Shashi Tharoor | ಸಂಸದ ಶಶಿ ತರೂರ್ 
ದೇಶ

Shashi Tharoor | ಮೋದಿ ಹೊಗಳಿಕೆಗೆ ಹಾಜರ್​..ಕಾಂಗ್ರೆಸ್​ ಸಭೆಗೆ ಚಕ್ಕರ್​​...ಪಕ್ಷದಿಂದಲೇ ದೂರವಾಗ್ತಿದಾರಾ ಶಶಿ ತರೂರ್​..?

ದೆಹಲಿ: ಸಂಸತ್ತಿನ ಚಳಿಗಾಲದ ಅಧಿವೇಶನಕ್ಕೂ ಮುನ್ನ ಸೋನಿಯಾ ಗಾಂಧಿ ಅಧ್ಯಕ್ಷತೆಯಲ್ಲಿ ನಡೆದ ಕಾಂಗ್ರೆಸ್ ಕಾರ್ಯತಂತ್ರ ಸಭೆಗೆ, ಕಾರ್ಯಕಾರಿ ಸಮಿತಿ ಸದಸ್ಯ ಮತ್ತು ಸಂಸದ ಶಶಿ ತರೂರ್ ಗೈರು ಅನೇಕ ಚರ್ಚೆಗಳಿಗೆ ಹುಟ್ಟು ಹಾಕಿದ್ದು, ತರೂರ್ ಕೇರಳದಲ್ಲಿದ್ದು, ತಮ್ಮ ತಾಯಿಯೊಂದಿಗೆ ದೆಹಲಿಗೆ ಹಿಂತಿರುಗುತ್ತಿದ್ದಾರೆ ಎಂದು ಅವರ ಕಚೇರಿ ಸ್ಪಷ್ಟಪಡಿಸಿದೆ ಎಂದು ವರದಿಯಾಗಿದೆ.
ಇತ್ತ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್ ಕೂಡ ಸ್ಥಳೀಯ ಸಂಸ್ಥೆ ಚುನಾವಣಾ ಪ್ರಚಾರದ ನಿಮಿತ್ತ ದೆಹಲಿಯಲ್ಲಿ ನಡೆದ ಸಭೆಯಲ್ಲಿ ಭಾಗವಹಿಸಲು ಸಾಧ್ಯವಾಗಲಿಲ್ಲ ಎನ್ನಲಾಗಿದೆ.

ಎಸ್‌ಐಆರ್ ಸಭೆಗೆ ತರೂರ್ ಗೈರು...

ಇತ್ತೀಚೆಗೆ ಮತದಾರರ ಪಟ್ಟಿ ಪರಿಷ್ಕರಣೆ ವಿಷಯದ ಕುರಿತು ಕರೆಯಲಾಗಿದ್ದ ಕಾಂಗ್ರೆಸ್ ಸಭೆಗೆ ಅನಾರೋಗ್ಯದ ಕಾರಣ ನೀಡಿ ತರೂರ್ ಗೈರುಹಾಜರಾಗಿದ್ದರು. ಆದರೆ, ಅದಕ್ಕೂ ಒಂದು ದಿನದ ಮುನ್ನ ಪ್ರಧಾನಿ ನರೇಂದ್ರ ಮೋದಿ ಹೊಗಳುವ ಪೋಸ್ಟ್‌ವೊಂದನ್ನು ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದರು. ಈ ಬೆಳವಣಿಗೆ ಪಕ್ಷದೊಳಗೆ ಅನೇಕ ಪ್ರಶ್ನೆಗಳನ್ನು ಹುಟ್ಟುಹಾಕಿತ್ತು ಮತ್ತು ಪಕ್ಷದ ಇತರ ನಾಯಕರಿಂದ ತೀವ್ರ ಟೀಕೆಗೆ ಗುರಿಯಾಗಿತ್ತು.

ಪ್ರಧಾನಿ ಮೋದಿಗೆ ತರೂರ್​ ಶ್ಲಾಘನೆ...

ಜಾಗತಿಕ ಸವಾಲುಗಳ ನಡುವೆಯೂ ಭಾರತವನ್ನು ಉದಯೋನ್ಮುಖ ಮಾರುಕಟ್ಟೆಯಿಂದ ಉದಯೋನ್ಮುಖ ಮಾದರಿಯಾಗಿ ಪರಿವರ್ತಿಸುವ ಮೋದಿಯವರ ದೃಷ್ಟಿಕೋನದ ಮೇಲೆ ತರೂರ್ ಅವರ ಹೊಗಳಿಕೆ ಕೇಂದ್ರೀಕೃತವಾಗಿತ್ತು. ವಸಾಹತುಶಾಹಿ ಗುಲಾಮ ಮನಸ್ಥಿತಿಯನ್ನು ತೆಗೆದುಹಾಕುವ ಮತ್ತು ಭಾಷೆ, ಸಂಸ್ಕೃತಿ ಮತ್ತು ಪರಂಪರೆಯ ಮೂಲಕ ರಾಷ್ಟ್ರೀಯ ಹೆಮ್ಮೆಯನ್ನು ಉತ್ತೇಜಿಸುವತ್ತ ಮೋದಿ ನಿಲುವನ್ನು ತರೂರ್​ ಸಮರ್ಥಿಸಿಕೊಂಡಿದ್ದರು. ಹಲವಾರು ವಿಷಯಗಳಲ್ಲಿ ಸಂಸದ ಶಶಿ ತರೂರ್​​ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ಬೆಂಬಲಕ್ಕೆ ನಿಂತಿದ್ದಾರೆ. ಈ ಎಲ್ಲ ಬೆಳವಣಿಗೆಯು ಕಾಂಗ್ರೆಸ್​ ನಾಯಕರ ಕಣ್ಣು ಕೆಂಪಾಗಿಸಿದ್ದು, ಇತ್ತ ತರೂರ್ ಪಕ್ಷವನ್ನು ತೊರೆಯುವ, ಬಿಜೆಪಿ ಸೇರ್ಪಡೆಯಾಗುವ ಕುರಿತು ಯಾವುದೇ ಹೇಳಿಕೆಗಳನ್ನು ನೀಡಿಲ್ಲ (ಏಜೆನ್ಸೀಸ್​).