IPS 
ದೇಶ

ಬಿಜೆಪಿಗೆ ಗುಡ್‌ಬೈ ಹೇಳ್ತಾರಾ ಅಣ್ಣಾಮಲೈ? ತ.ನಾಡಿನಲ್ಲಿ ಹೊಸ ಪಕ್ಷ ಸ್ಥಾಪನೆಗೆ ಮಾಜಿ IPS ಅಧಿಕಾರಿ ಸಜ್ಜು!

ಚೆನ್ನೈ: ದಕ್ಷಿಣ ಭಾರತದ ರಾಜಕಾರಣದಲ್ಲಿ ಮತ್ತೊಂದು ಭಾರಿ ರಾಜಕೀಯ ಬಿರುಗಾಳಿ ಏಳುವ ಮುನ್ಸೂಚನೆ ಸಿಕ್ಕಿದೆ. ತಮಿಳುನಾಡು ಬಿಜೆಪಿಯ ಮಾಜಿ ರಾಜ್ಯಾಧ್ಯಕ್ಷ ಹಾಗೂ ಫೈರ್ ಬ್ರಾಂಡ್ ನಾಯಕ ಕೆ. ಅಣ್ಣಾಮಲೈ(IPS) ಅವರು ಸದ್ಯದಲ್ಲೇ ಕಮಲ ಪಾಳಯಕ್ಕೆ ಗುಡ್‌ಬೈ ಹೇಳಿ, ತಮ್ಮದೇ ಆದ ಹೊಸ ಪ್ರಾದೇಶಿಕ ರಾಜಕೀಯ ಪಕ್ಷವನ್ನು ಸ್ಥಾಪಿಸಲು ಗಂಭೀರ ಚಿಂತನೆ ನಡೆಸಿದ್ದಾರೆ ಎಂದು ವರದಿಯಾಗಿದೆ. ಅಲ್ಲದೆ, ಜೂನ್ 3 ರಂದು ಅಣ್ಣಾಮಲೈ ಅವರು ಸುದ್ದಿಗೋಷ್ಠಿ ಕರೆದಿದ್ದು, ಅಂದೇ ತಮ್ಮ ರಾಜಕೀಯ ಭವಿಷ್ಯದ ಕುರಿತು ಅಧಿಕೃತ ಘೋಷಣೆ ಹೊರಡಿಸುವ ಸಾಧ್ಯತೆಯಿದೆ ಎಂದು ವರದಿ ಉಲ್ಲೇಖಿಸಿದೆ.

ಹೊಸ ಪಕ್ಷದ ಹೆಸರು, ಧ್ವಜ ಸೋಶಿಯಲ್ ಮೀಡಿಯಾದಲ್ಲಿ ವೈರಲ್!

ಅಣ್ಣಾಮಲೈ ಅವರು ಬಿಜೆಪಿ ತೊರೆಯಲಿದ್ದಾರೆ ಎಂಬ ವದಂತಿಗಳು ಕಾಡ್ಗಿಚ್ಚಿನಂತೆ ಹರಡುತ್ತಿರುವ ಬೆನ್ನಲ್ಲೇ, ಅವರ ಬೆಂಬಲಿಗರು ಮತ್ತು ಅಭಿಮಾನಿಗಳು ಸಾಮಾಜಿಕ ಜಾಲತಾಣಗಳಲ್ಲಿ ಹೊಸ ಪಕ್ಷದ ಸಂಭಾವ್ಯ ಹೆಸರುಗಳು ಹಾಗೂ ಧ್ವಜದ ವಿನ್ಯಾಸಗಳನ್ನು ಹರಿಬಿಡುತ್ತಿದ್ದಾರೆ. ಇದು ಈ ವದಂತಿಗಳಿಗೆ ಮತ್ತಷ್ಟು ಪುಷ್ಟಿ ನೀಡಿದೆ. ಇತ್ತೀಚೆಗೆ ಸಿಬಿಎಸ್‌ಇ (CBSE) 9ನೇ ತರಗತಿಯ ವಿದ್ಯಾರ್ಥಿಗಳಿಗೆ ತಂದಿರುವ ತ್ರಿಭಾಷಾ ಸೂತ್ರವನ್ನು ಅಣ್ಣಾಮಲೈ ಬಹಿರಂಗವಾಗಿ ವಿರೋಧಿಸಿದ್ದರು. ಇದು ಮಕ್ಕಳು ಮತ್ತು ಪೋಷಕರಲ್ಲಿ ಅನಗತ್ಯ ಮಾನಸಿಕ ಒತ್ತಡ ಉಂಟುಮಾಡುತ್ತದೆ ಎಂದು ಕೇಂದ್ರ ಸರ್ಕಾರದ ನೀತಿಯ ವಿರುದ್ಧವೇ ಮಾತನಾಡಿದ್ದು ಅವರ ಬಂಡಾಯದ ಮುನ್ಸೂಚನೆ ಎಂದೇ ವಿಶ್ಲೇಷಿಸಲಾಗುತ್ತಿದೆ.

ಹೈಕಮಾಂಡ್ ನಿರ್ಧಾರದಿಂದ ಅಣ್ಣಾಮಲೈ ಅಸಮಾಧಾನ?

ಇತ್ತೀಚೆಗೆ ನಡೆದ ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯು ಅಣ್ಣಾಮಲೈ ಅವರನ್ನು ಅಧ್ಯಕ್ಷ ಸ್ಥಾನದಿಂದ ಕೆಳಗಿಳಿಸಿ, ನಯನಾರ್ ನಾಗೇಂದ್ರನ್ ಅವರಿಗೆ ಜವಾಬ್ದಾರಿ ನೀಡಿತ್ತು. ಅಷ್ಟೇ ಅಲ್ಲದೆ, ಅಣ್ಣಾಮಲೈ ಅವರ ತೀವ್ರ ವಿರೋಧದ ನಡುವೆಯೂ ಎಐಎಡಿಎಂಕೆ (AIADMK) ಜೊತೆ ಬಿಜೆಪಿ ಹೈಕಮಾಂಡ್ ಮೈತ್ರಿ ಮಾಡಿಕೊಂಡಿತ್ತು. ಪಕ್ಷದ ಆದೇಶಕ್ಕೆ ತಲೆಬಾಗಿ ಅಣ್ಣಾಮಲೈ ಪ್ರಚಾರ ನಡೆಸಿದ್ದರೂ, ಚುನಾವಣೆಯಲ್ಲಿ ಬಿಜೆಪಿ ಕೇವಲ ಒಂದು ಸ್ಥಾನ ಗೆದ್ದು ಭಾರಿ ಮುಖಭಂಗ ಅನುಭವಿಸಿತ್ತು.
2021 ರಿಂದ 2025 ರವರೆಗೆ ತಮಿಳುನಾಡು ಬಿಜೆಪಿ ಅಧ್ಯಕ್ಷರಾಗಿದ್ದ ಅವಧಿಯಲ್ಲಿ ಅಣ್ಣಾಮಲೈ ಅವರು ದ್ರಾವಿಡ ನಾಯಕರಾದ ಸಿ.ಎನ್. ಅಣ್ಣಾದೊರೈ ಮತ್ತು ಜಯಲಲಿತಾ ಅವರ ವಿರುದ್ಧ ವಿವಾದಾತ್ಮಕ ಹೇಳಿಕೆ ನೀಡಿದ್ದರು. ಇದರಿಂದ ಆಕ್ರೋಶಗೊಂಡಿದ್ದ ಎಐಎಡಿಎಂಕೆ ಮುಖ್ಯಸ್ಥ ಎಡಪ್ಪಾಡಿ ಕೆ. ಪಳನಿಸ್ವಾಮಿ ಅವರು, ಮೈತ್ರಿ ಪುನರಾರಂಭಿಸಬೇಕಾದರೆ ಅಣ್ಣಾಮಲೈ ಅವರನ್ನು ನಾಯಕತ್ವದಿಂದ ಕೆಳಗಿಳಿಸಬೇಕು ಎಂಬ ಕಠಿಣ ಷರತ್ತನ್ನು ಬಿಜೆಪಿಯ ಮುಂದಿಟ್ಟಿದ್ದರು ಎನ್ನಲಾಗಿದೆ. ಈ ಎಲ್ಲಾ ಬೆಳವಣಿಗೆಗಳಿಂದ ಅಣ್ಣಾಮಲೈ ತೀವ್ರ ಅಸಮಾಧಾನಗೊಂಡಿದ್ದಾರೆ ಎನ್ನಲಾಗಿದೆ.

ವದಂತಿ ತಳ್ಳಿಹಾಕಿದ ತಮಿಳುನಾಡು ಬಿಜೆಪಿ ನಾಯಕರು

ಮತ್ತೊಂದೆಡೆ, ಅಣ್ಣಾಮಲೈ ಅವರ ಪಕ್ಷಾಂತರದ ಸುದ್ದಿಯನ್ನು ತಮಿಳುನಾಡು ಬಿಜೆಪಿಯ ಹಿರಿಯ ನಾಯಕರೊಬ್ಬರು ತಳ್ಳಿಹಾಕಿದ್ದಾರೆ. "ಅಣ್ಣಾಮಲೈ ಅವರು ಪಕ್ಷ ತೊರೆಯುವ ಅಥವಾ ಹೊಸ ಪಕ್ಷ ಕಟ್ಟುವ ಯಾವುದೇ ಮಾಹಿತಿ ನಮ್ಮ ಬಳಿ ಇಲ್ಲ" ಎಂದು ಅವರು ಹೇಳಿದ್ದಾರೆ. ಇದೇ ವೇಳೆ, ಮಾಜಿ ಐಪಿಎಸ್ ಅಧಿಕಾರಿಯಾಗಿರುವ ಅಣ್ಣಾಮಲೈ ಅವರಿಗೆ ದೆಹಲಿ ಮಟ್ಟದಲ್ಲಿ ದೊಡ್ಡ ರಾಷ್ಟ್ರೀಯ ಜವಾಬ್ದಾರಿಯನ್ನು ನೀಡಲು ಹೈಕಮಾಂಡ್ ಪ್ಲಾನ್ ಮಾಡಿದೆ ಎಂಬ ಮಾತುಗಳೂ ಕೇಳಿಬರುತ್ತಿವೆ. ನಟ ವಿಜಯ್ ನೇತೃತ್ವದ 'ಟಿವಿಕೆ' (TVK) ಸರ್ಕಾರದ ವಿರುದ್ಧ ಸದಾ ವಾಗ್ದಾಳಿ ನಡೆಸುವ ಅಣ್ಣಾಮಲೈ, ಜೂನ್ 3 ರಂದು ತಮಿಳುನಾಡು ರಾಜಕೀಯಕ್ಕೆ ಎಂತಹ ತಿರುವು ನೀಡಲಿದ್ದಾರೆ ಎಂಬುದನ್ನು ಕಾದುನೋಡಬೇಕಿದೆ,(ಏಜೆನ್ಸೀಸ್​).