Keshav Prasad Maurya | ಅಖಿಲೇಶ್ ಸೈಕಲ್ ಪಂಕ್ಚರ್..? 26 ಎಸ್‌ಪಿ ಸಂಸದರು ಪಕ್ಷ ತೊರೆಯಲು ರೆಡಿ ಎಂದು ಹೊಸ ಬಾಂಬ್ ಸಿಡಿಸಿದ ಡಿಸಿಎಂ ಮೌರ್ಯ!
ಲಖನೌ: ಸಮಾಜವಾದಿ ಪಕ್ಷದೊಳಗೆ ತೀವ್ರ ಆಂತರಿಕ ಅಸಮಾಧಾನ ಹೊಗೆಯಾಡುತ್ತಿದ್ದು, ಅಖಿಲೇಶ್ ಯಾದವ್ ಧೋರಣೆಯಿಂದ ಬೇಸತ್ತಿರುವ ಸುಮಾರು 25 ರಿಂದ 26 ಎಸ್‌ಪಿ ಸಂಸದರು ಪಕ್ಷವನ್ನು ತೊರೆಯುವ ಸ್ಥಿತಿಯಲ್ಲಿದ್ದಾರೆ ಎಂದು ಉತ್ತರ ಪ್ರದೇಶದ ಉಪಮುಖ್ಯಮಂತ್ರಿ ಕೇಶವ್ ಪ್ರಸಾದ್ ಮೌರ್ಯ (Keshav Prasad Maurya) ಹೊಸ ಬಾಂಬ್ ಹಾಕಿದ್ದಾರೆ. ಪಶ್ಚಿಮ ಬಂಗಾಳದಲ್ಲಿ ಟಿಎಂಸಿ ಹೇಗೆ ಧೂಳೀಪಟಗೊಂಡಿವೆಯೋ, ಅದೇ ಪರಿಸ್ಥಿತಿ 2027ರ ವಿಧಾನಸಭಾ ಚುನಾವಣೆಯಲ್ಲಿ ಉತ್ತರ ಪ್ರದೇಶದಲ್ಲಿ ಸಮಾಜವಾದಿ ಪಕ್ಷಕ್ಕೂ ಎದುರಾಗಲಿದೆ ಎಂದು ಡಿಸಿಎಂ ಮೌರ್ಯ ಭವಿಷ್ಯ ನುಡಿದಿದ್ದಾರೆ.
ಕಾನ್ಪುರದಲ್ಲಿ ಮಾತನಾಡಿರುವ ಡಿಸಿಎಂ ಮೌರ್ಯ, ಅಖಿಲೇಶ್ ಯಾದವ್ ಅವರ ಸೈಕಲ್ ಇನ್ಮುಂದೆ ಯಾವುದೇ ಕಾರಣಕ್ಕೂ ಅಧಿಕಾರದ ಗದ್ದುಗೆಯನ್ನು ತಲುಪುವುದಿಲ್ಲ, ಅದು ಕೇವಲ ಅವರ ಸ್ವಗ್ರಾಮವಾದ ಸೈಫಾಯಿಗೆ ಮಾತ್ರ ಸೀಮಿತವಾಗಲಿದೆ ಎಂದು ವ್ಯಂಗ್ಯವಾಡಿದ್ದು, ಸದ್ಯದಲ್ಲೇ ಈ ಆಂತರಿಕ ಭಿನ್ನಮತಗಳು ಮತ್ತಷ್ಟು ಬಹಿರಂಗವಾಗಲಿವೆ, ಇಷ್ಟೆಲ್ಲಾ ಬೆಳವಣಿಗೆಗಳ ನಡುವೆಯೂ ಬಿಜೆಪಿ ಯಾವುದೇ ರೀತಿಯ ಪಕ್ಷಾಂತರ ಅಥವಾ ಆಪರೇಷನ್ ರಾಜಕಾರಣದಲ್ಲಿ ತೊಡಗಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಪತನದತ್ತ ಎಸ್‌ಪಿ ರಾಜಕೀಯ ಭವಿಷ್ಯ!..
2027ರಲ್ಲಿ ನಡೆಯಲಿರುವ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಸತತ ಮೂರನೇ ಬಾರಿಗೆ ಭರ್ಜರಿ ಬಹುಮತದೊಂದಿಗೆ ಅಧಿಕಾರಕ್ಕೆ ಬರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿರುವ ಯುಪಿ ಉಪಮುಖ್ಯಮಂತ್ರಿಗಳು, ಸಮಾಜವಾದಿ ಪಕ್ಷದ ರಾಜಕೀಯ ಭವಿಷ್ಯ ಪತನದತ್ತ ಸಾಗುತ್ತಿದೆ ಎಂದು ಭವಿಷ್ಯ ನುಡಿದಿದ್ದಾರೆ. ವಿರೋಧ ಪಕ್ಷಗಳ ಜನಬೆಂಬಲ ದಿನದಿಂದ ದಿನಕ್ಕೆ ಕುಸಿಯುತ್ತಿದ್ದು, ಮುಂಬರುವ ಚುನಾವಣೆಯಲ್ಲಿ ಎಸ್ಪಿಗೆ ತೀವ್ರ ನಿರಾಶೆ ಕಾದಿದೆ ಎಂದರು.
ಅಖಿಲೇಶ್ ಯಾದವ್ ಅವರು ರಾಜ್ಯದಲ್ಲಿ ಆಯೋಜಿಸುತ್ತಿರುವ ಬ್ರಾಹ್ಮಣ ಸೇರಿದಂತೆ ವಿವಿಧ ಸಮುದಾಯಗಳ ಸಮಾವೇಶಗಳ ಕುರಿತು ಮಾತನಾಡಿದ ಕೇಶವ್ ಪ್ರಸಾದ್ ಮೌರ್ಯ, ಕೇವಲ ಸಭೆ-ಸಮಾವೇಶಗಳನ್ನು ಮಾಡುವುದರಿಂದ ಸಾರ್ವಜನಿಕರ ನಂಬಿಕೆ ಗಳಿಸಲು ಸಾಧ್ಯವಿಲ್ಲ, ಉತ್ತರ ಪ್ರದೇಶದ ಜನತೆ ಈಗ ಜಾತಿ ರಾಜಕಾರಣದಿಂದ ಸಂಪೂರ್ಣವಾಗಿ ಹೊರಬಂದಿದ್ದು, ಕೇವಲ ಅಭಿವೃದ್ಧಿ, ಉತ್ತಮ ಆಡಳಿತ ಮತ್ತು ಕಾನೂನು ಸುವ್ಯವಸ್ಥೆಯನ್ನು ಮಾತ್ರ ಬಯಸುತ್ತಿದ್ದಾರೆ ಎಂದರು. ವಿರೋಧ ಪಕ್ಷಗಳು ಸಮಾಜವನ್ನು ಒಡೆದು ರಾಜಕೀಯ ಲಾಭ ಪಡೆಯಲು ನೋಡುತ್ತಿದ್ದರೆ, ಬಿಜೆಪಿ ಸಮಾಜವನ್ನು ಒಗ್ಗೂಡಿಸುವ ಕೆಲಸ ಮಾಡುತ್ತಿದೆ ಎಂದು ಕೇಶವ್ ಪ್ರಸಾದ್ ಮೌರ್ಯ ಹೇಳಿದ್ದಾರೆ. ಸರ್ಕಾರದ ವಿರುದ್ಧ ಹೋರಾಡಲು ಯಾವುದೇ ಪ್ರಮುಖ ವಿಷಯಗಳಿಲ್ಲದ ಕಾರಣ ಪ್ರತಿಪಕ್ಷಗಳು ಜನರ ದಾರಿ ತಪ್ಪಿಸಲು ಯತ್ನಿಸುತ್ತಿವೆ. ಆದರೆ, ಸರ್ಕಾರದ ಅಭಿವೃದ್ಧಿ ಕಾರ್ಯಗಳ ಮೇಲಿರುವ ನಂಬಿಕೆಯಿಂದಾಗಿ ಸಾರ್ವಜನಿಕರು ಮತ್ತೊಮ್ಮೆ ಬಿಜೆಪಿಯನ್ನೇ ಸಂಪೂರ್ಣವಾಗಿ ಬೆಂಬಲಿಸಲಿದ್ದಾರೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ(ಏಜೆನ್ಸೀಸ್).