ಬಂಗಾಳವನ್ನು ಬಾಂಗ್ಲಾದೇಶ ಮಾಡಲು ಹೊರಟಿದೆಯೇ ಟಿಎಂಸಿ..? ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನಿತಿನ್ ನವೀನ್ ತೀವ್ರ ವಾಗ್ದಾಳಿ 
ದೇಶ

ಬಂಗಾಳವನ್ನು ಬಾಂಗ್ಲಾದೇಶ ಮಾಡಲು ಹೊರಟಿದೆಯೇ ಟಿಎಂಸಿ..? ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನಿತಿನ್ ನವೀನ್ ತೀವ್ರ ವಾಗ್ದಾಳಿ | Nitin Naveen

ಕೋಲ್ಕತ್ತಾ: ಪಶ್ಚಿಮ ಬಂಗಾಳದ ಆಡಳಿತಾರೂಢ ತೃಣಮೂಲ ಕಾಂಗ್ರೆಸ್ (TMC) ಸರ್ಕಾರದ ವಿರುದ್ಧ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರಾದ ನಿತಿನ್ ನವೀನ್​​(Nitin Naveen) ಬುಧವಾರ (ಜ.28) ಕಿಡಿಕಾರಿದ್ದಾರೆ. ರಾಜ್ಯದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆಗೆ ಅಡ್ಡಿಪಡಿಸುತ್ತಿರುವ ಮಮತಾ ಬ್ಯಾನರ್ಜಿ ನೇತೃತ್ವದ ಸರ್ಕಾರ, ಅಕ್ರಮ ನುಸುಳುಕೋರರಿಗೆ ರಕ್ಷಣೆ ನೀಡುತ್ತಿದೆ ಮತ್ತು ಹಿಂದೂಗಳನ್ನು ಗುರಿಯಾಗಿಸುತ್ತಿದೆ ಎಂದು ಗಂಭೀರವಾಗಿ ಆರೋಪಿಸಿದ್ದಾರೆ.

ಕೊಳಕು ರಾಜಕೀಯದ ಪರಮಾವಧಿ:

ಈ ಬಗ್ಗೆ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ನಿತಿನ್ ನವೀನ್​​ , ಟಿಎಂಸಿ ಪಕ್ಷವು ಮತದಾರರ ಪಟ್ಟಿಯಿಂದ ನಕಲಿ ಮತದಾರರು ಮತ್ತು ನುಸುಳುಕೋರರನ್ನು ತೆಗೆದುಹಾಕುವ ಚುನಾವಣಾ ಆಯೋಗದ ಪ್ರಯತ್ನವನ್ನು ಹತ್ತಿಕ್ಕಲು ಕೊಳಕು ರಾಜಕೀಯ ಮಾಡುತ್ತಿದೆ ಎಂದು ತೀವ್ರವಾಗ್ದಾಳಿ ನಡೆಸಿದ್ದಾರೆ.
ಚುನಾವಣಾ ಆಯೋಗವು ಪಾರದರ್ಶಕವಾಗಿ ಕೆಲಸ ಮಾಡುತ್ತಿದ್ದರೆ, ಟಿಎಂಸಿ ಮಾತ್ರ ನುಸುಳುಕೋರರ ರಕ್ಷಣೆಗೆ ನಿಂತಿದೆ. ಇದು ಬಂಗಾಳದ ಜನತೆಗೆ ಮಾಡುತ್ತಿರುವ ದ್ರೋಹ ಎಂದು ನವೀನ್​ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಬಂಗಾಳವನ್ನು ಬಾಂಗ್ಲಾದೇಶವಾಗಿಸುವ ಹುನ್ನಾರ..?

ಟಿಎಂಸಿಯ ಉದ್ದೇಶಗಳ ಬಗ್ಗೆ ಕಟುವಾಗಿ ಮಾತನಾಡಿದ ನಿತಿನ್ ನವೀನ್, ಮಮತಾ ಸರ್ಕಾರವು ಪಶ್ಚಿಮ ಬಂಗಾಳವನ್ನು ಬಾಂಗ್ಲಾದೇಶವನ್ನಾಗಿ ಪರಿವರ್ತಿಸಲು ಬಯಸುತ್ತಿದೆ. ಅಕ್ರಮ ನುಸುಳುಕೋರರಿಗೆ ಆಶ್ರಯ ನೀಡುವ ಮೂಲಕ ತನ್ನ ವೋಟ್ ಬ್ಯಾಂಕ್ ಭದ್ರಪಡಿಸಿಕೊಳ್ಳಲು ಹಿಂದೂಗಳ ಹಿತಾಸಕ್ತಿಯನ್ನು ಬಲಿಕೊಡಲಾಗುತ್ತಿದೆ ಎಂದು ಗುಡುಗಿದ್ದಾರೆ.
ಅಲ್ಲದೆ, ಮತದಾರರ ಪಟ್ಟಿಯಲ್ಲಿರುವ ನಕಲಿ ಹೆಸರುಗಳನ್ನು ತೆಗೆದುಹಾಕಲು ಆಯೋಗವು ಬದ್ಧವಾಗಿದೆ. ಆದರೆ ರಾಜ್ಯ ಸರ್ಕಾರ ಇದನ್ನು ತಡೆಯಲು ಜನರಲ್ಲಿ ಭಯ ಹುಟ್ಟಿಸುತ್ತಿದೆ ಎಂದು ನವೀನ್​ ಆರೋಪಿಸಿದ್ದಾರೆ.

ಅಧಿಕಾರಿಗಳಿಂದ ಬೆದರಿಕೆ - ಬಿಜೆಪಿಯ ಪ್ರತಿರೋಧ

ಚುನಾವಣಾ ಆಯೋಗವು ಅಕ್ರಮ ನಡೆಸುತ್ತಿದೆ ಎಂಬ ಟಿಎಂಸಿಯ ಆರೋಪಗಳನ್ನು ತಳ್ಳಿಹಾಕಿದ ನವೀನ್, ವಾಸ್ತವದಲ್ಲಿ ಟಿಎಂಸಿ ಅಧೀನದಲ್ಲಿರುವ ರಾಜ್ಯದ ಅಧಿಕಾರಿಗಳೇ ಸಾಮಾನ್ಯ ಜನರನ್ನು ಬೆದರಿಸುತ್ತಿದ್ದಾರೆ. ನಾಗರಿಕರ ಮೇಲೆ ಆಡಳಿತಾತ್ಮಕ ಒತ್ತಡ ಹೇರುವುದನ್ನು ನಿಲ್ಲಿಸದಿದ್ದರೆ ಬಿಜೆಪಿ ಸುಮ್ಮನೆ ಕೂರುವುದಿಲ್ಲ ಎಂದು ಎಚ್ಚರಿಸಿದರು.
ಮುಂಬರುವ ಚುನಾವಣೆಗಳಲ್ಲಿ ಮತದಾನದ ಪಾವಿತ್ರ್ಯತೆಯನ್ನು ಕಾಪಾಡಲು ಮತ್ತು ಆಡಳಿತದ ದಬ್ಬಾಳಿಕೆಯ ವಿರುದ್ಧ ಹೋರಾಡಲು ಬಿಜೆಪಿ ಸನ್ನದ್ಧವಾಗಿದೆ ಎಂದು ನಿತಿನ್​ ತಿಳಿಸಿದ್ದಾರೆ. ಬಂಗಾಳದಲ್ಲಿ ಪ್ರಜಾಪ್ರಭುತ್ವದ ರಕ್ಷಣೆಗಾಗಿ ಬಿಜೆಪಿ ನಿರಂತರವಾಗಿ ಹೋರಾಟ ನಡೆಸಲಿದೆ ಎಂದು ಹೇಳುವ ಮೂಲಕ, ನಿತಿನ್ ನಬಿನ್ ಅವರು ರಾಜ್ಯ ರಾಜಕಾರಣದಲ್ಲಿ ಹೊಸ ಸಂಚಲನ ಮೂಡಿಸಿದ್ದಾರೆ,(ಏಜೆನ್ಸೀಸ್).