ಸ್ನೇಹಿತನಿಗೆ ಇಷ್ಟೊಂದು ಹುಂಬತನವೇ?: ಅಮೆರಿಕ ದಾಳಿಗೆ 3 ಭಾರತೀಯರು ಬಲಿ! ಟ್ರಂಪ್ ಸರ್ಕಾರದ ವಿರುದ್ಧ ಶಶಿ ತರೂರ್ ಗರಂ!
ನವದೆಹಲಿ: ಒಮಾನ್ ಕೊಲ್ಲಿಯಲ್ಲಿ ವಾಣಿಜ್ಯ ಹಡಗಿನ ಮೇಲೆ ಅಮೆರಿಕ ಸೇನೆ ನಡೆಸಿದ ಭೀಕರ ಕ್ಷಿಪಣಿ ದಾಳಿಯಲ್ಲಿ 3 ಅಮಾಯಕ ಭಾರತೀಯ ನಾವಿಕರು ಜೀವ ಕಳೆದುಕೊಂಡಿರುವುದು ಈಗ ಜಾಗತಿಕ ಮಟ್ಟದಲ್ಲಿ ಭಾರಿ ರಾಜಕೀಯ ಬಿರುಗಾಳಿ ಎಬ್ಬಿಸಿದೆ. ಈ ದಾರುಣ ಘಟನೆಯ ನಂತರ ಅಮೆರಿಕ ಬಿಡುಗಡೆ ಮಾಡಿದ ಅಧಿಕೃತ ಹೇಳಿಕೆಯಲ್ಲಿ ಭಾರತೀಯರ ಸಾವಿಗೆ ಕನಿಷ್ಠ ಸಂತಾಪವಾಗಲಿ ಅಥವಾ ವಿಷಾದವಾಗಲಿ ವ್ಯಕ್ತಪಡಿಸದಿರುವುದಕ್ಕೆ ಕಾಂಗ್ರೆಸ್ ಸಂಸದ ಶಶಿ ತರೂರ್(Shashi Tharoor) ತೀವ್ರ ಆಕ್ರೋಶ ಹೊರಹಾಕಿದ್ದಾರೆ. ಭಾರತೀಯ ನಾವಿಕರು ಅಮೆರಿಕದ ಕ್ಷಿಪಣಿಗಳಿಗೆ ಸುಲಭದ ತುತ್ತೇ ಎಂದು ಟ್ರಂಪ್ ಸರ್ಕಾರವನ್ನು ವಿರುದ್ಧ ಕಿಡಿಕಾರಿದ್ದಾರೆ.
ಕಾಂಗ್ರೆಸ್ ಹಿರಿಯ ನಾಯಕ ಹಾಗೂ ವಿದೇಶಾಂಗ ವ್ಯವಹಾರಗಳ ಸಂಸದೀಯ ಸ್ಥಾಯಿ ಸಮಿತಿಯ ಅಧ್ಯಕ್ಷರೂ ಆಗಿರುವ ಶಶಿ ತರೂರ್, ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರೂಬಿಯೋ ಅವರ ಹೇಳಿಕೆಗೆ ಪ್ರತಿಕ್ರಿಯಿಸಿ ಈ ಗಂಭೀರ ಪ್ರಶ್ನೆಗಳನ್ನು ಎತ್ತಿದ್ದಾರೆ. ಅಮೆರಿಕದ ಇಂತಹ ವರ್ತನೆಯು ಜಾಗತಿಕ ಮಟ್ಟದ ಒಂದು ತಂತ್ರಜ್ಞಾನ ಹಾಗೂ ರಕ್ಷಣಾ ಪಾಲುದಾರ ರಾಷ್ಟ್ರಕ್ಕೆ ತೋರಿದ ಭೀಕರ ಅಸೂಕ್ಷ್ಮತೆ ಎಂದು ತರೂರ್ ಬಣ್ಣಿಸಿದ್ದಾರೆ.
ಈ ಬಗ್ಗೆ Xನಲ್ಲಿ ಸರಣಿ ಪೋಸ್ಟ್‌ಗಳನ್ನು ಹಾಕಿರುವ ಶಶಿ ತರೂರ್, ಅಮೆರಿಕದ ಉದ್ಧಟತನವನ್ನು ಜಗತ್ತಿನ ಎದುರು ಬಿಚ್ಚಿಟ್ಟಿದ್ದಾರೆ. ಅಮಾಯಕ ಭಾರತೀಯರ ಜೀವ ಹೋಗಿದ್ದರೂ ಅಮೆರಿಕದ ಅಧಿಕೃತ ಹೇಳಿಕೆಯಲ್ಲಿ ಯಾವುದೇ ವಿಷಾದ ಅಥವಾ ಸಂತಾಪದ ಒಂದೇ ಒಂದು ಮಾತಿಲ್ಲದಿರುವುದನ್ನು ಕಂಡು ನನಗೆ ತೀವ್ರ ಆಘಾತವಾಗಿದೆ. ನಮ್ಮನ್ನು ಆಪ್ತ ಗೆಳೆಯ ಎಂದು ಕರೆಯುವ ಅಮೆರಿಕ, ಇಷ್ಟೊಂದು ಕ್ರೂರವಾಗಿ ಮತ್ತು ಸಂವೇದನಾಶೂನ್ಯವಾಗಿ ನಡೆದುಕೊಳ್ಳಲು ಹೇಗೆ ಸಾಧ್ಯ ಎಂದು ತರೂರ್ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಜಾಗತಿಕ ಸಮುದ್ರ ಮಾರ್ಗಗಳಲ್ಲಿ, ವಿಶೇಷವಾಗಿ ಕೊಲ್ಲಿ ದೇಶಗಳ ಜಲಪ್ರದೇಶದಲ್ಲಿ ಸಂಚರಿಸುವ ಶೇ. 80 ರಷ್ಟು ವಾಣಿಜ್ಯ ಹಡಗುಗಳಲ್ಲಿ ಭಾರತೀಯ ನಾವಿಕರು ಮತ್ತು ಸಿಬ್ಬಂದಿ ಕೆಲಸ ಮಾಡುತ್ತಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಅಮೆರಿಕದ ಈ ನಡೆ ಜಾಗತಿಕವಾಗಿ ಭಾರತೀಯ ನಾವಿಕರ ಸುರಕ್ಷತೆಯನ್ನು ದೊಡ್ಡ ಅಪಾಯಕ್ಕೆ ತಳ್ಳಿದೆ ಎಂದು ತರೂರ್ ಹೇಳಿದ್ದಾರೆ.
ಕ್ಷಿಪಣಿ ದಾಳಿ ಬೇಕಿತ್ತೇ? ಇಂಜಿನ್ ಜಾಮ್ ಮಾಡಬಹುದಿತ್ತಲ್ಲ?!
ಅಮೆರಿಕದ ಮಿಲಿಟರಿ ಶಕ್ತಿಯನ್ನು ಪ್ರಶ್ನಿಸಿರುವ ಶಶಿ ತರೂರ್, ಯಾವುದೋ ನಿಯಮ ಉಲ್ಲಂಘಿಸಿದೆ ಎನ್ನುವ ಕಾರಣಕ್ಕೆ ನಾಗರಿಕ ಸಿಬ್ಬಂದಿಗಳಿರುವ ವಾಣಿಜ್ಯ ಹಡಗಿನ ಮೇಲೆ ಕ್ಷಿಪಣಿಗಳನ್ನು ಬಿಟ್ಟು ನಾವಿಕರನ್ನು ಕೊಲ್ಲುವ ಅಗತ್ಯವಿರಲಿಲ್ಲ. ಆ ಹಡಗನ್ನು ತಡೆಯಲು ಬೇರೆ ಯಾವುದೇ ಅಹಿಂಸಾತ್ಮಕ ಮಾರ್ಗಗಳಿರಲಿಲ್ಲವೇ, ಹಡಗಿನ ಇಂಜಿನ್ ಪ್ರೊಪಲ್ಷನ್ ಅಥವಾ ಸ್ಟೀರಿಂಗ್ ಸಿಸ್ಟಮ್ ಅನ್ನು ತಾಂತ್ರಿಕವಾಗಿ ಜಾಮ್ ಮಾಡಿ ಅದನ್ನು ಅಲ್ಲೇ ನಿಲ್ಲಿಸಲು ಅಮೆರಿಕದಂತಹ ತಂತ್ರಜ್ಞಾನ ಹೊಂದಿದ ದೇಶಕ್ಕೆ ಸಾಧ್ಯವಿರಲಿಲ್ಲವೇ ಎಂದು ತರೂರ್ ಪ್ರಶ್ನೆಗಳನ್ನು ಮುಂದಿಟ್ಟಿದ್ದಾರೆ. ನಾಗರಿಕರನ್ನು ಗುರಿಯಾಗಿಸಿಕೊಂಡು ದಾಳಿ ಮಾಡುವುದನ್ನು ಯಾವುದೇ ಕಾರಣಕ್ಕೂ ಒಪ್ಪಲು ಸಾಧ್ಯವಿಲ್ಲ ಎಂದು ಕಾಂಗ್ರೆಸ್ ಸಂಸದ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ಒಮಾನ್ ದೇಶಕ್ಕೆ ಭಾರತದ ಧನ್ಯವಾದ: ಇದೇ ವೇಳೆ, ದಾಳಿಗೆ ಒಳಗಾದ ಎಂಟಿ ಸೆಟ್ಟೆಬೆಲ್ಲೋ ಹಡಗಿನಲ್ಲಿದ್ದ 21 ಭಾರತೀಯ ನಾವಿಕರನ್ನು ಅತ್ಯಂತ ವೇಗವಾಗಿ ಮತ್ತು ಸಾಹಸಿಕವಾಗಿ ರಕ್ಷಿಸಿದ ಒಮಾನ್ ಸುಲ್ತಾನೇಟ್ ಸರ್ಕಾರ ಹಾಗೂ ಅಲ್ಲಿನ ಜನತೆಗೆ ಶಶಿ ತರೂರ್ ಭಾರತದ ಪರವಾಗಿ ಕೃತಜ್ಞತೆ ಸಲ್ಲಿಸಿದ್ದಾರೆ. ಒಮಾನ್ ದೇಶದ ಈ ಸಕಾಲಿಕ ನೆರವು ಭಾರತ ಮತ್ತು ಒಮಾನ್ ನಡುವಿನ ಐತಿಹಾಸಿಕ ಸ್ನೇಹಕ್ಕೆ ಸಾಕ್ಷಿ ಎಂದು ಹೇಳಿದ್ದಾರೆ.
ಅಸಲಿಗೆ ಒಮಾನ್ ಕೊಲ್ಲಿಯಲ್ಲಿ ನಡೆದಿದ್ದೇನು?
ಬುಧವಾರ ಒಮಾನ್ ಕೊಲ್ಲಿಯಲ್ಲಿ ಸಂಚರಿಸುತ್ತಿದ್ದ ಎಂಟಿ ಸೆಟ್ಟೆಬೆಲ್ಲೋ ಎನ್ನುವ ತೈಲ ಟ್ಯಾಂಕರ್ ಹಡಗಿನ ಮೇಲೆ ಅಮೆರಿಕದ ನೌಕಾಪಡೆ ಭೀಕರ ದಾಳಿ ನಡೆಸಿತ್ತು. ಇರಾನ್ ಬಂದರುಗಳ ಮೇಲಿನ ಅಂತಾರಾಷ್ಟ್ರೀಯ ನೌಕಾ ದಿಗ್ಬಂಧನವನ್ನು ಈ ಹಡಗು ಉಲ್ಲಂಘಿಸಿದೆ ಎಂಬುದು ಅಮೆರಿಕದ ಆರೋಪವಾಗಿತ್ತು.
ದಾಳಿಯ ಸಮಯದಲ್ಲಿ ಹಡಗಿನಲ್ಲಿ ಒಟ್ಟು 24 ಭಾರತೀಯ ಸಿಬ್ಬಂದಿ ಇದ್ದರು. ಕ್ಷಿಪಣಿ ಅಪ್ಪಳಿಸುತ್ತಿದ್ದಂತೆ ಇಡೀ ಹಡಗು ಧಗಧಗನೆ ಹೊತ್ತಿ ಉರಿದಿದೆ. ತಕ್ಷಣವೇ ಕಾರ್ಯಪ್ರವೃತ್ತರಾದ ಒಮಾನ್ ರಕ್ಷಣಾ ಸಿಬ್ಬಂದಿ 21 ಭಾರತೀಯರನ್ನು ಸಮುದ್ರದ ಮಧ್ಯದಿಂದ ಬದುಕಿಸಿ ದಡಕ್ಕೆ ತಂದಿದ್ದಾರೆ. ಆದರೆ, ದುರದೃಷ್ಟವಶಾತ್ ಮೂವರು ಭಾರತೀಯ ನಾವಿಕರು ಉರಿಯುತ್ತಿದ್ದ ಹಡಗಿನೊಳಗೇ ಸಿಲುಕಿ ಸಜೀವ ದಹನವಾಗಿದ್ದಾರೆ. ಈ ಸಾವುಗಳೇ ಈಗ ಭಾರತ ಮತ್ತು ಅಮೆರಿಕ ನಡುವಿನ ರಾಜತಾಂತ್ರಿಕ ವಲಯದಲ್ಲಿ ಭಾರಿ ಬಿಕ್ಕಟ್ಟು ಸೃಷ್ಟಿಸಿದೆ,(ಏಜೆನ್ಸೀಸ್).