ಬೆಂಗಳೂರು: ಎಸ್ಐಆರ್ ವಿವಾದಕ್ಕೆ ಸಂಬಂಧಿಸಿದಂತೆ ಸಿಇಸಿ ಜ್ಞಾನೇಶ್ ಕುಮಾರ್ ಅವರ ರಾಜೀನಾಮೆಗೆ ಒತ್ತಾಯಿಸಿ ಶನಿವಾರ(ಅ.10) ಸಿಜೆಪಿ ಮತ್ತು ವಿಪಕ್ಷಗಳ ಹಮ್ಮಿಕೊಂಡಿದ್ದ ಪ್ರತಿಭಟನೆಗೂ ಮುನ್ನವೇ ಹೋರಾಟಗಾರರನ್ನು ಬಂಧಿಸಿದ್ದನ್ನು ಖಂಡಿಸಿರುವ ಸಿಎಂ ಡಿ.ಕೆ.ಶಿವಕುಮಾರ್, ದೇಶದಲ್ಲಿ ಪ್ರಜಾಪ್ರಭುತ್ವ ಇದಿಯೋ ಅಥವಾ ತುರ್ತು ಪರಿಸ್ಥಿತಿ ಇದೀಯೋ? ಪ್ರಧಾನಿ ಉತ್ತರ ನೀಡಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಭಾನುವಾರ(ಅ. 11) ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದೇಶದಲ್ಲಿ ಪ್ರಜಾಪ್ರಭುತ್ವವಿದೆ. ಎಲ್ಲರಿಗೂ ಪ್ರತಿಭಟನೆ ಮಾಡುವ ಹಕ್ಕಿದೆ. ಪ್ರತಿಭಟನೆಗೆ ಅನುಮತಿ ಕೊಡಿ ಅಥವಾ ಬಿಡಿ, ಅದು ಬೇರೆ ವಿಚಾರ. ಪ್ರತಿಭಟನೆ ಆರಂಭಕ್ಕೂ ಮುನ್ನವೇ ಇಂಟರ್ನೆಟ್ ನಿಲ್ಲಿಸೋದು, ತಡೆಹಿಡಿಯೋದು ಏನನ್ನು ಸೂಚಿಸುತ್ತದೆ. ದೇಶದಲ್ಲಿ ಪ್ರಜಾಪ್ರಭುತ್ವ ಇದಿಯೋ ಅಥವಾ ತುರ್ತು ಪರಿಸ್ಥಿತಿ ಇದೀಯೋ? ಪ್ರಧಾನಿ ಉತ್ತರ ನೀಡಬೇಕು ಎಂದು ಕಿಡಿಕಾರಿದ್ದಾರೆ.
ಪ್ರಪಂಚದಲ್ಲಿ ಭಾರತ ಪ್ರಜಾಪ್ರಭುತ್ವಕ್ಕೆ ಹೆಸರುವಾಸಿಯಾಗಿದೆ ಎಂದಿರುವ ಡಿಕೆಶಿ, ದೇಶದಲ್ಲಿ ಯಾರು ಬೇಕಾದರೂ ಪ್ರತಿಭಟನೆ ಮಾಡಬಹುದು. ಧ್ವನಿ ಎತ್ತಲು ಅವಕಾಶ ಇದೆ. ಆದರೆ ಏಕಾಏಕಿ ಹೋಗಿ ವಿಮಾನದಲ್ಲಿ ಹೋಗಿ ಹೋರಾಟಗಾರರನ್ನು ಬಂಧನ ಮಾಡೋದು ದೇಶಕ್ಕೆ ಮಾಡಿದ ದೊಡ್ಡ ಅವಮಾನ ಎಂದು ವಾಗ್ದಾಳಿ ನಡೆಸಿದ್ದಾರೆ.
ಸಿಜೆಪಿ ನೇತೃತ್ವದ ಹೋರಾಟಕ್ಕೆ ಕಾಂಗ್ರೆಸ್ ಬೆಂಬಲ ನೀಡದ ವಿಚಾರದ ಬಗ್ಗೆ ಸುದ್ದಿಗಾರರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಅವರು ಅವರದೇ ಆದ ರೀತಿಯಲ್ಲಿ ಪ್ರತಿಭಟನೆ ಮಾಡುತ್ತಿದ್ದಾರೆ. ನಾವು ಅವರನ್ನು ತಡೆಯಲು ಬಯಸಲ್ಲ. ಕಾಂಗ್ರೆಸ್ ಪಕ್ಷ ಕೂಡ ತನ್ನದೇ ಆದ ರೀತಿಯಲ್ಲಿ ಪ್ರತಿಭಟನೆ ಮಾಡುತ್ತದೆ. ಈ ವಿಚಾರದಲ್ಲಿ ಮಧ್ಯಪ್ರವೇಶಿಸಲು ಬಯಸುವುದಿಲ್ಲ. ಅದಕ್ಕೆ ನಾವು ಯಾವುದೇ ಅಡ್ಡಿಯನ್ನೂ ಮಾಡುವುದಿಲ್ಲ ಎಂದಿದ್ದಾರೆ.
ನಮ್ಮ ಇಂಡಿಯಾ ಕೂಟದ ಕೆಲವು ಪಕ್ಷಗಳು ಪ್ರತಿಭಟನೆಯಲ್ಲಿ ಭಾಗವಹಿಸುತ್ತಿವೆ. ಅದು ಅವರ ಹಕ್ಕು, ನಾವು ಅವರನ್ನ ತಡೆಯುವ ಕೆಲಸ ಮಾಡಲ್ಲ. ನಾವು ಕೂಡ ಅದರಲ್ಲಿ ಭಾಗಿಯಾಗಬೇಕೆಂದೇನು ಇಲ್ಲ. ನಾಳೆ ನಾವು ನಮ್ಮದೇ ರೀತಿಯಲ್ಲಿ ಪ್ರತಿಭಟನೆ ಮಾಡುತ್ತಿದ್ದೇವೆ. ನಾಳೆ ಎಲ್ಲಾ ಶಾಸಕರು ದೆಹಲಿಯಲ್ಲಿರಬೇಕು ಎಂದು ಹೇಳಿದ್ದೇವೆ. ಎಲ್ಲರೂ ಹೋಗುತ್ತಿದ್ದೇವೆ ಎಂದು ತಿಳಿಸಿದ್ದಾರೆ.
ಮತದಾರರ ರಕ್ಷಣೆ ಮಾಡೋದು ನಮ್ಮ ಜವಾಬ್ದಾರಿ. ನಾವು ಮತದಾರರ ಹಕ್ಕಿಗಾಗಿ ಹೋರಾಟ ಮಾಡುತ್ತಿದ್ದೇವೆ. ಮತದಾರರನ್ನ ಡಿಲೀಟ್ ಮಾಡಲು ಬರಲ್ಲ. ಎಸ್ಐಆರ್ ಹೆಸರಲ್ಲಿ ಕೋಟ್ಯಂತರ ಜನರನ್ನು ಡಿಲಿಟ್ ಮಾಡಿದ್ದಾರೆ. ಸರ್ವಾಧಿಕಾರ ಧೋರಣೆಯ ವಿರುದ್ಧ ಪ್ರಜಾಪ್ರಭುತ್ವ ರಕ್ಷಣೆಗಾಗಿ ಕಾಂಗ್ರೆಸ್ ಹೋರಾಟ ಮಾಡಲಿದೆ ಎಂದು ಹೇಳಿದ್ದಾರೆ.