದೇಶಗಳನ್ನು ಓದಬಹುದಾಗಿದೆ. ಮಾತ್ರವಲ್ಲ, ಮೆಟಾದ ಸಿಬ್ಬಂದಿ ಅಗತ್ಯಬಿದ್ದಲ್ಲಿ ತಾವು ಓದಿದ ಸಂದೇಶದ ಆಧಾರದ ಮೇಲೆ ಬಳಕೆದಾರನವರೆಗೆ ತಲುಪಬಹುದಾಗಿದೆ.
ಸುರಕ್ಷಾ ವ್ಯವಸ್ಥೆ ಹೆಸರಲ್ಲಿ ಜನರನ್ನು ಮೋಸಗೊಳಿಸುತ್ತಿರುವ ಮೆಟಾ, ಸಂದೇಶಗಳಿಗೆ ಆಕ್ಸೆಸ್ ಹೊಂದುವ ತಂತ್ರಜ್ಞಾನ ಹೊಂದಿದೆ.
ಮೆಟಾ ಕಂಪನಿ ಸ್ಪಷ್ಟನೆ
ಈ ಎಲ್ಲ ಆರೋಪಗಳನ್ನು ಮೆಟಾ ಸ್ಪಷ್ಟವಾಗಿ ನಿರಾಕರಿಸಿದೆ. ವಾಟ್ಸ್​ಆಪ್ ಸಂದೇಶಗಳು ಎನ್ಕ್ರಿಪ್ಟ್ ಆಗಿಲ್ಲ ಎಂಬ ವಾದವು ಹಾಸ್ಯಾಸ್ಪದ ಮತ್ತು ಸುಳ್ಳು. ಕಳೆದ ಹತ್ತು ವರ್ಷಗಳಿಂದ ನಾವು ಅತ್ಯಂತ ಸುರಕ್ಷಿತವಾದ ಸಿಗ್ನಲ್ ಪೋ›ಟೋಕಾಲ್ ಬಳಸುತ್ತಿದ್ದೇವೆ. ಸುರಕ್ಷೆಯ ನಿಟ್ಟಿನಲ್ಲಿ ಜಾಗತಿಕವಾಗಿ ಒಪ್ಪಿಕೊಂಡ ಮಾನದಂಡ ಇದಾಗಿದೆ. ಕಾನೂನು ಹೋರಾಟವನ್ನು ನಾವು ಪರಿಣಾಮಕಾರಿಯಾಗಿ ಎದುರಿಸಲಿದ್ದೇವೆ ಎಂದು ಕಂಪನಿ ಸ್ಪಷ್ಟಪಡಿಸಿದೆ.

ಆರೋಪ ಇದೇ ಮೊದಲೇನಲ್ಲ

ವಾಟ್ಸ್​ಆಪ್ ಮುಖೇನ ದೊಡ್ಡ ಡೇಟಾ ಸೋರಿಕೆಯಾದ ಬಗ್ಗೆ 2022ರ ನವೆಂಬರ್​ನಲ್ಲೂ ವರದಿಯಾಗಿತ್ತು. ಅನಾಮಧೇಯ ಹ್ಯಾಕರ್ ಓರ್ವ ಭಾರತ (64 ಲಕ್ಷ ಖಾತೆಗಳು) ಸೇರಿದಂತೆ ಜಗತ್ತಿನ 84 ದೇಶಗಳ 50 ಕೋಟಿ ಸಕ್ರಿಯ ವಾಟ್ಸ್​ಆಪ್ ಬಳಕೆದಾರರ ಮಾಹಿತಿಯನ್ನು ಹ್ಯಾಕರ್​ಗಳ ಸಮುದಾಯದ ವೇದಿಕೆಯೊಂದರಲ್ಲಿ ಮಾರಾಟಕ್ಕೆ ಇಟ್ಟಿದ್ದ ಎಂಬ ಸುದ್ದಿ ತಲ್ಲಣ ಮೂಡಿಸಿತ್ತು. ಇದರಲ್ಲಿ 84 ದೇಶಗಳ ಪೈಕಿ ಈಜಿಪ್ಟ್ ಜನರ ಅತಿ ಹೆಚ್ಚು (4.5 ಕೋಟಿ) ಮಾಹಿತಿ ಸೋರಿಕೆಯಾಗಿತ್ತು. ಪ್ಲಾಟ್​ಫಾಮರ್್​ನ ಕಾಂಟ್ಯಾಕ್ಟ್ ಡಿಸ್ಕವರಿ ಫೀಚರ್​ನಲ್ಲಿದ್ದ ದೋಷವನ್ನು ದುರುಪಯೋಗಪಡಿಸಿಕೊಂಡು, ದೊಡ್ಡ ಪ್ರಮಾಣದ ಡೇಟಾ ಹೊರತೆಗೆಯಲಾಗಿತ್ತು. ಈ ಸೋರಿಕೆಯಿಂದ ವಂಚನೆ ಪ್ರಕರಣಗಳು ಕೂಡ ಹೆಚ್ಚಾಗಿದ್ದವು. ಆದರೆ, ಯಾವುದೇ ಮಾಹಿತಿ ಸೋರಿಕೆ ಆಗಿಲ್ಲ ಎಂದು ವಾಟ್ಸ್​ಆಪ್​ನ ಅಧಿಕಾರಿಗಳು ಸ್ಪಷ್ಟನೆ ನೀಡಿದ್ದರು.
ಮಾಹಿತಿ ಸೋರಿಕೆ ವಿವಾದ 2020ರಲ್ಲೂ ತೀವ್ರ ಚರ್ಚೆಗೆ ಗ್ರಾಸವಾಗಿತ್ತು. ಕೇಂಬ್ರಿಡ್ಸ್ ಎನಾಲಿಟಿಕಾ ಹಗರಣದ ನಂತರ ಆಗಿನ ಫೇಸ್​ಬುಕ್ (ಈಗಿನ ಮೆಟಾ) ಸಂಸ್ಥೆಗೆ 5 ಬಿಲಿಯನ್ ಡಾಲರ್​ನ ದಂಡ ವಿಧಿಸಲಾಗಿತ್ತು.ವಾಟ್ಸ್​ಆಪ್ ಭದ್ರತಾ ವಿಭಾಗದ ಮುಖ್ಯಸ್ಥರಾಗಿದ್ದ ಅತಾಉಲ್ಲಾಹ್ ಬೇಗ್, ‘1500 ಮೆಟಾ ಇಂಜಿನಿಯರ್​ಗಳ ಬಳಿ ಬಳಕೆದಾರರ ಡೇಟಾವನ್ನು ಪ್ರವೇಶಿಸುವ ತಂತ್ರಜ್ಞಾನವಿದೆ’ ಎಂದು 2025ರಲ್ಲಿ ಆರೋಪಿಸಿದ್ದರು.
ಭಾರತದಲ್ಲಿ ಹೆಚ್ಚು ಬಳಕೆದಾರರು
ವಿಶ್ವದಲ್ಲೇ ಅತಿ ಹೆಚ್ಚು ವಾಟ್ಸ್​ಆಪ್ ಬಳಕೆದಾರರು ಭಾರತದಲ್ಲಿದ್ದಾರೆ. ಪ್ರಸ್ತುತ ಅಂದಾಜು 58 ಕೋಟಿಗೂ ಹೆಚ್ಚು ಜನರು ಸಕ್ರಿಯವಾಗಿ ವಾಟ್ಸ್ಆಪ್ ಬಳಸುತ್ತಿದ್ದು, ವರ್ಷದಿಂದ ವರ್ಷಕ್ಕೆ ಈ ಸಂಖ್ಯೆ ಹೆಚ್ಚುತ್ತಲೇ ಸಾಗಿದೆ. ಭಾರತದಲ್ಲಿರುವ ಒಟ್ಟು ಸ್ಮಾರ್ಟ್​ಫೋನ್ ಬಳಕೆದಾರರಲ್ಲಿ ಸುಮಾರು 89%ರಷ್ಟು ಜನರು ವಾಟ್ಸ್
ಆಪ್ ಬಳಸುತ್ತಾರೆ. ಅಲ್ಲದೆ, ಜಾಗತಿಕವಾಗಿ ವಾಟ್ಸ್​ಆಪ್ ಬಿಜಿನೆಸ್ ಆಪ್ ಡೌನ್​ಲೋಡ್ ಮಾಡುವವರಲ್ಲಿ 63%ರಷ್ಟು ಭಾರತೀಯರೇ ಆಗಿದ್ದಾರೆ.
ಪರಿಣಾಮಗಳೇನು?
ಮೆಟಾ ಕಂಪನಿ ವಿರುದ್ಧದ ಆರೋಪಗಳು ಸಾಬೀತಾದರೆ ವಾಟ್ಸ್​ಆಪ್​ನ ವಿಶ್ವಾಸಾರ್ಹತೆಗೆ ದೊಡ್ಡ ಹೊಡೆತ ಬೀಳಲಿದೆ. ಕಂಪನಿಯು ಕೋಟ್ಯಂತರ ರೂಪಾಯಿ ದಂಡ ಪಾವತಿಸಬೇಕಾಗಬಹುದು. ಬಳಕೆದಾರರು ಸಿಗ್ನಲ್ ಅಥವಾ ಟೆಲಿಗ್ರಾಮ್ಂತಹ ಇತರ ಆಪ್​ಗಳತ್ತ ಹೊರಳುವ ಸಾಧ್ಯತೆ ಇರುತ್ತದೆ.

ನಿಯಮಗಳ ಉಲ್ಲಂಘನೆ

ಜನಪ್ರಿಯ ಮೆಸೇಜಿಂಗ್ ಅಪ್ಲಿಕೇಶನ್ ವಾಟ್ಸ್​ಆಪ್, 2025ರ ನವೆಂಬರ್​ನಲ್ಲಿ ಭಾರತದಲ್ಲಿ 37.16 ಲಕ್ಷ ಖಾತೆಗಳನ್ನು ನಿರ್ಬಂಧಿಸಿದೆ. ಅಕ್ಟೋಬರ್​ನಲ್ಲಿ 23.24 ಲಕ್ಷ ವಾಟ್ಸ್​ಆಪ್ ಖಾತೆಗಳನ್ನು ನಿರ್ಬಂಧಿಸಲಾಗಿತ್ತು. ಮಾಹಿತಿ ತಂತ್ರಜ್ಞಾನ ಕಾಯ್ದೆ 2021ರ ಪ್ರಕಾರ, ವಾಟ್ಸ್​ಆಪ್ ನಿಯಮಮಗಳು ಮತ್ತು ಸರ್ಕಾರದ ನಿರ್ಬಂಧಗಳನ್ನು ಉಲ್ಲಂಘಿಸುವ ಖಾತೆಗಳ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತದೆ.

ತಜ್ಞರು ಏನಂತಾರೆ?

ವಾಟ್ಸ್​ಆಪ್ ಸೇರಿದಂತೆ ಯಾವುದೇ ಮೆಸೇಜಿಂಗ್ ಆಪ್​ಗಳು ಬಳಕೆದಾರರಿಗೆ ಸುರಕ್ಷತೆಯನ್ನು ಒದಗಿಸಲೇ ಬೇಕು. ಈ ವಿಷಯದಲ್ಲಿ ರಾಜಿ ಮಾಡಿಕೊಂಡರೆ ಅದು ಅಪರಾಧ ಮಾತ್ರವಲ್ಲ, ಆಯಾ ಕಂಪನಿಗಳು ಜನರ ವಿಶ್ವಾಸವನ್ನೇ ಕಳೆದುಕೊಳ್ಳುತ್ತವೆ. ಯಾವುದೇ ಕಾರಣಕ್ಕೂ ದತ್ತಾಂಶ ಸೋರಿಕೆ ಆಗಬಾರದು. ಅಂಥ ಸಾಧ್ಯತೆಗಳು ಇದ್ದಲ್ಲಿ, ಆಯಾ ಕಂಪನಿಗಳು ತಂತ್ರಜ್ಞಾನದ ಕಾವಲನ್ನು ಬಿಗಿ ಪಡಿಸಬೇಕು. ಖಾಸಗಿ ನೀತಿಯ ಬಗ್ಗೆ ಮೆಸೇಜಿಂಗ್ ಆಪ್ ಸಂಸ್ಥೆಗಳು ಬಳಕೆದಾರರಿಗೆ ನಿಖರ ಮತ್ತು ಸ್ಪಷ್ಟವಾದ ಮಾಹಿತಿ ನೀಡಬೇಕು. ಈ ವಿಷಯದಲ್ಲಿ ಪಾರದರ್ಶಕತೆ ಅಗತ್ಯ. ವಾಟ್ಸ್​ಆಪ್ ಮಾತೃಸಂಸ್ಥೆ ಮೆಟಾ ಮೇಲೆ ಮತ್ತೆ ಮತ್ತೆ ಆರೋಪಗಳು ಬರುತ್ತಿದ್ದು, ಈ ನಿಟ್ಟಿನಲ್ಲಿ ಕಂಪನಿ ಕೇವಲ ಸ್ಪಷ್ಟನೆ ನೀಡಿದರೆ ಸಾಕಾಗುವುದಿಲ್ಲ. ತನ್ನ ಚಾಟ್ ಫೀಚರ್ ಎಷ್ಟು ಮತ್ತು ಹೇಗೆ ಸುರಕ್ಷಿತವಾಗಿದೆ ಎಂಬುದನ್ನು ತಿಳಿಸಿಕೊಡಬೇಕು. ಭಾರತದಲ್ಲಂತೂ ವಾಟ್ಸ್ ಆಪ್​ನ ಬಳಕೆ ವ್ಯಾಪಕವಾಗಿದ್ದು, ದೇಶೀಯ ಆಪ್ ಅಭಿವೃದ್ಧಿ ಪಡಿಸಲು ಮತ್ತು ಅದರ ಬಳಕೆಯನ್ನು ಉತ್ತೇಜಿಸಲು ಇದು ಸಕಾಲ.