ಬೆಂಗಳೂರು: ಸಾಮಾನ್ಯವಾಗಿ ಹದಿಹರೆಯದ ಯುವಕ-ಯುವತಿಯರು ಪ್ರೀತಿ, ಪ್ರೇಮ ಸೇರಿದಂತೆ ಮದುವೆ ವಿಚಾರಗಳಲ್ಲಿ ತಮ್ಮ ಪ್ರೇಮ ನಿವೇದನೆ ವ್ಯಕ್ತಪಡಿಸಲು ತಮ್ಮ ರಕ್ತದಲ್ಲಿ ಪತ್ರ ಬರೆಯುವುದು ಸಹಜ. ಆದಾಗ್ಯೂ, ಈ ರೀತಿ ತಮ್ಮ ರಕ್ತದಲ್ಲಿ ಪತ್ರ ಬರೆದ್ರೆ ಕಾನೂನಿನಡಿಯಲ್ಲಿ ಅಪರಾಧವೇ ಅಥವಾ ಇಲ್ಲವೇ ಎಂಬುದು ತಿಳಿಯೋಣ..
ಸ್ವಂತ ರಕ್ತವನ್ನು ಬಳಸಿ ಪತ್ರ ಬರೆಯುವುದು ಏಕಾಂಗಿಯಾಗಿ ಅಪರಾಧವಲ್ಲ ಆದರೆ ಪತ್ರದಲ್ಲಿ ಬೆದರಿಕೆ, ಆತ್ಮಹತ್ಯೆಯ ಉಲ್ಲೇಖ ಅಥವಾ ಇತರರಿಗೆ ಭಯ ಹುಟ್ಟಿಸುವ ವಿಷಯಗಳಿದ್ದರೆ ಅದು ಗಂಭೀರ ಅಪರಾಧವಾಗಿ ಪರಿಗಣಿತವಾಗಬಹುದು ಎಂದು ಎಂದು ಕಾನೂನು ತಜ್ಞರು ಹೇಳುತ್ತಾರೆ.
ಇತ್ತೀಚಿನ ಒಂದು ಪ್ರಕರಣದಲ್ಲಿ ಬೆಂಗಳೂರಿನಲ್ಲಿ ಒಬ್ಬ ಮಹಿಳೆ ಪೊಲೀಸ್ ಇನ್‌ಸ್ಪೆಕ್ಟರ್‌ಗೆ ಸ್ವಂತ ರಕ್ತದಿಂದ ಪ್ರೇಮ ಪತ್ರ ಬರೆದು ಕಳುಹಿಸಿದ್ದರು. ಪತ್ರದಲ್ಲಿ ಹೃದಯ ಚಿಹ್ನೆಯೊಂದಿಗೆ "ಚಿನ್ನಿ ಲವ್ ಯು" ಎಂದು ರಕ್ತದಿಂದ ಬರೆದಿದ್ದರು ಮತ್ತು ಆತ್ಮಹತ್ಯೆ ಬೆದರಿಕೆ ಹಾಕಿದ್ದರು. ಇದರಿಂದ ಪೊಲೀಸರು ಕ್ರಿಮಿನಲ್ ಇಂಟಿಮಿಡೇಷನ್ (ಬೆದರಿಕೆ) ಮತ್ತು ಸ್ಟಾಲ್ಕಿಂಗ್ ಆರೋಪಗಳಡಿ ಪ್ರಕರಣ ದಾಖಲಿಸಿದ್ದಾರೆ.
ಭಾರತೀಯ ದಂಡ ಸಂಹಿತೆಯಲ್ಲಿ (IPC) ಸ್ವಂತ ರಕ್ತದಿಂದ ಬರೆಯುವುದಕ್ಕೆ ನೇರವಾಗಿ ಯಾವುದೇ ಸೆಕ್ಷನ್ ಇಲ್ಲ. ಆದರೆ, ಪತ್ರದ ಸಂದರ್ಭವನ್ನು ಅವಲಂಬಿಸಿ ಕೆಲವು ಸೆಕ್ಷನ್‌ಗಳು ಅನ್ವಯವಾಗಬಹುದು. ಅದು ಎನು ಎಂಬುದು ತಿಳಿಯಿರಿ..
IPC ಸೆಕ್ಷನ್ 503 ಮತ್ತು 506: ಕ್ರಿಮಿನಲ್ ಇಂಟಿಮಿಡೇಷನ್ (ಬೆದರಿಕೆ). ಯಾರಿಗಾದರೂ ವ್ಯಕ್ತಿ, ಖ್ಯಾತಿ ಅಥವಾ ಆಸ್ತಿಗೆ ಹಾನಿ ಮಾಡುವ ಬೆದರಿಕೆ ಹಾಕಿ ಭಯ ಹುಟ್ಟಿಸಿದರೆ ಇದು ಅನ್ವಯವಾಗಲಿದೆ.
IPC ಸೆಕ್ಷನ್ 507: ಅನಾಮಧೇಯ ಬೆದರಿಕೆ. ಪತ್ರದಲ್ಲಿ ಹೆಸರು ಮರೆಮಾಚಿದ್ದರೆ ಅಥವಾ ಗುರುತು ಮರೆಸಿದ್ದರೆ ಹೆಚ್ಚುವರಿ 2 ವರ್ಷ ಶಿಕ್ಷೆಯಾಗಲಿದೆ.
IPC ಸೆಕ್ಷನ್ 309 (ಪ್ರಯತ್ನಿತ ಆತ್ಮಹತ್ಯೆ): ಹಿಂದೆ ಇದು ಅಪರಾಧವಾಗಿತ್ತು, ಆದರೆ 2017ರ ಮೆಂಟಲ್ ಹೆಲ್ತ್‌ಕೇರ್ ಆಕ್ಟ್ ಪ್ರಕಾರ ಆತ್ಮಹತ್ಯೆ ಪ್ರಯತ್ನ ಮಾಡಿದವರನ್ನು ಮಾನಸಿಕ ಒತ್ತಡದಲ್ಲಿದ್ದವರೆಂದು ಪರಿಗಣಿಸಿ ಶಿಕ್ಷೆಯಿಂದ ವಿನಾಯಿತಿ ನೀಡಲಾಗುತ್ತದೆ. ಆದರೆ ಪತ್ರದಲ್ಲಿ ಆತ್ಮಹತ್ಯೆ ಬೆದರಿಕೆ ಹಾಕಿ ಇತರರನ್ನು ಒತ್ತಡಕ್ಕೆ ಒಳಪಡಿಸಿದರೆ ಅದು ಬೆದರಿಕೆಯಾಗಿ ಸೆಕ್ಷನ್ 506 ಅಡಿ ಬರುತ್ತದೆ.
ಕಾನೂನು ತಜ್ಞರು ಹೇಳುವಂತೆ, ರಕ್ತದಿಂದ ಬರೆಯುವುದು ಸ್ವತಃ ಅಪರಾಧವಲ್ಲ. ಆದರೆ, ಅದರ ಹಿಂದಿನ ಉದ್ದೇಶ ಮತ್ತು ಪರಿಣಾಮಗಳೇ ನಿರ್ಣಾಯಕ. ಬೆದರಿಕೆಯ ಸಂದರ್ಭಗಳಲ್ಲಿ ಪೊಲೀಸರು ತನಿಖೆ ನಡೆಸಿ ಆರೋಪ ದಾಖಲಿಸುತ್ತಾರೆ. ಇಂತಹ ಪ್ರಕರಣಗಳು ಮಾನಸಿಕ ಆರೋಗ್ಯ ಸಮಸ್ಯೆಗಳನ್ನೂ ಸೂಚಿಸುತ್ತವೆ ಎಂದು ತಜ್ಞರು ಎಚ್ಚರಿಕೆ ನೀಡಿದ್ದಾರೆ,(ಏಜೆನ್ಸೀಸ್).