ನವದೆಹಲಿ: ಇದೇ ವರ್ಷದ ಜನವರಿಯಲ್ಲಿ (2026) ಚಿನ್ನವು ತನ್ನ ಸಾರ್ವಕಾಲಿಕ ಗರಿಷ್ಠ ಮಟ್ಟಕ್ಕೆ ತಲುಪಿ, 10 ಗ್ರಾಂ ಚಿನ್ನದ ಬೆಲೆ 1.80 ಲಕ್ಷ ರೂಪಾಯಿ ಆಗಿತ್ತು. ಒಂಬತ್ತು ತಿಂಗಳ ನಂತರ ಈಗ ಧನತೇರಸ್ ವೇಳೆಗೆ ಇದು ಸರಾಸರಿ 1.44 ಲಕ್ಷ ರೂಪಾಯಿಗೆ ಇಳಿದಿದೆ, ಅಂದರೆ ಸುಮಾರು 20%ರಷ್ಟು ಕುಸಿತ ಕಂಡಿದೆ. ಆದರೆ, ಈ ಹಳದಿಲೋಹದ ದರದಲ್ಲಿ ಏರಿಳಿತ ಮುಂದುವರಿಯಲಿದೆ. ಹಾಗಾದರೆ ಈ ಧನತೇರಸ್ಗೆ ಚಿನ್ನ ಖರೀದಿಸಬೇಕೋ ಬೇಡವೋ, ಮುಂಬರುವ ವರ್ಷಗಳಲ್ಲಿ ಚಿನ್ನದ ಬೆಲೆ ಎಷ್ಟಾಗಬಹುದು? ತಜ್ಞರು ಏನೆನ್ನುತ್ತಾರೆ? ಈ ಕುರಿತಾದ ಮಾಹಿತಿ ಇಲ್ಲಿದೆ.
ಚಿನ್ನವು 2035ರ ವೇಳೆಗೆ ಪ್ರತಿ ಔನ್ಸ್ಗೆ 35,000 ಡಾಲರ್, ಅಂದರೆ 10 ಗ್ರಾಂಗೆ ಸುಮಾರು 10.5 ಲಕ್ಷ ರೂಪಾಯಿವರೆಗೆ ತಲುಪಬಹುದು. ಮುಂದಿನ 5 ವರ್ಷಗಳಲ್ಲಿ ಚಿನ್ನ ಎಷ್ಟು ದುಬಾರಿಯಾಗಬಹುದೆಂದರೆ, ಅದು ಸಾಮಾನ್ಯ ಜನರ ಬಳಿ ಕಾಣಿಸುವುದೇ ಇಲ್ಲ. ಅದು ಕೇಂದ್ರೀಯ ಬ್ಯಾಂಕ್ಗಳು ಅಥವಾ ಆಯ್ದ ಶ್ರೀಮಂತರ ತಿಜೋರಿಗಳಿಗೆ ಮಾತ್ರ ಸೀಮಿತವಾಗಿ ಉಳಿಯಬಹುದು ಎಂದು ಪರಿಸ್ಥಿತಿಯನ್ನು ಮುನ್ನಂದಾಜಿಸಿದ್ದಾರೆ ಮಾರುಕಟ್ಟೆ ತಜ್ಞರು.
ಹೂಡಿಕೆ ಸಲಹಾ ಸಂಸ್ಥೆಯಾದ ಕೇಡಿಯಾ ಅಡ್ವೈಸರಿಯ ಪ್ರಕಾರ, 2026ರ ಆರಂಭದಲ್ಲಿ ಚಿನ್ನವು ಸಾರ್ವಕಾಲಿಕ ಗರಿಷ್ಠ ಮಟ್ಟವನ್ನು ತಲುಪಿದಾಗ, ಚಿಲ್ಲರೆ ವ್ಯಾಪಾರಿಗಳು ಸಾಲ ಪಡೆದು ಚಿನ್ನದಲ್ಲಿ ಹೂಡಿಕೆ ಮಾಡಿದರು. ಯಾವುದೇ ಸ್ವತ್ತಿನಲ್ಲಿ ಅಗತ್ಯಕ್ಕಿಂತ ಹೆಚ್ಚು ಖರೀದಿ ನಡೆದು, ಅದರ ಬಹುಪಾಲು ಸಾಲದ ಮೇಲೆ ಆಧಾರಿತವಾಗಿದ್ದಾಗ ಬೆಲೆಗಳು ಕುಸಿಯುತ್ತವೆ. ಈ ಕಾರಣದಿಂದಾಗಿ ಚಿನ್ನದ ಬೆಲೆ 1.80 ಲಕ್ಷ ರೂಪಾಯಿಯಿಂದ ಅಕ್ಟೋಬರ್ನಲ್ಲಿ 1.40 ಲಕ್ಷ ರೂಪಾಯಿಗಿಂತ ಕೆಳಗೆ ಇಳಿಯಿತು. ಮುಂದಿನ 3ರಿಂದ 5 ವರ್ಷಗಳವರೆಗೆ ಚೀನಾ ಮತ್ತು ಭಾರತದಂತಹ ದೇಶಗಳು ಚಿನ್ನದ ಸಂಗ್ರಹವನ್ನು ಹೆಚ್ಚಿಸುತ್ತಲೇ ಇರುತ್ತವೆ. ಇದರಿಂದಾಗಿ ಚಿನ್ನದ ಬೆಲೆ ಮತ್ತೆ ಏರಿಕೆಯಾಗಲಿದೆ.
ಮುಂದಿನ ಒಂದು ವರ್ಷದಲ್ಲಿ ಚಿನ್ನವು ಮತ್ತೆ ತನ್ನ ಸಾರ್ವಕಾಲಿಕ ಗರಿಷ್ಠ ಮಟ್ಟವಾದ 1.80 ಲಕ್ಷ ರೂಪಾಯಿಯ ಸಮೀಪಕ್ಕೆ ತಲುಪಲಿದೆ, ಆದರೆ ಅಲ್ಲಿಂದ ಕುಸಿತ ಆರಂಭವಾಗಲಿದೆ. ಯಾವಾಗ ಚಿನ್ನವು ತನ್ನ ಅತ್ಯಂತ ಕನಿಷ್ಠ ಮಟ್ಟದಲ್ಲಿರುತ್ತದೆಯೋ, ಆಗ ಷೇರು ಮಾರುಕಟ್ಟೆಯು ತನ್ನ ಗರಿಷ್ಠ ಮಟ್ಟವನ್ನು ತಲುಪಲಿದೆ. 2028ರ ಹೋಳಿ ಹಬ್ಬದವರೆಗೆ ಚಿನ್ನದ ಬೆಲೆಯಲ್ಲಿ ಹೆಚ್ಚಿನ ಏರಿಕೆಯಾಗುವುದಿಲ್ಲ. ಆದರೆ ಆ ನಂತರ ತೀವ್ರ ಏರಿಕೆ ಕಂಡುಬರಲಿದೆ. ಈ ಸಮಯದಲ್ಲಿ ಯಾರು ಚಿನ್ನದಲ್ಲಿ ಹೂಡಿಕೆ ಮಾಡುತ್ತಾರೋ, ಅವರಿಗೆ ಮುಂದಿನ 2 ವರ್ಷಗಳಲ್ಲಿ ಅತ್ಯುತ್ತಮ ರಿಟರ್ನ್ಸ್ ದೊರೆಯುವ ಸಾಧ್ಯತೆಯಿದೆ.
ಮಾರುಕಟ್ಟೆ ತಜ್ಞರು ಹಾಗೂ ವಿಶ್ಲೇಷಕರ ಪ್ರಕಾರ, ಚಿನ್ನವು ತನ್ನ ಕನಿಷ್ಠ ಮಟ್ಟದಲ್ಲಿದೆ. ಹೂಡಿಕೆದಾರರು ಇಲ್ಲಿಂದಲೇ ಖರೀದಿ ಆರಂಭಿಸಬಹುದು. ಮುಂದಿನ ಒಂದು ವರ್ಷದವರೆಗೆ ಚಿನ್ನದ ಬೆಲೆ ಏರಿಕೆಯು ಸೀಮಿತವಾಗಿರುತ್ತದೆ, ಆದರೆ ದೀರ್ಘಾವಧಿಯ ಹೂಡಿಕೆ ಮಾಡಲು ಇದು ಸೂಕ್ತ ಸಮಯವಾಗಿದೆ. 2028ರಲ್ಲಿಯೂ ಚಿನ್ನವು ತನ್ನ ಅತ್ಯಂತ ಕನಿಷ್ಠ ಮಟ್ಟದಲ್ಲಿರಲಿದ್ದು, ಹೂಡಿಕೆ ಮಾಡಲು ಅದು ಅತ್ಯಂತ ಸೂಕ್ತ ಸಮಯವಾಗಿರುತ್ತದೆ. ಆ ನಂತರದ ಮುಂದಿನ 2 ವರ್ಷಗಳಲ್ಲಿ ಚಿನ್ನದ ಮೇಲೆ ಅತ್ಯುತ್ತಮ ರಿಟರ್ನ್ಸ್ ದೊರೆಯಲಿದೆ. ವಿಶ್ವದ ಸಾಲದ ಹೊರೆ ಎಂದಿಗೂ ಮುಗಿಯುವುದಿಲ್ಲ, ಆದ್ದರಿಂದ ಚಿನ್ನದ ಬೆಲೆಗಳೂ ಕಡಿಮೆಯಾಗುವುದಿಲ್ಲ ಎಂದು ಅಮೆರಿಕನ್ ಅರ್ಥಶಾಸ್ತ್ರಜ್ಞ ಜಿಮ್ ರಿಕಾಡ್ಸ್ವ್ರ್ ಹೇಳುತ್ತಾರೆ. ಸಣ್ಣಪುಟ್ಟ ಏರಿಳಿತಗಳು ಕಂಡುಬರಬಹುದಾದರೂ, ದೀರ್ಘಾವಧಿಯ ಹೂಡಿಕೆದಾರರಿಗೆ ಇದರಿಂದ ಯಾವುದೇ ವ್ಯತ್ಯಾಸವಾಗುವುದಿಲ್ಲ.
ಮೂವತ್ತು ಟ್ರಿಲಿಯನ್ ಡಾಲರ್ ಗಾತ್ರದ ಅಮೆರಿಕನ್ ಆರ್ಥಿಕತೆಯ ಮೇಲೆ ಪ್ರಸ್ತುತ ಸುಮಾರು 40 ಟ್ರಿಲಿಯನ್ ಡಾಲರ್ ಸಾಲದ ಹೊರೆಯಿದೆ! ಈ ಬೃಹತ್ ಸಾಲವನ್ನು ತೀರಿಸಲು ಅಮೆರಿಕದ ಮುಂದೆ ಕೇವಲ ಮೂರು ಮಾರ್ಗಗಳಿವೆ.
ಅಮೆರಿಕವು ತನ್ನನ್ನು ತಾನು ದಿವಾಳಿ ಎಂದು ಘೊಷಿಸಿಕೊಳ್ಳುವುದು.
ಜಿಡಿಪಿ ಬೆಳವಣಿಗೆಯ ದರವನ್ನು ಹೆಚ್ಚಿಸುವುದು. ಆದರೆ, ಇದು ಅತ್ಯಂತ ನಿಧಾನಗತಿಯ ಪ್ರಕ್ರಿಯೆ.
ಜಾಗತಿಕ ಮಟ್ಟದಲ್ಲಿ ಹಣದುಬ್ಬರವನ್ನು (ಬೆಲೆ ಏರಿಕೆ) ಹೆಚ್ಚಿಸಿ, ಸಾಲದ ವಾಸ್ತವಿಕ ಮೌಲ್ಯವನ್ನು ಕುಗ್ಗಿಸುವುದು.
ಇದನ್ನು ಸರಳವಾಗಿ ಅರ್ಥೈಸಿಕೊಳ್ಳಲು ಒಂದು ಉದಾಹರಣೆ ನೋಡಬಹುದು. 10 ವರ್ಷಗಳ ಹಿಂದೆ ನೀವು 15 ಲಕ್ಷ ರೂ. ಸಾಲ ಪಡೆದಿದ್ದೀರಿ ಎಂದು ಭಾವಿಸೋಣ. ಇಂದು ನೀವು ಆ ಸಾಲವನ್ನು ಮರುಪಾವತಿಸಿದರೆ, ದಾಖಲೆಗಳಲ್ಲಿ ಸಾಲ ಸಂಪೂರ್ಣವಾಗಿ ತೀರಿದಂತೆ ಕಾಣಿಸುತ್ತದೆ. ಆದರೆ ಇಂದಿನ ಮಾರುಕಟ್ಟೆಯಲ್ಲಿ ಆ 15 ಲಕ್ಷ ರೂ. ನೈಜ ಮೌಲ್ಯ ಗಣನೀಯವಾಗಿ ಕುಸಿದಿರುತ್ತದೆ. ಸಾಲ ಪಡೆದ ಸಮಯದಲ್ಲಿ 15 ಲಕ್ಷ ರೂ.ನಲ್ಲಿ ಒಂದು ಮನೆಯನ್ನು ನಿರ್ವಿುಸಬಹುದಾಗಿತ್ತು, ಆದರೆ ಇಂದಿನ ಹಣದುಬ್ಬರದಿಂದಾಗಿ ಅದೇ ಮನೆಯ ನಿರ್ವಣಕ್ಕೆ 60 ಲಕ್ಷ ರೂ. ಬೇಕಾಗುತ್ತದೆ. ಅಂದರೆ ಇಲ್ಲಿ ಸಾಲ ಪಡೆದವರಿಗೆ ಲಾಭ ಮತ್ತು ಸಾಲ ನೀಡಿದವರಿಗೆ ನಷ್ಟವಾಗುತ್ತದೆ.
ಅಮೆರಿಕ ಕೂಡ ಇದೇ ರೀತಿಯ ತಂತ್ರವನ್ನು ಅನುಸರಿಸುತ್ತದೆ. ಅದು ಹಣದುಬ್ಬರವನ್ನು ಹೆಚ್ಚಿಸುವ ಮೂಲಕ ಇತರ ದೇಶಗಳಿಂದ ಪಡೆದ ಸಾಲವನ್ನು ಕಡಿಮೆ ನೈಜ ಮೌಲ್ಯದಲ್ಲಿ ಮರುಪಾವತಿಸುತ್ತದೆ. ಮಾರುಕಟ್ಟೆಗೆ ಹೆಚ್ಚಿನ ಪ್ರಮಾಣದ ಡಾಲರ್ಗಳನ್ನು ಬಿಡುಗಡೆ ಮಾಡಿ, ಡಾಲರ್ ಮೌಲ್ಯವನ್ನು ಕುಸಿಯುವಂತೆ ಮಾಡುವ ಮೂಲಕ ಅಮೆರಿಕ ಹಣದುಬ್ಬರವನ್ನು ಹೆಚ್ಚಿಸುತ್ತದೆ. ಇಂತಹ ಸಂದರ್ಭದಲ್ಲಿ ಹೂಡಿಕೆದಾರರು ಚಿನ್ನವನ್ನು ಅತ್ಯಂತ ಸುರಕ್ಷಿತ ಹೂಡಿಕೆ ಎಂದು ಪರಿಗಣಿಸಿ ಹೆಚ್ಚಿನ ಪ್ರಮಾಣದಲ್ಲಿ ಖರೀದಿಸಲು ಮುಂದಾಗುತ್ತಾರೆ. ಇದರಿಂದಾಗಿ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ ತೀವ್ರವಾಗಿ ಏರಿಕೆಯಾಗುತ್ತದೆ.
ವಿಶ್ವದ ಪ್ರಮುಖ ಬ್ಯಾಂಕ್ಗಳು ಕೂಡ ಮುಂದಿನ ವರ್ಷ ಚಿನ್ನದ ಬೆಲೆಯಲ್ಲಿ ಏರಿಕೆಯಾಗಲಿದೆ ಎಂದು ಅಂದಾಜಿಸಿವೆ.
ಜೆ.ಪಿ. ಮಾರ್ಗನ್: ಚಿನ್ನವು 2027ರ ಅಂತ್ಯದ ವೇಳೆಗೆ ಪ್ರತಿ ಔನ್ಸ್ಗೆ 6,300 ಡಾಲರ್ಗಳವರೆಗೆ ತಲುಪಬಹುದು.
ಗೋಲ್ಡ್ಮ್ಯಾನ್ ಸ್ಯಾಕ್ಸ್: ಚಿನ್ನದ ಬೆಲೆ 2027ರಲ್ಲಿ ಪ್ರತಿ ಔನ್ಸ್ಗೆ 5,400 ಡಾಲರ್ಗಳಷ್ಟಿರಲಿದೆ.
ಬ್ಯಾಂಕ್ ಆಫ್ ಅಮೆರಿಕ: 2027ರ ಮೊದಲ ತ್ರೖೆಮಾಸಿಕದಲ್ಲಿ ಚಿನ್ನದ ಬೆಲೆ ಪ್ರತಿ ಔನ್ಸ್ಗೆ 4,750 ಡಾಲರ್ಗಳಷ್ಟಿರಲಿದೆ. ಎರಡು ಮತ್ತು ಮೂರನೇ ತ್ರೖೆಮಾಸಿಕದ ವೇಳೆಗೆ ಇದು 5,000 ಡಾಲರ್ಗಳಿಗೆ ತಲುಪಲಿದೆ.
ಮಾರ್ಗನ್ ಸ್ಟಾನ್ಲಿ: 2027ರಲ್ಲಿ ಚಿನ್ನದ ಸರಾಸರಿ ಬೆಲೆ ಪ್ರತಿ ಔನ್ಸ್ಗೆ 5,050 ಡಾಲರ್ಗಳಾಗಿರಲಿದೆ. ಚಿನ್ನದ ಬೆಲೆ ಗರಿಷ್ಠ 6,818 ಡಾಲರ್ ಮತ್ತು ಕನಿಷ್ಠ 3,788 ಡಾಲರ್ವರೆಗೆ ಹೋಗಬಹುದು. 2028ರಲ್ಲಿ ಚಿನ್ನದ ಬೆಲೆ ಕುಸಿಯಲಿದ್ದು, ಸರಾಸರಿ ಪ್ರತಿ ಔನ್ಸ್ಗೆ 4,688 ಡಾಲರ್ಗಳಿಗೆ ಇಳಿಯುವ ಸಾಧ್ಯತೆ ಇದೆ.
ರಷ್ಯಾ-ಯೂಕ್ರೇನ್ ಯುದ್ಧ ಪ್ರಾರಂಭವಾದ ನಂತರ ಅಮೆರಿಕವು ರಷ್ಯಾದ 300 ಶತಕೋಟಿ ವಿದೇಶಿ ಮೀಸಲು ನಿಧಿಯನ್ನು ಮುಟ್ಟುಗೋಲು ಹಾಕಿಕೊಂಡಿತು (ಫ್ರೀಜ್ ಮಾಡಿತು). ಈ ಕ್ರಮವು ಭಾರತ, ಚೀನಾ ಮತ್ತು ಪೋಲೆಂಡ್ನಂತಹ ಪ್ರಮುಖ ರಾಷ್ಟ್ರಗಳಲ್ಲಿ ಎಚ್ಚರಿಕೆಯ ಗಂಟೆ ಮೊಳಗಿಸಿತು. ತಮ್ಮ ಬಳಿ ಇರುವ ಡಾಲರ್ ಮೀಸಲು ನಿಧಿಗಳು ಅಮೆರಿಕ ಬಯಸುವವರೆಗೆ ಮಾತ್ರ ಸುರಕ್ಷಿತವಾಗಿರುತ್ತವೆ ಎಂಬ ಆತಂಕ ಈ ದೇಶಗಳಲ್ಲಿ ಮೂಡಿತು. ಪರಿಣಾಮವಾಗಿ, ಪ್ರಮುಖ ರಾಷ್ಟ್ರಗಳು ಈಗ ಭೌತಿಕ ಚಿನ್ನವನ್ನು ಸಂಗ್ರಹಿಸಲು ಆದ್ಯತೆ ನೀಡುತ್ತಿವೆ.
2016ರಿಂದ 2026ರ ನಡುವಿನ ಅವಧಿಯಲ್ಲಿ ಚೀನಾ ತನ್ನ ವಿದೇಶಿ ವಿನಿಮಯ ಮೀಸಲಿನಲ್ಲಿ ಚಿನ್ನದ ಪಾಲನ್ನು 27%ರಷ್ಟು ಹೆಚ್ಚಿಸಿಕೊಂಡಿದ್ದರೆ, ಭಾರತವು ಬರೋಬ್ಬರಿ 57%ರಷ್ಟು ಹೆಚ್ಚಿಸಿಕೊಂಡಿದೆ. 2026ರ ಸೆಪ್ಟೆಂಬರ್ ಒಂದೇ ತಿಂಗಳಲ್ಲಿ ಚೀನಾ ಬರೋಬ್ಬರಿ 23 ಟನ್ ಚಿನ್ನವನ್ನು ಖರೀದಿಸಿದೆ. ಮಾರುಕಟ್ಟೆಯಲ್ಲಿ ಲಭ್ಯವಿರುವ ಪೂರೈಕೆಗಿಂತ ಬೇಡಿಕೆ ಗಣನೀಯವಾಗಿ ಹೆಚ್ಚಿರುವುದರಿಂದ ಮುಂಬರುವ ದಿನಗಳಲ್ಲಿ ಚಿನ್ನದ ಬೆಲೆ ಮತ್ತಷ್ಟು ಏರಿಕೆಯಾಗಲಿದೆ.
ಅಮೆರಿಕವು ಪ್ರಸ್ತುತ ಜಗತ್ತಿನಲ್ಲೇ ಅತಿ ಹೆಚ್ಚು ಅಂದರೆ 8,133 ಟನ್ ಚಿನ್ನದ ಬೃಹತ್ ಸಂಗ್ರಹವನ್ನು ಹೊಂದಿದೆ. ಆದರೆ ಅಮೆರಿಕದ ಬ್ಯಾಲೆನ್ಸ್ ಶೀಟ್ನಲ್ಲಿ ಈ ಚಿನ್ನದ ಮೌಲ್ಯವನ್ನು ಇಂದಿಗೂ 1970ರ ದಶಕದ ಹಳೆಯ ದರವಾದ ಪ್ರತಿ ಔನ್ಸ್ಗೆ ಕೇವಲ 42.22 ಡಾಲರ್ ಎಂದೇ ನಮೂದಿಸಲಾಗಿದೆ. ಯಾವ ದಿನ ಅಮೆರಿಕವು ತನ್ನ ಈ ಚಿನ್ನದ ಸಂಗ್ರಹವನ್ನು ಪ್ರಸ್ತುತ ಮಾರುಕಟ್ಟೆ ದರಕ್ಕೆ ಅನುಗುಣವಾಗಿ ಅಧಿಕೃತವಾಗಿ ಮರುಮೌಲ್ಯಮಾಪನ ಮಾಡುತ್ತದೆಯೋ, ಅದೇ ದಿನ ಏಕಾಏಕಿ ಇಡೀ ವಿಶ್ವದಾದ್ಯಂತ ಚಿನ್ನದ ಬೆಲೆಗಳು ಶೇ.25ರಷ್ಟು ಜಿಗಿಯುವ ಸಾಧ್ಯತೆಯಿದೆ.