ಬಿಹಾರ ಮಾಜಿ ಸಿಎಂ ರಾಬ್ಡಿ ದೇವಿ 
ದೇಶ

ಐಆರ್‌ಸಿಟಿಸಿ ಹಗರಣ: ನ್ಯಾಯಾಧೀಶರು ಪಕ್ಷಪಾತಿ ಎಂದು ಆರೋಪಿಸಿ ಕೇಸ್ ವರ್ಗಾವಣೆಗೆ ಅರ್ಜಿ ಸಲ್ಲಿಸಿದ ಮಾಜಿ ಸಿಎಂ ರಾಬ್ಡಿ ದೇವಿ | Ex-CM Rabdi Devi

ನವದೆಹಲಿ: ಐಆರ್​ಸಿಟಿಸಿ ಹಗರಣ ಪ್ರಕರಣದಲ್ಲಿ ತಮ್ಮ ಮತ್ತು ತಮ್ಮ ಪತಿ ಲಾಲು ಪ್ರಸಾದ್ ಯಾದವ್, ಪುತ್ರ ತೇಜಸ್ವಿ ಯಾದವ್ ಹಾಗೂ ಕುಟುಂಬದ ಇತರ ಸದಸ್ಯರ ವಿರುದ್ಧ ಪ್ರಕರಣಗಳ ವಿಚಾರಣೆ ನಡೆಸುತ್ತಿರುವ ನ್ಯಾಯಾಧೀಶರು ಪಕ್ಷಪಾತಿಯಾಗಿದ್ದಾರೆ ಎಂದು ಆರೋಪಿಸಿ, ವಿಚಾರಣೆಯನ್ನು ಬೇರೆ ಪೀಠಕ್ಕೆ ವರ್ಗಾಯಿಸುವಂತೆ ಕೋರಿ ಸೋಮವಾರ(ನ. 24) ದೆಹಲಿ ರೋಸ್ ಅವೆನ್ಯೂ ಕೋರ್ಟ್​ಗೆ ಬಿಹಾರ ಮಾಜಿ ಸಿಎಂ ರಾಬ್ಡಿ ದೇವಿ(Ex-CM Rabdi Devi) ಅರ್ಜಿ ಸಲ್ಲಿಸಿದ್ದಾರೆ.
ಇತ್ತೀಚೆಗೆ ಐಆರ್​ಸಿಟಿಸಿ ಪ್ರಕರಣದ ವಿಚಾರಣೆ ನಡೆಸಿದ್ದ ವಿಶೇಷ ನ್ಯಾಯಾಧೀಶ ವಿಶಾಲ್ ಗೋಗ್ನೆ, ಲಾಲು ಕುಟುಂಬ ಸದಸ್ಯರ ವಿರುದ್ಧ ಆರೋಪವನ್ನು ಹೊರಿಸಿದ್ದರು. ಈ ಹಿನ್ನೆಲೆ ನ್ಯಾ. ವಿಶಾಲ್ ಗೋಗ್ನೆ ಅವರು ತಮ್ಮ ಮತ್ತು ಕುಟುಂಬದ ವಿರುದ್ಧ ಪಕ್ಷಪಾತ ಹೊಂದಿದ್ದಾರೆ. ಪೂರ್ವಯೋಜಿತ ಮನಸ್ಸಿನಿಂದ ವಿಚಾರಣೆಯನ್ನು ನಡೆಸುತ್ತಾರೆ ಎಂದು ಅರ್ಜಿಯಲ್ಲಿ ಉಲ್ಲೇಖಿಸಿದ್ದಾರೆ.
ರಾಬ್ಡಿ ದೇವಿ ಪರ ಹಿರಿಯ ವಕೀಲ ಮಣೀಂದರ್ ಸಿಂಗ್ ಅರ್ಜಿ ಸಲ್ಲಿಸಿದ್ದು, ಈ ಪೀಠದಲ್ಲಿ ನ್ಯಾಯಯುತ ಮತ್ತು ನಿಷ್ಪಕ್ಷಪಾತ ವಿಚಾರಣೆ ಸಿಗುವುದಿಲ್ಲ. ಸಮಂಜಸ ಮತ್ತು ವಿಶ್ವಾಸಾರ್ಹ ನ್ಯಾಯದ ಆತಂಕವಿದೆ. ಹೀಗಾಗಿ ಬಾಕಿಯಿರುವ ಪ್ರಕರಣಗಳ ವಿಚಾರಣೆಯನ್ನು ಬೇರೆ ಪೀಠಕ್ಕೆ ವರ್ಗಾಯಿಬೇಕು ಎಂದಿದ್ದಾರೆ.
ರಾಬ್ಡಿ ದೇವಿಯವರು ನ್ಯಾಯಾಲಯದ ವಿಚಾರಣೆಯ ಸಮಯದಲ್ಲಿ ಪಕ್ಷಪಾತವನ್ನು ಅನುಭವಿಸಿದ್ದಾರೆ. ಅಲ್ಲದೇ ನ್ಯಾಯಾಧೀಶರು ಪ್ರಸ್ತುತ ಪ್ರಕರಣಗಳಲ್ಲಿ ಅರ್ಜಿದಾರರನ್ನು ಶಿಕ್ಷಿಸುವ ಏಕೈಕ ಗುರಿಯೊಂದಿಗೆ ಪೂರ್ವಯೋಜಿತ ಮನಸ್ಸಿನಿಂದ ವಿಚಾರಣೆಯನ್ನು ನಡೆಸುತ್ತಾರೆ. ಸುಳ್ಳು ಆರೋಪ ಹೊರಿಸಲಾದ ಈ ಪ್ರಕರಣಗಳಲ್ಲಿ ನ್ಯಾಯಯುತ ಮತ್ತು ನಿಷ್ಪಕ್ಷಪಾತ ವಿಚಾರಣೆಯ ಬಗ್ಗೆ ಆತಂಕವಿದೆ ಎಂದು ಅರ್ಜಿಯಲ್ಲಿ ಹೇಳಿದ್ದಾರೆ (ಏಜೆನ್ಸೀಸ್).