ಅಂಬಾನಿ ಭಾರತದ ರಿಯಲ್​ ಬಾಸ್​? ಸ್ಟಾರ್​ಲಿಂಕ್​ ವಿಚಾರದಲ್ಲಿ ಸಿಟ್ಟಿಗೆದ್ದ ಟೆಕ್​ ಬಿಲಿಯನೇರ್​ ಮಸ್ಕ್​ ಬಿಚ್ಚುನುಡಿ | Elon Musk 
ದೇಶ

ಅಂಬಾನಿ ಭಾರತದ ರಿಯಲ್​ ಬಾಸ್​? ಸ್ಟಾರ್​ಲಿಂಕ್​ ವಿಚಾರದಲ್ಲಿ ಸಿಟ್ಟಿಗೆದ್ದ ಟೆಕ್​ ಬಿಲಿಯನೇರ್​ ಮಸ್ಕ್​ ಬಿಚ್ಚುನುಡಿ | Elon Musk

ಕಳೆದ ಐದು ವರ್ಷಗಳಿಂದ ನಿರಂತರವಾಗಿ ಶ್ರಮಿಸುತ್ತಿದೆ. ಹೀಗಿದ್ದರೂ, ಭಾರತೀಯ ಮಾರುಕಟ್ಟೆ ಪ್ರವೇಶಿಸಲು ಸ್ಟಾರ್‌ಲಿಂಕ್‌ಗೆ ಇಂದಿಗೂ ಅಂತಿಮ ಲೈಸೆನ್ಸ್ ಸಿಗದಿರುವುದು ಟೆಕ್​ ಬಿಲಿಯನೇರ್​ಗೆ ತೀವ್ರ ಬೇಸರ ಮೂಡಿಸಿದೆ.

ನವದೆಹಲಿ: ಪ್ರಸ್ತುತ, ಭಾರತೀಯ ಟೆಲಿಕಾಂ​ ಕಂಪನಿಗಳಿಗೆ ಸೆಡ್ಡು ಹೊಡೆಯಲು ಎದುರುನೋಡುತ್ತಿರುವ ವಿಶ್ವದ ಶ್ರೀಮಂತ ಉದ್ಯಮಿ ಎಲಾನ್​ ಮಸ್ಕ್ (Elon Musk) ನೇತೃತ್ವದ​ ಸ್ಟಾರ್‌ಲಿಂಕ್ ಇಂಟರ್​ನೆಟ್​, ಇನ್ನೂ ಕೆಲವೇ ದಿನಗಳಲ್ಲಿ ಭಾರತಕ್ಕೆ ಅಧಿಕೃತವಾಗಿ ಎಂಟ್ರಿಕೊಡಲು ಸಜ್ಜಾಗಿದೆ. ಬಹುತೇಕ ಕೆಲಸಗಳನ್ನು ಈಗಾಗಲೇ ಕೊನೆಯ ಹಂತಕ್ಕೆ ತಂದಿರುವ ಮಸ್ಕ್​ಗೆ ಕೇಂದ್ರ ಸರ್ಕಾರದ ಅಡಚಣೆ ಸದ್ಯ ಭಾರಿ ಕೆರಳಿಸಿದೆ.

ವಿಶ್ವದ 165ಕ್ಕೂ ಹೆಚ್ಚು ದೇಶಗಳಲ್ಲಿ ಯಶಸ್ವಿಯಾಗಿ ಉಪಗ್ರಹ ಆಧಾರಿತ ಇಂಟರ್ನೆಟ್ ಸೇವೆ ಒದಗಿಸಲು ಮುಂದಾಗಿರುವ ಎಲಾನ್ ಮಸ್ಕ್, ಸ್ಟಾರ್‌ಲಿಂಕ್ ಭಾರತ ಸರ್ಕಾರದ ಪ್ರತಿಯೊಂದು ನಿಯಮ ಮತ್ತು ಷರತ್ತುಗಳನ್ನು ಪಾಲಿಸಲು ಕಳೆದ ಐದು ವರ್ಷಗಳಿಂದ ನಿರಂತರವಾಗಿ ಶ್ರಮಿಸುತ್ತಿದೆ. ಹೀಗಿದ್ದರೂ, ಭಾರತೀಯ ಮಾರುಕಟ್ಟೆ ಪ್ರವೇಶಿಸಲು ಸ್ಟಾರ್‌ಲಿಂಕ್‌ಗೆ ಇಂದಿಗೂ ಅಂತಿಮ ಲೈಸೆನ್ಸ್ ಸಿಗದಿರುವುದು ಟೆಕ್​ ಬಿಲಿಯನೇರ್​ಗೆ ತೀವ್ರ ಬೇಸರ ಮೂಡಿಸಿದೆ.

ಸಂಸ್ಥೆಗಳೊಂದಿಗೆ ವರ್ಷಗಳ ಕಾಲ ಮಾತುಕತೆ ನಡೆಸಿ, ಸರ್ಕಾರದ ಎಲ್ಲಾ ನಿಯಮಗಳನ್ನು ಪಾಲಿಸಿದ ಹೊರತಾಗಿಯೂ, ಭಾರತದಲ್ಲಿ ಇನ್ನೂ ನಮ್ಮ ಸ್ಟಾರ್​ಲಿಂಕ್​ ತನ್ನ ವಾಣಿಜ್ಯ ಸೇವೆಗಳನ್ನು ಆರಂಭಿಸಲು ಕಾಯುವಂತ ಪರಿಸ್ಥಿತಿ ಎದುರಾಗಿದೆ. ಏಕೆ ಲೈಸನ್ಸ್​ಗೆ ಇಷ್ಟೊಂದು ವಿಳಂಬ? ಎಂದು ಪ್ರಶ್ನಿಸಿದ್ದಾರೆ. ಇದರೊಟ್ಟಿಗೆ, ದೇಶದ ಟೆಲಿಕಾಂ ಅಧಿಕಾರ ರಚನೆಯ ವಿರುದ್ಧ ನೇರ ಕಿಡಿಕಾರಿರುವ ಮಸ್ಕ್​, ಇಲ್ಲಿ ಅಂತಿಮ ನಿರ್ಧಾರಗಳನ್ನು ಕೈಗೊಳ್ಳುತ್ತಿರುವುದು ಯಾರು, ಮುಖೇಶ್ ಅಂಬಾನಿ ಅವರೇ? ಅಂಬಾನಿ ಏನು ಭಾರತದ ರಿಯಲ್​ ಬಾಸ್​? ಎಂದು ನೇರವಾಗಿ ಚಾಟಿ ಬೀಸಿದ್ದಾರೆ.

ನಿಜಕ್ಕೂ ಅಂಬಾನಿ ಪ್ರಭಾವವೇ ಕಾರಣನಾ?

ಭಾರತೀಯ ಟೆಲಿಕಾಂ ಕ್ಷೇತ್ರದಲ್ಲಿ ಶೇ.40ಕ್ಕೂ ಹೆಚ್ಚು ಮಾರುಕಟ್ಟೆ ಪಾಲು ಹೊಂದಿರುವ ಜಿಯೋ, ದೇಶದ ಡಿಜಿಟಲ್ ಮೂಲಸೌಕರ್ಯದಲ್ಲಿ ದೊಡ್ಡ ಮಟ್ಟದ ಹೂಡಿಕೆ ಮಾಡಿದೆ. ವಿದೇಶಿ ಕಂಪನಿಯೊಂದು ನೇರವಾಗಿ ಸ್ಯಾಟಲೈಟ್ ಮೂಲಕ ಗ್ರಾಹಕರನ್ನು ತಲುಪಿದರೆ, ಅದು ಸ್ಥಳೀಯ ಟೆಲಿಕಾಂ ದೈತ್ಯರ ವಹಿವಾಟಿಗೆ ಆರ್ಥಿಕ ಹೊಡೆತ ನೀಡುವುದು ಖಚಿತ ಎಂಬ ಭೀತಿಯಿದೆ.

ಹೀಗಾಗಿ, ಟೆಲಿಕಾಂ ಉದ್ಯಮದ ಹಿತಾಸಕ್ತಿ ಕಾಯುವ ನಿಟ್ಟಿನಲ್ಲಿ ಸರ್ಕಾರಿ ಮಟ್ಟದಲ್ಲಿ ಕಟ್ಟುನಿಟ್ಟಿನ ಪರಿಶೀಲನೆಗಳು ನಡೆಯುತ್ತಿವೆ ಎಂಬುದು ಒಂದು ವಾದವಾದರೆ, ಭಾರತದ ಉದ್ಯಮ ನೀತಿಗಳ ಮೇಲೆ ಸ್ಥಳೀಯ ಕಾರ್ಪೊರೇಟ್ ದೈತ್ಯರ ಪ್ರಭಾವ ಎಷ್ಟರ ಮಟ್ಟಿಗಿದೆ ಎಂಬುದಕ್ಕೆ ಈ ವಿಳಂಬವೇ ಸಾಕ್ಷಿ ಎಂಬುದು ಮತ್ತೊಂದು ಅಭಿಪ್ರಾಯ. ಅಂತಿಮವಾಗಿ, ಕೇಂದ್ರ ಸರ್ಕಾರ ಮಸ್ಕ್​ ಪ್ರಶ್ನೆಗೆ ಉತ್ತರ ಕೊಡಲಿದ್ಯಾ? ಶೀಘ್ರವೇ ಸ್ಟಾರ್​ಲಿಂಕ್ ಸೇವೆಗಳಿಗೆ ಅಗತ್ಯವಿರುವ ಲೈಸನ್ಸ್​ಗೆ ಅಸ್ತು ಎನ್ನಲಿದೆಯಾ? ಎಂಬುದನ್ನು ಸದ್ಯ ಕಾದು ನೋಡಬೇಕಿದೆ.

ಸ್ಟಾರ್​ಲಿಂಕ್​ ಸಾಮರ್ಥ್ಯವೇನು?

ಸ್ಟಾರ್‌ಲಿಂಕ್ ಸೇವೆಯು ಭಾರತೀಯ ಮಾರುಕಟ್ಟೆಯಲ್ಲಿ ಕ್ರಾಂತಿಕಾರಿ ಬದಲಾವಣೆಗಳನ್ನು ತರಲಿದೆ ಎಂಬ ಹೊಸ ಅಲೆ ಈಗಾಗಲೇ ಟೆಲಿಕಾಂ ಕ್ಷೇತ್ರಗಳಲ್ಲಿ ಜೋರಾಗಿದೆ. ಇದಲ್ಲದೆ, ಸ್ಥಿರ ನೆಟ್‌ವರ್ಕ್‌ಗಾಗಿ ಹೆಣಗಾಡುತ್ತಿರುವ ಎಲ್ಲಾ ದೂರದ ಪ್ರದೇಶಗಳಿಗೂ ಈ ಇಂಟರ್ನೆಟ್ ಸೇವೆ ತಲುಪಲಿದ್ದು, ಹಳ್ಳಿಗಾಡು ಪ್ರದೇಶಗಳ ಜನರಿಗೆ ವೇಗದಲ್ಲಿ ನೆಟ್​ವರ್ಕ್​ ಪೂರೈಕೆ ಮಾಡಲಿದೆ ಎಂದು ಹೇಳಲಾಗಿದೆ.

ಇಂಟರ್ನೆಟ್ ವೇಗ, ಲಭ್ಯತೆ

ಸ್ಟಾರ್‌ಲಿಂಕ್ ಸ್ಯಾಟಲೈಟ್ ಇಂಟರ್ನೆಟ್ ಬಳಕೆದಾರರಿಗೆ 25 Mbps ಮತ್ತು 225 Mbps ನಡುವಿನ ವೇಗವನ್ನು ನೀಡುವ ನಿರೀಕ್ಷೆಯಿದೆ. ಆರಂಭಿಕ ಹಂತದ ಯೋಜನೆಯು 25 ಮೆಗಾ ಬಿಟ್ಸ್​ ಪರ್​ ಸೆಕೆಂಡ್​ ಅನ್ನು ನೀಡುವ ನಿರೀಕ್ಷೆಯಿದೆ. ಉನ್ನತ ಮಟ್ಟದ ಯೋಜನೆಯು ಮೂಲ ಯೋಜನೆಗಿಂತ ಕೊಂಚ ದುಬಾರಿಯಾಗಿರಬಹುದು ಎನ್ನಲಾಗಿದೆ.

ಇಲ್ಲಿಯವರೆಗೆ, ಸ್ಟಾರ್‌ಲಿಂಕ್ ಈ ಕುರಿತಂತೆ ಯಾವುದೇ ವಿವರಗಳನ್ನು ಅಧಿಕೃತವಾಗಿ ದೃಢಪಡಿಸಿಲ್ಲ. ಲಭ್ಯತೆಯ ವಿಷಯದಲ್ಲಿ, ಎಲಾನ್ ಮಸ್ಕ್ ಈಗಾಗಲೇ ಲಭ್ಯವಿರುವ ಇಂಟರ್ನೆಟ್ ಸೇವೆಯ ಜೊತೆಗೆ, ಭಾರತೀಯ ಮಾರುಕಟ್ಟೆಯಲ್ಲಿ ಉಪಗ್ರಹ ಇಂಟರ್ನೆಟ್ ಸೇವೆಯನ್ನು ಕೇವಲ 2 ಲಕ್ಷ ಚಂದಾದಾರರಿಗೆ ಮಾತ್ರ ಸೀಮಿತಗೊಳಿಸಿದ್ದಾರೆ ಎಂದು ವರದಿಗಳು ತಿಳಿಸಿವೆ,(ಏಜೆನ್ಸೀಸ್).