Churidar Controversy | ಶಾಲಾ ಗೇಟ್​​ ಮುಂದೆ ಕುಳಿತಿರುವ ಮುಖ್ಯೋಪಾಧ್ಯಾಯಿನಿ ಸಿಂಧು ಎಸ್. ನಾಯರ್  
ದೇಶ

ಚೂಡಿದಾರ್ ಧರಿಸಿದ್ದೇ ತಪ್ಪಾಯ್ತಾ..? ಮುಖ್ಯೋಪಾಧ್ಯಾಯಿನಿಯನ್ನು ಶಾಲಾ ಗೇಟ್‌ನಲ್ಲೇ ತಡೆದ ಆಡಳಿತ ಮಂಡಳಿ! | Churidar Controversy

ಕೊಲ್ಲಂ: ಚೂಡಿದಾರ್ ಧರಿಸಿದ್ದಕ್ಕಾಗಿ ಕೇರಳದ ಕೊಲ್ಲಂ ಜಿಲ್ಲೆಯ ಅನುದಾನಿತ ಶಾಲೆಯ ಮುಖ್ಯೋಪಾಧ್ಯಾಯಿನಿಯೊಬ್ಬರನ್ನು ಶಾಲಾ ಆವರಣಕ್ಕೆ ಪ್ರವೇಶಿಸದಂತೆ ತಡೆದ ಘಟನೆ ದೇಶ್ಯಾದ್ಯಂತ ಚರ್ಚೆಗೆ ಕಾರಣವಾಗಿದ್ದು, ಪೊಲೀಸರ ಮಧ್ಯಪ್ರವೇಶ ಮತ್ತು ಶಿಕ್ಷಕರ ಸಂಘಟನೆಗಳ ಪ್ರತಿಭಟನೆಗೆ ಕಾರಣವಾಗಿದೆ.
ಸದ್ಯ ಈ ಘಟನೆ ವೈಯಕ್ತಿಕ ಸ್ವಾತಂತ್ರ್ಯ ಮತ್ತು ವೃತ್ತಿಪರ ವಲಯದಲ್ಲಿ ವಸ್ತ್ರ ಸಂಹಿತೆಯ ಹೇರಿಕೆಯ ಕುರಿತು ಈ ಹಲವಾರು ಪ್ರಶ್ನೆಗಳನ್ನು ಹುಟ್ಟು ಹಾಕಿದೆ.

ಘಟನೆಯ ಹಿನ್ನೆಲೆ

ಸರ್ಕಾರದ ಆದೇಶ ದಿಕ್ಕರಿಸಿ ಚೂಡಿದಾರ್ ಧರಿಸಿ ಬಂದರೆ ಶಾಲೆಯ ಆವರಣ ಪ್ರವೇಶಿಸಲು ಅವಕಾಶ ನೀಡಬಾರದು ಎಂದು ಆಡಳಿತಮಂಡಳಿಯವರು ವಾಚ್​​ಮ್ಯಾನ್​ಗೆ ಹೇಳಿದ್ದರು, ಮಧ್ಯಾಹ್ನದ ಬಿಸಿಯೂಟ ಯೋಜನೆಗಾಗಿ ಮೊಟ್ಟೆ ಮತ್ತು ಇತರ ಸಾಮಗ್ರಿಗಳೊಂದಿಗೆ ಸಿಂಧು ಎಸ್. ನಾಯರ್ ಆಟೋರಿಕ್ಷಾದಲ್ಲಿ ಶಾಲೆಗೆ ಬಂದಾಗ ನೀಡಿದ ಸೂಚನೆಯಂತೆ ಗೇಟ್ ತೆರೆಯಲು ವಾಚ್​​ಮ್ಯಾನ್​ ನಿರಾಕರಿಸಿದ್ದಾನೆ.
ಈ ಘಟನೆಯ ಬಳಿಕ ಸಿಂಧು ಶಾಲಾ ದ್ವಾರದ ಮುಂದೆಯೇ ಸಾಮಗ್ರಿಗಳೊಂದಿಗೆ ಕುಳಿತಿದ್ದರು ಎಂದು ವರದಿಯಾಗಿದ್ದು, ಪಿಟಿಎ ಅಧ್ಯಕ್ಷ ಟಿ ಅಜಿತ್ ಕುಮಾರ್ ಮತ್ತು ಪೊಲೀಸರು ಸ್ಥಳಕ್ಕೆ ಆಗಮಿಸಿ ಚರ್ಚೆ ನಡೆಸಿದ ಬಳಿಕ ಶಾಲಾ ಕಚೇರಿಗೆ ಕರೆದೊಯ್ದರು ಎನ್ನಲಾಗಿದೆ.
ಕೇರಳದ ಅನೇಕ ಅನುದಾನಿತ ಶಾಲೆಗಳಲ್ಲಿ ಇಂದಿಗೂ ಶಿಕ್ಷಕಿಯರು ಸೀರೆಯನ್ನೇ ಧರಿಸಬೇಕು ಎಂಬ ಅಲಿಖಿತ ನಿಯಮ ಅಥವಾ ಸಂಪ್ರದಾಯವನ್ನು ಪಾಲಿಸಿಕೊಂಡು ಬರಲಾಗುತ್ತಿದೆ. ಆದರೆ, ಈ ಮುಖ್ಯೋಪಾಧ್ಯಾಯಿನಿ ಇದನ್ನು ಪ್ರಶ್ನಿಸ ಚೂಡಿದಾರ್ ಧರಿಸಿದ್ದರು.
ವಿಷಯ ತಿಳಿದ ಶಿಕ್ಷಕರ ಸಂಘಟನೆಗಳು ಮತ್ತು ಸ್ಥಳೀಯರು ಶಾಲೆಯ ಮುಂದೆ ಜಮಾಯಿಸಿ ಆಡಳಿತ ಮಂಡಳಿಯ ಧೋರಣೆಯನ್ನು ಖಂಡಿಸಿದರು. ಪರಿಸ್ಥಿತಿ ಕೈಮೀರುತ್ತಿರುವುದನ್ನು ಗಮನಿಸಿದ ಪೊಲೀಸರು ಮಧ್ಯಪ್ರವೇಶ ಮಾಡಿದರು ಎಂದು ಮೂಲಗಳು ತಿಳಿಸಿವೆ.

ವ್ಯವಸ್ಥಾಪಕರ ವಿರುದ್ಧದ ದೂರುಗಳು

ಆಡಳಿತ ಮಂಡಳಿಯವರು ತಮ್ಮನ್ನು ಗುರಿಯಾಗಿಸಿಕೊಂಡು ಈ ರೀತಿಯ ಕ್ರಮಕ್ಕೆ ಮುಂದಾಗಿದ್ದಾರೆ ಎಂದು ಸಿಂಧು ಆರೋಪಿಸಿದ್ದು, ಕಳೆದ ಎರಡು ತಿಂಗಳ ಹಿಂದೆ, ಚುನಾವಣಾ ವಿಷಯವಾಗಿ ತರಬೇತಿಗೆಂದು ಹೋಗುತ್ತಿದ್ದಾಗ ಶಾಲೆಯ ಗೇಟ್​​ನಲ್ಲಿ ತಮ್ಮ ಚಲನವಲನಗಳನ್ನು ದಾಖಲಿಸಲಾಗಿದ್ದರೂ ಸಹ ತಡೆಹಿಡಿಯಲಾಗಿತ್ತು ಎಂದು ದೂರಿದ್ದರು, ಈ ರೀತಿಯ ಸಣ್ಣ ಪುಟ್ಟ ಕಾರಣಗಳಿಗಾಗಿ ತನಗೆ ಹಲವು ಮೆಮೊಗಳನ್ನು ನೀಡಲಾಗಿದೆ ಎಂದು ಅವರು ಆರೋಪಿಸಿದ್ದಾರೆ(ಏಜೆನ್ಸೀಸ್​​).