ಬಂಗಾಳದ ಅಗ್ನಿಕನ್ಯೆ ಈಗ 'ಮಾಜಿ'? ಸೋಲು ಒಪ್ಪಿಕೊಂಡರೇ ಮಮತಾ? ಎಕ್ಸ್ನ ಬಯೋ ಬದಲಾವಣೆ ನೀಡುತ್ತಿದೆ ದೊಡ್ಡ ಸುಳಿವು!
ಕೋಲ್ಕತ್ತಾ: ಪಶ್ಚಿಮ ಬಂಗಾಳದ ರಾಜಕೀಯ ಚದುರಂಗದಾಟದಲ್ಲಿ ಕಮಲ ಪಾಳೆಯದ ದಿಗ್ವಿಜಯದ ನಂತರ ಈಗ ಎಲ್ಲರ ಕಣ್ಣು ಪರಾಜಿತ ನಾಯಕಿ ಮಮತಾ ಬ್ಯಾನರ್ಜಿ(Mamata Banerjee Bio) ಅವರ ಮೇಲಿದೆ. ಸುವೇಂದು ಅಧಿಕಾರಿ ಅವರು ನೂತನ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ ಬೆನ್ನಲ್ಲೇ, ಮಮತಾ ಬ್ಯಾನರ್ಜಿ ಅವರು ತಮ್ಮ ಅಧಿಕೃತ X ಖಾತೆಯ ಬಯೋ ಬದಲಿಸಿಕೊಂಡಿದ್ದಾರೆ. ಈ ಸಣ್ಣ ಬದಲಾವಣೆ ಈಗ ದೀದಿ ಅಂತಿಮವಾಗಿ ಶರಣಾದರೇ ಎಂಬ ಪ್ರಶ್ನೆಯನ್ನು ಹುಟ್ಟುಹಾಕಿದೆ.
ಎಕ್ಸ್ ಬಯೋದಲ್ಲಿ ಏನಿದೆ ಬದಲಾವಣೆ..?
ಕೆಲವು ದಿನಗಳ ಹಿಂದಿನವರೆಗೂ ಮಮತಾ ಬ್ಯಾನರ್ಜಿ ಅವರ ಟ್ವಿಟ್ಟರ್ ಬಯೋದಲ್ಲಿ ಗೌರವಾನ್ವಿತ ಮುಖ್ಯಮಂತ್ರಿ, ಪಶ್ಚಿಮ ಬಂಗಾಳ ಎಂದು ಬರೆಯಲಾಗಿತ್ತು. ಆದರೆ, ಶನಿವಾರ ಮಧ್ಯಾಹ್ನ ಅದನ್ನು ಬದಲಿಸಲಾಗಿದ್ದು, ಈಗ ಅದು ಹೀಗಿದೆ.
ಅಖಿಲ ಭಾರತ ತೃಣಮೂಲ ಕಾಂಗ್ರೆಸ್‌ನ ಸಂಸ್ಥಾಪಕ ಅಧ್ಯಕ್ಷೆ. ಪಶ್ಚಿಮ ಬಂಗಾಳದ ಮುಖ್ಯಮಂತ್ರಿ (15ನೇ, 16ನೇ ಮತ್ತು 17ನೇ ವಿಧಾನಸಭೆ) ಎಂದು ಬರೆಯಲಾಗಿದೆ.
ಈ "15, 16 ಮತ್ತು 17ನೇ ವಿಧಾನಸಭೆ" ಎಂಬ ಉಲ್ಲೇಖವು ಅವರ ಅಧಿಕಾರ ಅವಧಿ ಮುಗಿದಿದೆ ಮತ್ತು ಅವರು ಈಗಿನ 18ನೇ ವಿಧಾನಸಭೆಯ ಮುಖ್ಯಮಂತ್ರಿಯಲ್ಲ ಎಂಬುದನ್ನು ಪರೋಕ್ಷವಾಗಿ ಸೂಚಿಸುತ್ತಿದೆ. ಬಿಜೆಪಿಯ ಭರ್ಜರಿ ಜಯದ ನಂತರವೂ ಅಧಿಕಾರ ಬಿಟ್ಟುಕೊಡಲು ಹಿಂದೇಟು ಹಾಕುತ್ತಿದ್ದ ಮಮತಾ, ಈಗ ಸಾಂವಿಧಾನಿಕವಾಗಿ ಸೋಲನ್ನು ಒಪ್ಪಿಕೊಂಡಿದ್ದಾರೆ ಎಂಬುದು ರಾಜಕೀಯ ವಿಶ್ಲೇಷಕರ ಅಭಿಮತವಾಗಿದೆ.
ಹಠ ಬಿಟ್ಟು ವಾಸ್ತವಕ್ಕೆ ಬಂದರೇ ದೀದಿ..?
ಚುನಾವಣಾ ಫಲಿತಾಂಶ ಹೊರಬಂದ ನಂತರ ಮಮತಾ ಬ್ಯಾನರ್ಜಿ ಅವರು EVM ಅಕ್ರಮದ ಆರೋಪ ಮಾಡಿದ್ದರು ಮತ್ತು ರಾಜೀನಾಮೆ ನೀಡಲು ನಿರಾಕರಿಸಿದ್ದರು. ಆದರೆ, ಇಂದು ಸುವೇಂದು ಅಧಿಕಾರಿ ಅವರು ರಾಜಭವನದಲ್ಲಿ ಪ್ರಮಾಣವಚನ ಸ್ವೀಕರಿಸುತ್ತಿದ್ದಂತೆ, ಮಮತಾ ತಮ್ಮ ಹೆಸರಿನ ಮುಂದಿದ್ದ ಮುಖ್ಯಮಂತ್ರಿ ಎಂಬ ಬಿರುದನ್ನು ಭೂತಕಾಲಕ್ಕೆ ಸೇರಿಸಿದ್ದಾರೆ. ಇದು ಬಂಗಾಳದಲ್ಲಿ ತೃಣಮೂಲ ಕಾಂಗ್ರೆಸ್‌ನ ಏಕಸ್ವಾಮ್ಯ ಅಂತ್ಯಗೊಂಡಿರುವುದರ ಅಧಿಕೃತ ಮುದ್ರೆ ಎನ್ನಲಾಗುತ್ತಿದೆ.
ಸೋಲಿನ ಆಘಾತ ಮತ್ತು ತೃಣಮೂಲದ ಭವಿಷ್ಯ
2026ರ ಈ ಚುನಾವಣೆಯಲ್ಲಿ ಟಿಎಂಸಿ ಕೇವಲ 80 ಸ್ಥಾನಗಳಿಗೆ ಕುಸಿದಿರುವುದು ಮಮತಾ ಬ್ಯಾನರ್ಜಿ ಅವರ ರಾಜಕೀಯ ಜೀವನದ ಅತಿದೊಡ್ಡ ಹಿನ್ನಡೆಯಾಗಿದೆ. ಅತ್ತ ನಂದಿಗ್ರಾಮ ಮತ್ತು ಭವಾನಿಪುರ ಎರಡೂ ಕಡೆ ಸೋಲು ಅನುಭವಿಸಿದ ದೀದಿಗೆ ಈಗ ಪಕ್ಷವನ್ನು ಉಳಿಸಿಕೊಳ್ಳುವುದೇ ದೊಡ್ಡ ಸವಾಲಾಗಿದೆ.
ಬದಲಾದ ಸಮೀಕರಣ: ಬಯೋ ಬದಲಾವಣೆಯು ಮಮತಾ ಬ್ಯಾನರ್ಜಿ ಅವರು ಇನ್ನು ಮುಂದೆ ಕೇವಲ ವಿರೋಧ ಪಕ್ಷದ ನಾಯಕಿಯಾಗಿ ಅಥವಾ ಪಕ್ಷದ ಸಂಘಟನೆಯಲ್ಲಿ ಮಾತ್ರ ತೊಡಗಿಸಿಕೊಳ್ಳಲಿದ್ದಾರೆ ಎಂಬ ಮುನ್ಸೂಚನೆ ನೀಡುತ್ತಿದೆ.
ಬಿಜೆಪಿ ಟೀಕೆ: ಈ ಕುರಿತು ಪ್ರತಿಕ್ರಿಯಿಸಿರುವ ಬಿಜೆಪಿ ನಾಯಕರು, ಜನಾದೇಶವನ್ನು ಒಪ್ಪಿಕೊಳ್ಳಲು ಮಮತಾ ಅವರಿಗೆ ಇಷ್ಟು ದಿನ ಬೇಕಾಯಿತು. ಈಗಲಾದರೂ ಅವರು ಪ್ರಜಾಪ್ರಭುತ್ವವನ್ನು ಗೌರವಿಸುತ್ತಿರುವುದು ಸ್ವಾಗತಾರ್ಹ ಎಂದು ವ್ಯಂಗ್ಯವಾಡಿದ್ದಾರೆ.
ಮುಂದಿನ ನಡೆ ಏನು..?
ಮಮತಾ ಬ್ಯಾನರ್ಜಿ ಅವರು ಕೇವಲ ಸಾಮಾಜಿಕ ಜಾಲತಾಣದಲ್ಲಿ ಬದಲಾವಣೆ ಮಾಡಿಕೊಂಡಿದ್ದಾರೋ ಅಥವಾ ಸಕ್ರಿಯ ರಾಜಕಾರಣದಿಂದ ವಿಶ್ರಾಂತಿ ಪಡೆಯಲಿದ್ದಾರೋ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಆದರೆ, ಸುವೇಂದು ಅಧಿಕಾರಿ ಅವರ ನೇತೃತ್ವದ ಹೊಸ ಸರ್ಕಾರವು ಮಮತಾ ಸರ್ಕಾರದ ಅವಧಿಯಲ್ಲಿ ನಡೆದಿದೆ ಎನ್ನಲಾದ ಹಗರಣಗಳ ತನಿಖೆಗೆ ಆದೇಶಿಸಿರುವುದು ಮಮತಾ ಅವರಿಗೆ ಮತ್ತಷ್ಟು ಸಂಕಷ್ಟ ತಂದೊಡ್ಡಬಹುದು.
ಪಶ್ಚಿಮ ಬಂಗಾಳದಲ್ಲಿ 15 ವರ್ಷಗಳ ಸುದೀರ್ಘ ಆಡಳಿತ ನಡೆಸಿದ ಮಮತಾ ಬ್ಯಾನರ್ಜಿ ಅವರು ಇಂದಿನಿಂದ 'ಮಾಜಿ ಮುಖ್ಯಮಂತ್ರಿ' ಎಂಬ ಹಣೆಪಟ್ಟಿಯೊಂದಿಗೆ ಹೊಸ ರಾಜಕೀಯ ಪಯಣ ಆರಂಭಿಸಬೇಕಿದೆ,(ಏಜೆನ್ಸೀಸ್).