ಚೆನ್ನೈ: ಜನಸಂಖ್ಯೆ ಆಧಾರದ ಮೇಲೆ ಕ್ಷೇತ್ರ ಪುನರ್ವಿಂಗಡಣೆ ಪ್ರಕ್ರಿಯೆಗೆ(Delimitation plan) ಸಾಂವಿಧಾನಿಕ ತಿದ್ದುಪಡಿ ಪ್ರಕ್ರಿಯೆ ಮುಂದಾಗಿರುವ ಕೇಂದ್ರ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ಮುಂದುವರೆಸಿರುವ ತಮಿಳುನಾಡು ಸಿಎಂ ಎಂ.ಕೆ.ಸ್ಟಾಲಿನ್, ದೇಶದ ಅಭಿವೃದ್ಧಿಗೆ ಕೊಡುಗೆ ನೀಡಿದ್ದಕ್ಕೆ ದಕ್ಷಿಣ ರಾಜ್ಯಗಳಿಗೆ ಸಿಕ್ಕ ಬಹುಮಾನವೇ ಇದು? ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನಾಳೆಯಿಂದ ಆರಂಭವಾಗಲಿರುವ ಮೂರು ದಿನಗಳ ವಿಶೇಷ ಅಧಿವೇಶನದಲ್ಲಿ ಮಹಿಳಾ ಮೀಸಲಾತಿ ಮಸೂದೆ ಮತ್ತು ಕ್ಷೇತ್ರ ಪುನರ್ವಿಂಗಡಣೆ ಪ್ರಕ್ರಿಯೆ ಬಗ್ಗೆ ಸಾಂವಿಧಾನಿಕ ತಿದ್ದುಪಡಿ ಮಾಡಲು ಕೇಂದ್ರ ಸರ್ಕಾರ ಮುಂದಾಗಿರುವ ಹಿನ್ನೆಲೆ ಎಕ್ಸ್ನಲ್ಲಿ ಮತ್ತೊಂದು ವಿಡಿಯೋ ಮೂಲಕ ಮಾತಣಾಡಿರುವ ಅವರು, ಕ್ಷೇತ್ರ ಪುನರ್ವಿಂಗಡಣೆ ಪ್ರಕ್ರಿಯೆ ದಕ್ಷಿಣ ರಾಜ್ಯಗಳಿಗೆ ಮಾಡಿದ ಐತಿಹಾಸಿಕ ಅನ್ಯಾಯ ಎಂದು ಕರೆದಿದ್ದಾರೆ.
ಕೇಂದ್ರ ಸರ್ಕಾರ ಬೆಂಕಿಯೊಂದಿಗೆ ಆಟವಾಡುತ್ತಿದೆ. ಜನಸಂಖ್ಯಾ ನಿಯಂತ್ರಣವನ್ನು ಪರಿಣಾಮಕಾರಿಯಾಗಿ ಜಾರಿಗೆ ತರುತ್ತಿರುವ ಮತ್ತು ಅಭಿವೃದ್ಧಿಯ ಹಾದಿಯಲ್ಲಿರುವ ರಾಜ್ಯಗಳನ್ನು ಅದು ಶಿಕ್ಷಿಸುತ್ತದೆಯೇ? ಎಂದು ಕಿಡಿಕಾರಿರುವ ಅವರು, ಬಿಜೆಪಿ ಉತ್ತರದ ರಾಜ್ಯಗಳಿಗೆ ರಾಜಕೀಯವಾಗಿ ಲಾಭ ಮಾಡಿಕೊಡಲು ಮತ್ತು ದಕ್ಷಿಣದ ಪ್ರಭಾವವನ್ನು ಕಡಿಮೆ ಮಾಡಲು ಪ್ರಯತ್ನಿಸಿದೆ ಎಂದು ಆರೋಪಿಸಿದ್ದಾರೆ.
ಜನಸಂಖ್ಯೆಯ ಆಧಾರದ ಮೇಲೆ ಕ್ಷೇತ್ರಗಳ ವಿಭಜನೆ ನಡೆದರೆ, ಜನಸಂಖ್ಯಾ ನಿಯಂತ್ರಣ ಜಾರಿಗೆ ತಂದಿರುವ ದಕ್ಷಿಣ ರಾಜ್ಯಗಳ ಲೋಕಸಭಾ ಸ್ಥಾನಗಳು ಕಡಿಮೆಯಾಗುತ್ತವೆ ಮತ್ತು ಉತ್ತರ ರಾಜ್ಯಗಳ ಸ್ಥಾನಗಳು ತೀವ್ರವಾಗಿ ಹೆಚ್ಚಾಗುತ್ತವೆ. ಅಭಿವೃದ್ಧಿ ಹೊಂದುತ್ತಿರುವ ರಾಜ್ಯಗಳ ಧ್ವನಿಯನ್ನು ಹತ್ತಿಕ್ಕುವುದು ಒಕ್ಕೂಟ ವ್ಯವಸ್ಥೆಗೆ ಅಪಾಯಕಾರಿ. ಈಗಾಗಲೇ ನಿಧಿ ಹಂಚಿಕೆಯಲ್ಲಿ ಅನ್ಯಾಯವಾಗುತ್ತಿದೆ. ಈಗ ರಾಜಕೀಯವಾಗಿ ಅನ್ಯಾಯ ಮಾಡಿದ್ರೆ ಸುಮ್ಮನಿರಲ್ಲ. ತಕ್ಷಣ ಈ ಪ್ರಕ್ರಿಯೆಯನ್ನು ಕೈಬಿಡಬೇಕು, ಇಲ್ಲದಿದ್ದರೆ ಭಾರಿ ಬೆಲೆ ತೆರಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.
ರಾಜ್ಯಾದ್ಯಂತ ಕಪ್ಪು ಬಾವುಟ ಪ್ರತಿಭಟನೆಗೆ ಕರೆ
ಇನ್ನೂ ಕೇಂದ್ರ ಸರ್ಕಾರದ ಈ ಮಸೂದೆ ವಿರುದ್ಧ ಡಿಎಂಕೆ ಕಾರ್ಯಕರ್ತರಿಗೆ ಮತ್ತು ಜನರಿಗೆ ರಾಜ್ಯಾದ್ಯಂತ ಕಪ್ಪು ಬಾವುಟ ಪ್ರದರ್ಶನ ಮೂಲಕ ಪ್ರತಿಭಟಿಸಲು ಸ್ಟಾಲಿನ್ ಕರೆ ನೀಡಿದ್ದಾರೆ. ರಾಜ್ಯದ ಜನರು ತಮ್ಮ ಮನೆಗಳಿಂದ ಕಪ್ಪು ಬಾವುಟಗಳನ್ನು ಹಾರಿಸಬೇಕು. ತಮಿಳುನಾಡು ಹೋರಾಡುತ್ತದೆ ಮತ್ತು ತಮಿಳುನಾಡು ಗೆಲ್ಲುತ್ತದೆ ಎಂದು ಹೇಳಿದ್ದಾರೆ (ಏಜೆನ್ಸೀಸ್).